ಆ್ಯಪ್ನಗರ

ಸಿದ್ಧಗಂಗಾ ಶ್ರೀ ಆರೋಗ್ಯ ಯಥಾಸ್ಥಿತಿ; ನಿಲ್ಲದ ಆತಂಕ

ಸಿದ್ಧಗಂಗಾ ಶ್ರೀಗಳ ಆರೋಗ್ಯ ಸ್ಥಿತಿ ಯಥಾಸ್ಥಿತಿಯಲ್ಲಿದೆ ಎಂದು ವೈದ್ಯ ಡಾ. ಪರಮೇಶ್‌ ತಿಳಿಸಿದರು.

Vijaya Karnataka 18 Jan 2019, 5:00 am
ತುಮಕೂರು : ಸಿದ್ಧಗಂಗಾ ಶ್ರೀಗಳ ಆರೋಗ್ಯ ಸ್ಥಿತಿ ಯಥಾಸ್ಥಿತಿಯಲ್ಲಿದೆ ಎಂದು ವೈದ್ಯ ಡಾ. ಪರಮೇಶ್‌ ತಿಳಿಸಿದರು.
Vijaya Karnataka Web tumkur siddaganga shri health condition status quo maintained
ಸಿದ್ಧಗಂಗಾ ಶ್ರೀ ಆರೋಗ್ಯ ಯಥಾಸ್ಥಿತಿ; ನಿಲ್ಲದ ಆತಂಕ


ಗುರುವಾರ ಬೆಳಗ್ಗೆ ಆರೋಗ್ಯ ಮಾಹಿತಿ ನೀಡಿದ ಅವರು, ರಾತ್ರಿ ಶ್ರೀಗಳ ಹೃದಯ ಬಡಿತ ಹಾಗೂ ರಕ್ತದೊತ್ತಡದಲ್ಲಿ ಏರುಪೇರು ಉಂಟಾಗಿತ್ತು. ಅದಕ್ಕೆ ಚಿಕಿತ್ಸೆ ನೀಡಿದ ಬಳಿಕ ಸುಧಾರಿಸಿದೆ. ನ್ಯೂಟ್ರಿಷನ್‌ಗೆ ಔಷಧ ಹಾಗೂ ರೋಗನಿರೋಧಕ ನೀಡಲಾಗುತ್ತಿದೆ. ಬೆಳಗ್ಗೆ ರಕ್ತ ಪರೀಕ್ಷೆಯಲ್ಲಿ ಮೂತ್ರಪಿಂಡ, ಶ್ವಾಸಕೋಶ ಸಹಜತೆಯಿಂದ ಕಾರ್ಯ ನಿರ್ವಹಿಸಿರುವುದು ತಿಳಿದು ಬಂದಿದೆ. ಆಲ್ಬುಮಿನ್‌ ಅಂಶ 2.7ರಷ್ಟಿದೆ. ಶ್ರೀಗಳು ಕಣ್ಣು ತೆರೆಯುವುದು, ಕೈ ಚಲನವಲನ ಮಾಡುತ್ತಿದ್ದಾರೆ ಎಂದರು.

ಮುಂದುವರೆದ ಆತಂಕ:
ವೈದ್ಯರ ಮಾಹಿತಿಯ ನಡುವೆಯೂ ಭಕ್ತರ ಮನದಲ್ಲಿ ಆತಂಕ ಮುಂದುವರೆದಿದೆ. ಬೆಳಗ್ಗೆಯಿಂದ ಸಂಜೆವರೆಗೂ ರಾಜಕಾರಣಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ಮಾಹಿತಿ ಪಡೆದರು. ಇದು ಭಕ್ತರ ಆತಂಕವನ್ನು ಇನ್ನೂ ಹೆಚ್ವಿಸಿತ್ತು. ರಾತ್ರಿ 12 ಗಂಟೆ ಕಳೆದರೂ ಮಠದ ಆವರಣ ಭಕ್ತರಿಂದ ತುಂಬಿಕೊಂಡಿತ್ತು.

ಡಿಸಿಎಂ ಭೇಟಿ; ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಅವರು, ಶ್ರೀ ಆರೋಗ್ಯ ಸ್ಥಿರವಾಗಿದೆ. ಡಾ. ಶಾಲಿನಿ ತಪಾಸಣೆ ನಡೆಸುತ್ತಿದ್ದರು. ಅವರ ಬಳಿ ಮಾತನಾಡಿದೆ. ಶ್ರೀಗಳ ದೇಹದ ಪ್ರಮುಖ ಅಂಗಗಳು ಸಹಜವಾಗಿ ಕೆಲಸ ಮಾಡುತ್ತಿವೆ. ಭಕ್ತರ ದರ್ಶನಕ್ಕೆ ಸದ್ಯಕ್ಕೆ ಅವಕಾಶವಿಲ್ಲ. ಸೋಂಕು ತಗಲುತ್ತದೆ ಎಂಬ ಕಾರಣಕ್ಕಾಗಿ ಯಾರನ್ನೂ ಬಿಡುತ್ತಿಲ್ಲ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.

ಹಾಸಿಗೆ ಹಿಡಿದಿರುವುದು ನೋವಿನ ಸಂಗತಿ: ಚಿತ್ರದುರ್ಗದ ಮುರುಘಾ ಶ್ರೀಗಳು ಭೇಟಿ ಮಾಡಿ ಶಿವಕುಮಾರ ಸ್ವಾಮೀಜಿ ಆರೋಗ್ಯದ ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಅವರು, ಶ್ರೀಗಳು ವಿಶ್ರಾಂತಿಯಲ್ಲಿದ್ದು, ಉಸಿರಾಡುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ. ಶ್ರೀಗಳ ಕಾಯಕ ಸೇವೆ ನಮಗೆಲ್ಲ ಸ್ಫೂರ್ತಿದಾಯಕ. ಅವರು ಹಾಸಿಗೆ ಹಿಡಿದಿರುವುದು ನೋವಿನ ಸಂಗತಿ. ಈ ವೇಳೆಯಲ್ಲಿ ಕಿರಿಯ ಶ್ರೀಗಳಿಗೆ ಧೈರ್ಯ ತುಂಬುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ಶ್ರೀಗಳು ಇಚ್ಛಾ ಮರಣಿ: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯ ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಅವರು, ಶ್ರೀಗಳು ಇಚ್ಛಾಮರಣಿ. ಭಗವಂತ ಹೇಳಿದಂತೆ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರ ಆರೋಗ್ಯ ಸುಧಾರಿಸಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆ ಮಾಡೋಣ. ಜನ ಇಲ್ಲಿ ಬಂದು ನೂಕುನುಗ್ಗಲು ಉಂಟು ಮಾಡಬಾರದೆಂದು ಮನವಿ ಮಾಡುತ್ತೇನೆ ಎಂದರು.

ವೈದ್ಯರು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ: ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ ಮತ್ತು ಗಂಭೀರವಾಗಿದ್ದು, ವೈದ್ಯರು ತಮ್ಮೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ಶ್ರೀಗಳ ಭೇಟಿ ಬಳಿಕ ಮಾತನಾಡಿದ ಅವರು, ಆರೋಗ್ಯದಲ್ಲಿ ಮೊದಲು ಹೇಗಿತ್ತೋ ಅದೇ ಪರಿಸ್ಥಿತಿ ಮುಂದುವರೆದಿದೆ. ಆದರೂ ದೇಹದ ಕೆಲವು ಅಂಗಾಂಗಗಳು ಸಹಜವಾಗಿವೆ ಎಂದರು.

ಶ್ರೀಗಳ ಆಧ್ಯಾತ್ಮಿಕ ಶಕ್ತಿಯ ಫಲವಾಗಿ ಏನಾದರೂ ಪವಾಡ ಆಗಬಹುದು. ಕಳೆದ ವರ್ಷ ಇಂಥದ್ದೇ ಒಂದು ಸಂಕಷ್ಟವಿದ್ದಾಗ ಅವರು ಪಾರಾಗಿದ್ದನ್ನು ನಾವು ನೋಡಿದ್ದೇವೆ. ಹೀಗಾಗಿ ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಚಿಕಿತ್ಸೆ ನೀಡುವುದು ಸವಾಲು:
ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮಾತನಾಡಿ, ಸಿದ್ಧಗಂಗಾ ಶ್ರೀ ಅದ್ಭುತ ವ್ಯಕ್ತಿತ್ವ. 111ನೇ ವಯಸ್ಸಿನಲ್ಲೂ ಅವರ ಮುಖದ ಮೇಲಿನ ಕಳೆ ಕುಂದಿಲ್ಲ. ಅವರ ದೈಹಿಕ ಆರೋಗ್ಯ ನೋಡಿದಾಗ ಅವರೊಬ್ಬ ಪವಾಡ ಪುರುಷ ಎನ್ನುವುದು ತಿಳಿಯುತ್ತದೆ. ಅವರ ಮಾರ್ಗದರ್ಶನ, ಧರ್ಮ ಜಾಗೃತಿ ಸದಾ ನಮಗೆ ಸಿಗಬೇಕು ಎಂದರು.

ಗಣ್ಯರ ಭೇಟಿ: ವಿವಿಧ ಕ್ಷೇತ್ರಗಳ ಗಣ್ಯರು ಶ್ರೀಗಳ ದರ್ಶನ ಮಾಡಿದರು. ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ, ವಿ. ಸೋಮಣ್ಣ, ಚೆಲುವರಾಯಸ್ವಾಮಿ, ಮೇಲ್ಮನೆ ಮಾಜಿ ಸಭಾಪತಿ ವೀರಣ್ಣ ಮತ್ತೀಕಟ್ಟೆ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ, ಬಿ.ವೈ. ವಿಜಯೇಂದ್ರ ಮತ್ತಿತರರು ಶ್ರೀಗಳ ಆರೋಗ್ಯ ಮಾಹಿತಿ ಪಡೆದರು.

ಪೂಜೆ ಮಾಡಲಾಗುತ್ತಿಲ್ಲ:
ಶ್ರೀಗಳಿಗೆ ಪೂಜೆ ಮಾಡಲಾಗುತ್ತಿಲ್ಲ. ಅವರ ಇಷ್ಟ ಲಿಂಗಕ್ಕೆ ಕಿರಿಯ ಶ್ರೀಗಳು ಪೂಜೆ ನೆರವೇರಿಸುತ್ತಿದ್ದಾರೆ. ದ್ರವ ರೂಪದ ಆಹಾರ ಹೆಚ್ಚು ತೆಗೆದುಕೊಳ್ಳಲಾಗುತ್ತಿಲ್ಲ. ಪೂಜೆ ವೇಳೆ ಸ್ವಲ್ಪವೇ ದ್ರವ ರೂಪದ ಆಹಾರ ಸೇವಿಸಿದ್ದಾರೆ ಎಂದು ವೈದ್ಯ ಡಾ. ಪರಮೇಶ್‌ ತಿಳಿಸಿದರು.

ಶ್ರೀಗಳಿಗೆ ಭಾರತ ರತ್ನಕ್ಕೆ ಒತ್ತಾಯ; ಗೃಹ ಸಚಿವ : ಸಿದ್ಧಗಂಗಾ ಶ್ರೀಗೆ ಭಾರತ ರತ್ನ ನೀಡುವಂತೆ ಪಕ್ಷಾತೀತವಾಗಿ ಒತ್ತಾಯ ಮಾಡಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಅವರು, ಶ್ರೀಗಳಿಗೆ ಭಾರತ ರತ್ನ ನೀಡಬೇಕೆನ್ನುವುದು ಪಕ್ಷಾತೀತ ಹಾಗೂ ಜಾತ್ಯತೀತವಾದ ಒತ್ತಾಯವಾಗಿದೆ. ಈ ಬಗ್ಗೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಎಲ್ಲಾ ಪಕ್ಷ , ಪಕ್ಷ ಗಳ ಮುಖಂಡರ ಒತ್ತಾಯವಿದೆ. ವಿಶ್ವದ ನಾನಾ ಕಡೆಯಿಂದಲೂ ಈ ಒತ್ತಾಯ ಬಂದಿದೆ ಎಂದರು.

ಕೇಂದ್ರಕ್ಕೆ ಮನವಿ:
ಶ್ರೀಗಳಿಗೆ ಭಾರತ ರತ್ನ ಪುರಸ್ಕಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ಈಗಾಗಲೇ ಪ್ರಧಾನ ಮಂತ್ರಿಗೆ ರಾಜ್ಯ ಸಂಸದರ ನಿಯೋಗ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ಅಗತ್ಯವಿದ್ದಲ್ಲಿ ಮತ್ತೊಮ್ಮೆ ಪ್ರಧಾನಿ ಭೇಟಿ ಮಾಡಲಾಗುವುದು ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ