ಆ್ಯಪ್ನಗರ

ಉಡುಪಿ ಇಡ್ಲಿಗೆ ಅಮೆರಿಕದಲ್ಲಿ ಟ್ರೇಡ್ ಮಾರ್ಕ್; ಬಾಯಿ ಚಪ್ಪರಿಸಿ ತಿನ್ನುತ್ತಾರಂತೆ ಅಮೆರಿಕನ್ಸ್!

ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿರುವ ಉಡುಪಿ ಪ್ಯಾಲೇಸ್ ಹೋಟೆಲ್(ಉಡುಪಿಯ ಉದಯ ಶೆಟ್ಟಿ ಮಾಲೀಕ) ಉಡುಪಿ ಇಡ್ಲಿ ಬ್ರ್ಯಾಂಡ್‍ಗೆ ಟ್ರೇಡ್ ಮಾರ್ಕ್ ಪಡೆದಿದ್ದು ಆನ್‍ಲೈನ್ ಮೂಲಕ ವ್ಯವಹಾರ ನಡೆಯುತ್ತಿದೆ. ರೆಡಿ ಟು ಈಟ್ ಉದ್ದಿನ ಇಡ್ಲಿ, ರವೆ ಇಡ್ಲಿಯ ಪ್ಯಾಕೆಟ್ ನಲ್ಲಿ ಚಟ್ನಿ, ಸಾಂಬಾರಿದ್ದು ಭಾರತೀಯರು, ಅಮೆರಿಕನ್ನರು ಮೈಕ್ರೊ ಓವನ್‍ನಲ್ಲಿ ಬಿಸಿ ಮಾಡಿ ತಿನ್ನುತ್ತಾರೆ.

Vijaya Karnataka Web 29 Sep 2021, 11:55 am

ಹೈಲೈಟ್ಸ್‌:

  • ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿರುವ ಉಡುಪಿ ಪ್ಯಾಲೇಸ್ ಹೋಟೆಲ್ ಉಡುಪಿ ಇಡ್ಲಿ ಬ್ರ್ಯಾಂಡ್‍ಗೆ ಟ್ರೇಡ್ ಮಾರ್ಕ್ ಪಡೆದಿದೆ
  • ರೆಡಿ ಟು ಈಟ್ ಉದ್ದಿನ ಇಡ್ಲಿ, ರವೆ ಇಡ್ಲಿಯ ಪ್ಯಾಕೆಟ್ ನಲ್ಲಿ ಚಟ್ನಿ, ಸಾಂಬಾರಿದೆ
  • ಕಾಲು ಕೆ.ಜಿ.(ಆರು) ಇಡ್ಲಿಗೆ 1.99ಡಾಲರ್(150ರೂ.), 24ಇಡ್ಲಿಗಳ ಫ್ಯಾಮಿಲಿ ಪ್ಯಾಕಿಗೆ 4.99ಡಾಲರ್(375ರೂ.) ದರ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಇಡ್ಲಿ
ಎಸ್. ಜಿ. ಕುರ್ಯ,ಉಡುಪಿ
ಉಡುಪಿ: ಘಮಘಮಿಸುವ ಸಾಂಬಾರು ಇಲ್ಲಾ ಚಟ್ನಿಯನ್ನು ನಂಜಿಕೊಂಡು ಕರಾವಳಿಗರು ಆಗಾಗ ಇಲ್ಲಾ ವಾರಕ್ಕೊಮ್ಮೆಯಾದರೂ ಸವಿಯುವ ಉಡುಪಿ ಇಡ್ಲಿಗೆ 12,461ಕಿ. ಮೀ. ದೂರದ ಅಮೆರಿಕದಲ್ಲಿ ಬ್ರ್ಯಾಂಡ್, ಟ್ರೇಡ್ ಮಾರ್ಕಿನ ಗೌರವ, ಸ್ಥಾನಮಾನ ದೊರೆತಿದೆ.
ಉಡುಪಿಯ ಮಸಾಲೆ ದೋಸೆ, ಗೋಳಿ ಬಜೆ, ನೀರ್ ದೋಸೆ, ಮೂಡೆ, ಪತ್ರೊಡೆ, ಸುಕ್ರುಂಡೆ, ಅತಿರಸ, ಗಡ್‍ಬಡ್, ಈರೆಡ್ಡೆ(ಅರಶಿನ ಎಲೆ ಗಟ್ಟಿ) ಸಹಿತ ಸಾಂಪ್ರದಾಯಿಕ ಖಾದ್ಯ, ತಿಂಡಿಗಳಿಗೆ ಯಾವುದೇ ಬ್ರ್ಯಾಂಡ್, ಟ್ರೇಡ್ ಮಾರ್ಕ್, ಪೇಟೆಂಟ್ ಈ ತನಕ ಪಡೆದಿಲ್ಲ. ಹಿರಿಯರ ಆಹಾರ ಸಂಶೋಧನೆ ಸಮಾಜಕ್ಕೆ ಅರ್ಪಿತವಾಗಿದ್ದರೆ ಈಗ ಎಲ್ಲದರಲ್ಲೂ ವ್ಯಾವಹಾರಿಕ, ವಾಣಿಜ್ಯಿಕ ದೃಷ್ಟಿ ಕೋನ ಹೆಚ್ಚಿದೆ.

ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿರುವ ಉಡುಪಿ ಪ್ಯಾಲೇಸ್ ಹೋಟೆಲ್(ಉಡುಪಿಯ ಉದಯ ಶೆಟ್ಟಿ ಮಾಲೀಕ) ಉಡುಪಿ ಇಡ್ಲಿ ಬ್ರ್ಯಾಂಡ್‍ಗೆ ಟ್ರೇಡ್ ಮಾರ್ಕ್ ಪಡೆದಿದ್ದು ಆನ್‍ಲೈನ್ ಮೂಲಕ ವ್ಯವಹಾರ ನಡೆಯುತ್ತಿದೆ. ರೆಡಿ ಟು ಈಟ್ ಉದ್ದಿನ ಇಡ್ಲಿ, ರವೆ ಇಡ್ಲಿಯ ಪ್ಯಾಕೆಟ್ ನಲ್ಲಿ ಚಟ್ನಿ, ಸಾಂಬಾರಿದ್ದು ಭಾರತೀಯರು, ಅಮೆರಿಕನ್ನರು ಮೈಕ್ರೊ ಓವನ್‍ನಲ್ಲಿ ಬಿಸಿ ಮಾಡಿ ತಿನ್ನುತ್ತಾರೆ.
ಅಕ್ಕಿ ಇಡ್ಲಿ ತಿನ್ನುವುದನ್ನು ಮರೆತರೂ, ರವೆ ಇಡ್ಲಿಯನ್ನು ಮರೆಯಬಾರದು!

ಅಮೆರಿಕದಲ್ಲಿರುವ ಮಡಿವಂತರಿಗಾಗಿ ಸಾಂಬಾರಿಗೆ ಈರುಳ್ಳಿ, ಬೆಳ್ಳುಳ್ಳಿಯನ್ನೂ ಬಳಸೋದಿಲ್ಲ. ಕಾಲು ಕೆ.ಜಿ.(ಆರು) ಇಡ್ಲಿಗೆ 1.99ಡಾಲರ್(150ರೂ.), 24ಇಡ್ಲಿಗಳ ಫ್ಯಾಮಿಲಿ ಪ್ಯಾಕಿಗೆ 4.99ಡಾಲರ್(375ರೂ.) ದರವಿದ್ದು ಸಾವಯವ ಬೆಲ್ಲದ ಡಬ್ಬಿಯೂ ಅರ್ಧ ಕೆ.ಜಿ. ರೂಪದಲ್ಲಿ ಮಾರಲಾಗುತ್ತಿದೆ. ಬ್ರ್ಯಾಂಡ್, ಟ್ರೇಡ್ ಮಾರ್ಕ್ ಆಯಾ ದೇಶಕ್ಕೆ ಸೀಮಿತವಾಗಿದ್ದರೂ ಜಾಗತಿಕ ಒಪ್ಪಂದಕ್ಕೆ ಅನುಗುಣವಾಗಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆಯೂ ಇದೆ.

ಅಮೆರಿಕದಲ್ಲಿ ಉಡುಪಿ ಇಡ್ಲಿಗೆ ಪಡೆದ ಬ್ರ್ಯಾಂಡ್, ಟ್ರೇಡ್ ಮಾರ್ಕನ್ನು ಭಾರತದಲ್ಲಿ ಅರ್ಜಿ ಹಾಕಿ ಉತ್ಪಾದನೆ, ಮಾರುಕಟ್ಟೆ ವ್ಯವಹಾರದಲ್ಲಿ ತೊಡಗಿದರೆ ಆಗ ಉಡುಪಿ ಇಡ್ಲಿ ಹೆಸರಲ್ಲಿ ಅನ್ಯರು ಬ್ರ್ಯಾಂಡ್, ಟ್ರೇಡ್ ಮಾರ್ಕ್ ಪಡೆವಂತಿಲ್ಲ. ಹೀಗಾಗಿ ಉಡುಪಿ ಮೂಲದ ಉತ್ಪನ್ನಗಳಿಗೆ ಬ್ರ್ಯಾಂಡ್, ಟ್ರೇಡ್ ಮಾರ್ಕ್ ಪಡೆದುಕೊಳ್ಳಲು ಹಾಗೂ ರಫ್ತು ನಿಟ್ಟಿನಲ್ಲಿ ನೀಲ ನಕಾಶೆ ತಯಾರಿಸುವ ಚಿಂತನೆಯನ್ನು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಮುಂದಿಟ್ಟಿದ್ದಾರೆ.
ಹೋಟೆಲ್‌ನಲ್ಲಿ ಇಡ್ಲಿ ತಿನ್ನದೇ ಹೋದರೂ ಸಾಂಬಾರ್ ಮಾತ್ರ ಕುಡಿಯಬೇಕಂತೆ!

ಬೇವು, ಅರಶಿನ, ಬಾಸ್ಮತಿ ಅಕ್ಕಿಗೆ ಅಮೆರಿಕದಲ್ಲಿ ಪೇಟೆಂಟ್ ಪಡೆದ ವಿವಾದ ಕೋರ್ಟು ಮೆಟ್ಟಿಲೇರಿ ಬೇವು, ಅರಶಿನ ಪರ ಗೆಲುವು ಸಿಕ್ಕರೂ ಹೋರಾಟ ಮುಂದುವರಿದಿದೆ. ಭಾರತದ ಬಾಸ್ಮತಿ ಅಕ್ಕಿಗೂ ಪೇಟೆಂಟ್ ಪಡೆಯಲೆತ್ನಿಸಿದ ಅಮೆರಿಕ ಟೆಕ್ಸಾಸ್ ಪ್ರಾಂತ್ಯದಲ್ಲಿ ಟೆಕ್ಸ್ಮತಿಯಾಗಿ ಪರಿವರ್ತಿಸಿದೆ. ಇಷ್ಟಾದರೂ ಇದು ನಮ್ಮದೆನ್ನುವ ಅಭಿಮಾನದ ಅಭಿಯಾನ, ದಾಖಲೀಕರಣ ನಡೆದಿಲ್ಲ.

ಇಡ್ಲಿ ಮತ್ತು ಪುಂಡಿ(ಅಕ್ಕಿ ಉಂಡೆ) ಉತ್ತಮ ಪೌಷ್ಠಿಕಾಂಶವುಳ್ಳ ಆಹಾರ. ಭಾರತೀಯ ಹಾಗೂ ಪ್ರಾದೇಶಿಕ ಆಹಾರ ವೈವಿಧ್ಯವನ್ನು ಉಳಿಸಿ, ಬೆಳೆಸುವ ಮೂಲಕ ಸಾಂಪ್ರದಾಯಿಕ ಆಹಾರ ವೈವಿಧ್ಯದ ರುಚಿ ಮುಂದಿನ ಪೀಳಿಗೆಯೂ ಅನುಭವಿಸುವಂತಾಗಬೇಕು.
ಡಾ. ಬಿ. ಎಂ. ಹೆಗ್ಡೆ ಮಂಗಳೂರು(ನಿವೃತ್ತ ಕುಲಪತಿ, ಮಾಹೆ ವಿವಿ)

ಉಡುಪಿಯ ಆಹಾರ, ಮಸಾಲೆ, ಅಡುಗೆ ವೈವಿಧ್ಯದ ಜತೆಗೆ ಎಲೆಯಲ್ಲಿ ಆಹಾರ ಸೇವನೆಯ ಮಹತ್ವವನ್ನು ಹೆಚ್ಚು ಪ್ರಚಾರ, ಪ್ರಸಾರವಾಗಬೇಕು. ಪ್ರತಿ ಮನೆಯಲ್ಲಿ ಹಿರಿಯರಿಂದ ರೆಸಿಪಿ ಕೇಳಿ, ಬರೆದಿಟ್ಟು ಪ್ರಯೋಗ ಮಾಡಿ ಸಾಮಾಜಿಕ ಜಾಲತಾಣ, ಯೂಟ್ಯೂಬ್ ದಾಖಲೀಕರಣವಾಗಬೇಕು.
ಡಾ. ಕಿರಣ್ ಆಚಾರ್ಯ(ಜಗತ್ತಿನ 100 ಪ್ರವಾಸಿ ತಾಣಗಳಿಗೆ ತೆರಳಿದ ಪ್ರವಾಸಿಗ), ಮಣಿಪಾಲ

ಉಡುಪಿ ಹೋಟೆಲ್ ಉಡುಪಿಯಲ್ಲೇ ವಿರಳ!

ಜಗದಗಲದ ರಾಷ್ಟ್ರಗಳಲ್ಲಿ ಉಡುಪಿ ಹೋಟೆಲ್‍ಗಳು ಆಹಾರ ವೈಶಿಷ್ಟ್ಯದಿಂದ ಗಮನಸೆಳೆಯುತ್ತಿವೆ. ನೀಲ್ ಆರ್ಮ್‍ಸ್ಟ್ರಾಂಗ್ ಮತ್ತು ಯೂರಿ ಗಗೇರಿಯನ್ ಮೊದಲ ಬಾರಿ ಚಂದ್ರನ ಮೇಲೆ ಮೊದಲ ಹೆಜ್ಜೆ ಗುರುತು ಮೂಡಿಸುವ ಮೊದಲೇ ಉಡುಪಿ ಹೋಟೆಲಿನ ಇಡ್ಲಿ ಸಾಂಬಾರಿನ ಘಮ ಘಮ ಹೊರಹೊಮ್ಮುತ್ತಿತ್ತೆನ್ನುವ ಹಾಸ್ಯ ಪ್ರಸಂಗವೂ ಹಲವರ ಮಾತಿನ ನಡುವೆ ತೇಲಿಹೋಗುತ್ತಿದೆ.

ದೇಶ, ವಿದೇಶದ ಪ್ರವಾಸಿಗರು ಉಡುಪಿಗೆ ಬಂದು ದೊಡ್ಡ, ಮಧ್ಯಮ ಹೋಟೆಲುಗಳಲ್ಲಿ ನಾರ್ತ್ ಇಂಡಿಯನ್, ಪಂಜಾಬಿ, ಚೈನೀಸ್, ಬರ್ಗರ್,ಪಿಜ್ಜಾ ಹೊರತು ಉಡುಪಿಯ ಆಹಾರ ವೈಶಿಷ್ಟ್ಯವನ್ನು ಸವಿಯುವ ಅವಕಾಶವೇ ವಿರಳವಾಗಿದೆ. ಸಣ್ಣ ಪುಟ್ಟ ಹೋಟೆಲ್‍ಗಳಲ್ಲೂ ಉಪ್ಪಿಟ್ಟು/ಅವಲಕ್ಕಿ/ಕೇಸರಿಬಾತ್, ಒತ್ತು ಶ್ಯಾವಿಗೆ, ಪತ್ರೊಡೆ, ನೀರ್‍ದೋಸೆ...ಇತ್ಯಾದಿ ಸಾಂಪ್ರದಾಯಿಕ ತಿಂಡಿ ತಿನಸುಗಳ ಬಗ್ಗೆ ಗ್ರಾಹಕರ ಒಲವು ಕಡಿಮೆಯಾದ ಹಿನ್ನೆಲೆಯಲ್ಲಿ ಬೇಡಿಕೆಯ ತಿಂಡಿಗಳನ್ನೇ ಪ್ರದರ್ಶಿಸಿ, ತಯಾರಿಸಿಕೊಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ