ಆ್ಯಪ್ನಗರ

ಮಾಲೀಕನ ಮಗಳೊಂದಿಗೆ ಪರಾರಿಯಾಗಿದ್ದ ಕಾರು ಚಾಲಕನನ್ನು ಸ್ನೇಹಿತರೇ ಕೊಚ್ಚಿ ಕೊಲೆಗೈದರು!

ಪ್ರೀತಿಸಿ ಮದುವೆಯಾಗಿದ್ದ ರೌಡಿಶೀಟರ್‌ ಸ್ನೇಹಿತನೊಟ್ಟಿಗೆ ಮದ್ಯಪಾನ ಮಾಡಿ, ಆತನನ್ನು ಕೊಚ್ಚಿ ಕೊಲೆ ಮಾಡಿದ್ದ ಎಂಟು ಮಂದಿ ಆರೋಪಿಗಳ ತಂಡವನ್ನು ಕೇವಲ 12 ಗಂಟೆಯೊಳಗೆ ಪೊಲೀಸರು ಹೆಡೆಮುರಿ ಕಟ್ಟಿರುವ ಘಟನೆ ಮಂಗಳವಾರ ನಡೆದಿದೆ.

Vijaya Karnataka 9 Jan 2019, 10:52 am
ಕೊರಟಗೆರೆ: ಪ್ರೀತಿಸಿ ಮದುವೆಯಾಗಿದ್ದ ರೌಡಿಶೀಟರ್‌ ಸ್ನೇಹಿತನೊಟ್ಟಿಗೆ ಮದ್ಯಪಾನ ಮಾಡಿ, ಆತನನ್ನು ಕೊಚ್ಚಿ ಕೊಲೆ ಮಾಡಿದ್ದ ಎಂಟು ಮಂದಿ ಆರೋಪಿಗಳ ತಂಡವನ್ನು ಕೇವಲ 12 ಗಂಟೆಯೊಳಗೆ ಪೊಲೀಸರು ಹೆಡೆಮುರಿ ಕಟ್ಟಿರುವ ಘಟನೆ ಮಂಗಳವಾರ ನಡೆದಿದೆ.
Vijaya Karnataka Web Murder


ಬೆಂಗಳೂರು ನಗರದ ಕಾಪಾಕ್ಷಿಪಾಳ್ಯದ ವಾಸಿ ಮನು (38) ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದು, ಮೂಲತಃ ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಹೋಬಳಿ ಬಳಗೆರೆ ಗ್ರಾಮದ ವಾಸಿ ಎಂದು ಗುರುತಿಸಲಾಗಿದೆ. ಪ್ರೀತಿಸಿ ಮದುವೆಯಾದ ಕಿಚ್ಚಿಗೆ ಬಲಿಯಾದ ಮನುವಿನ ಕೊಲೆ ಆರೋಪಿಗಳ ತಂಡ ಬೆಂಗಳೂರು ನಗರದ ಶಾಸಕರೊಬ್ಬರ ತಮ್ಮನ ಕಡೆಯವರೆಂದು ಹೇಳಲಾಗಿದೆ.

ತಾಲೂಕಿನ ಚನ್ನರಾಯನದುರ್ಗ ಹೋಬಳಿ ಜೆಟ್ಟಿ ಅಗ್ರಹಾರ ಗ್ರಾಮದ ರೈತರಾದ ಸೂಲಪ್ಪ ಮತ್ತು ತಿಮ್ಮಪ್ಪ ಎಂಬುವರ ಜಮೀನಿನ ಮೂಲಕ ಕಲ್ಲು ಗಣಿಗಾರಿಕೆಗೆ ಹಾದು ಹೋಗುವ ಮಣ್ಣಿನ ನಡುರಸ್ತೆಯಲ್ಲಿ ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮನುವಿನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಲಾಂಗ್‌ ಮತ್ತು ಮಚ್ಚಿನಿಂದ 14 ಬಾರಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿಗಳು ಮನುವಿನ ಸ್ನೇಹಿತರೆಂದೂ ಹೇಳಲಾಗಿದೆ.

ಘಟನೆ ಹಿನ್ನೆಲೆ:
ಪ್ರಿಯತಮೆ ಮನೆಯಲ್ಲಿ 8 ವರ್ಷಗಳಿಂದ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನು, 40 ದಿನಗಳ ಹಿಂದೆ ಮಾಲೀಕನ ಮಗಳೊಂದಿಗೆ ಪರಾರಿಯಾಗಿ ಮದುವೆ ಆಗಿರುವುದಾಗಿ ಫೇಸ್‌ಬುಕ್‌ನಲ್ಲಿ ಲೈವ್‌ ವೀಡಿಯೋ ಹಾಕಿಕೊಂಡಿದ್ದ. ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ರೌಡಿಶೀಟರ್‌ ಪಟ್ಟಿಯಲ್ಲಿ ಮನು ಹೆಸರಿದೆ. ಮದುವೆಯಾದ ನಂತರ ರಕ್ಷ ಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದ ಮನು, ಹೆಂಡತಿ ಜತೆ ತುಮಕೂರಿನಲ್ಲಿ ವಾಸವಿದ್ದ. ಬೆಂಗಳೂರು ನಗರದಿಂದ ಸೋಮವಾರ ಸಂಜೆ ಆಗಮಿಸಿದ್ದ ಆರೋಪಿಗಳ ತಂಡ ರಾತ್ರಿ 12ಗಂಟೆ ವೇಳೆಯಲ್ಲಿ ಜೆಟ್ಟಿ ಅಗ್ರಹಾರ ಗ್ರಾಮದ ಸಮೀಪ ಮನುಗೆ ಮದ್ಯಪಾನ ಮಾಡಿಸಿ, ಊಟ ಮಾಡಿಸಿದ್ದಾರೆ. ನಂತರ ಮತ್ತಿನಲ್ಲಿದ್ದ ಮನುವಿನ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿ ಲಾಂಗಿನಿಂದ ತಲೆಯ ಹಿಂದೆ ಮತ್ತು ಬೆನ್ನಿಗೆ 6 ಬಾರಿ ಇರಿದು, ಬಳಿಕ ಮುಖ ಮತ್ತು ಕುತ್ತಿಗೆ ಭಾಗಕ್ಕೆ 8 ಬಾರಿ ಕತ್ತರಿಸಿ ಕೊಲೆ ಮಾಡಿದ್ದಾರೆ.

ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆಯಾದ ಸ್ಥಳಕ್ಕೆ ತುಮಕೂರು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶೋಭರಾಣಿ, ಮಧುಗಿರಿ ಡಿವೈಎಸ್ಪಿ ಧರಣೀಶ್‌, ಕೊರಟಗೆರೆ ಸಿಪಿಐ ನದಾಫ್‌, ಪಿಎಸ್ಸೈ ಮಂಜುನಾಥ, ಸಂತೋಷ್‌ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಬೇಲಿಯೊಳಗಿದ್ದ ಎರಡು ಲಾಂಗು ಮತ್ತು ಒಂದು ಚಾಕು ವಶಕ್ಕೆ ಪಡೆದಿದ್ದರು. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕಿತ್ತು.

ಕೊರಟಗೆರೆ ಸಿಪಿಐ ನದಾಫ್‌ ಮತ್ತು ಪಿಎಸ್ಸೈ ಮಂಜುನಾಥ ನೇತೃತ್ವದ ಪೊಲೀಸರ ತಂಡ, ಮೊಬೈಲ್‌ ತಂತ್ರಜ್ಞಾನದ ಮೂಲಕ ಕೊಲೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳ ಸುಳಿವು ಪಡೆದಿದ್ದರು. ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಹೋಗುವ ದಾರಿ ಸಮೀಪದ ಕೆರೆಯ ಬಳಿ ಟೊಯೋಟೊ ಕಾರಿನಲ್ಲಿ ಮದ್ಯಪಾನ ಮಾಡುತ್ತಿದ್ದ ಈ ಐವರೂ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ತನಿಖೆ ನಡೆಸುತ್ತಿರುವ ಪೊಲೀಸರ ತಂಡ ಆರೋಪಿಗಳ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ತಕ್ಷಣ ಆರೋಪಿಗಳನ್ನು ಬಂಧಿಸಿರುವ ಕೊರಟಗೆರೆ ಪೊಲೀಸರ ಕರ್ತವ್ಯಕ್ಕೆ ಸ್ಥಳೀಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ