ಆ್ಯಪ್ನಗರ

ಅಗೆಮಡಿ ಸಿಕ್ಕರೆ ಮತ್ತೆ ನಾಟಿಗೆ ಮೊಗಳ್ಳಿ ರೈತರ ಒಲವು

ಶಿರಸಿ : ''ನೆರೆ ಬಂದು ಭತ್ತ ಬೆಳೆ ಸಂಪೂರ್ಣ ಹಾಳಾಗೈತ್ರಿ... ಇದೀಗ ಕೃಷಿ ಭೂಮಿಯಲ್ಲಿ ನೀರಿಳಿದಿದ್ದು ಮತ್ತೆ ನಾಟಿ ಮಾಡಲು ಅಗೆಮಡಿ ಹುಡುಕಾಡಕತ್ತೇವ್ರಿ.. ಸಿಕ್ಕರ ನಾಟಿ ಮಾಡ್ತೇವ್ರಿ.. ನಂತರ ಭತ್ತ ಸಿಗತೈತೋ ಹುಲ್ಲಾದರೂ ಸಿಕ್ಕತೈತೋ ನೋಡಬೇಕ್ರಿ...''

Vijaya Karnataka 22 Aug 2019, 5:00 am
ಶಿರಸಿ : ''ನೆರೆ ಬಂದು ಭತ್ತ ಬೆಳೆ ಸಂಪೂರ್ಣ ಹಾಳಾಗೈತ್ರಿ... ಇದೀಗ ಕೃಷಿ ಭೂಮಿಯಲ್ಲಿ ನೀರಿಳಿದಿದ್ದು ಮತ್ತೆ ನಾಟಿ ಮಾಡಲು ಅಗೆಮಡಿ ಹುಡುಕಾಡಕತ್ತೇವ್ರಿ.. ಸಿಕ್ಕರ ನಾಟಿ ಮಾಡ್ತೇವ್ರಿ.. ನಂತರ ಭತ್ತ ಸಿಗತೈತೋ ಹುಲ್ಲಾದರೂ ಸಿಕ್ಕತೈತೋ ನೋಡಬೇಕ್ರಿ...''
Vijaya Karnataka Web moog peasants favor re planting of cigarettes
ಅಗೆಮಡಿ ಸಿಕ್ಕರೆ ಮತ್ತೆ ನಾಟಿಗೆ ಮೊಗಳ್ಳಿ ರೈತರ ಒಲವು


ತಾಲೂಕಿನ ಭಾಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗಳ್ಳಿ ರೈತರ ಅಸಹಾಯಕತೆಯ ಮಾತು ಇದು. ವರದಾ ನದಿ ಉಕ್ಕಿ ಹರಿದು ಇಲ್ಲಿನ ಸಾವಿರಾರು ಎಕರೆ ಭತ್ತ, ಜೋಳ ಮುಂತಾದ ಬೆಳೆಗಳ ಪ್ರದೇಶದಲ್ಲಿ ನೀರು ಆವರಿಸಿತ್ತು. ಇದೀಗ ವರದಾ ನದಿ ತಣ್ಣಗಾಗುತ್ತಿದ್ದು, ನೆರೆ ನೀರು ಇಳಿದಿದೆ. ಇದೀಗ ಅದರ ಪರಿಣಾಮ ಗೋಚರವಾಗುತ್ತಿದ್ದು ಬಿತ್ತನೆ, ನಾಟಿ ಮಾಡಿದ ಭತ್ತದ ಸಸಿಗಳು ಕೊಳೆತಿವೆ. ಇದರಿಂದ ಧೃತಿಗೆಡದ ರೈತಾಪಿ ಸಮೂಹ ಭೂಮಿಯನ್ನು ಖಾಲಿ ಬಿಡಬಾರದು, ಕೈಕಟ್ಟಿ ಕುಳಿತುಕೊಳ್ಳಬಾರದು ಎಂದು ಮತ್ತೆ ಕೃಷಿ ಭೂಮಿಯಲ್ಲಿ ಹಸಿರೊಡೆಯುವಂತೆ ಮಾಡುವುದಕ್ಕೆ ಯೋಜಿಸಿದ್ದಾರೆ. ನಂತರ ಬೆಳೆ ಸಿಗುತ್ತೋ ಇಲ್ಲವೋ ಭರವಸೆ ಇಲ್ಲದಿದ್ದರೂ ಪ್ರಯತ್ನ ಮಾಡಲೇಬೇಕು ಎಂದು ನಿರ್ಧರಿಸಿದ್ದಾರೆ.

ಅದಕ್ಕಾಗಿ ಅಂಚಿನ ಬಿಸಲಕೊಪ್ಪ ಸೇರಿದಂತೆ ನಾನಾ ಕಡೆಗಳಲ್ಲಿ ಭತ್ತದ ಸಸಿಗಳು ಹೆಚ್ಚಿರುವ ಕಡೆಗಳಿಗೆ ಹೋಗಿ ತರುತ್ತಿದ್ದಾರೆ. ಸಿಕ್ಕಷ್ಟು ಸಸಿಗಳನ್ನು ತಂದು ನೆಡುವ ಕಾರ್ಯ ಮಾಡಲಾರಂಭಿಸಿದ್ದಾರೆ. ಆದರೆ ನೆರೆ ಇಳಿದಂತೆ ನೀರು ಇಳಿದು ಹೋಗುತ್ತಿದೆ. ಆದರೆ ಮತ್ತೆ ಮಳೆ ಬೀಳದೇ ಇದ್ದರೆ ನಾಟಿ ಮಾಡಿಯೂ ಪ್ರಯೋಜನ ಆಗದು ಎಂಬ ಆತಂಕದಲ್ಲೂ ಇದ್ದಾರೆ.

ಏನೇ ಆದರೂ ಉಣ್ಣಾಕಾದ್ರೂ ಬೇಕಲ್ರಿ.. ಇಲ್ಲಾ ಅಂದ್ರೇ ದನಿಗೆ ಹುಲ್ಲಾದ್ರೂ ಸಿಗತೈತಿ.. ಊಟಕ್ಕೆ ಭತ್ತಾನಾದ್ರೆ ತರಬಹುದು ಆದರೆ ದನಿಗೆ ಹುಲ್ಲು ತರೋದು ಕಷ್ಟ. ಅದಾದ್ರೂ ಬೆಳೆತೈತ ನೋಡಬೇಕ್ರಿ ಎನ್ನುತ್ತಾರೆ ಸ್ಥಳೀಯ ರೈತ ಪರಶುರಾಮ ಕಾಳೇನರ.

ಮನೆಗಳಿಗೆ ಮರಳಿದ್ದಾರ್ರಿ... ಸುಮಾರು ನಾಲ್ಕು ದಶಕಗಳ ಹಿಂದೆ ವರದಾ ನದಿಗೆ ಇಂಥ ನೆರೆ ಬಂದಿತ್ರಿ..ಮೊಗಳ್ಳಿ ಊರ ಹತ್ರ ಸದ್ಯ ಇಷ್ಟೊಂದು ನೀರು ಬಂದಿರಲಿಲ್ರಿ..ಹಾಗಾಗಿ ಊರಿನ ಮಹಿಳೆಯರು, ವೃದ್ಧರು, ಮಕ್ಕಳು ಊರು ಬಿಟ್ಟು ಬೇರೆ ಕಡೆ ಹೋಗಿದ್ರಿ..ಅವರೆಲ್ಲ ಇದೀಗ ಮನೆಗೆ ಮರಳಿದ್ದಾರ್ರಿ ಎನ್ನುತ್ತಾರೆ ರೈತ ಪರಶುರಾಮ.

ಮೊಗಳ್ಳಿಯಲ್ಲಿ 150 ಮನೆಗಳಿವೆ. ಅದರಲ್ಲಿ 7 ಮನೆಗಳಿಗೆ ಹಾನಿಯಾಗಿತ್ತು. ಒಂದು ಮನೆ ಸಂಪೂರ್ಣ ಬಿದ್ದು ಹೋಗಿತ್ತು. ಆ ಮನೆಯವರು ಸಂಬಂಧಿಗಳ ಮನೆಯಲ್ಲಿದ್ದಾರೆ. ಇನ್ನುಳಿದ ಮನೆಗಳ ಅಡುಗೆ ಕೋಣೆ ಸೇರಿದಂತೆ ಹಿಂಬದಿಯಲ್ಲಿ ಹಾನಿಯಾಗಿತ್ತು. ಕೆಲವರು ತಗಡುಗಳನ್ನು ಹಾಕಿಕೊಂಡು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ಪರಶುರಾಮ ಹೇಳುತ್ತಾರೆ.

ರಸ್ತೆ ಫಜೀತಿ.. ಬನವಾಸಿ-ಭಾಶಿ-ಮೊಗಳ್ಳಿ ಮಾರ್ಗ 6-7 ಕಿ.ಮೀ. ದೂರವಿದೆ. ಅದರಲ್ಲಿ ಅರ್ಧದಷ್ಟು ಕಿ.ಮೀ. ಮಾರ್ಗ ನೆರೆ ನೀರಿನಲ್ಲಿ ಮುಳುಗಿತ್ತು. ಈ ರಸ್ತೆ ಮಾರ್ಗಕ್ಕೂ ಸಾಕಷ್ಟು ಹಾನಿಯಾಗಿದ್ದು, ಕಿತ್ತೆದ್ದ ರಸ್ತೆ ಮೊಗಳ್ಳಿ ಜನರ ಸಂಚಾರಕ್ಕೆ ಸಂಕಟ ತಂದಿಟ್ಟಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ