ಆ್ಯಪ್ನಗರ

ಗೋವಾದಲ್ಲಿ ಕರಾವಳಿ ಮೀನಿಗೆ ನಿಷೇಧ: ಲಾರಿ ಮಾಲೀಕರಿಗೆ ತಟ್ಟಿದ ಬಿಸಿ

ಕರ್ನಾಟಕ ಸಹಿತ ಹೊರ ರಾಜ್ಯದ ಮೀನುಗಳಿಗೆ ಫಾರ್ಮಾಲಿನ್ ಲೇಪನವಿರುವ ಅನುಮಾನದ ಮೇರೆಗೆ ಅ. 26 ರಿಂದ ಗೋವಾ ಸರಕಾರ ಮೀನು ಆಮದು ನಿಷೇಧ ಹೇರಿತ್ತು. ಇದು ಕರಾವಳಿ ಮತ್ಸ್ಯೋದ್ಯಮಕ್ಕೆ ಬಿಸಿ ಮುಟ್ಟಿದ್ದು, ಬಹುತೇಕ ಮೀನಿನ ದರ ಇಳಿಕೆಯಾಗಿತ್ತು.

Vijaya Karnataka Web 28 Nov 2018, 1:30 pm
ಅಜಿತ್ ಆರಾಡಿ
Vijaya Karnataka Web fish


ಉಡುಪಿ:
ಫಾರ್ಮಾಲಿನ್ ಲೇಪನದ ಆರೋಪದಡಿ ಗೋವಾ ಸರಕಾರ ಕರ್ನಾಟಕ ಕರಾವಳಿ ಮೀನು ನಿಷೇಸಿ ಕೆಲ ನಿಬಂಧನೆ ಹೇರಿದ ಬೆನ್ನಲ್ಲೇ ಈ ಭಾಗದ ಲಾರಿ ಮಾಲೀಕರಿಗೆ ನೇರ ಬಿಸಿ ತಟ್ಟಿದೆ. ಆಹಾರ ಸಾಗಾಟಕ್ಕೆ ಪರವಾನಗಿ ಪಡೆಯದೇ ಕದ್ದುಮುಚ್ಚಿ ಮೀನು ಸಾಗಾಟ ಮಾಡುತ್ತಿದ್ದ ವಾಹನಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (ಎಫ್‍ಎಸ್‍ಎಸ್‍ಎಐ) ಕಚೇರಿಗೆ ದೌಡಾಯಿಸಿ, ನೋಂದಣಿಗೆ ತುದಿಗಾಲಿನಲ್ಲಿ ನಿಂತಿವೆ.

ಕಳೆದ ಕೆಲ ವರ್ಷಗಳಿಂದ ಗೋವಾಕ್ಕೆ ಮೀನು ಸಾಗಾಟ ಮಾಡುತ್ತಿದ್ದ ಹೆಚ್ಚಿನ ವಾಹನಗಳು ಮೀನು ಸಾಗಾಣಿಕಾ ಆಹಾರ ಪರವಾನಗಿಗೆ ಮುಂದಾಗಿದ್ದು, ಸೈಬರ್ ಸೆಂಟರ್‌ಗಳಲ್ಲಿ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳುತ್ತಿವೆ. ನ. 1 ರಿಂದ ಅಜ್ಜರಕಾಡಿನಲ್ಲಿರುವ ಕಚೇರಿಯಲ್ಲಿ 84 ವಾಹನಗಳಿಗೆ 57 ಮೀನು ಸಾಗಾಣಿಕಾ ಆಹಾರ ಪರವಾನಗಿ ನೀಡಲಾಗಿದೆ. ಈ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯೂ ಇದೆ.

ಕರ್ನಾಟಕ ಸಹಿತ ಹೊರ ರಾಜ್ಯದ ಮೀನುಗಳಿಗೆ ಫಾರ್ಮಾಲಿನ್ ಲೇಪನವಿರುವ ಅನುಮಾನದ ಮೇರೆಗೆ ಅ. 26 ರಿಂದ ಗೋವಾ ಸರಕಾರ ಮೀನು ಆಮದು ನಿಷೇಧ ಹೇರಿತ್ತು. ಇದು ಕರಾವಳಿ ಮತ್ಸ್ಯೋದ್ಯಮಕ್ಕೆ ಬಿಸಿ ಮುಟ್ಟಿದ್ದು, ಬಹುತೇಕ ಮೀನಿನ ದರ ಇಳಿಕೆಯಾಗಿತ್ತು. ಗೋವಾ ಸರಕಾರ ಮೀನಿನ ಆಮದಿಗೆ ಫಾರ್ಮಾಲಿನ್ ಲೇಪನವಾಗಿಲ್ಲ ಎನ್ನುವುದಕ್ಕೆ ಆಹಾರ ಇಲಾಖೆ ಪ್ರಮಾಣ ಪತ್ರ ಹಾಗೂ ಮೀನು ಸಾಗಾಟ ಮಾಡುವ ಲಾರಿಗಳು ನೀರು ಹೊರ ಚೆಲ್ಲದಂತೆ ಇನ್ಸುಲೇಶನ್ ಅಳವಡಿಸಿಕೊಳ್ಳುವುದು ಕಡ್ಡಾಯವೆಂದು ತಿಳಿಸಿ, ನ. 12 ರಿಂದ ರಾಜ್ಯದ ಮೀನಿಗೆ ನಿಷೇಧ ಹಾಕಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಲಾರಿ ಮಾಲೀಕರಿಗೆ ಪರವಾನಗಿ ಪಡೆಯುವುದು ಅನಿವಾರ್ಯವಾಗಿದೆ.

ಲೈಸೆನ್ಸ್‌ಗೆ ಏನು ಮಾಡಬೇಕು?: 2 ಭಾವಚಿತ್ರ, ಆಧಾರ್ ಕಾರ್ಡ್, ಆರ್‌ಸಿ, ಪಾನ್ ಕಾರ್ಡ್ ಹಾಗೂ ಪ್ರತಿ ವಾಹನಗಳ ದಾಖಲೆಯನ್ನು ಆನ್‍ಲೈನ್‍ನಲ್ಲಿ ಭರ್ತಿ ಮಾಡಿ ಜೆರಾಕ್ಸ್ ಪ್ರತಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕಚೇರಿಗೆ ಸಲ್ಲಿಸಬೇಕು. ಲಾರಿ ಮಾಲೀಕರು ಸೂಕ್ತ ದಾಖಲೆ ಕೊಟ್ಟರೆ ಒಂದೆರಡು ದಿನಗಳಲ್ಲಿ ಮೀನು ಸಾಗಾಣಿಕಾ ಆಹಾರ ಸಾಗಾಟಕ್ಕೆ ಲೈಸೆನ್ಸ್ ಸಿಗಲಿದೆ. ಇದನ್ನು ಪ್ರತಿ ವರ್ಷಕ್ಕೊಮ್ಮೆ ಮರುಪರಿಶೀಲನೆ ಮಾಡಬೇಕಿದೆ ಎಂದು ಹಿರಿಯ ಆಹಾರ ಸುರಕ್ಷತಾ ಅಕಾರಿ ಕೆ.ಎಸ್. ವೆಂಕಟೇಶ್ ತಿಳಿಸಿದ್ದಾರೆ.
ಕಾನೂನು ಪ್ರಕಾರ ಆಹಾರ ಸಾಗಾಟ ಮಾಡುವ ವಾಹನಗಳು ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕಿದೆ. ಬಹಳ ಹಿಂದಿನಿಂದಲೂ ಈ ಕಾಯ್ದೆ ಜಾರಿಯಲ್ಲಿದ್ದರೂ ಅನೇಕರು ಪರವಾನಗಿ ಪಡೆಯದೇ ಸಾಗಾಟ ಮಾಡುತ್ತಿದ್ದರು. ಆದರೆ ಗೋವಾದಲ್ಲಿ ಕಟ್ಟುನಿಟ್ಟಿನಲ್ಲಿ ಪರವಾನಗಿ ಕೇಳಿರುವ ಪರಿಣಾಮ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆನ್ವಯ ಲೈಸನ್ಸ್‍ಗೆ ಲಾರಿ ಮಾಲೀಕರು ಮುಂದೆ ಬಂದಿದ್ದಾರೆ. ಆನ್‍ಲೈನ್ ಮೂಲಕವೇ ನೋಂದಣಿಯಾಗುತ್ತಿದೆ.
-ಡಾ. ವಾಸುದೇವ್, ಅಂಕಿತ ಅಕಾರಿಗಳು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕಚೇರಿ ಉಡುಪಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ