ಆ್ಯಪ್ನಗರ

ವೈಜ್ಞಾನಿಕ ಕೃಷಿ ಪದ್ಧತಿಯಿಂದ ಆದಾಯ ವೃದ್ಧಿ: ಕುದಿ ಶ್ರೀನಿವಾಸ್‌ ಭಟ್‌

ಕೃಷಿ ಬಗೆಗಿನ ಕೀಳರಿಮೆ ತೊಡೆದು ಹಾಕಿ, ಹೊಸ ಹೊಸ ಮಾರ್ಪಾಡುಗಳೊಂದಿಗೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿ ಹೆಚ್ಚು ಪರಿಣಾಮಕಾರಿಯಾಗಿ ಕೃಷಿ ಮಾಡಿದರೆ ಆದಾಯ ವೃದ್ಧಿ ಸಾಧ್ಯ ಎಂದು ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ್‌ ಭಚ್‌ ತಿಳಿಸಿದ್ದಾರೆ.

Vijaya Karnataka 16 Dec 2018, 5:00 am
ಬ್ರಹ್ಮಾವರ : ಕೃಷಿ ಬಗೆಗಿನ ಕೀಳರಿಮೆ ತೊಡೆದು ಹಾಕಿ, ಹೊಸ ಹೊಸ ಮಾರ್ಪಾಡುಗಳೊಂದಿಗೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿ ಹೆಚ್ಚು ಪರಿಣಾಮಕಾರಿಯಾಗಿ ಕೃಷಿ ಮಾಡಿದರೆ ಆದಾಯ ವೃದ್ಧಿ ಸಾಧ್ಯ ಎಂದು ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ್‌ ಭಚ್‌ ತಿಳಿಸಿದ್ದಾರೆ.
Vijaya Karnataka Web vk super star raitha
ವೈಜ್ಞಾನಿಕ ಕೃಷಿ ಪದ್ಧತಿಯಿಂದ ಆದಾಯ ವೃದ್ಧಿ: ಕುದಿ ಶ್ರೀನಿವಾಸ್‌ ಭಟ್‌


ಉಡುಪಿ ಜಿಲ್ಲಾ ವಿಕ ಸೂಪರ್‌ ಸ್ಟಾರ್‌ ರೈತ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಕೃಷಿ ಭೂಮಿಯಲ್ಲಿ ಏಕ ಬೆಳೆಯಿಂದ ಲಾಭ ತೆಗೆಯಲು ಸಾಧ್ಯವಿಲ್ಲ. ಅಡಕೆ, ತೆಂಗು, ಕಾಳುಮೆಣಸು, ಬಾಳೆ ಸಹಿತ ನಾನಾ ಕೃಷಿಗೆ ಮುಂದಾಗಬೇಕು. ಕೃಷಿಯನ್ನು ಪ್ರಾಮಾಣಿಕವಾಗಿ ಮಾಡಿದರೆ ತಿಂಗಳ ಸಂಬಳಕ್ಕಿಂತ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಿದೆ ಎಂದರು.

ಏಕಪ್ರಕಾರವಾದ ಕೃಷಿಯಿಂದ ಲಾಭ ಕಡಿಮೆ. ಬಹುವಿಧ ಕೃಷಿ ಉತ್ತಮ. ಕಾಲಕಾಲಕ್ಕೆ ಆಗುವ ಬದಲಾವಣೆಗೆ ಹೊಂದಿಕೊಂಡು ಕೃಷಿ ನಿರ್ವಹಿಸಿದರೆ ಒಳಿತು. ನಾನು ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ್ದರೂ ಮಾಂಸದ ಕೋಳಿ ಸಾಕುತ್ತಿದ್ದೇನೆ. ಸುಮಾರು 14 ಸಾವಿರ ಮಾಂಸದ ಕೋಳಿಗಳಿದ್ದು, ತೋಟಕ್ಕೆ ಇದೇ ಗೊಬ್ಬರವನ್ನು ಮಿತವಾಗಿ ಬಳಕೆ ಮಾಡಲಾಗುತ್ತಿದೆ. ಕರು ಹಾಕಿದ ಹಸುವಿನ ಮೊದಲ ದಿನದ ಗುಣ್ಣು ಅಂಶವುಳ್ಳ ಹಾಲನ್ನು ನೀರಿಗೆ ಎಸೆಯದೇ ಸಾವಿರ ಕೋಳಿಗೆ ಒಂದು ಲೀಟರ್‌ನಂತೆ ಹಾಕಿದರೆ ಕೋಳಿಯ ಮರಣದ ಪ್ರಮಾಣ ಕಡಿಮೆಯಾಗುತ್ತದೆ. ಆ ಹಾಲು ಅಮೃತಕ್ಕೆ ಸರಿಸಮಾನ ಎಂದರು.

ಜೇನು ಸಾಕಣೆಯಿಂದಾಗಿ ತೆಂಗು, ಭತ್ತದ ಇಳುವರಿ ವೃದ್ಧಿಯಾಗುತ್ತದೆ. ತೆಂಗಿಗೆ ವರ್ಷಕ್ಕೆ 2, 3 ಬಾರಿ ನಾಲ್ಕು ಅಡಿ ದೂರದಲ್ಲಿ ಗೊಬ್ಬರ ನೀಡಬೇಕು. ಅಡಕೆ ತೋಟಕ್ಕೆ ಒಂದು ಎಕರೆಯಂತೆ 200 ಕೆ.ಜಿ. ಸುಣ್ಣ ಹಾಕಬೇಕು. ಇದು ಉತ್ತಮ ಇಳುವರಿ ಜತೆಗೆ ರೋಗ ಬಾಧೆ ತಪ್ಪಿಸುತ್ತದೆ ಎಂದರು.

ಬಾಳೆ ಕೃಷಿಗೆ ಮಾಡಿದ ತೋಟದಿಂದ ಯಾವುದೇ ಕಾರಣಕ್ಕೂ ಎಲೆ ತೆಗೆಯಬಾರದು. ಬುಡದಲ್ಲಿರುವ ಬಾಳೆ ಮೊಳಕೆಯನ್ನು ಮೂರು ವಾರಕ್ಕೊಮ್ಮೆ ತೆರವು ಮಾಡಬೇಕೆಂದು ಸಲಹೆ ನೀಡಿದರು.

ಕೃಷಿ ಜಮೀನಿನಲ್ಲಿ ನೀರು ಇಂಗಿಸುವಿಕೆ ಅತ್ಯಗತ್ಯ. ಕೃಷಿಕರು ಎದುರಿಸುತ್ತಿರುವ ಮೂಲ ಸಮಸ್ಯೆ ಮಾರುಕಟ್ಟೆ. ಕೃಷಿಕರು ಸ್ಥಿರ ಬೆಲೆ ಬರುವ ತನಕ ತಾಳ್ಮೆಯಿಂದ ಕಾಯಬೇಕು. ಕೃಷಿಕರನ್ನು ಗೌರವಿಸುವ ಮೂಲಕ ವಿಕ ನಾಡಿಗೆ ಉತ್ತಮ ಸಂದೇಶ ಸಾರಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ