ಆ್ಯಪ್ನಗರ

ನೀರು ನಿರ್ವಹಣೆಯಲ್ಲಿ ಇಸ್ರೇಲ್‌ ದೇಶ ಮಾದರಿ

ನೀರು ನಿರ್ವಹಣೆಯಲ್ಲಿ ಇಸ್ರೇಲ್‌ ಸಾಧನೆ ಶ್ಲಾಘನೀಯ. ಅಲ್ಲಿ ಶೇ.99ರಷ್ಟು ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುತ್ತಿದ್ದು, ನೀರಿನ ಸಹಜ ಮೂಲಗಳ ಕೊರತೆಯ ನಡುವೆಯೂ ಆ ದೇಶ ನೀರಿನ ಸಮಸ್ಯೆ ನೀಗಿಸಿಕೊಂಡಿದೆ. ನೀರಾವರಿ ಕ್ಷೇತ್ರದಲ್ಲಿ ಇಸ್ರೇಲ್‌ ಇತರ ದೇಶಗಳಿಗೆ ಮಾದರಿಯಾಗಿದ್ದು, ಭಾರತದಂತಹ ದೇಶಗಳು ಆ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ದ.ಕ. ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್‌. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

Vijaya Karnataka 16 Jul 2019, 5:00 am
ಬೈಂದೂರು : ನೀರು ನಿರ್ವಹಣೆಯಲ್ಲಿ ಇಸ್ರೇಲ್‌ ಸಾಧನೆ ಶ್ಲಾಘನೀಯ. ಅಲ್ಲಿ ಶೇ.99ರಷ್ಟು ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುತ್ತಿದ್ದು, ನೀರಿನ ಸಹಜ ಮೂಲಗಳ ಕೊರತೆಯ ನಡುವೆಯೂ ಆ ದೇಶ ನೀರಿನ ಸಮಸ್ಯೆ ನೀಗಿಸಿಕೊಂಡಿದೆ. ನೀರಾವರಿ ಕ್ಷೇತ್ರದಲ್ಲಿ ಇಸ್ರೇಲ್‌ ಇತರ ದೇಶಗಳಿಗೆ ಮಾದರಿಯಾಗಿದ್ದು, ಭಾರತದಂತಹ ದೇಶಗಳು ಆ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ದ.ಕ. ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್‌. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
Vijaya Karnataka Web isrel


ಇತ್ತೀಚೆಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಇಸ್ರೇಲ್‌ಗೆ ಕಳುಹಿಸಿದ್ದ ತಂಡದಲ್ಲಿದ್ದ ಪ್ರಕಾಶ್ಚಂದ್ರ ಶೆಟ್ಟಿ, ಅಧ್ಯಯನ ಪ್ರವಾಸ ಮುಗಿಸಿ ಬಂದಿದ್ದು, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ 'ಇಸ್ರೇಲ್‌ ಪ್ರವಾಸ ಕಥನ ಮತ್ತು ಸಂವಾದ'ದಲ್ಲಿ ಅನುಭವ ಹಂಚಿಕೊಂಡರು.

ಇಸ್ರೇಲ್‌ನಲ್ಲಿ ಶೇ.20ರಷ್ಟು ಭಾಗ ಮಾತ್ರ ಕೃಷಿಯೋಗ್ಯ ಪ್ರದೇಶವಾಗಿದ್ದು, ಅರ್ಧ ಭಾಗ ಮರುಭೂಮಿಯಿಂದ ಕೂಡಿದೆ. ಅವರು ಸಮುದ್ರ ನೀರನ್ನು ಶುದ್ಧೀಕರಿಸಿ, ಕೃಷಿ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಲ್ಲಿ ಬೀಳುವ ಮಳೆ ಅವರ ನೀರಿನ ಅಗತ್ಯವನ್ನು ಈಡೇರಿಸುವುದಿಲ್ಲ. ಕೃಷಿಯೂ ಸೇರಿದಂತೆ ಎಲ್ಲ ಉದ್ದೇಶಕ್ಕೆ ಆ ನೀರನ್ನು ಭೂಗತ ಪೈಪ್‌ಗಳ ಮೂಲಕ ಪೂರೈಸಿ ಇಂಗುವಿಕೆ ಮತ್ತು ಆವಿಯಿಂದ ವ್ಯರ್ಥವಾಗದಂತೆ ನೋಡಿಕೊಳ್ಳುತ್ತಾರೆ. ಎಲ್ಲ ವಿಧದ ಕೃಷಿ, ಗಿಡಮರಗಳಿಗೆ ಹನಿ ನೀರಾವರಿ ಅನುಸರಿಸುತ್ತಾರೆ. ಕುಡಿಯುವುದಕ್ಕೂ ಅದೇ ನೀರು ಬಳಕೆಯಾಗುತ್ತದೆ. ಈಗೀಗ ಗಿಡ ನೆಡುವಾಗಲೇ ಬುಡದಲ್ಲಿ ಹನಿನೀರಿನ ಪೈಪ್‌ ಅಳವಡಿಸುತ್ತಾರೆ. ಕೃಷಿಗೆ ಪೂರೈಕೆಯಾಗುವ ನೀರಿನೊಂದಿಗೆ ದ್ರವೀಕೃತ ಗೊಬ್ಬರ ಬೆರೆಸುತ್ತಾರೆ. ನೀರಿನ ಬಳಕೆ ಬಗೆಗೆ ಕಟ್ಟುನಿಟ್ಟಾದ ಕಾನೂನು ಇದೆ. ಉಷ್ಣತೆ 40 ಡಿಗ್ರಿ ಸೆಲ್ಸಿಯಸ್‌. ಕೃಷಿಗೆ ಪೂರಕವಲ್ಲದ ಸನ್ನಿವೇಶ ಇರುವ ಈ ದೇಶ ಕೃಷಿ ತಂತ್ರಜ್ಞಾನದಲ್ಲಿ ಶ್ರೇಷ್ಠ ಸಾಧನೆ ಮಾಡಿರುವುದಲ್ಲದೆ, ಹೊಚ್ಚ ಹೊಸ ಕೃಷಿ ಉತ್ಪನ್ನಗಳ ರಫ್ತು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.

ಮಾರುಕಟ್ಟೆ ಆಧರಿತ ಬೆಳೆ ಪದ್ಧತಿ: ಇಸ್ರೇಲ್‌ ಯಾವುದೇ ಒಂದು ಬೆಳೆಯನ್ನು ಅವಲಂಬಿಸಿಲ್ಲ. ಆ ವರ್ಷ ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಹೆಚ್ಚಿನ ಬೇಡಿಕೆ ಇರುತ್ತದೆಯೋ, ಆ ಬೆಳೆಯನ್ನು ಹೆಚ್ಚಾಗಿ ಬೆಳೆದು ಅಧಿಕ ಲಾಭ ಪಡೆಯುತ್ತಾರೆ.

ಕಿಬುಟ್ಸ್‌ ಸಮುದಾಯ: ಇಸ್ರೇಲ್‌ನಲ್ಲಿ ಕಿಬುಟ್ಸ್‌ ಎಂದು ಕರೆಯುವ ಸಮುದಾಯ ಜೀವನ ಪದ್ಧತಿ ಪ್ರಚಲಿತದಲ್ಲಿದೆ. ಪ್ರತಿ ಕಿಬುಟ್ಸ್‌ನಲ್ಲಿ ಸುಮಾರು 250 ಕುಟುಂಬಗಳಿದ್ದು, ಅವರು ಪ್ರತ್ಯೇಕವಾಗಿ ವಾಸಿಸಿದರೂ, ಆಹಾರ ಸೇವನೆ ಒಂದೇ ಕಡೆ ನಡೆಯುತ್ತದೆ. ಅದರ ಸದಸ್ಯರು ಯಾವುದೇ ದುಡಿಮೆ ಮಾಡಿದರೂ ಅದನ್ನು ಯಜಮಾನನಿಗೆ ನೀಡಿ ಅವರು ಇದನ್ನು ಸಮನಾಗಿ ಹಂಚುತ್ತಾರೆ. ಈ ಕಿಬುಟ್ಸ್‌ ಸದಸ್ಯರು ವೈದ್ಯ, ಎಂಜಿನಿಯರ್‌ ಅಥವಾ ಕೂಲಿ ಕಾರ್ಮಿಕನಾದರೂ ಅವರ ದುಡಿಮೆ ಯಜಮಾನನಿಗೆ ನೀಡಿ, ಅವರೇ ಎಲ್ಲರಿಗೂ ಸಮನಾಗಿ ಹಂಚುತ್ತಾರೆ. ಆ ದೇಶದಲ್ಲಿ ಈಗ 270 ಕಿಬುಟ್ಸ್‌ಗಳಿವೆ.

ಪಶು ಸಂಗೋಪನೆಗೆ ಆದ್ಯತೆ: ಇಸ್ರೇಲ್‌ನಲ್ಲಿ ಪಶು ಸಂಗೋಪನೆ ಹಾಗೂ ಕೋಳಿ ಸಾಕಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅವುಗಳಲ್ಲೂ ಯಂತ್ರಗಳ ಬಳಕೆಯಾಗುತ್ತದೆ. ದನ ಮತ್ತು ಕೋಳಿಗಳಿಗೆ ಮೇವು ಪೂರೈಕೆ, ಹಾಲು ಕರೆಯುವಿಕೆ ಮತ್ತು ಮೊಟ್ಟೆ ಸಂಗ್ರಹ, ಸ್ವಚ್ಛತೆ, ಎಲ್ಲದಕ್ಕೂ ಯಂತ್ರಗಳ ಬಳಕೆಯಾಗುತ್ತದೆ. ಇದರಿಂದ ಇವುಗಳಲ್ಲಿ ಕನಿಷ್ಠ ಮಾನವ ಶ್ರಮ ಸಾಕಾಗುತ್ತದೆ. 1200 ದನಗಳಿರುವ ಫಾರ್ಮನ್ನು ಕೇವಲ 9 ಕಾರ್ಮಿಕರು ನಿರ್ವಹಿಸುತ್ತಾರೆ.

ಇಸ್ರೇಲ್‌ ರಾಷ್ಟ್ರೀಯ ಭದ್ರತೆಗೆ ನೀಡುವ ಗರಿಷ್ಠ ಎಚ್ಚರ ಪ್ರತಿ ಪ್ರವಾಸಿಗೂ ಆಗುತ್ತದೆ. ಸಮವಸ್ತ್ರದಲ್ಲಿರುವ ಪೊಲೀಸ್‌ ಕಂಡು ಬರದಿದ್ದರೂ ತಪ್ಪಾದಲ್ಲಿ ಪ್ರತ್ಯಕ್ಷ ರಾಗುತ್ತಾರೆ. ರಾಷ್ಟ್ರೀಯತೆಗೆ ಆದ್ಯತೆ ನೀಡುತ್ತಾರೆ. ಅದರೊಂದಿಗೆ ಧರ್ಮ ಬೆರೆಸುವುದಿಲ್ಲ. ಇತಿಹಾಸದಲ್ಲಿ ತಮ್ಮ ಜನಾಂಗದ ಮೇಲಾದ ದೌರ್ಜನ್ಯದ ಎಲ್ಲ ಕುರುಹುಗಳನ್ನು ಸಂರಕ್ಷಿಸಿ ಇರಿಸಿಕೊಂಡಿದ್ದಾರೆ. ಆದರೆ ಅದರ ಕುರಿತು ಮಾತನಾಡುವುದಿಲ್ಲ. ಹೆದ್ದಾರಿಗಳಲ್ಲಿ ಟೋಲ್‌ಗೇಟ್‌ಗಳಿಲ್ಲ. ಆದರೆ ಆನ್‌ಲೈನ್‌ ಮೂಲಕ ಟೋಲ್‌ ಕಡಿತವಾಗುವ ತಂತ್ರಜ್ಞಾನ ಬಳಕೆಯಲ್ಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ