ಆ್ಯಪ್ನಗರ

ಆಧಾರ್‌ಗೆ ಸರ್ವರ್‌ ಆಧಾರವಲ್ಲ

ಕಾರವಾರ : ಆಧಾರ್‌ ನವೀಕರಣ ಮತ್ತು ನೋಂದಣಿ ಪ್ರಕ್ರಿಯಿಗೆ ಇಂಟರ್‌ನೆಟ್‌ನ ಅಗತ್ಯ ಇಲ್ಲದಿದ್ದರೂ ಜಿಲ್ಲೆಯಲ್ಲಿ ಕೆಲವೆಡೆ ಸರ್ವರ್‌ ಡೌನ್‌ ಎಂಬ ಸುಳ್ಳು ಸಬೂಬು ಕೇಳಿ ಬರುತ್ತಿದೆ. ಸೂಕ್ತ ಮಾಹಿತಿ ಇಲ್ಲದ ಕಾರಣ ಸಾರ್ವಜನಿಕರು ನೋಂದಣಿ ಕಚೇರಿಗಳಿಗೆ ಅಲೆದಾಡುವಂತಾಗಿದೆ.

Vijaya Karnataka 12 Jul 2019, 5:00 am
ಕಾರವಾರ : ಆಧಾರ್‌ ನವೀಕರಣ ಮತ್ತು ನೋಂದಣಿ ಪ್ರಕ್ರಿಯಿಗೆ ಇಂಟರ್‌ನೆಟ್‌ನ ಅಗತ್ಯ ಇಲ್ಲದಿದ್ದರೂ ಜಿಲ್ಲೆಯಲ್ಲಿ ಕೆಲವೆಡೆ ಸರ್ವರ್‌ ಡೌನ್‌ ಎಂಬ ಸುಳ್ಳು ಸಬೂಬು ಕೇಳಿ ಬರುತ್ತಿದೆ. ಸೂಕ್ತ ಮಾಹಿತಿ ಇಲ್ಲದ ಕಾರಣ ಸಾರ್ವಜನಿಕರು ನೋಂದಣಿ ಕಚೇರಿಗಳಿಗೆ ಅಲೆದಾಡುವಂತಾಗಿದೆ.
Vijaya Karnataka Web aadhaar is not a server base
ಆಧಾರ್‌ಗೆ ಸರ್ವರ್‌ ಆಧಾರವಲ್ಲ


ಪೋಸ್ಟ್‌ ಆಫೀಸ್‌ , ಕರ್ನಾಟಕ ಒನ್‌ ಕೇಂದ್ರ, ತಹಸೀಲ್ದಾರ್‌ ಕಚೇರಿ , ಗ್ರಾಪಂ ಮತ್ತು ಕೆಲ ಬ್ಯಾಂಕುಗಳಲ್ಲಿ ಸಹ ಆಧಾರ್‌ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ ಕೆಲವೆಡೆ ಸರ್ವರ್‌ ಸಮಸ್ಯೆ ಎಂಬ ಸಬೂಬು ಹೇಳುವ ಸಿಬ್ಬಂದಿ ದಿನಕ್ಕೆ ಕೇವಲ 15-20 ಜನರ ನೋಂದಣಿ ಮಾತ್ರ ಮಾಡುತ್ತಿದ್ದಾರೆ. ಪೋಸ್ಟ್‌ ಆಫೀಸ್‌ ಕಚೇರಿಗೆ ಐದು ಬಾರಿ ಅಲೆದಾಡಿದ್ದೇನೆ, ಆದರೆ ಪ್ರತಿ ದಿನ ಸರ್ವರ್‌ ಡೌನ್‌ ಎಂದು ಹೇಳುತ್ತಾರೆ. ದಿನವೊಂದಕ್ಕೆ ಕೇವಲ 15 ಜನರ ನೋಂದಣಿ ಮಾಡಲಾಗುತ್ತದೆ ಎಂದು ಸಿಬ್ಬಂದಿ ಹೇಳುತ್ತಾರೆ. ಕೆಲಸ ಬಿಟ್ಟು ಆಧಾರ್‌ ನವೀಕರಣಕ್ಕೆ ಅಲೆದಾಡಿ ಬೇಸತ್ತಿದ್ದೇನೆ ಎಂದು ಶಿರಸಿಯ ರೂಪಾ ಭಟ್ಟ ಆರೋಪಿಸುತ್ತಾರೆ.

ಆಧಾರ್‌ ಪ್ರಕ್ರಿಯೆ ವಿಳಂಬದ ಬಗ್ಗೆ ವಿಕ ಬಳಿ ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ ಕಾರವಾರದ ಈಶ್ವರ ನಾಯ್ಕ ಮತ್ತು ಮಹಾಂತೇಶ, ಆಧಾರ್‌ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತದೆ. ಸರ್ವರ್‌ ಡೌನ್‌ ಸಮಸ್ಯೆ ಇದೆಯಂತೆ ಹಾಗಾಗಿ ಕೆಲಸ ಬಿಟ್ಟು ಆಧಾರ್‌ ನವೀಕರಣಕ್ಕೆ ಯಾಕೆ ಹೋಗೋದು ಎಂದು ಪ್ರಶ್ನಿಸಿದರು.

ಆಧಾರ್‌ಗೆ ಸರ್ವರ್‌ ಬೇಕಿಲ್ಲ : ಆದರೆ ವಾಸ್ತವವೇ ಬೇರೆ , ಆಧಾರ್‌ ಕೇಂದ್ರಗಳಲ್ಲಿ ನವೀಕರಣ, ನೋಂದಣಿ ಪ್ರಕ್ರಿಯೆ ಗೆ ನಿರಂತರವಾಗಿ ಇಂಟರ್‌ನೆಟ್‌ನ ಅಗತ್ಯವೇ ಇಲ್ಲ. ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಆಪ್‌ಲೈನ್‌ ಮೂಲಕ ನಡೆಯುತ್ತದೆ. ಹಾಗಾಗಿ ಆಧಾರ್‌ ನೋಂದಣಿಗೆ ಬಂದ ಯಾವುದೇ ಸಾರ್ವಜನಿಕರನ್ನು ಸರ್ವರ್‌ ಸಮಸ್ಯೆಯ ನೆಪವೊಡ್ಡಿ ವಾಪಸ್‌ ಕಳುಹಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎನ್ನುತ್ತಾರೆ ಜಿಲ್ಲಾ ಆಧಾರ್‌ ನೋಂದಣಿ ಸಮನ್ವಯಾಧಿಕಾರಿ ಮಹಾಬಲೇಶ್ವರ ದೇಸಾಯಿ.

ಎರಡು ಬಾರಿ ಮಾತ್ರ ಇಂಟರ್‌ನೆಟ್‌ : ಆಧಾರ್‌ ನೋದಣಿ ಕೇಂದ್ರಗಳಲ್ಲಿ ಪ್ರತಿ ದಿನ ನೋಂದಣಿ ಪ್ರಕ್ರಿಯೆ ಆರಂಭಕ್ಕೂ ಮೊದಲು ಒಮ್ಮೆ ಮತ್ತು ನೋಂದಣಿ ಪ್ರಕ್ರಿಯೆ ಮುಗಿದ ಬಳಿಕ ಕಂಪ್ಯೂಟರ್‌ನಲ್ಲಿ ಜಿಪಿಎಸ್‌ ಸಿಂಕ್‌ ಮಾಡಬೇಕು. ಈ ಪ್ರಕ್ರಿಯೆಗೆ ಇಂಟರ್‌ನೆಟ್‌ ಅಗತ್ಯವಿದೆ. ಒಮ್ಮೆ ಜಿಪಿಎಸ್‌ ಪ್ರಾರಂಭಗೊಂಡಬಳಿಕ ಕಂಪ್ಯೂಟರ್‌ ಸ್ಥಗಿತಗೊಳಿಸುವವರೆಗೂ ಮತ್ತೆ ಇಂಟರ್‌ನೆಟ್‌ನ ಅಗತ್ಯವಿಲ್ಲ. ಆಫ್‌ ಲೈನ್‌ ಮೂಲಕವೇ ಆಧಾರ್‌ ನೋಂದಣಿ ನಡೆಯುತ್ತಿರುತ್ತದೆ. ಆ ದಿನದ ನೋಂದಣಿ ಮುಗಿದ ಬಳಿಕ ಮತ್ತೊಮ್ಮೆ ಜಿಪಿಎಸ್‌ ಸಿಂಕ್‌ ಮಾಡಲು ಇಂಟರ್‌ನೆಟ್‌ ಬೇಕಾಗುತ್ತದೆ. ಆದರೆ ಇದು ಸಾರ್ವಜನಿಕರನ್ನು ಬಾಧಿಸುವುದಿಲ್ಲ. ಮಳೆ, ಗಾಳಿ ಇದ್ದರೂ ಸಹ ಕೇವಲ 10- 15 ನಿಮಿಷದಲ್ಲಿ ಜಿಪಿಎಸ್‌ ರನ್‌ ಆಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಅಪ ಪ್ರಚಾರವೇಕೆ ? : ಆಧಾರ್‌ಗೆ ಸರ್ವರ್‌ ಸಮಸ್ಯೆಯನ್ನು ಅನಗತ್ಯವಾಗಿ ತಗುಲಿಹಾಕಲಾಗುತ್ತಿದೆ. ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಕೆಲವು ಕೇಂದ್ರಗಳಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲೂ ಈ ರೀತಿ ತಂತ್ರ ಹೂಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆಧಾರ್‌ ನೋಂದಣಿ ತಿದ್ದುಪಡಿ, ನವೀಕರಣದ ಬಗ್ಗೆ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲವನ್ನು ದೂರಮಾಡುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಜಾಗೃತಿ ಮೂಡಿಸುವ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಕರುನಾಡ ರಕ್ಷಣಾ ವೇದಿಕಯ ಎನ್‌. ದತ್ತಾ ಆಗ್ರಹಿಸುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ