ಆ್ಯಪ್ನಗರ

ಮುನಿದ ಕಡಲು, ಮತ್ತೆ ಮೀನುಗಾರಿಕೆ ಬಂದ್

ಕಾರವಾರ :ಅರಬ್ಬಿ ಸಮುದ್ರದಲ್ಲಿ ಕಳೆದ ಎರಡು ದಿನಗಳಿಂದ ಹವಾಮಾನ ವೈಪರಿತ್ಯ ಉಂಟಾಗಿದ್ದು, ಭಾರಿ ಮಳೆಯೊಂದಿಗೆ ಬಲವಾದ ಗಾಳಿ ಬೀಸುತ್ತಿದೆ. ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಎದ್ದಿರುವುದರಿಂದ ಮೀನುಗಾರರು ಆತಂಕದಿಂದ ಮತ್ತೆ ಮೀನುಗಾರಿಕೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತಾಗಿದೆ.

Vijaya Karnataka 13 Aug 2018, 8:53 am
ಕಾರವಾರ :ಅರಬ್ಬಿ ಸಮುದ್ರದಲ್ಲಿ ಕಳೆದ ಎರಡು ದಿನಗಳಿಂದ ಹವಾಮಾನ ವೈಪರಿತ್ಯ ಉಂಟಾಗಿದ್ದು, ಭಾರಿ ಮಳೆಯೊಂದಿಗೆ ಬಲವಾದ ಗಾಳಿ ಬೀಸುತ್ತಿದೆ. ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಎದ್ದಿರುವುದರಿಂದ ಮೀನುಗಾರರು ಆತಂಕದಿಂದ ಮತ್ತೆ ಮೀನುಗಾರಿಕೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತಾಗಿದೆ.
Vijaya Karnataka Web nature fishing band
ಮುನಿದ ಕಡಲು, ಮತ್ತೆ ಮೀನುಗಾರಿಕೆ ಬಂದ್


ಜಿಲ್ಲೆಯಲ್ಲಿ ವಾಯವ್ಯ ಭಾಗದಿಂದ ಬಲವಾದ ಗಾಳಿ ಬೀಸುತ್ತಿರುವುದರಿಂದ 3 ರಿಂದ 4.5 ಮೀಟರ್‌ ಎತ್ತರದ ಅಲೆಗಳು ಏಳಲು ಕಾರಣವಾಗಿದೆ. ಶನಿವಾರ ಹಾಗೂ ಭಾನುವಾರ ಎರಡು ದಿನ ಏಕಾಏಕಿ ಕಡಲಿನ ವಾತಾವರಣದಲ್ಲಿ ಬದಲಾವಣೆ ಕಂಡು ಬಂದಿದೆ. ಆಗಾಗ ಭಾರಿ ಗಾಳಿಯೊಂದಿಗೆ ಮಳೆ ಬೀಳುತ್ತಿದೆ. ಕಳೆದ ಮೇ ತಿಂಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಸಾಗರ್‌ ಚಂಡಮಾರುತದಿಂದ ಉಂಟಾದ ವಾಯುಭಾರ ಕುಸಿತದಿಂದ ಕರಾವಳಿ ಭಾಗಗಳಲ್ಲಿ ವ್ಯಾಪಕ ಗಾಳಿ, ಮಳೆಯಾಗಿದ್ದನ್ನು ಸ್ಮರಿಸಬಹುದು.

ತಾತ್ಕಾಲಿಕ ಬಂದ್‌:


ಸರಕಾರದ ಎರಡು ತಿಂಗಳ ನಿಷೇಧದ ಅವಧಿ ಮುಗಿದ ಬಳಿಕ ಆ.1 ರಂದು ಮೀನುಗಾರಿಕೆ ಮತ್ತೆ ಆರಂಭಗೊಂಡಿತ್ತು. ಮೀನುಗಾರರು ಈಗ ಕಡಲಿನಲ್ಲಿ ಕಳೆದ ಮೇ ಅಂತ್ಯದಲ್ಲಿ ಕಂಡಂತಹದೇ ವಾತಾವರಣ ಕಾಣುವಂತಾಗಿದೆ. ಇದರಿಂದ ಮೀನುಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಮೊದಲ ಸೀಜನ್‌ನಲ್ಲಿ ಒಳ್ಳೆಯ ಮೀನು ಉತ್ಪಾದನೆ ಇರುವ ಸಂದರ್ಭದಲ್ಲಿಯೇ ಪ್ರಕೃತಿ ಮುನಿದಿದೆ. ಕಡಲ ಅಬ್ಬರ ಜೋರಾಗಿರುವುದರಿಂದ ಆಳ ಸಮುದ್ರಕ್ಕೆ ಇಳಿಯುವಂತಿಲ್ಲ. ನಿಷೇಧಿತ ಅವಧಿಯಲ್ಲಿ ಆದಾಯವಿಲ್ಲದೇ ಹೆಣಗಾಡಿದ್ದ ಮೀನುಗಾರರಿಗೆ,ಈಗ ಕಡಲ ಆರ್ಭಟದಿಂದ ಮೀನುಗಾರಿಕೆ ಇಲ್ಲದೇ ಮತ್ತೆ ಸಂಕಷ್ಟ ಪಡುವಂತಾಗಿದೆ.

ಮಳೆ,ಗಾಳಿ ಆರ್ಭಟ:

ಜಿಲ್ಲೆಯಾದ್ಯಂತ ಅರಬ್ಬಿ ಸಮುದ್ರದ ಮೇಲಿನಿಂದ ಪಶ್ಚಿಮ ವಾಯವ್ಯ ಭಾಗದ ಮೂಲಕ ದಕ್ಷಿಣ ಆಗ್ನೇಯ ದಿಕ್ಕಿನೆಡೆಗೆ ಭಾರಿ ವೇಗದಲ್ಲಿ ಗಾಳಿ ಬೀಸುತ್ತಿದೆ. ಜತೆಗೆ ದಕ್ಷಿಣ ಉತ್ತರದ ಕಡೆಗೆ ನೀರಿನ ಸೆಳೆತ ಪ್ರತಿ ಸೆಕೆಂಡಿಗೆ 57 ರಿಂದ 73 ಸೆಂಟಿಮೀಟರ್‌ ಇದೆ. ಶನಿವಾರದಿಂದ ಗಾಳಿಯು ಪ್ರತಿ ಗಂಟೆಗೆ 25 ರಿಂದ 35 ಕಿಮೀ ವೇಗದಲ್ಲಿ ಬೀಸುತ್ತಿದ್ದು, ಮುಂದಿನ ದಿನಗಳಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 45 ರಿಂದ 55 ಕಿಮೀ ತಲುಪುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ, ಮೀನುಗಾರರಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ.

ಬೈತಖೋಲ್‌ ಬಂದರಿನಲ್ಲಿ ಆಸರೆ:

ಆಳ ಸಮುದ್ರದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಹವಾಮಾನ ವೈಪರೀತ್ಯದಿಂದ ಮೀನುಗಾರಿಕೆ ನಡೆಸುತ್ತಿದ್ದ ಯಾಂತ್ರೀಕೃತ ಬೋಟುಗಳು ಸುರಕ್ಷತೆ ದೃಷ್ಠಿಯಿಂದ ಬೈತಖೋಲ್‌ ಬಂದರಿನತ್ತ ಧಾವಿಸಿವೆ. ಹೀಗಾಗಿ ಬೈತಖೋಲ್‌ ಬಂದರಿನಲ್ಲಿ ಜಿಲ್ಲೆಯಲ್ಲದೇ ಗೋವಾ,ಮಂಗಳೂರು,ಮಲ್ಪೆ, ಕೇರಳ ಮುಂತಾದ ಕಡೆಯ ಮೀನುಗಾರಿಕೆ ಬೋಟುಗಳು ಲಂಗರು ಹಾಕಿವೆ. ಕಡಲಿನ ಮುನಿಸು ತಣ್ಣಗಾಗುವವರೆಗೆ ಎಲ್ಲ ಬೋಟುಗಳು ಇಲ್ಲಿಯೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಆಸರೆಯ ಬಂದರು :

ಬೈತಖೋಲ್‌ ಮೀನುಗಾರಿಕೆ ಬಂದರು ಸರ್ವ ಋುತು ಬಂದರಾಗಿದ್ದು, ಜಿಲ್ಲೆಯ ಮತ್ತು ಪಕ್ಕದ ಜಿಲ್ಲೆಗಳಾದ ಮಂಗಳೂರು, ಉಡುಪಿ ಹಾಗೂ ಕೇರಳ,ಗೋವಾ ರಾಜ್ಯಗಳ ಮೀನುಗಾರಿಕೆ ಬೋಟುಗಳಿಗೆ ಅಪಾಯಕಾರಿ ಸನ್ನಿವೇಶಗಳಲ್ಲಿ ಸುರಕ್ಷಿತ ತಾಣವಾಗಿದೆ. ಇದು ಆಪತ್ಕಾಲೀನ ಆಸರೆಯ ಬಂದರಾಗಿದೆ ಎಂದು ಗೋವಾ ಬೋಟಿನಲ್ಲಿ ದುಡಿಯುತ್ತಿರುವ ಸ್ಥಳೀಯ ಮೀನುಗಾರರು ತಿಳಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ