ಆ್ಯಪ್ನಗರ

ಸಾಮಾಜಿಕ ಚಿಂತಕ, ಪತ್ರಕರ್ತ ಹಳ್ಳಿ ಸುರೇಶ್‌ ಆತ್ಮಹತ್ಯೆ

ಪತ್ರಿಕೆ ವರದಿಗಾರರಾಗಿದ್ದ ಹಳ್ಳಿ ಸುರೇಶ್‌ ಸಾಮಾಜಿಕ ಚಿಂತಕರಾಗಿ, ಜನಪರ ಕಾಳಜಿಯಿದ್ದ ಪತ್ರಕರ್ತರಾಗಿ ತಿಪಟೂರಿನಾದ್ಯಂತ ಚಿರಪರಿಚಿತರಾಗಿದ್ದರು. ಒಂದಷ್ಟು ಸಮಯ ವಿಜಯ ಕರ್ನಾಟಕದ ಹಾಸನ ಬ್ಯೂರೋದಲ್ಲಿ ಉಪ ಸಂಪಾದಕರಾಗಿಯೂ ಅವರು ಕೆಲಸ ನಿರ್ವಹಿಸಿದ್ದರು.

Vijaya Karnataka 25 Sep 2019, 7:05 pm
ತುಮಕೂರು: ತಿಪಟೂರಿನ ಹೆಸರಾಂತ ವರದಿಗಾರ ಹಳ್ಳಿ ಸುರೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಇಂದು ಮಧ್ಯಾಹ್ನ ತಮ್ಮ ಹಳ್ಳಿಯ ತೋಟದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web Halli Suresh Journalist1


ರಾಜ್ಯ ಮಟ್ಟದ ಪತ್ರಿಕೆಯ ವರದಿಗಾರರಾಗಿದ್ದ ಅವರು ಸಾಮಾಜಿಕ ಚಿಂತಕರಾಗಿ, ಜನಪರ ಕಾಳಜಿಯಿದ್ದ ಪತ್ರಕರ್ತರಾಗಿ ತಿಪಟೂರಿನಾದ್ಯಂತ ಚಿರಪರಿಚಿತರಾಗಿದ್ದರು. ಒಂದಷ್ಟು ಸಮಯ ವಿಜಯ ಕರ್ನಾಟಕದಲ್ಲಿ ಉಪ ಸಂಪಾದಕರಾಗಿಯೂ ಸುರೇಶ್‌ ಕೆಲಸ ನಿರ್ವಹಿಸಿದ್ದರು.

ಕಳೆದ ಎರಡು ಮೂರು ವರ್ಷಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಳ್ಳಿ ಸುರೇಶ್‌ ಅವರಿಗೆ ಎರಡು ತಿಂಗಳ ಹಿಂದೆ ಅಪಘಾತವಾಗಿತ್ತು. ಇದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರಾದರೂ ತೀವ್ರ ಗಾಯವಾಗಿತ್ತು. ಇದರಿಂದ ಜೀವನದಲ್ಲಿ ತುಂಬ ನೊಂದು ‘ನಾನು ಬದುಕುಳಿಯುವುದಿಲ್ಲ’ ಎಂದು ಆಗಾಗ್ಗೆ ಹೇಳುತ್ತಿದ್ದರು.

ಭಾನುವಾರವಷ್ಟೇ ತಿಪಟೂರು ತಾಲೂಕಿನ ಪತ್ರಕರ್ತರ ಸಂಘಕ್ಕೆ ಗೌರವ ಸಲಹೆಗಾರರಾಗಿ ಹಳ್ಳಿ ಸುರೇಶ್‌ ಅವರನ್ನು ನೇಮಕ ಮಾಡಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಅವರ ಅರೋಗ್ಯ ವಿಚಾರಿಸಿ ಹೋಗಿದ್ದರು. ಇದಾಗಿ ಎರಡೇ ದಿನಕ್ಕೆ ಸುರೇಶ್‌ ತೀವ್ರ ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಯಸ್ಸಾದ ತಂದೆ, ಪತ್ನಿ ಹಾಗೂ ಪ್ರೌಢಶಾಲೆಯಲ್ಲಿ ಓದುತ್ತಿರುವ ಒಬ್ಬ ಮಗನನ್ನು ಅವರು ಅಗಲಿದ್ದಾರೆ. ತಿಪಟೂರಿನಾದ್ಯಂತ ಓಡಾಡುತ್ತಿದ್ದ, ತಮ್ಮ ಊರಿನ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಬರುವಂತೆ ಮಾಡುತ್ತಿದ್ದ ಪತ್ರಕರ್ತರ ಸಾವಿನಿಂದ ತಾಲೂಕಿನಲ್ಲಿ ಮೌನ ಆವರಿಸಿದೆ.

ಗುರುವಾರ ಬೆಳಗ್ಗೆ 10 ಗಂಟೆಗೆ ತಿಪಟೂರು - ತುರುವೇಕರೆ ರಸ್ತೆಯಲ್ಲಿರುವ ಸ್ವಗ್ರಾಮ ನಾಗರಘಟ್ಟ ಮೇಲನ ಹಳ್ಳಿಯ ಅವರ ತೋಟದಲ್ಲಿ ಅಂತ್ರಕ್ರಿಯೆ ನಡೆಯಲಿದೆ ಎಂಬುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ