ಆ್ಯಪ್ನಗರ

ಕಳ್ಳರ ಕೈಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡ ಹಸುಗಳು

ಕರಾವಳಿಯ ಹಲವು ಕಡೆ ಕೊಟ್ಟಿಗೆಯಲ್ಲಿ ಕಟ್ಟಿರುವ ಹಸುಗಳನ್ನೇ ಕದಿಯುವ ಖದೀಮರಿದ್ದು, ಉಡುಪಿ ಜಿಲ್ಲೆ ಕೋಟ ಠಾಣೆ ವ್ಯಾಪ್ತಿಯ ಮೆಕ್ಕೆಕಟ್ಟುವಿನಲ್ಲಿ ಭಾನುವಾರ ರಾತ್ರಿ ಜಾನುವಾರುಗಳನ್ನು ಕದಿಯಲು ವಿಫಲ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ 2 ಹಸುಗಳು ಕಳ್ಳರ ಕೈಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿವೆ.

Vijaya Karnataka Web 13 May 2019, 2:30 pm
ಉಡುಪಿ: ಕೋಟ ಠಾಣಾ ವ್ಯಾಪ್ತಿಯ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ಸಮೀಪದ ಮನೆಯೊಂದರ ದನದ ಕೊಟ್ಟಿಗೆಗೆ ನುಗ್ಗಿದ್ದ ಕಳ್ಳರು ಜಾನುವಾರುಗಳನ್ನು ಕದಿಯಲು ವಿಫಲ ಯತ್ನ ನಡೆಸಿದ್ದು, ಅದೃಷ್ಟವಶಾತ್ 2 ಹಸುಗಳು ಕಳ್ಳರ ಕೈಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿವೆ.
Vijaya Karnataka Web Cattle theft


ನಂದಿ ಮರಕಾಲ ಹಾಗೂ ನಾಗು ಮರಕಾಲ್ತಿ ದಂಪತಿಯಲ್ಲಿ ಮನೆಯಲ್ಲಿ ಭಾನುವಾರ ತಡರಾತ್ರಿ ಈ ಕೃತ್ಯ ನಡೆದಿದ್ದು, ಶ್ವಾನಗಳು ಜೋರಾಗಿ ಬೊಬ್ಬೆ ಇಟ್ಟು ಮನೆಯವರು ಎಚ್ಚರಗೊಂಡ ಪರಿಣಾಮ ಕಳ್ಳರು ಸ್ಥಳದಿಂದ ಕಾಲು ಕಿತ್ತಿದ್ದಾರೆ.

ನಾಗು ಮರಕಾಲ್ತಿ ಅವರ ಮನೆಯ ಕೊಟ್ಟಿಗೆಯಲ್ಲಿ 4 ಜಾನುವಾರುಗಳಿದ್ದು, ಹಸುಗಳನ್ನು ಕದಿಯಲು ಪ್ರಯತ್ನಿಸಿದ್ದರು. ದನವನ್ನು ಕಟ್ಟಿ ಹಾಕಿದ್ದ ಹಗ್ಗವನ್ನು ಚೂರಿಯಿಂದ ಕತ್ತರಿಸುವ ವೇಳೆ ಒಂದು ಹಸು ಕೈ ತಪ್ಪಿಸಿಕೊಂಡು ಪರಾರಿಯಾಗಿತ್ತು. ಇನ್ನೊಂದು ಹಸುವನ್ನು ಬಲವಂತವಾಗಿ ಕೊಟ್ಟಿಗೆಯಿಂದ ಅನತಿ ದೂರದಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಎಳೆದುಕೊಂಡು ಹೋಗಿದ್ದರು. ಕಾರಿಗೆ ತುಂಬಿಸುವ ವೇಳೆ ಆ ಜಾನುವಾರು ಕೂಡಾ ಖದೀಮರ ಕೈಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದೆ.

ಈ ವೇಳೆ ಶ್ವಾನ ಹಾಗೂ ಜಾನುವಾರುಗಳು ಜೋರಾಗಿ ಕೂಗಿದ್ದು, ಕೂಡಲೇ ಮನೆಯವರು ಎಚ್ಚರಗೊಂಡು ಹೊರಗೆ ಬಂದಿದ್ದಾರೆ. ಮನೆಯವರು ಹೊರ ಬರುತ್ತಿದ್ದಂತೆ ಕಳ್ಳರು ಅಲ್ಲಿಂದ ಕಾಲು ಕಿತ್ತಿದ್ದಾರೆ. ಸ್ಥಳದಲ್ಲಿ ಚಪ್ಪಲಿ, ಹಗ್ಗ ಕತ್ತರಿಸಲು ಬಳಸಿದ್ದ ಚೂರಿ ಸಿಕ್ಕಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ