ಆ್ಯಪ್ನಗರ

ಮರಳು ಗಣಿಗಾರಿಕೆ: ಕರಾವಳಿ ಜಿಲ್ಲಾಡಳಿತದ ವಿರುದ್ಧ ಕೋಟ ಧ್ವನಿ

ಕರಾವಳಿಯ 2 ಜಿಲ್ಲೆಗಳಲ್ಲಿ ಸರಕಾರ ಮರಳು ಗಣಿಗಾರಿಕೆಗೆ ಅನುಮತಿ ನೀಡಿದೆ. ಇಲ್ಲಿನ ಬಡ ಜನರು ಹಾಗೂ ಸಣ್ಣಪುಟ್ಟ ಲಾರಿ ಮಾಲಿಕರ ಜೀವನೋಪಾಯಕ್ಕೆ ಈ ಕೆಲಸವನ್ನೇ ಆಧಾರಿಸಿರುವ ಹಿನ್ನೆಲೆಯಲ್ಲಿ ಸಿಎಂ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಕೋಟಾ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ

Vijaya Karnataka Web 22 Oct 2018, 6:33 pm
ಉಡುಪಿ: ಕರಾವಳಿಯ ಕೆಲ 2 ಜಿಲ್ಲೆಗಳಲ್ಲಿ ಮರಳು ಗಣಿಗಾರಿಕೆಗೆ ಸರಕಾರ ಸಮ್ಮತಿ ಸೂಚಿಸಿದ್ದರೂ, ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಸರಕಾರ ಸತ್ತು ಹೋದ ಪರಿಸ್ಥಿತಿಯಲ್ಲಿದೆ ಎಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.
Vijaya Karnataka Web kota


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 25 ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿ 13 ಎಂಎಲ್‍ಎ, 4 ಎಂಎಲ್‍ಸಿ, 4 ಸಚಿವರ ಜಂಟಿ ಸಭೆ ಕರೆದು ಅ.15 ಕ್ಕೆ ಮರುಳುಗಾರಿಕೆ ಆರಂಭಿಸುವಂತೆ 2 ಉಭಯ ಡಿಸಿಗಳಿಗೆ ಸೂಚನೆ ಕೊಟ್ಟಿದ್ದರು. ಆದರೆ ಡಿಸಿ, ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಹೇಳುತ್ತಿದ್ದು, ಸರಕಾರ ಸತ್ತು ಹೋಗುವ ಪರಿಸ್ಥಿತಿಯಲ್ಲಿದೆ ಎಂದು ಲೇವಡಿ ಮಾಡಿದರು.

ಜಿಲ್ಲೆಯ ಮರಳುಗಾರಿಕೆಗೆ ಸಂಬಂಧಿಸಿ ಹೊಸದಾಗಿ ಗುರುತಿಸಲಾದ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಹೊರತು ಪಡಿಸಿ 27 ಮರಳು ದಿಬ್ಬ ಗುರುತಿಸಲು ಜಿಲ್ಲಾಡಳಿತಕ್ಕೆ ಅವಕಾಶವಿದ್ದರೂ, ಕೇವಲ 9 ದಿಬ್ಬಗಳನ್ನು ಗುರುತಿಸಿ ಕಳುಹಿಸಿದ್ದು, ಸದ್ಯ 7 ದಿಬ್ಬಗಳಿಗಷ್ಟೇ ಮಂಜೂರಾತಿ ಸಿಕ್ಕಿದೆ ಎಂದು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಉಸ್ತುವಾರಿ ಸಚಿವೆ ತಮ್ಮ ಮಾತು ನಡೆಯಲ್ಲ ಎನ್ನುವ ಅಸಹಾಯಕತೆಯನ್ನು ಬಾಯಿ ಬಿಟ್ಟು ಹೇಳಿಕೊಳ್ಳಲಿ, ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಕಳೆದ 2 ದಶಕಗಳಲ್ಲಿ ಕಾಣದ ಆಡಳಿತಾತ್ಮಕ ವೈಫಲ್ಯ ಈ ಬಾರಿ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ. ಮರಳುಗಾರಿಕೆಯನ್ನು ನಂಬಿಕೊಂಡಿರುವ ಸಣ್ಣಪುಟ್ಟ ಲಾರಿ ಮಾಲೀಕರು ಬೈಂದೂರಿನಿಂದ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಅಹೋರಾತ್ರಿ ಪ್ರತಿಭಟನೆಗೆ ಬೆಂಬಲ

ಮರಳು ಸಮಸ್ಯೆ ಪರಿಹಾರಕ್ಕೆ ಅಗ್ರಹಿಸಿ ಕೂಲಿ ಕಾರ್ಮಿಕರು, ಬಡವರು, ದೋಣಿ ಮಾಲೀಕರು, ವ್ಯಾಪಾರಿಗಳು ಒಂದಾಗಿ ಅ. 25 ರಂದು ಜಿಲ್ಲಾಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಲಾಗುವುದು. ನನ್ನನ್ನೂ ಸೇರಿಸಿ, ಜಿಲ್ಲೆಯ ಎಲ್ಲ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಕಾನೂನು ತೊಡಕಿನ ಬಗ್ಗೆ ನಾವು ಅಪಸ್ವರ ಎತ್ತಲ್ಲ. ಮರಳು ಸಮಸ್ಯೆಯ ಬಗ್ಗೆ ಹತ್ತಾರು ಬಾರಿ ಮನವಿ ಕೊಟ್ಟರೂ ಸ್ಪಂದಿಸದೇ ಇರುವುದು ಖಂಡನೀಯ ಎಂದಿದ್ದಾರೆ.

ಬೈಂದೂರಿನಿಂದ ಹೆಜಮಾಡಿವರೆಗೆ ಲಾರಿ ನಿಲ್ಲಿಸಿ ಪ್ರತಿಭಟನೆ ಕೈಗೆತ್ತಿಕೊಂಡಿರುವ ಲಾರಿ ಮಾಲೀಕರ ಶಾಂತಿಯುತ ಪ್ರತಿಭಟನೆಯನ್ನು ಪೊಲೀಸರು ತಡೆದು ಸಮಸ್ಯೆ ಸೃಷ್ಟಿಸಿದ್ದಾರೆ. ಪೊಲೀಸರು ಕಾನೂನಿನ ತಡೆಯೊಡ್ಡಿ ದೌರ್ಜನ್ಯ ಮಾಡಬಾರದು ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ