ಆ್ಯಪ್ನಗರ

ಕಾಪು ತಾಲೂಕು ಮಿನಿ ವಿಧಾನಸೌಧಕ್ಕೆ ಶೀಘ್ರ ಅನುದಾನ ಬಿಡುಗಡೆ :ಆರ್‌.ವಿ.ದೇಶಪಾಂಡೆ

ತಾಲೂಕಾಗಿ ಅಸ್ತಿತ್ವಕ್ಕೆ ಬಂದಿರುವ ಕಾಪುವಿಗೆ ಮಿನಿವಿಧಾನ ಸೌಧ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು ಶೀಘ್ರದಲ್ಲೇ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕಂದಾಯ ಸಚಿವ ಆರ್‌ವಿ ದೇಶಪಾಂಡೆ ಹೇಳಿದರು.

Vijaya Karnataka 19 Jun 2019, 5:00 am
ಕಟಪಾಡಿ: ತಾಲೂಕಾಗಿ ಅಸ್ತಿತ್ವಕ್ಕೆ ಬಂದಿರುವ ಕಾಪುವಿಗೆ ಮಿನಿವಿಧಾನ ಸೌಧ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು ಶೀಘ್ರದಲ್ಲೇ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕಂದಾಯ ಸಚಿವ ಆರ್‌ವಿ ದೇಶಪಾಂಡೆ ಹೇಳಿದರು.
Vijaya Karnataka Web kapu


ಅವರು ಮಂಗಳವಾರ ಕಾಪು ಉನ್ನತ ಪ್ರಾಥಮಿಕ ಶಾಲೆಯಲ್ಲಿ ವಿಶ್ವಬ್ಯಾಂಕ್‌ ನೆರವಿನಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ 2.45 ಕೋಟಿ ವೆಚ್ಚದ ವಿವಿಧೋದ್ದೇಶ ಚಂಡಮಾರುತ ಆಶ್ರಯತಾಣದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿ ವಿಕೋಪಗಳುಂಟಾದಾಗ ಸಂತ್ರಸ್ತರಿಗೆ ಆಶ್ರಯ ಒದಗಿಸಲು ಜಿಲ್ಲೆಗೆ 2 ಚಂಡಮಾರುತ ಆಶ್ರಯ ತಾಣಗಳನ್ನು ಮಂಜೂರು ಮಾಡಲಾಗಿದ್ದು ಬೈಂದೂರಿನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಕರಾವಳಿಯ 3 ಜಿಲ್ಲೆಗಳಲ್ಲಿ ಇಂತಹ ಆಶ್ರಯ ತಾಣಗಳನ್ನು ನಿರ್ಮಿಸಲಾಗುತ್ತಿದ್ದು ತುರ್ತು ಸಂದರ್ಭದಲ್ಲಿ ಈ ಆಶ್ರಯ ತಾಣಗಳನ್ನು ಸಾರ್ವಜನಿಕರ ರಕ್ಷ ಣೆಗೆ ಬಳಸಿಕೊಳ್ಳಲಾಗುವುದು,ಉಳಿದ ದಿನಗಳಲ್ಲಿ ಶಾಲಾ ತರಗತಿ ಕೋಣೆಗಳನ್ನಾಗಿ ಉಪಯೋಗಿಸಿಕೊಳ್ಳಲಾಗುವುದು. ಚಂಡಮಾರುತದ ಮತ್ತು ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರ ಸ್ಥಳಾಂತರವನ್ನು ಸುಗಮಗೊಳಿಸಲು ಕರಾವಳಿಯ ತೀರ ಪ್ರದೇಶದಲ್ಲಿ ಸುಮಾರು 45 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಅಧ್ಯಕ್ಷ ತೆ ವಹಿಸಿದ್ದ ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ ಸಚಿವ ದೇಶಪಾಂಡೆಯವರು ದಕ್ಷ ವಾಗಿ ಕಾರ್ಯ ನಿರ್ವಹಿಸುತ್ತಿದ್ದು ಕಳೆದ ಬಾರಿ ಉದ್ಯಾವರ ಗ್ರಾಮದಲ್ಲಾದ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಸಕಾಲದಲ್ಲಿ 85 ಲಕ್ಷ ರೂಪಾಯಿ ಪರಿಹಾರ ಒದಗಿಸಿದ್ದಾರೆ. ಕಾಪುವಿನಲ್ಲಿ ನಾಗರಿಕರಿಗೆ ಸಮಸ್ಯೆಯಾಗಿರುವ ಸಿಆರ್‌ಜೆಡ್‌ ಮತ್ತು ಸಿಂಗಲ್‌ ಲೇಔಟ್‌ಗಳಿಗೆ ಸಂಬಂಸಿದ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಚಿವರು ಹೆಜಮಾಡಿ ಕೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಕಾಪು, ಪಕೀರ್ಣಕಟ್ಟೆ, ಹೆಜಮಾಡಿ ಮತ್ತಿತರೆಡೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು. ಬಳಿಕ ಕಾಪು ಹಳೆ ಮಾರಿಗುಡಿಯನ್ನು ಸಂದರ್ಶಿಸಿ ಮಾರಿಯಮ್ಮ ದೇವಿಯ ದರ್ಶನ ಪಡೆದರು.

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ತಾಲೂಕು ಪಂಚಾಯತ್‌ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಜಿಲ್ಲಾ ಪಂಚಾಯತ್‌ ಸದಸ್ಯರಾದ ವಿಲ್ಸನ್‌ ರೋಡ್ರಿಗಸ್‌, ಗೀತಾಂಜಲಿ ಸುವರ್ಣ,ಶಿಲ್ಪಾ ಜಿ ಸುವರ್ಣ, ಕಾಪು ಪುರಸಭಾ ಸದಸ್ಯರು ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಮಧುಕೇಶ್ವರ್‌ ವಂದಿಸಿದರು. ಎಲ್ಲೂರು ಪಂಚಾಯತ್‌ ಕಾರ್ಯದರ್ಶಿ ಚಂದ್ರಶೇಖರ್‌ ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.

''ಸಿಆರ್‌ಝಡ್‌ ವ್ಯಾಪ್ತಿಯನ್ನು ಕೇಂದ್ರ ಸರ್ಕಾರವು ಜನಸಂಖ್ಯೆಗನುಗುಣವಾಗಿ 200 ಮೀ.ನಿಂದ 50 ಮೀ.ಗೆ ಇಳಿಸಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕರಾವಳಿ ತೀರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ಅನಾನುಕೂಲಗಳಿಗೆ ಸ್ಪಂದಿಸಬೇಕು.ಅಧಿಕಾರಿಗಳು ಜನರ ಮಧ್ಯೆ ಬೆರೆತು ಕೆಲಸ ಮಾಡಬೇಕು. ಈ ಭಾಗದ ಸಿಂಗಲ್‌ ಲೇಔಟ್‌ ಸಮಸ್ಯೆಯ ಬಗ್ಗೆ ಶಾಸಕರ ಸಹಿತ ಸ್ಥಳೀಯರ ದೂರುಗಳನ್ನು ಗಮನಿಸಿದ್ದು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು''
-ಆರ್‌ವಿ ದೇಶಪಾಂಡೆ ,ಕಂದಾಯ ಸಚಿವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ