ಆ್ಯಪ್ನಗರ

ಉಡುಪಿ: ಹಸಿರು ಪಟಾಕಿಗೆ ಪುಶ್, ಹಬ್ಬದ ಹೊಸ್ತಿಲಲ್ಲಿ ಮಾರುಕಟ್ಟೆ ಠುಸ್‌!

ದೀಪಾವಳಿಗೆ ಉಡುಪಿ ಜಿಲ್ಲೆಯ ಸಹಿತ ರಾಜ್ಯದ ಪಟಾಕಿ ಮಾರುಕಟ್ಟೆ ಗೊಂದಲದ ಗೂಡಾಗಿದೆ. 2018ರ ಫೆ.23ಕ್ಕೆ ಫ್ಲವರ್‌ ಪಾಟ್‌ನಲ್ಲಿ ಬೇರಿಯಂ ನೈಟ್ರೇಟ್‌ ಬಳಕೆಯನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿದ್ದು ಪೊಟಾಶಿಯಂ ನೈಟ್ರೇಟ್‌ ಬಳಕೆಯಾಗುತ್ತಿದೆ.

Vijaya Karnataka Web 13 Nov 2020, 12:49 pm
ಎಸ್‌.ಜಿ. ಕುರ್ಯ
Vijaya Karnataka Web cracker


ಉಡುಪಿ: ದೇಶದ 19 ರಾಜ್ಯಗಳ 22 ನಗರಗಳಲ್ಲಿ ಪರಿಸರ ಮಾಲಿನ್ಯ ಮಿತಿಮೀರಿದ್ದು, ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಹಸಿರು ಪಟಾಕಿಗೆ ಎನ್‌ಜಿಟಿ, ಸಿಎಸ್‌ಆರ್‌ಐ, ನೀರಿ ಸಂಸ್ಥೆ ಸಹಿತ ರಾಜ್ಯ ಸರಕಾರಗಳು ಪುಶ್‌ ನೀಡುತ್ತಿವೆ.

ಆದರೆ ಕೋವಿಡ್‌ ಮಹಾಮಾರಿ ನಡುವೆ ಯಾವುದೇ ಪೂರ್ವತಯಾರಿ ಇಲ್ಲದ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿಗೆ ಉಡುಪಿ ಜಿಲ್ಲೆಯ ಸಹಿತ ರಾಜ್ಯದ ಪಟಾಕಿ ಮಾರುಕಟ್ಟೆ ಗೊಂದಲದ ಗೂಡಾಗಿದೆ.

2018ರ ಫೆ.23ಕ್ಕೆ ಫ್ಲವರ್‌ ಪಾಟ್‌ನಲ್ಲಿ ಬೇರಿಯಂ ನೈಟ್ರೇಟ್‌ ಬಳಕೆಯನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿದ್ದು ಪೊಟಾಶಿಯಂ ನೈಟ್ರೇಟ್‌ ಬಳಕೆಯಾಗುತ್ತಿದೆ. ಹಸಿರು ಪಟಾಕಿಯ ಶಬ್ದ, ವಾಯುಮಾಲಿನ್ಯ ಹಾಗೂ ಧೂಳಿನ ಪ್ರಮಾಣ ಶೇ.30ರಷ್ಟು ಕಡಿಮೆಯಿದ್ದು, ನಾಲ್ಕು ವರ್ಷದ ತಂತ್ರಜ್ಞಾನ ಇದಾಗಿದೆ. 402 ಪಟಾಕಿ ಉತ್ಪಾದಕ ಕಂಪನಿಗಳ( ಗ್ರೀನ್‌ ಕ್ರ್ಯಾಕರ್ಸ್) ನೋಂದಣಿಯಾಗಿದ್ದು ಎರಡು ವರ್ಷಗಳಿಂದ ಹಸಿರು ಪಟಾಕಿ ಉತ್ಪಾದನೆ (ಮರೂನ್ಸ್‌, ಆಟಂ ಬಾಂಬ್‌, ಫ್ಲವರ್‌ ಪಾಟ್‌, ಪೆನ್ಸಿಲ್‌, ಸ್ಪಾರ್ಕಲರ್‌) ಸೀಮಿತ ಪ್ರಮಾಣದಲ್ಲಿದೆ. 160 ಡೆಸಿಬಲ್‌ ಶಬ್ದ ಪ್ರಮಾಣ ಹಸಿರು ಪಟಾಕಿಯಲ್ಲಿ 120ರಿಂದ 145 ಡೆಸಿಬಲ್‌ಗೆ ಸೀಮಿತವಾಗಿದೆ.

ರಿಸರ್ಚ್ ಸೆಂಟರೇ ಇಲ್ಲ: ಹಸಿರು ಪಟಾಕಿಯ ಪರಿಣಾಮದ ಆಳ, ಅಗಲದ ಅಧ್ಯಯನ ನಿಟ್ಟಿನಲ್ಲಿ ಶಿವಕಾಶಿ ಸಹಿತ ಹಲವೆಡೆ ಸಂಶೋಧನಾ ಕೇಂದ್ರ ಇನ್ನೂ ಆರಂಭವಾಗಿಲ್ಲ. ಹಸಿರು ಪಟಾಕಿ ದರದಲ್ಲಿಒಂದಂಶ ಸಂಶೋಧನಾ ಕೇಂದ್ರಕ್ಕೆ ಬಳಕೆಯಾಗಲಿದ್ದು, ಒಂದು ಪಟಾಕಿ ಕಂಪನಿ ರಿಸರ್ಚ್ ಸೆಂಟರ್‌ಗೆ 50ರಿಂದ 60 ಲಕ್ಷ ರೂ. ವ್ಯಯಿಸಬೇಕು. ಎಕ್ಸ್‌ಪ್ಲೋಸಿವ್‌ ಡಿಪಾರ್ಟ್‌ಮೆಂಟ್‌ ಮೂರು ತಿಂಗಳಿಗೊಮ್ಮೆ ಪ್ರಗತಿ ವರದಿಯನ್ನು ಎನ್‌ಜಿಟಿ, ಸಿಪಿಸಿಬಿ ಹಾಗೂ ಪಿಸಿಬಿಗಳಿಗೆ ಸಲ್ಲಿಸಬೇಕು.

ಹಸಿರು ಪಟಾಕಿ ಮಾರಲಷ್ಟೇ ಲೈಸೆನ್ಸ್‌: ಅಪರ ಜಿಲ್ಲಾಧಿಕಾರಿ ರಾಜ್ಯದ ಸರಕಾರದ ಆದೇಶದಂತೆ ಉಡುಪಿ ಜಿಲ್ಲೆಯಲ್ಲಿ ಹಸಿರು ಪಟಾಕಿ ಮಾರಲಷ್ಟೇ ಪೊಲೀಸ್‌, ಅಗ್ನಿಶಾಮಕ ದಳ, ತಹಸೀಲ್ದಾರ್‌, ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಎನ್‌ಒಸಿ ಆಧಾರದಲ್ಲಿ ತಾತ್ಕಾಲಿಕ ಪರವಾನಗಿ ನೀಡಲಾಗುತ್ತಿದೆ. ಮಂಗಳವಾರದಿಂದ 25 ಪರವಾನಗಿ ನೀಡಿದ್ದು 2019ರಲ್ಲಿ 58 ಪರವಾನಗಿ ನೀಡಲಾಗಿತ್ತು. ಹಸಿರು ಪಟಾಕಿ ಹೊರತು ಅನ್ಯ ಪಟಾಕಿ ಮಾರಲು ಅವಕಾಶವಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ತಿಳಿಸಿದ್ದಾರೆ.

ವಾರದ ಹಿಂದಷ್ಟೇ ಹಸಿರು ಪಟಾಕಿಯನ್ನೇ ಮಾರಿ ಅಂತ ಜಿಲ್ಲಾಡಳಿತ, ರಾಜ್ಯ ಸರಕಾರ ಹೇಳುತ್ತಿದೆ. ಆದರೆ ಒಂದೆರಡು ತಿಂಗಳ ಹಿಂದೆಯೇ ಬೇಡಿಕೆಯಿಟ್ಟು, ಶೇ.18 ಜಿಎಸ್‌ಟಿಇ ಪಾವತಿಸಿ ತಂದ ಪಟಾಕಿಯನ್ನು ಏನು ಮಾಡೋದು?
-ರಾಜೇಶ್‌ ರಾವ್‌, ಪಟಾಕಿ ವರ್ತಕ, ಉಡುಪಿ

ಕೊರೊನಾ ಹಿನ್ನೆಲೆಯಲ್ಲಿಮಕ್ಕಳು ಹೊರಬರುತ್ತಿಲ್ಲ, ಪಿಸ್ತೂಲ್‌ಗೆ ಡಿಮ್ಯಾಂಡ್‌ ಇಲ್ಲ, ಆತಂಕ ಇನ್ನೂ ಮುಗಿದಿಲ್ಲ, ಪರಿಸರ ಮಾಲಿನ್ಯ ವಿರುದ್ಧ ಜಾಗೃತಿ ಹೆಚ್ಚಿದ್ದು ಹಸಿರು ಪಟಾಕಿ ಹೆಚ್ಚಿನ ಪ್ರಮಾಣದಲ್ಲಿ ಬಂದರೂ ಬೇಡಿಕೆಯಿಲ್ಲ.
-ವಾಸುದೇವ ಕಿಣಿ, ಪಟಾಕಿ ಮಾರಾಟಗಾರರು, ಉಡುಪಿ

ಹಸಿರು ಪಟಾಕಿಯ ಲಾಂಛನ ಸಹಿತ ಕ್ಯೂಆರ್‌ ಕೋಡ್‌ ಪಟಾಕಿಗಳಲ್ಲಿಅಳವಡಿಕೆ ಕಡ್ಡಾಯ. ಪರಿಸರ ಮಾಲಿನ್ಯದ ಪರಿಣಾಮ ದಿಲ್ಲಿ ಸಹಿತ ಅನೇಕ ನಗರಗಳಲ್ಲಿತೀವ್ರವಾಗಿದ್ದು, ವಾಯುಮಾಲಿನ್ಯ ನಿಯಂತ್ರಣ ಅತ್ಯಗತ್ಯ.
-ವಿಜಯಾ ಹೆಗಡೆ, ಪರಿಸರ ಅಧಿಕಾರಿ, ಉಡುಪಿ ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಣಿಪಾಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ