ಆ್ಯಪ್ನಗರ

ಜೆಡಿಎಸ್‌ ಸೋಲಿಗೆ ಅಪಪ್ರಚಾರವೇ ಕಾರಣ: ತುಮಕೂರಿನಲ್ಲಿ ಎಚ್‌.ಡಿ.ರೇವಣ್ಣ ಹೇಳಿಕೆ

ಬೈ ಎಲೆಕ್ಷನ್ ನಲ್ಲಿ ಹೀನಾಯ ಸೋತ ಬಳಿಕ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿಕೆ ನೀಡಿದ್ದು, ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ. ಕಾರ್ಯಕರ್ತರ ಜತೆ ನಾವಿರುತ್ತೇವೆ ಎಂದು ಹೇಳಿದ್ದಾರೆ.

Vijaya Karnataka Web 11 Nov 2020, 4:23 pm
ಶಿರಾ: ಬಿಜೆಪಿಯವರು ಅಧಿಕಾರಿಗಳನ್ನು ಇಟ್ಟಿಕೊಂಡು ಹಣ ಹಂಚಿದ್ದಾರೆ. ಸರಕಾರದ ಅಧಿಕಾರಿಗಳು, ಚುನಾವಣೆ ಆಯೋಗ ಸಂಪೂರ್ಣ ಈ ರಾಜ್ಯದಲ್ಲಿ ಬಿಜೆಪಿ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆರೋಪಿಸಿದ್ದಾರೆ.
Vijaya Karnataka Web HD Revanna


ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರಾ ಉಪ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಸೋಲಲು ಪ್ರಮುಖ ಕಾರಣ ಅಪಪ್ರಚಾರ. ಬಿಜೆಪಿಯವರ ಹಣ ಹಂಚಿಕೆಯೇ ಪ್ರಮುಖ ಕಾರಣ. ಈ ರಾಜ್ಯದಲ್ಲಿ ಅಧಿಕಾರಿಗಳಿಗೆ ಭಯದ ವಾತಾವರಣ ಇದೆ. ನಾನು 21 ವರ್ಷ ರಾಜಕೀಯದಲ್ಲಿಅಧಿಕಾರ ನಡೆಸಿದ್ದೇನೆ. ಆದರೆ ಈ ರೀತಿಯ ವಾತಾವರಣ ಎಂದೂ ನೋಡಿಲ್ಲ. ಇಂದು ಬಿಜೆಪಿ ಸರಕಾರ ಅಧಿಕಾರಿಗಳ ಮೂಲಕ ಹಣ ಹಂಚಿಸುತ್ತಿದೆ. ಶಿರಾದಲ್ಲಿ ಸ್ವಾಭಿಮಾನದ ಜನ ಇದ್ದಾರೆ. ಹಾಗಾಗಿಯೇ ಜೆಡಿಎಸ್‌ ಪಕ್ಷಕ್ಕೆ 35 ಸಾವಿರ ಮತಗಳು ಬಂದಿರುವುದು. ಈ ರೀತಿಯ ಚುನಾವಣೆ ಮಾಡಿ ಜನರ ತೆರಿಗೆ ಹಣ ವ್ಯಯ ಮಾಡುವ ಬದಲು ರಷ್ಯಾ ಇತರೆ ರಾಷ್ಟ್ರಗಳಲ್ಲಿ ಸಾಯುವವರೆಗೂ ಅಧ್ಯಕ್ಷರಾಗುವ ರೀತಿಯಲ್ಲಿ ಈ ದೇಶದಲ್ಲಿ ಆ ಸನ್ನಿವೇಶ ಬರುವುದರಲ್ಲಿ ಅನುಮಾನವಿಲ್ಲ ಎಂದರು.

ಶಿರಾ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಸೋಲುಂಡಿರಬಹುದು. ಇದಕ್ಕೆ ಪಕ್ಷದ ಕಾರ್ಯಕರ್ತರು ಎದೆಗುಂದುವುದು ಬೇಡ, ಮುಂದಿನ ದಿನಗಳಲ್ಲಿ ಶಿರಾದಲ್ಲಿ ಪಕ್ಷದ ಕಚೇರಿ ತೆರೆದು ಕಾರ್ಯಕರ್ತರೊಂದಿಗೆ ಇರುತ್ತೇವೆ. ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಪಕ್ಷ ಗೆಲುವಿಗೆ ಶ್ರಮಿಸೋಣ ಎಂದರು.

''ಬಿಜೆಪಿಯವರು ಶಿರಾ ಜನತೆಗೆ ಮಾತು ಕೊಟ್ಟಂತೆ 6 ತಿಂಗಳೊಳಗೆ ಮದಲೂರು ಕೆರೆಗೆ ನೀರು ಹರಿಸಲಿ ಎಂದು ಮನವಿ ಮಾಡುತ್ತೇನೆ'' ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ತಿಪ್ಪೇಸ್ವಾಮಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮಾಜಿ ಸದಸ್ಯ ಸಿ.ಆರ್‌.ಉಮೇಶ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಉಗ್ರೇಶ್‌, ಎಂ.ರಂಗನಾಥ್‌, ರಾಘವೇಂದ್ರ, ಆರ್‌.ರಾಮು, ನಟರಾಜು, ಶ್ರೀರಂಗ, ಹರೀಶ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ