ಆ್ಯಪ್ನಗರ

ಬೈಂದೂರು ಸೋಮೇಶ್ವರ ಬೀಚ್‌: ಕಾಯಕಲ್ಪ ದೊರೆಯಲಿ ಬೇಗ

ಬೈಂದೂರು ಕ್ಷೇತ್ರದ ಪಡುವರಿ ಗ್ರಾಮದ ಸೋಮೇಶ್ವರ ಬೀಚ್‌ ಇದೀಗ ಪ್ರವಾಸಿಗರ ಬರಸೆಳೆಯುತ್ತಿದೆ.

Vijaya Karnataka 16 Dec 2022, 8:12 pm
ಜಾನ್‌ಡಿಸೋಜ ಕುಂದಾಪುರ
Vijaya Karnataka Web beach


ಬೈಂದೂರು ಕ್ಷೇತ್ರದ ಪಡುವರಿ ಗ್ರಾಮದ ಸೋಮೇಶ್ವರ ಬೀಚ್‌ ಇದೀಗ ಪ್ರವಾಸಿಗರ ಬರಸೆಳೆಯುತ್ತಿದೆ. ವಿಶ್ವಖ್ಯಾತಿಯ ತ್ರಾಸಿ-ಮರವಂತೆ ಬೀಚ್‌ ಹೆದ್ದಾರಿ ಅಗಲೀಕರಣದ ದಿಸೆಯಿಂದ ಪ್ರವಾಸಿಗರಿಗೆ ಅನನುಕೂಲತೆ ಸೃಷ್ಟಿಸಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೋಮೇಶ್ವರ ಬೀಚ್‌ನತ್ತ ಮುಖ ಮಾಡುತ್ತಿದ್ದಾರೆ. ಕಡಲು, ನದಿಯ ಸಂಗಮ ತಾಣ ಎನಿಸಿರುವ ಸೋಮೇಶ್ವರ ಸುರಕ್ಷಿತ ಬೀಚ್‌ ಎಂಬ ಹೆಗ್ಗಳಿಕೆ ಹೊತ್ತಿರುವುದರಿಂದ ಸಂಜೆಯ ಸೂರ್ಯಾಸ್ತಮಾನದ ಮೋಹಕತೆ ಸವಿಯಲು ಜನರು ಬರುತ್ತಿದ್ದಾರೆ. ರಜಾ ದಿನಗಳಲ್ಲಿ ಬೀಚ್‌ ಜನಜಂಗುಳಿಯಿಂದ ತುಂಬಿಕೊಂಡಿರುತ್ತದೆ. ಆದರೆ ಈ ಬೀಚ್‌ನಲ್ಲಿ ಮೂಲ ಸೌಕರ್ಯ ಒದಗಿಸುವ ಕಾರ್ಯ ಶೀಘ್ರ ಪೂರ್ಣಗೊಳ್ಳಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

ಆಕರ್ಷಕ, ಅವರ್ಣನೀಯ: ಸೋಮೇಶ್ವರ ಬೀಚ್‌ ಸರಿಸುಮಾರು 2ಕಿಮೀ ಅಂತರದಲ್ಲಿ ಅಗಾಧ ಸೌಂದರ್ಯ ಬಚ್ಚಿಟ್ಟುಕೊಂಡಿದೆ. ಬೀಚ್‌ ಸೌಂದರ್ಯ ಆಕರ್ಷಕ. ತೀರದಿಂದ 300ಮೀಟರ್‌ ಅಂತರದವರೆಗೆ ಆಳವಿಲ್ಲ. ತೀರದ ಉದ್ದಕ್ಕೂ ಪ್ರಾಕೃತಿಕ ಕಲ್ಲುಬಂಡೆಗಳು ಹರಡಿಕೊಂಡಿದೆ. ಮಂದಗತಿಯಲ್ಲಿ ಬಂದು ಬಂಡೆಗೆ ಅಪ್ಪಳಿಸಿ ಹಿಂದಿರುಗುವ ಅಲೆಗಳ ಮೋಹಕತೆ ಬೆರಗು ಮೂಡಿಸುತ್ತದೆ. ಇಲ್ಲಿ ಸುಮನಾವತಿ ನದಿ ಕಡಲು ಸೇರುವ ವಿಹಂಗಮ ಪ್ರಾಕೃತಿಕ ನೋಟ ಅವರ್ಣನೀಯ. ದಡದಲ್ಲಿನ ಪುರಾಣ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ, ಪ್ರಕೃತಿ ವಿಸ್ಮಯದ ನಾಗತೀರ್ಥ, ಕ್ಷಿತಿಜ ನಿಸರ್ಗಧಾಮ ಪ್ರವಾಸಿಗರ ಆಕರ್ಷಣೆಗೆ ಪ್ರಾಮುಖ್ಯತೆ ಒದಗಿಸಿದೆ.

ಸೋಮೇಶ್ವರ ಇಲ್ಲಿ ಪಶ್ಚಿಮಾಭಿಮುಖಿ:
ಇಲ್ಲಿನ ಸೋಮೇಶ್ವರ ದೇವರ ಕಾರಣಕ್ಕೆ ಬೀಚ್‌ಗೆ ಸೋಮೇಶ್ವರ ಬೀಚ್‌ ಎಂಬ ಹೆಸರು ಬಂದಿದೆ. ಗೋಕರ್ಣ ಹೊರತುಪಡಿಸಿದರೆ ಪಶ್ಚಿಮಾಭಿಮುಖವಾಗಿರುವ ಏಕೈಕ ಶಿವಾಲಯವಿದು. ಸೂರ್ಯಾಸ್ತಮಾನದ ವೇಳೆ ಸೂರ್ಯನ ಕಿರಣಗಳು ಮುಖ್ಯದ್ವಾರದ ಮೂಲಕ ನೇರವಾಗಿ ಗರ್ಭಗುಡಿಯಲ್ಲಿರುವ ಅತ್ಯಪೂರ್ವದ ಶಿವಲಿಂಗದ ಮೇಲೆ ಬೀಳುವ ನೋಟವಂತೂ ಅನನ್ಯ. ಲಂಕೆಗೆ ಹೊರಟ ಶ್ರೀರಾಮ ತನ್ನ ಸೇನೆಯೊಂದಿಗೆ ಇಲ್ಲಿ ಕಳೆದು ಶಿವದರ್ಶನ ಪಡೆದ ಸಂಕೇತವಾಗಿ ಸೋಮೇಶ್ವರ ದೇಗುಲ ಸ್ಥಾಪಿತವಾಯಿತು ಎನ್ನಲಾಗಿದೆ. ತೀರದಲ್ಲಿರುವ ಇನ್ನೊಂದು ಪ್ರಾಕೃತಿಕ ವೈಚಿತ್ರ್ಯ ನಾಗತೀರ್ಥ. ವರ್ಷದ ಎಲ್ಲಾ ಕಾಲದಲ್ಲಿಯೂ ಪುಟ್ಟ ಕುಂಡದಂತಿರುವ ತೀರ್ಥದಲ್ಲಿ ನೀರು ಇರುತ್ತದೆ. ಕುಂಡಕ್ಕೆ ಹೊಂದಿಕೊಂಡಿರುವ ಗುಹೆಯಿಂದ ನೀರು ಬರುತ್ತಿರುತ್ತದೆ. ಗುಹೆಯ ಮೇಲ್ಭಾಗದಲ್ಲಿ ಬೃಹತ್‌ ಶಿಲಾಪರ್ವತವಿದ್ದು ಸುತ್ತಮುತ್ತ ಅತ್ಯರೂಪದ ಕೇದಗೆ ಬನ ಪ್ರವಾಸಿಗರ ಮನಸೆಳೆಯುತ್ತದೆ.

ಪ್ರವಾಸಿಗರಿಗೆ ಕಿರು ಅನುಕೂಲ: ಬೀಚ್‌ ಹಾಗೂ ದೇವಳ ಸೌಂದರ್ಯ ವೀಕ್ಷ ಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ತೀರ ಪ್ರದೇಶದಲ್ಲಿ ವಿಶ್ರಾಂತಿಗೆ ಕಲ್ಲಿನ ಬೆಂಚುಗಳ ಅಳವಡಿಕೆ ಮಾಡಲಾಗಿದೆ. ಪಡುವಣ ಫ್ರೆಂಡ್ಸ್‌ ಸಹಿತ ಸ್ಥಳೀಯ ಸಂಘ ಸಂಸ್ಥೆಗಳು ಈ ಕೈಂಕರ್ಯದಲ್ಲಿ ಕೈಜೋಡಿಸಿದೆ. ಪ್ರವಾಸೋದ್ಯಮ ಇಲಾಖೆಯಿಂದ ಇಂಟರ್‌ಲಾಕ್‌ ಅಳವಡಿಕೆ ನಡೆದಿದೆ.

ಸರಕಾರ ಗಮನಹರಿಸಬೇಕು: ಕರಾವಳಿ ಜಿಲ್ಲೆಯಲ್ಲಿ ಧಾರ್ಮಿಕವಾಗಿ, ಪ್ರಾಕೃತಿಕವಾಗಿ ಅತ್ಯಂತ ಮನೋಹರ ಬೀಚ್‌ ಇದು. ಆದರೆ ನಿರೀಕ್ಷಿತ ಸೌಕರ್ಯ ಇನ್ನೂ ಒದಗಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಬೀಚ್‌ ಹಾಗೂ ದೇವರ ದರ್ಶನಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಕುಟುಂಬ ಸಮೇತರಾಗಿ ಬರುವವರೇ ಹೆಚ್ಚು. ವಿಶ್ರಾಂತಿಗೃಹ, ಶೌಚಾಲಯ, ಸ್ನಾನಗೃಹ, ವಾಹನ ನಿಲುಗಡೆ ವ್ಯವಸ್ಥೆಯಂತಹ ಮೂಲಸೌಕರ್ಯ ಒದಗಿಸಬೇಕು. ಸರಕಾರ ಮತ್ತು ಸಂಬಂಧಿಸಿದ ಇಲಾಖೆ ಗಮನಹರಿಸಬೇಕು.-ವೆಂಕಟೇಶ ಭಟ್ಟ ಅರ್ಚಕರು ಸೋಮೇಶ್ವರ ದೇವಸ್ಥಾನ ಪಡುವರಿ.

ಬೀಚ್‌ ಅಭಿವೃದ್ಧಿಗೆ ಒತ್ತು: ಬೈಂದೂರಿನ ಸೋಮೇಶ್ವರ ಬೀಚ್‌ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೆ ರೂ.1.49ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಪ್ರಥಮ ಹಂತದಲ್ಲಿ ರಸ್ತೆ, ವಿಶ್ರಾಂತಿ ಕಲ್ಲಿನ ಬೆಂಚುಗಳು, ಇಂಟರ್‌ಲಾಕ್‌ ಅಳವಡಿಕೆ, ತಡೆಗೋಡ ನಿರ್ಮಾಣ ಕಾರ್ಯ ನಡೆದಿದೆ. ರೂ.76.82ಲಕ್ಷ ಅನುದಾನ ಈಗಾಗಲೆ ಖರ್ಚು ಮಾಡಲಾಗಿದೆ. ಬಾಕಿ ಉಳಿದ ಅನುದಾನದಿಂದ ಶೌಚಾಲಯ, ಹೈಮಾಸ್ಟ್‌ ದೀಪ, ಕ್ಷಿತಿಜ ನಿಸರ್ಗಧಾಮದಿಂದ ಬೀಚ್‌ಗೆ ವಾಕ್‌ವೇ, ಸೇತುವೆ, ಲೈಪ್‌ಗಾರ್ಡ್‌, ಬೋಟಿಂಗ್‌ ವ್ಯವಸ್ಥೆ ಆಗಲಿದೆ. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸೋಮೇಶ್ವರ ಬೀಚ್‌ಗೆ ಕಾಯಕಲ್ಪ ಒದಗಿಸುವ ಕೆಲಸ ನಡೆಸಲಾಗುತ್ತಿದೆ.- ಅನಿತಾ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು.

ಮರವಂತೆ ದೂರ...ಸೋಮೇಶ್ವರ ಹತ್ತಿರ : ಕುಂದಾಪುರ: ತ್ರಾಸಿ-ಮರವಂತೆ ಬೀಚ್‌ಗೆ ಹೊಂದಿಕೊಂಡು ಸಮುದ್ರ ತಡೆಗೋಡೆ, ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಪ್ರಸ್ತುತ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಇದರಿಂದ ಮರವಂತೆ ಬೀಚ್‌ ಪ್ರವಾಸಿಗರಿಂದ ದೂರ ಆಗುತ್ತಿದೆ. ಹೆಚ್ಚಿನವರು ಸೋಮೇಶ್ವರ ಬೀಚ್‌ನತ್ತ ಪಯಣ ಬೆಳೆಸುತ್ತಿದ್ದಾರೆ. ದಶಕಗಳಿಂದ ಮರವಂತೆಯಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡು ಬಂದಿರುವ ವ್ಯಾಪಾರವಿಲ್ಲದೆ ಕಂಗೆಟ್ಟಿದ್ದೇವೆ.- ಮಹೇಶ್‌ ಪೂಜಾರಿ ಮರವಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ