ಆ್ಯಪ್ನಗರ

ಶ್ರೀಕೃಷ್ಣ, ಶ್ರೀರಾಮರ ಪೂಜೆಯ ಇಂಗಿತವೇ ಸನ್ಯಾಸ ಯೋಗಕ್ಕೆ ಕಾರಣ ಪಲಿಮಾರು ಮಠದ ನೂತನ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ

ಸನ್ಯಾಸ ಯೋಗವು ದೇವರ ಕೃಪೆ ಹಾಗೂ ಗುರುಗಳ ಅನುಗ್ರಹದಿಂದ ಲಭಿಸುವಂತಹುದು. ಶ್ರೀರಾಮ, ಕೃಷ್ಣರ ಪೂಜೆಯ ಇಂಗಿತವೇ ಈ ಯೋಗಕ್ಕೆ ಕಾರಣ ಎಂದು ನಾನು ಭಾವಿಸಿದ್ದೇನೆ ಎಂದು ಪಲಿಮಾರು ಮಠದ ನೂತನ ಕಿರಿಯ ಯತಿಗಳಾಗಿ ಪಟ್ಟಾಭಿಷೇಕಗೊಂಡ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಹೇಳಿದರು.

Vijaya Karnataka 13 May 2019, 5:00 am
ಉಡುಪಿ: ಸನ್ಯಾಸ ಯೋಗವು ದೇವರ ಕೃಪೆ ಹಾಗೂ ಗುರುಗಳ ಅನುಗ್ರಹದಿಂದ ಲಭಿಸುವಂತಹುದು. ಶ್ರೀರಾಮ, ಕೃಷ್ಣರ ಪೂಜೆಯ ಇಂಗಿತವೇ ಈ ಯೋಗಕ್ಕೆ ಕಾರಣ ಎಂದು ನಾನು ಭಾವಿಸಿದ್ದೇನೆ ಎಂದು ಪಲಿಮಾರು ಮಠದ ನೂತನ ಕಿರಿಯ ಯತಿಗಳಾಗಿ ಪಟ್ಟಾಭಿಷೇಕಗೊಂಡ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಹೇಳಿದರು.
Vijaya Karnataka Web 2


ಭಾನುವಾರ ತಮ್ಮ ಪಟ್ಟಾಭಿಷೇಕದ ಬಳಿಕ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಅಷ್ಟಮಠಾಧೀಶರಿಂದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರಾಜೇಶ್ವರ ಎಂದರೆ...: ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಉಪನಿಷತ್ತು 'ಮಾತೃ ದೇವೋಭವ' ಎಂಬ ಸಂದೇಶ ನೀಡಿದೆ. ಗುರು ಕೂಡ ತಾಯಿಯಂತೆ ನಿರ್ಮಾತೃವೂ ಹೌದು. ನನ್ನ ಶಿಷ್ಯನಿಗೆ 'ಶ್ರೀ ವಿದ್ಯಾರಾಜೇಶ್ವರತೀರ್ಥ' ಎಂಬ ಇಷ್ಟು ಉದ್ದದ ಹೆಸರು ಯಾಕೆ ಎಂದು ಕೇಳಬಹುದು. ಆದರೆ ಈ ಹೆಸರಲ್ಲಿ ಮಠದ ಪರಂಪರೆಯ 30 ಯತಿಗಳ ಹೆಸರಿನ ಒಂದಕ್ಷರ ಈ ನಾಮಧೇಯದಲ್ಲಿದೆ. ಹೀಗಾಗಿ ವಿದ್ಯಾರಾಜೇಶ್ವರ ನಾಮದಲ್ಲಿ ಪಲಿಮಾರು ಮಠ ಪರಂಪರೆಯ ಎಲ್ಲ ಯತಿಗಳ ಸನ್ನಿಧಾನವಿದೆ ಎಂದು ಹೆಸರಿನ ರಹಸ್ಯವನ್ನು ಬಿಡಿಸಿದರು. ಶ್ರೀ ವಿದ್ಯಾರಾಜೇಶ್ವರ ತೀರ್ಥರು ಅತ್ಯುತ್ತಮ ವಿದ್ವಾಂಸರಾಗಿ ಸಮಾಜಕ್ಕೆ ಉತ್ತಮ ಸೇವೆ, ಮಾರ್ಗದರ್ಶನ ದೊರಕಲಿ ಎಂದು ಹಾರೈಸಿದರು.

ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಾತನಾಡಿ, ಇಂದು ಸನ್ಯಾಸ ಧರ್ಮವೆಂದರೆ ಬಹಳ ಕಠಿಣ. ಸ್ವಾಮೀಜಿಗಳು ಪಾಠ, ಪ್ರವಚನದ ಜತೆಗೆ ಸಮಾಜಕ್ಕೂ ಮಾರ್ಗದರ್ಶನ ನೀಡುವ ಕ್ಲಿಷ್ಟ ಸೇವೆಯನ್ನೂ ಮಾಡಬೇಕಿದೆ. ಹೀಗಾಗಿ ಈ ಯತಿ ಪರಂಪರೆಗೆ ಸಮಾಜದ ಬೆಂಬಲ ಅತೀ ಮುಖ್ಯ ಎಂದರು.

ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಭೀಮನಕಟ್ಟೆ ಮಠಾಧೀಶ ಶ್ರೀ ರಘುವರೇಂದ್ರತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ನೂತನ ಯತಿಗೆ ಶುಭ ಹಾರೈಸಿದರು. ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹಾಗೂ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ನಂತರ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ವತಿಯಿಂದ ಮಠಾಧೀಶರಿಗೆ ಪಲಿಮಾರು ಮಠದ ದಿವಾನರಾದ ವೇದವ್ಯಾಸ ತಂತ್ರಿ ಅವರು ಮಾಲಿಕೆ ಮಂಗಳಾರತಿ ಮಾಡಿದರು. ವಿದ್ವಾಂಸರಾದ ಡಾ. ಕೆ. ವೆಂಕಟೇಶಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಶ್ಲೋಕ ರಚಿಸಿ ಹರಸಿದ ಪೇಜಾವರ ಶ್ರೀ

ಪೇಜಾವರ ಹಿರಿಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ನೂತನ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥರ ಬಗ್ಗೆ ಸ್ವಾರಸ್ಯಕರವಾದ ಶ್ಲೋಕವನ್ನು ರಚಿಸಿ, ಹರಸುವ ಮೂಲಕ ತಮ್ಮ ಪಾಂಡಿತ್ಯವನ್ನು ಮೆರೆದರು.

'ವಿದ್ಯಾಧೀಶಾಬ್ಧಿ ಸಂಭೂತಃ ಕುಮುದಾನಂದದಾಯಕಃ ವಿದ್ಯಾರಾಜೇಶ್ವರೋ ನಾಮಃ ಗುರುರಾಜೋ ವಿಜಯತೇ' ಅಂದರೆ ಗುರು ವಿದ್ಯಾಧೀಶರೆಂಬ ಸಮುದ್ರದಲ್ಲಿ ಉದ್ಭವಿಸಿದ ಚಂದ್ರನಂತಿರುವ ಶ್ರೀವಿದ್ಯಾರಾಜೇಶ್ವರರು ಭೂಮಿಗೆ ಆನಂದ, ಆಹ್ಲಾದವನ್ನುಂಟು ಮಾಡುವ ಚಂದ್ರನಂತೆ ಶೋಭಿಸಲಿ' ಎಂದು ಹಾರೈಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ