ಆ್ಯಪ್ನಗರ

ಉಡುಪಿ ಸರಕಾರಿ ಬಸ್‌ ನಿಲ್ದಾಣದಲ್ಲಿ ಸಾಮಾಜಿಕ ಕಾರ್ಯಕರ್ತರಿಂದ ಅವಳಿ ಹಸುಳೆಗಳ ರಕ್ಷ ಣೆ

ಗಂಡ ಹೆಂಡಿರಿಬ್ಬರ ಜಗಳದಲ್ಲಿ ಬಡವಾಗಿ ಉಡುಪಿ ಸರಕಾರಿ ಬಸ್‌ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ಅವಳಿ ಶಿಶುಗಳನ್ನು ಉಡುಪಿಯ ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ

Vijaya Karnataka 28 Jul 2018, 2:57 pm
ಉಡುಪಿ : ಗಂಡ ಹೆಂಡಿರಿಬ್ಬರ ಜಗಳದಲ್ಲಿ ಬಡವಾಗಿ ಉಡುಪಿ ಸರಕಾರಿ ಬಸ್‌ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ಅವಳಿ ಶಿಶುಗಳನ್ನು ಉಡುಪಿಯ ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಿ ಮಾನವಿಯತೆ ಮೆರೆದ ಘಟನೆ ಶುಕ್ರವಾರ ನಡೆದಿದೆ.
Vijaya Karnataka Web avali


ಈ ಅವಳಿ ಮಕ್ಕಳ ತಾಯಿ ಭಾರತಿ ಗಾಣಿಗ (40) ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸೂರು ಗ್ರಾಮದವರಾಗಿದ್ದು, ತನ್ನ ಪತಿ ವಾಹನ ಅಪಘಾತದಿಂದ ಮರಣ ಹೊಂದಿದ ಬಳಿಕ ಜೀವನ ಸಾಗಿಸಲು ಮಂಗಳೂರಿಗೆ ವಲಸೆ ಬಂದು ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಹೀಗಿರುವಾಗ ಭಾರತಿಗೆ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಶಿರೋಳ ಗ್ರಾಮದ ಅರುಣ ಆಚಾರಿ (31) ಎಂಬುವನ ಪರಿಚಯವಾಗಿದೆ. ನಂತರ ಪರಿಚಯ ಪ್ರೇಮಕ್ಕೆ ತಿರುಗಿ ಇರ್ವರು ಹಿರಿಯರ ಸಮ್ಮತಿ ಇಲ್ಲದೆ, ಮದುವೆಯಾಗಿ ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ. ಭಾರತಿ ಮೇ 23 ರಂದು ಮಂಗಳೂರು ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಎರಡು ಮುದ್ದಾದ ಗಂಡು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಶಸ್ತ್ರ ಚಿಕಿತ್ಸೆ ನಡೆದ ಕಾರಣ ದಂಪತಿ ಎರಡು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ದಿನ ಕಳೆದಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಬಳಿಕ ಅರುಣ ಆಚಾರಿ ತನ್ನ ಪತ್ನಿ ಮಕ್ಕಳನ್ನು ಕರೆದುಕೊಂಡು ತನ್ನೂರಿನ ಮನೆಗೆ ನೆಲೆ ಕಲ್ಪಿಸಲು ಹೋಗಿದ್ದಾನೆ.

ಅಲ್ಲಿ ಅರುಣನ ಪೋಷಕರು ಅಂತರ್ಜಾತಿ ವಿವಾಹ ಮತ್ತು ವಿಧವೆಯನ್ನು ಮದುವೆಯಾದ ಕಾರಣವೊಡ್ಡಿ ಮನೆಗೆ ಪ್ರವೇಶ ನೀಡದಿದ್ದಾಗ ಅಸಹಾಯಕನಾದ ಅರುಣ, ತನ್ನ ಪತ್ನಿ ಹಸುಗೂಸುಗಳೊಂದಿಗೆ ಉಡುಪಿಗೆ ಬಂದು, ಜನಜಂಗುಳಿ ಇರುವ ಸರಕಾರಿ ಬಸ್ಸು ನಿಲ್ದಾಣದಲ್ಲಿ ನೆಲೆ ಕಂಡಿದ್ದಾನೆ. ಕುಡಿತ ಚಟ ಹೊಂದಿದ ಅರುಣ ಸಂಜೆ ಬಂದು ಹೆಂಡತಿಗೆ ಪೀಡಿಸಿದ್ದಾನೆ. ಸಿಟ್ಟಾದ ಭಾರತಿ ಎರಡು ತಿಂಗಳಿನ ಶಿಶುಗಳನ್ನು ಬಸ್ಸು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾಳೆ. ಇದನ್ನು ಗಮನಿಸಿದ ಸಾರ್ವಜನಿಕರು ಆಕೆಯನ್ನು ಬಸ್ಸು ನಿಲ್ದಾಣಕ್ಕೆ ಕರೆತಂದಿದ್ದಾರೆ. ಗಂಡ ಹೆಂಡತಿಯರ ಜಗಳದಲ್ಲಿ ಹಸುಗೂಸುಗಳು ಬಡವಾಗುವುದನ್ನು ಕಂಡ ಸ್ಥಳಿಯರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ.

ತಕ್ಷ ಣ ಸ್ಪಂದಿಸಿದ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಅವರು ಸ್ಥಳಕ್ಕೆ ಧಾವಿಸಿ, ಸತ್ಯಾಸತ್ಯತೆ ಪರಿಶೀಲಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಮೌಖಿಕ ಮಾಹಿತಿ ನೀಡಿದ್ದಾರೆ. ಸಮಿತಿಯ ಸಿಬ್ಬಂದಿ ಗ್ಲೀಶಾ ಮಾಂತರೊ, ಸಂದೇಶ ಕೆ. ಸ್ಥಳಕ್ಕೆ ಧಾವಿಸಿ ದಂಪತಿ ಸಮೇತ ಹಸುಳೆಗಳನ್ನು ವಶಕ್ಕೆ ಪಡೆದಿದ್ದಾರೆ. ಆ ಬಳಿಕ ನಿಟ್ಟೂರಿನಲ್ಲಿ ಇರುವ ಮಕ್ಕಳ ಕಲ್ಯಾಣ ಸಮಿತಿ ಕಚೇರಿಯಲ್ಲಿ ದಂಪತಿಯನ್ನು ಸಮಿತಿ ಅಧ್ಯಕ್ಷ ರೋನಾಲ್ಡ… ಬಿ. ವಿಚಾರಣೆ ನಡೆಸಿದ್ದಾರೆ. ಅತಂತ್ರ ಪರಿಸ್ಥಿತಿಯಲ್ಲಿದ್ದ ನೊಂದ ದಂಪತಿಗೆ ಸಾಂತ್ವನ ಹೇಳಿದ್ದಾರೆ.

ಕಾನೂನು ಪ್ರಕ್ರಿಯೆ ನಡೆಸಿದ ಬಳಿಕ ಲಕ್ಷ್ಮೀ ನಗರದಲ್ಲಿ ಇರುವ ಶ್ರೀಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದಲ್ಲಿ ತಾಯಿ ಮಕ್ಕಳಿಗೆ ಆಶ್ರಯ ಕಲ್ಪಿಸುವ ವ್ಯವಸ್ಥೆಗೊಳಿಸಿದ್ದಾರೆ. ಅರುಣನಿಗೆ ಪತ್ನಿ ಮಕ್ಕಳನ್ನು ಭೇಟಿಯಾಗಲು ಕಲ್ಯಾಣ ಸಮಿತಿ ಅಧಿಕಾರಿಗಳ ಅನುಮತಿ ಪತ್ರ ಪಡೆದು ಭೇಟಿಗೆ ಅವಕಾಶ ನೀಡಲಾಗಿದೆ.

ಈ ಸಂಪೂರ್ಣ ಕಾರ್ಯಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಭಾಗಿಯಾಗಿ ಹಸುಳೆಗಳ ರಕ್ಷಿಸಿದ ವಿಚಾರ ಸಾರ್ವಜನಿಕರಿಂದ, ಘಟಕದ ಅಧಿಕಾರಿಗಳಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ತಪ್ಪಿದರೆ, ಹಸುಳೆಗಳ ಮಾರಾಟ, ಕಳ್ಳತನ, ರೋಗ ರುಜಿನಗಳಿಗೆ ತುತ್ತಾಗುವ ಭೀತಿ ಇತ್ತು ಎನ್ನುವ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ