ಆ್ಯಪ್ನಗರ

ಜಾಗೃತಿಯಿದ್ದರೆ ಶೋಷಣೆಗೆ ತಡೆ

ಮಹಿಳೆಯರು ಮತ್ತು ಮಕ್ಕಳಿಗೆ ತಮ್ಮ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಜಾಗೃತಿ ಇದ್ದರೆ, ಶೋಷಣೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬಹುದು ಎಂದು ನ್ಯಾಯಾಧೀಶ ಭರತ್‌ಕುಮಾರ್‌ ಹೇಳಿದರು.

Vijaya Karnataka 24 Jul 2018, 5:00 am
ತುಮಕೂರು: ಮಹಿಳೆಯರು ಮತ್ತು ಮಕ್ಕಳಿಗೆ ತಮ್ಮ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಜಾಗೃತಿ ಇದ್ದರೆ, ಶೋಷಣೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬಹುದು ಎಂದು ನ್ಯಾಯಾಧೀಶ ಭರತ್‌ಕುಮಾರ್‌ ಹೇಳಿದರು.
Vijaya Karnataka Web prevent persecution if awareness
ಜಾಗೃತಿಯಿದ್ದರೆ ಶೋಷಣೆಗೆ ತಡೆ


ನಗರದ ಸರಕಾರಿ ಜೂನಿಯರ್‌ ಕಾಲೇಜು ಆವರಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ವಿರೋಧಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆಣ್ಣುಮಕ್ಕಳ ಮೇಲೆ ಅದರಲ್ಲಿಯೂ ಕೆಲಸದ ಜಾಗಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಮಹಿಳೆಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಹೆಣ್ಣುಮಕ್ಕಳ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ಅವರಿಗೆ ಹೆಚ್ಚಿನ ತಿಳಿವಳಿಕೆ ಮೂಡಿಸಿದರೆ ಅವರು ಶೋಷಣೆಗೆ ಒಳಪಡುವ ಸಾಧ್ಯತೆ ಕಡಿಮೆ ಎಂದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಪ್ತಾಹದ ಜಾಗೃತಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ದಿವ್ಯಾಗೋಪಿನಾಥ್‌, ನಮ್ಮ ಸಮಾಜ ಅನೇಕ ಜಲ್ವಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವೂ ಒಂದು. ಇದನ್ನು ಒಪ್ಪಿಕೊಳ್ಳುವ ಮೂಲಕವೇ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಈ ಹಿಂದೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಮಾನ, ಮರ್ಯಾದೆಗೆ ಅಂಜಿ ದೂರು ನೀಡಲು ಹಿಂಜರಿಯುತ್ತಿದ್ದರು. ಈ ಕಾರಣಕ್ಕಾಗಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರಲಿಲ್ಲ. ಈಗ ಅವರಿಗೆ ಅರಿವು ಮೂಡಿಸಿದ ಪರಿಣಾಮ ಇಂದು ಧೈರ್ಯವಾಗಿ ಅದನ್ನು ಎದುರಿಸುವುದನ್ನು ಕಲಿತಿದ್ದಾರೆ. ಆದ್ದರಿಂದ ಇಂತಹ ಪ್ರಕರಣದ ಆರೋಪಿಗಳು ಈಗ ಏನನ್ನೂ ಅರಿಯದ ಮಕ್ಕಳ ಮೇಲೆ ಇಂತಹ ಕೃತ್ಯಗಳನ್ನು ಎಸಗುತಿದ್ದಾರೆ. ಆದ್ದರಿಂದ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಇದರಲ್ಲಿ ನನ್ನ ತಪ್ಪಿಲ್ಲ ಎಂಬ ಭಾವನೆ ಎಳೆಯ ವಯಸ್ಸಿನ ಮಕ್ಕಳಲ್ಲಿ ಮೂಡಿಸಿದರೆ, ಅವರು ತನ್ನ ಪೋಷಕರು, ಶಿಕ್ಷಕರಲ್ಲಿ ಇಂತಹ ಪ್ರಕರಣ ನಡೆದಾಗ ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಪ್ತಾಹದ ಮೂಲಕ ಅರಿವು ಮೂಡಿಸುತ್ತಿರುವ ವರದಕ್ಷಿಣೆ ವಿರೋಧಿ ವೇದಿಕೆಯ ಕೆಲಸ ಸ್ವಾಗರ್ತಾಹ ಎಂದು ನುಡಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್‌ ಮಾತನಾಡಿ, ಇಂದು ಟೆಕ್ನಾಲಜಿಯ ದುರುಪಯೋಗ ಹೆಚ್ಚುತ್ತಿದೆ. ವಾಟ್ಸಪ್‌, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರೆ ಅಪಾಯ ಕಡಿಮೆ. ಇಂತಹ ಪ್ರಕರಣ ನಡೆದಾಗ ಹೆಚ್ಚು ಮುಜುಗರಕ್ಕೆ ಒಳಗಾಗುತ್ತಾರೆ. ತೀರ ಪರಿಚಿತರಿಂದಲೇ ಇಂತಹ ಕೃತ್ಯ ನಡೆಯುವುದರಿಂದ ಹೇಳಿಕೊಳ್ಳಲಾಗದ ಸಂಕಟ ಅವರನ್ನು ಕಾಡುತ್ತದೆ. ಈ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಬಾ ಸಾಹೇಬ್‌ ಜೀನರಾಳ್ಕರ್‌ ಮಾತನಾಡಿ, ಈ ಹಿಂದೆ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ, ಇದರಲ್ಲಿ 18 ವರ್ಷದ ಒಳಗಿನವರು ಭಾಗಿಯಾಗಿದ್ದರೆ ಶಿಕ್ಷೆಗೆ ಒಳಪಡಿಸಲು ಹಲವು ಅಡೆತಡೆಗಳಿದ್ದವು. ಆದರೆ ನಿರ್ಭಯ ಪ್ರಕರಣದ ನಂತರ ಬಾಲಕರ ವಿಚಾರಣೆಗಾಗಿ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಲಾಗಿದೆ. ಯಾರು ಕಾನೂನಿನ ಮುಷ್ಠಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಜಾಗೃತಿ ಸಪ್ತಾಹದ ಬಗ್ಗೆ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ, ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಮಾತನಾಡಿದರು.

ವೇದಿಕೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಮರಿಚೆನ್ನಮ್ಮ, ಉಪನ್ಯಾಸಕಿ ಅಕ್ಕಮ್ಮ, ಪ್ರಿನ್ಸಿಪಾಲ್‌ ಜಯರಾಮಯ್ಯ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ