ಆ್ಯಪ್ನಗರ

ಕನ್ನಡದ ಮೇಲೆ ಪ್ರಹಾರ ಮಾಡಿದರೆ ನಾವು ಸಹಿಸಲ್ಲ: ಮಾಧುಸ್ವಾಮಿ

“ಅಮಿತ್ ಶಾ ಅವರ ಭಾಷಣವನ್ನು ನಾನು ಸಂಪೂರ್ಣ ಕೇಳಿಸಿಕೊಂಡಿದ್ದೇನೆ. ಅವರು ಎಲ್ಲೂ ಹೇರಿಕೆ ವಿಚಾರ ಮಾತಾಡಿಲ್ಲ. ಪ್ರಾದೇಶಿಕ ಭಾಷೆಗಳ ಜೊತೆ ಜೊತೆಗೆ ದೇಶಕ್ಕೆ ಒಂದು ಸ್ವಂತ ಭಾಷೆ ಬೇಕು ಎಂದಿದ್ದಾರೆ ಅಷ್ಟೆ,” - ಜೆ.ಸಿ. ಮಾಧುಸ್ವಾಮಿ.

Vijaya Karnataka Web 15 Sep 2019, 7:55 pm
ತುಮಕೂರು: ಹಿಂದಿ ಹೇರಿದ್ರೆ ಯಾರೂ ಸಹಿಸಿಕೊಳ್ಳಲ್ಲ. ನಾವು ಕನ್ನಡ ಅಭಿಮಾನಿಗಳು, ಕನ್ನಡ ಭಾಷೆ ಮೇಲೆ ಪ್ರಹಾರ ಮಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ಶನಿವಾರ ಹಿಂದಿ ದಿವಸ್‌ ಆಚರಣೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
Vijaya Karnataka Web JC Madhu Swamy


ಆದರೆ ಅಮಿತ್‌ ಶಾ ಭಾಷಣದಲ್ಲೆಲ್ಲೂ ಹಿಂದಿ ಹೇರಿಕೆ ಮಾಡಬೇಕು ಎಂದು ಹೇಳಿಲ್ಲ ಎಂಬುದಾಗಿ ಮಾಧುಸ್ವಾಮಿ ತುಮಕೂರಿನಲ್ಲಿ ಸಮಜಾಯಿಷಿ ನೀಡಿದರು. “ಅಮಿತ್ ಶಾ ತಮ್ಮ ಭಾಷಣದಲ್ಲಿ ಹಿಂದಿ‌ ಭಾಷೆಯನ್ನು ಹೇರಿಕೆ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ. ದೇಶಕ್ಕೊಂದು ಸ್ವಂತ ಭಾಷೆ ಬೇಕು, ಪರಕೀಯ ಭಾಷೆಗೆ ಒಳಗಾಗಬಾರದು ಎಂದಿದ್ದಾರಷ್ಟೆ,” ಎಂಬುದಾಗಿ ಶಾ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು.

“ಅಮಿತ್ ಶಾ ಅವರ ಭಾಷಣವನ್ನು ನಾನು ಸಂಪೂರ್ಣ ಕೇಳಿಸಿಕೊಂಡಿದ್ದೇನೆ. ಅವರು ಎಲ್ಲೂ ಹೇರಿಕೆ ವಿಚಾರ ಮಾತಾಡಿಲ್ಲ. ಪ್ರಾದೇಶಿಕ ಭಾಷೆಗಳ ಜೊತೆ ಜೊತೆಗೆ ದೇಶಕ್ಕೆ ಒಂದು ಸ್ವಂತ ಭಾಷೆ ಬೇಕು ಎಂದಿದ್ದಾರೆ ಅಷ್ಟೆ,” ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಟ್ರಾಫಿಕ್ ದಂಡ ಪರಿಷ್ಕರಣೆ ವಿಚಾರ ಮಾತನಾಡಿದ ಅವರು, ಮುಂದಿನ ಮೂರ್ನಾಲ್ಕು ದಿನದಲ್ಲಿ ದಂಡ ಪರಿಷ್ಕರಣೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.

ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ತಯಾರಿ ವಿಚಾರದಲ್ಲಿ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಕಾಂಗ್ರೆಸ್‌ನವರು ಒಳ್ಳೆ ವಿದ್ಯಾರ್ಥಿಗಳಿದ್ದ ಹಾಗೆ. ಪರೀಕ್ಷೆಗೆ ದಿನಾಲೂ ಓದುತ್ತಿದ್ದಾರೆ. ಪರೀಕ್ಷೆಗೆ ತಯಾರಿ ನಡೆಸಲಿ ಬಿಡಿ ತಪ್ಪೇನಿದೆ ಎಂದು ಕಾಲೆಳೆದರು.

ಮಾಧುಸ್ವಾಮಿ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಬಹುದು: ಸಿದ್ಧಲಿಂಗ ಶ್ರೀ

ನಗರದ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ಶ್ರೀ ಗುರುಕುಲ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದಿಂದ ಹಮ್ಮಿಕೊಂಡಿದ್ದ ದಶಮಾನೋತ್ಸವ ಸಮಾರಂಭದಲ್ಲಿ ಮಾಧುಸ್ವಾಮಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ ಮಾಧುಸ್ವಾಮಿ ಮುಖ್ಯಮಂತ್ರಿ ಆಗಬಹುದೇನೋ ಗೊತ್ತಿಲ್ಲ. ಭವಿಷ್ಯ ಯಾರೂ ಕಾಣಲಿಕ್ಕೆ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿಯಾಗಿ ಹೊರಹೊಮ್ಮಬಹುದು ಎಂದಿದ್ದಾರೆ.

ಮಹಾತ್ಮ ಗಾಂಧೀಜಿ ಅವರು ಇಂಗ್ಲೆಂಡ್ ನಲ್ಲಿ ನಡೆದ ರೌಂಡ್ ಟೇಬಲ್‌ಗೆ ತುಂಡು ಬಟ್ಟೆಯಲ್ಲಿ ಹೋಗಿದ್ದರು. ಅಂತೆಯೇ ಮಾಧುಸ್ವಾಮಿ ಅವರನ್ನು ನೋಡಿದರೆ ಗಾಂಧೀಜಿ ನೋಡಿದಂತಾಗುತ್ತದೆ. ಅವರು‌ ಮಂತ್ರಿಯಾದರೂ, ಮುಖ್ಯಮಂತ್ರಿಯಾದರೂ ಬಿಳಿ ಪಂಚೆ, ಶರ್ಟ್ ನಲ್ಲಿ ಸರಳತೆಯಲ್ಲಿರುತ್ತಾರೆ. ಕೆಟ್ಟದ್ದಕ್ಕೆ ನಿಷ್ಠೂರತೆ, ಒಳ್ಳೆಯದಕ್ಕೆ ಪ್ರೋತ್ಸಾಹ ತುಂಬವ ಮನಸ್ಸು ಅವರದ್ದಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ