ಆ್ಯಪ್ನಗರ

ಕುಂದಾಪುರದ ಸ್ಟಾರ್‌ ವಾಲಿಬಾಲ್‌ ಆಟಗಾರ ರೈಸನ್‌

ಕರ್ನಾಟಕ ರಾಜ್ಯ ವಾಲಿಬಾಲ್‌ ತಂಡ ಗುರುವಾರ ತಮಿಳುನಾಡಿನಲ್ಲಿ ಮುಕ್ತಾಯಗೊಂಡ 67ನೇ ರಾಷ್ಟ್ರೀಯ ಸೀನಿಯರ್‌ ರಾಷ್ಟ್ರೀಯ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ಪಟ್ಟ ಗಿಟ್ಟಿಸಿಕೊಂಡಿದೆ. ರಾಜ್ಯ ತಂಡ ಚಾಂಪಿಯನ್ನಾಗಿ ಮೂಡಿಬರುವಲ್ಲಿ ಕುಂದಾಪುರದ ಹುಡುಗನ ಪಾತ್ರ ಪ್ರಮುಖ ಪಾತ್ರ ವಹಿಸಿತ್ತು.

Vijaya Karnataka 15 Jan 2019, 5:00 am
ಜಾನ್‌ ಡಿಸೋಜ ಕುಂದಾಪುರ
Vijaya Karnataka Web raison


ಕರ್ನಾಟಕ ರಾಜ್ಯ ವಾಲಿಬಾಲ್‌ ತಂಡ ಗುರುವಾರ ತಮಿಳುನಾಡಿನಲ್ಲಿ ಮುಕ್ತಾಯಗೊಂಡ 67ನೇ ರಾಷ್ಟ್ರೀಯ ಸೀನಿಯರ್‌ ರಾಷ್ಟ್ರೀಯ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ಪಟ್ಟ ಗಿಟ್ಟಿಸಿಕೊಂಡಿದೆ. ರಾಜ್ಯ ತಂಡ ಚಾಂಪಿಯನ್ನಾಗಿ ಮೂಡಿಬರುವಲ್ಲಿ ಕುಂದಾಪುರದ ಹುಡುಗನ ಪಾತ್ರ ಪ್ರಮುಖ ಪಾತ್ರ ವಹಿಸಿತ್ತು.

ಕುಂದಾಪುರದ ಹೆಮ್ಮಾಡಿ ಗ್ರಾಮದ ಮೊವತ್ತುಮುಡಿ ಕೃಷಿಕ ದಂಪತಿ ಬೋನಿಫಾಸ್‌ ಮತ್ತು ಜೆಸಿಂತಾ ರೆಬೆಲ್ಲೊ ಅವರ ಪುತ್ರ, ವಾಲಿಬಾಲ್‌ ಆಟಗಾರ ರೈಸನ್‌ ಬೆನೆಟ್‌ ರೆಬೆಲ್ಲೊ ಕರ್ನಾಟಕ ತಂಡದ ಪ್ರಮುಖ ಆಟಗಾರನಾಗಿ ಶ್ರೇಷ್ಠ ಸಾಧನೆ ಮಾಡುವ ಮೂಲಕ ಸ್ಟಾರ್‌ ಆಗಿ ಮೂಡಿಬಂದಿದ್ದಾರೆ. ಈ ಶ್ರೇಷ್ಠ ಸಾಧನೆಗಾಗಿ ಟೂರ್ನಿಯಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಕುಂದಾಪುರ ಫ್ರೆಂಡ್ಸ್‌ ವಾಲಿಬಾಲ್‌ ತಂಡದ ಸದಸ್ಯರಾಗಿರುವ ರೈಸನ್‌ ಹೆಮ್ಮಾಡಿಯ ಯುವಕ. 2013ರಿಂದ ಕರ್ನಾಟಕ ರಾಜ್ಯದ ಪರವಾಗಿ ಜೂನಿಯರ್‌, ಯೂತ್‌, ಸೀನಿಯರ್‌ ತಂಡಗಳಲ್ಲಿ ಮುಖ್ಯ ಆಟಗಾರನಾಗಿ, ತಂಡ ಹಲವು ಪ್ರಶಸ್ತಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಭಾರತ ಯೂತ್‌ ವಾಲಿಬಾಲ್‌ ತಂಡದ ಮಾಜಿ ಆಟಗಾರರಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.

ಸಾಧನೆಯ ಹೆಜ್ಜೆ ಗುರುತು: 2013ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ರಾಷ್ಟ್ರಮಟ್ಟದ ಜೂನಿಯರ್‌ ಪಂದ್ಯಾವಳಿ, ಮಹಾರಾಷ್ಟ್ರದಲ್ಲಿ ಜರುಗಿದ ಯುವ ರಾಷ್ಟ್ರೀಯ ಪಂದ್ಯಾವಳಿ, 2014ರಲ್ಲಿ ರಾಜಸ್ತಾನದಲ್ಲಿ ನಡೆದ ರಾಷ್ಟ್ರಮಟ್ಟದ ಜೂನಿಯರ್‌ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇವರು ರಾಜಸ್ತಾನದಲ್ಲಿ ನಡೆದ ಯುವ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ರಜತ ಪದಕ ಪಡೆದುಕೊಂಡಿದ್ದರು.

2015ರಲ್ಲಿ ತಮಿಳುನಾಡಿನಲ್ಲಿ ಜರುಗಿದ ರಾಷ್ಟ್ರಮಟ್ಟದ ಸೀನಿಯರ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಇವರು ಅದೇ ವರ್ಷ ತಮಿಳುನಾಡಿನಲ್ಲಿ ಜರುಗಿದ ಫೆಡರೇಶನ್‌ ಕಪ್‌ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗಳಿಸಿದ್ದರು. 2016ರಲ್ಲಿ ತಮಿಳುನಾಡಿನಲ್ಲಿ ನಡೆದ ಫೆಡರೇಶನ್‌ ಕಪ್‌ ಪಂದ್ಯಾವಳಿಯಲ್ಲಿ ರಜತ ಪದಕ ಪಡೆದ ಇವರು, 2018ರಲ್ಲಿ ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು.

ಶ್ರೀಲಂಕಾದಲ್ಲಿ ಜರುಗಿದ 10ನೇ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ, 2019ರ ಜ.3ರಂದು ಚೆನ್ನೈಯಲ್ಲಿ ಜರುಗಿದ ಸೀನಿಯರ್‌ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್‌ಪಟ್ಟ ಗಿಟ್ಟಿಸಿಕೊಳ್ಳುವುದರಲ್ಲಿ ಅದ್ಭುತ ನಿರ್ವಹಣೆ ತೋರಿದ ಇವರು ಚಿನ್ನದ ಪದಕ ಪಡೆದಿದ್ದಾರೆ.

67 ವರ್ಷಗಳ ಬಳಿಕ ರಾಜ್ಯ ತಂಡ ಚಾಂಪಿಯನ್‌ ಆಗಿರುವುದು, ತಂಡದಲ್ಲಿ ತಾನು ಆಟಗಾರನಾಗಿರುವುದು ಹೆಮ್ಮೆ ಅನ್ನಿಸುತ್ತಿದೆ. ವೈಯಕ್ತಿಕ ಸಾಧನೆಗಾಗಿ ಚಿನ್ನದ ಪದಕ ಲಭಿಸಿದ್ದು, ಅದನ್ನು ಪ್ರೋತ್ಸಾಹ ನೀಡಿದ ಕುಂದಾಪುರ ವಾಲಿಬಾಲ್‌ ಫ್ರೆಂಡ್ಸ್‌ ಸಂಸ್ಥೆಗೆ ಅರ್ಪಿಸುತ್ತೇನೆ. -ರೈಸನ್‌ ಬೆನೆಟ್‌ ರೆಬೆಲ್ಲೊ

ಕೃಷಿ ಕುಟುಂಬದ ಅದ್ಭುತ ಪ್ರತಿಭೆ: ಹೆಮ್ಮಾಡಿ ಗ್ರಾಮದ ಮೊವತ್ತುಮುಡಿಯ ಬೋನಿಫಾಸ್‌ ಮತ್ತು ಜೆಸಿಂತಾ ದಂಪತಿ ಪುತ್ರರಾಗಿರುವ ಇವರು ಕೃಷಿ ಕುಟುಂಬದಿಂದ ಬಂದವರು. 24ರ ಹರೆಯದ ರೈಸನ್‌ಗೆ ಬಾಲ್ಯದಲ್ಲೇ ವಾಲಿಬಾಲ್‌ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿ. ಎತ್ತರದ ನಿಲುವು, ಸದೃಢ ಕಾಯ ವಾಲಿಬಾಲ್‌ಗೆ ಹೇಳಿ ಮಾಡಿಸಿದಂತಿತ್ತು. ಇವರಲ್ಲಿನ ಪ್ರತಿಭೆ ಗುರುತಿಸಿದ ಕುಂದಾಪುರ ವಾಲಿಬಾಲ್‌ ಫ್ರೆಂಡ್ಸ್‌ ಉತ್ತಮ ತರಬೇತಿ ನೀಡಿತ್ತು. ತತ್ಫಲವಾಗಿ ಕರ್ನಾಟಕ ಮತ್ತು ಕುಂದಾಪುರದ ಕೀರ್ತಿಯನ್ನು ಪಸರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ