ಆ್ಯಪ್ನಗರ

ಕೃಷಿ, ಮೀನುಗಾರಿಕೆಗೆ ಬಲ ಕೊಟ್ಟ ವಿಜಯ ಕರ್ನಾಟಕ

ಇದೊಂದು ವಿಶಿಷ್ಟ ಕಾರ‍್ಯಕ್ರಮ. ಕೃಷಿ ಸಾಧಕರ ಜತೆಗೆ ಮೀನುಗಾರಿಕಾ ಕ್ಷೇತ್ರದಲ್ಲಿ ಅದ್ಬುತ ಯಶಸ್ಸು ಕಂಡವರನ್ನು ಗುರುತಿಸಿಕೊಂಡು ಅವರನ್ನು ಸನ್ಮಾನಿಸುವ ಜತೆಗೆ ಇಂತಹ ಕ್ಷೇತ್ರವನ್ನು ಗೌರವಿಸುವ ಕೆಲಸ ನಡೆಯುತ್ತಿದೆ ಎನ್ನುವ ಮಾತು ವಿಜಯ ಕರ್ನಾಟಕ ವತಿಯಿಂದ ನಡೆಯುತ್ತಿರುವ ವಿಕ ಸೂಪರ್‌ ಸ್ಟಾರ್‌ ರೈತ ಕಾರ‍್ಯಕ್ರಮದ ಮೂಲಕ ಸಾಬೀತಾಯಿತು.

Vijaya Karnataka 16 Dec 2018, 5:00 am
ಮಂಗಳೂರು: ಇದೊಂದು ವಿಶಿಷ್ಟ ಕಾರ‍್ಯಕ್ರಮ. ಕೃಷಿ ಸಾಧಕರ ಜತೆಗೆ ಮೀನುಗಾರಿಕಾ ಕ್ಷೇತ್ರದಲ್ಲಿ ಅದ್ಬುತ ಯಶಸ್ಸು ಕಂಡವರನ್ನು ಗುರುತಿಸಿಕೊಂಡು ಅವರನ್ನು ಸನ್ಮಾನಿಸುವ ಜತೆಗೆ ಇಂತಹ ಕ್ಷೇತ್ರವನ್ನು ಗೌರವಿಸುವ ಕೆಲಸ ನಡೆಯುತ್ತಿದೆ ಎನ್ನುವ ಮಾತು ವಿಜಯ ಕರ್ನಾಟಕ ವತಿಯಿಂದ ನಡೆಯುತ್ತಿರುವ ವಿಕ ಸೂಪರ್‌ ಸ್ಟಾರ್‌ ರೈತ ಕಾರ‍್ಯಕ್ರಮದ ಮೂಲಕ ಸಾಬೀತಾಯಿತು.
Vijaya Karnataka Web krishni


ಉಡುಪಿ ತಾಲೂಕಿನ ಬ್ರಹ್ಮಾವರದ ಬಂಟರ ಭವನದಲ್ಲಿ ಸಾಧಕ ರೈತರಿಗೆ ಶನಿವಾರ ವಿಕ ಪುರಸ್ಕಾರ ಎನ್ನುವ ವಿಶಿಷ್ಟ ಕಾರ‍್ಯಕ್ರಮದಲ್ಲಿ ಕೃಷಿಕರ ಜತೆಗೆ ಮೀನುಗಾರರು ಕಾರ‍್ಯಕ್ರಮದ ಕುರಿತು ಮೆಚ್ಚುಗೆ ಮಾತುಗಳನ್ನಾಡುವ ಮೂಲಕ ವಿಕದ ವಿಶೇಷ ಪ್ರಯತ್ನಕ್ಕೆ ಶಹಬ್ಬಾಸ್‌ಗಿರಿ ಸಲ್ಲಿಸಿದರು.

ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರು, ಕೃಷಿಕರು ಒಂದೆಡೆ ಬಂದು ಸೇರಿದರೆ ಮತ್ತೊಂದೆಡೆ ಕಡಲ ಮಕ್ಕಳೆಂದೇ ಗುರುತಿಸಿಕೊಂಡ ಮೀನುಗಾರ ಸಮುದಾಯದ ಬಂಧುಗಳು 'ವಿಕ'ದ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರು. ಕೃಷಿಕರು ತಮ್ಮ ಕೃಷಿ ಪದ್ಧತಿ, ತಾವು ಕೃಷಿ ವಲಯದಲ್ಲಿ ಪಡೆದುಕೊಂಡ ಅನುಭವಗಳನ್ನು ಹಂಚಿಕೊಳ್ಳುತ್ತಾ ತಮ್ಮ ಜ್ಞಾನ ಹೆಚ್ಚಿಸಿಕೊಂಡರೆ ಮೀನುಗಾರರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ತಲ್ಲಣಗಳು, ತಾವು ಅನುಭವಿಸುವ ಸಮಸ್ಯೆಗಳ ಕುರಿತು ಚರ್ಚಿಸುವ ದೃಶ್ಯಾವಳಿಗಳು ವಿಕ ಸೂಪರ್‌ ಸ್ಟಾರ್‌ ರೈತ ಕಾರ‍್ಯಕ್ರಮದ ಹೈಲೈಟ್ಸ್‌ಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿತು.

ಗಮನ ಸೆಳೆದ ಸಾಂಸ್ಕೃತಿಕ ಕಾರ‍್ಯಕ್ರಮ: ಹಿರಿಯ ಗಾಯಕ ಚಂದ್ರಶೇಖರ ಕೆದ್ಲಾಯ ತಮ್ಮ ವಿಶಿಷ್ಟ ಕಂಠದಲ್ಲಿ ಹಾಡಿದ ನಾಡಗೀತೆ, ರೈತ ಗೀತೆಗಳ ಜತೆಗೆ ರತ್ನನ ಪದಗಳು ಸಭಿಕರಲ್ಲಿ ಹೊಸ ಉತ್ಸಾಹದ ಗೆರೆಯನ್ನು ಮೂಡಿಸಿತು. ಉಡುಪಿಯ ಸುಧನ್ವ ಈವೆಂಟ್‌ ಮ್ಯಾನೇಜ್‌ಮೆಂಟ್‌ನ ವೈದೇಹಿ ಸುಭಾಷಿತ ಅವರ ತಂಡದ ಸದಸ್ಯರಾದ ಸುಫಳಿತಾ ಮನ್‌ಪ್ರೀತ್‌ ಹಾಗೂ ರಶ್ಮಿತಾ ಶೆಟ್ಟಿ ಅವರಿಂದ ಸಾಂಸ್ಕೃತಿಕ ಕಾರ‍್ಯಕ್ರಮ ಕೂಡ ಸಭಿಕರನ್ನು ರಂಜಿಸಿತು.

ಕೃಷಿ, ಮತ್ಯ್ಸ ಕಾರುಬಾರು: ನಾಡೋಜ ಡಾ. ಜಿ. ಶಂಕರ್‌ ಕಳಸಿಗೆಯಲ್ಲಿರಿಸಿದ್ದ ಹಿಂಗಾರ ಅರಳಿಸಿ ಕಾರ‍್ಯಕ್ರಮವನ್ನು ಉದ್ಘಾಟಿಸಿ ವಿಕದ ಕಾರ‍್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಳಿಕ ಪ್ರಗತಿಪರ ರೈತ ಕುದಿ ಶ್ರೀನಿವಾಸ ಭಟ್‌ ದಿಕ್ಸೂಚಿ ಭಾಷಣ ಮಾಡಿ, ರೈತರಿಗೆ ಕೃಷಿಯಲ್ಲಿ ಸಿಗುವ ಲಾಭದ ಲೆಕ್ಕಚಾರವನ್ನು ಬಿಡಿಸಿ ಹೇಳಿದರು.

ಬಳಿಕ ಐವರು ಕೃಷಿಕರು ಹಾಗೂ ಐವರು ಮೀನುಗಾರರಿಗೆ ವಿಕ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಬಳಿಕ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿಕದ ವಿಶಿಷ್ಟ ಕಾರ‍್ಯಕ್ರಮ ರೈತರಿಗೆ ಹಾಗೂ ಮೀನುಗಾರರಿಗೆ ಹೊಸ ಚೈತನ್ಯ ಬಂದಿದೆ ಎಂದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕೆ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಡಾ.ಯು.ಎಸ್‌.ಪಾಟೀಲ್‌, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ್‌ ಕರ್ಕೇರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಘವೇಂದ್ರ ಪೂಜಾರಿ, ಬ್ರಹ್ಮಾವರ ಬಂಟರ ಭವನದ ಅಧ್ಯಕ್ಷ ಸುದರ್ಶನ ಹೆಗ್ಡೆ ಉಪಸ್ಥಿತರಿದ್ದರು.

ಮಾಹಿತಿಯುಕ್ತ ಕೃಷಿ ಮಳಿಗೆಗಳು: ಒಂದೆಡೆ ವೇದಿಕೆಯಲ್ಲಿ ಕಾರ‍್ಯಕ್ರಮಗಳು ನಡೆಯುತ್ತಿದ್ದಾರೆ. ಮತ್ತೊಂದೆಡೆ ಕೃಷಿಕರು ಕೃಷಿ ಮಳಿಗೆಗಳ ಸುತ್ತ ನೆರೆದು ತಮಗೆ ಕೃಷಿಯಲ್ಲಿ ಬೇಕಾದ ಮಾಹಿತಿಗಳನ್ನು ಪಡೆದುಕೊಳ್ಳುವಲ್ಲಿ ತಲ್ಲೀನರಾಗಿದ್ದರು. ಕೃಷಿಯಲ್ಲಿ ಪ್ರಗತಿ, ಕೃಷಿ ಯಂತ್ರೋಪಕರಣಗಳು, ಔಷಧೋತ್ಪನ್ನಗಳ ಬಗ್ಗೆ ಕೃಷಿಕರು ಮಾಹಿತಿ ನೀಡುವ ಕೆಲಸ ನಡೆಯಿತು. ಕೃಷಿಕರು, ರೈತರು, ಹೈನುಗಾರರು, ಮೀನುಗಾರರಿಗೆ ಅನುಕೂಲವಾಗುವಂತಹ ಯಂತ್ರೋಪಕರಣಗಳು, ಔಷಧಗಳು, ವಾಹನಗಳ ನಾನಾ ಬಗೆಯ ಮಳಿಗೆಗಳನ್ನು ತೆರೆಯಲಾಗಿದ್ದು, ಜನರು ಇದರ ಸದುಪಯೋಗ ಪಡೆದುಕೊಂಡರು.

ಹತ್ತಾರು ಮಳಿಗೆಯಲ್ಲಿ ಯಂತ್ರೋಪಕರಣಗಳ ಮಾರಾಟ ಹಾಗೂ ಬಳಕೆಯ ಮಾಹಿತಿ ನೀಡಿದರೆ, ಇನ್ನೊಂದೆಡೆ ಹೂವು, ತರಕಾರಿ, ಬೇಳೆ ಕಾಳುಗಳ ಬೀಜಗಳ ಮಾರಾಟ ಹಾಗೂ ಪ್ರದರ್ಶನ ನಡೆಯಿತು. ಹೈನುಗಾರರಿಗೆ ಅನುಕೂಲವಾಗುವಂತಹ ಹಿಂಡಿಗಳ ಮಾರಾಟ ಮತ್ತು ಪ್ರದರ್ಶನ, ಆರೋಗ್ಯಕ್ಕೆ ಅನುಕೂಲವಾದ ಉತ್ಪನ್ನಗಳು, ಗೋವುಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಔಷಧಗಳ ಮಾರಾಟ ಮಳಿಗೆಗಳು, ಬೊಲೆರೊ ಪಿಕ್‌ಅಪ್‌ ವಾಹನಗಳ ಮಳಿಗೆಗಳನ್ನು ತೆರೆಯಲಾಗಿತ್ತು. ಅಲ್ಲದೇ ವಿಶೇಷವಾಗಿ ವಿಜಯ ಕರ್ನಾಟಕ ಪತ್ರಿಕೆಯ ಮಳಿಗೆಯನ್ನೂ ತೆರೆಯಲಾಗಿದ್ದು ಕಾರ್ಯಕ್ರಮದ ಮಾಹಿತಿಗಳನ್ನೊಳಗೊಂಡ ಪ್ರತಿಗಳನ್ನು ಉಚಿತವಾಗಿ ಹಂಚಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ