ಆ್ಯಪ್ನಗರ

ಜಾನುವಾರು ಪರಿಹಾರಕ್ಕೂ ನೂರೆಂಟು ನಿಯಮ!

ಕಾರವಾರ : ಪ್ರವಾಹದಲ್ಲಿ ಕೊಚ್ಚಿ ಹೋಗಿ ಕಣ್ಮರೆಯಾಗಿರುವ ಜಾನುವಾರುಗಳಿಗೆ ಪರಿಹಾರ ನೀಡುವ ನಿಯಮಗಳಲ್ಲಿ ಸ್ಪಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಮಾಲೀಕರು ಈಗ ಪರಿಹಾರಕ್ಕೆ ಅಲೆದಾಡುವ ಆತಂಕ ಎದುರಾಗಿದೆ.

Vijaya Karnataka 17 Aug 2019, 5:00 am
ಕಾರವಾರ : ಪ್ರವಾಹದಲ್ಲಿ ಕೊಚ್ಚಿ ಹೋಗಿ ಕಣ್ಮರೆಯಾಗಿರುವ ಜಾನುವಾರುಗಳಿಗೆ ಪರಿಹಾರ ನೀಡುವ ನಿಯಮಗಳಲ್ಲಿ ಸ್ಪಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಮಾಲೀಕರು ಈಗ ಪರಿಹಾರಕ್ಕೆ ಅಲೆದಾಡುವ ಆತಂಕ ಎದುರಾಗಿದೆ.
Vijaya Karnataka Web one hundred and eighty rules for livestock relief
ಜಾನುವಾರು ಪರಿಹಾರಕ್ಕೂ ನೂರೆಂಟು ನಿಯಮ!


ಜಿಲ್ಲೆಯಾದ್ಯಂತ ಧಾರಾಕಾರ ಮಳೆಗೆ ಆ.5ರಿಂದ ಒಂದು ವಾರ ಕಾಲ ನೆರೆ ಹಾವಳಿ ಸೃಷ್ಟಿಯಾಯಿತು. 11 ಸಾವಿರಕ್ಕೂ ಹೆಚ್ಚು ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದರು. ಆದರೆ ಮನೆ, ಬಟ್ಟೆ ಬರೆ, ಪಾತ್ರೆ ಪಗಡೆಗಳ ಜತೆಗೆ ಬಹುತೇಕ ಹಳ್ಳಿಗರು ತಮ್ಮ ಜಾನುವಾರುಗಳನ್ನೂ ಪ್ರವಾಹಕ್ಕೆ ಒಪ್ಪಿಸಿ ಬರುವಂತಾಯಿತು. ಜೀವ ಉಳಿಸಿಕೊಳ್ಳುವುದೇ ಸವಾಲಾಗಿದ್ದ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಕರೆತರುವಂತೆಯೂ ಇರಲಿಲ್ಲ.

ಈಗ ಪ್ರವಾಹ ಇಳಿಕೆಯಾದ ಮೇಲೆ ಕೆಲವೆಡೆ ಬಿಟ್ಟು ಬಂದ ಜಾನುವಾರುಗಳು ಮೃತಪಟ್ಟಿರುವುದು ಗಮನಕ್ಕೆ ಬರತೊಡಗಿದೆ. ಈವರೆಗೆ ಒಟ್ಟು 84 ಜಾನುವಾರುಗಳು ಸತ್ತ ಬಗ್ಗೆ ಪಶು ಸಂಗೋಪನಾ ಇಲಾಖೆಯಲ್ಲಿ ವರದಿಯಾಗಿದೆ. ಕಳೆಬರ ಸಿಕ್ಕ ಜಾನುವಾರುಗಳ ಮಾಲೀಕರಿಗೆ ಮರಣೋತ್ತರ ವರದಿ ಆಧಾರದಲ್ಲಿ ಪರಿಹಾರ ದೊರೆಯಲಿದೆ. ಆದರೆ ಪ್ರವಾಹದಲ್ಲಿ ಕಣ್ಮರೆಯಾದ ನೂರಾರು ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಲು ವಿವಿಧ ನಿಯಮಗಳನ್ನು ಅನುಸರಿಸಬೇಕಿದೆ.

ಆದೇಶದಲ್ಲಿ ಏನಿದೆ? : ಕಣ್ಮರೆಯಾದ ಜಾನುವಾರುಗಳ ಬಗ್ಗೆ ಕಂದಾಯ ಇಲಾಖೆಯ ಪ್ರತಿನಿಧಿ, ಸ್ಥಳೀಯ ಪಶು ವೈದ್ಯರು, ಗ್ರಾಪಂ ಸದಸ್ಯರು ಅಥವಾ ಅಧ್ಯಕ್ಷರು ಹಾಗೂ ಜಾನುವಾರು ಮಾಲೀಕರನ್ನೊಳಗೊಂಡ ಸಮಿತಿ ರಚಿಸಬೇಕು. ಜಾನುವಾರು ಗಣತಿಯ ದಾಖಲೆಗಳೊಂದಿಗೆ ತಾಳೆ ನೋಡಿ ಕಣ್ಮರೆಯಾದ ಸತ್ಯಾಸತ್ಯತೆ ಖಚಿತ ಪಡಿಸಿಕೊಳ್ಳಬೇಕು. ಬಳಿಕ ಪಂಚನಾಮೆ ಮೂಲಕ ಮೌಲ್ಯಮಾಪನ ನಿರ್ಧರಿಸಿ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಬೇಕು ಎಂದು ಪಶು ಸಂಗೋಪನಾ ಇಲಾಖೆಯ ಆಯುಕ್ತರ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಪಶು ಸಂಗೋಪನಾ ಇಲಾಖೆ ಮೃತ ಜಾನುವಾರುಗಳಿಗೆ ಪರಿಹಾರ ನೀಡುವ ಮಾರ್ಗಸೂಚಿಯಲ್ಲಿ ಮರಣೋತ್ತರ ಪರೀಕ್ಷೆ ವರದಿ ಕೇಳುತ್ತದೆ. ಈ ಹಿನ್ನೆಲೆಯಲ್ಲಿ ಆಯುಕ್ತರ ಆದೇಶ ಗೊಂದಲಕ್ಕೆ ಕಾರಣವಾಗಿದೆ ಎಂದು ಪಶು ಸಂಗೋಪನೆಯಲ್ಲಿ ತೊಡಗಿರುವವರು ಆಕ್ಷೇಪಿಸಿದ್ದಾರೆ.

ಮೊದಲೇ ಸಂಕಷ್ಟದಲ್ಲಿದ್ದೇವೆ. ಸಮಿತಿ ರಚಿಸಿದರೆ ಪಂಚನಾಮೆ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುತ್ತದೆ. ಇಷ್ಟಾದರೂ ಆದೇಶದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಕಚೇರಿಗೆ ಅಲೆದಾಡಬೇಕಾಗುತ್ತದæ ಎಂದು ಜಾನುವಾರು ಮಾಲೀಕರು ಆತಂಕ ವ್ಯಕ್ತಪಡಿಸುತ್ತಾರೆ.

ಮೂರಕ್ಕಷ್ಟೇ ಪರಿಹಾರ : ಇನ್ನು ಸರಕಾರದ ನಿಯಮಾವಳಿ ಪ್ರಕಾರ ಒಬ್ಬ ರೈತನಿಗೆ ಸೇರಿದ ಮೂರು ಜಾನುವಾರುಗಳಿಗೆ ಮಾತ್ರ ಒಮ್ಮೆ ಪರಿಹಾರ ನೀಡಲು ಅವಕಾಶವಿದೆ. ಆದರೆ ಕೆಲವೆಡೆ ಒಬ್ಬರೇ ಮಾಲೀಕರ ಹತ್ತಾರು ಜಾನುವಾರು ಕಣ್ಮರೆಯಾದ ಘಟನೆಗಳಿವೆ. ಸರಕಾರದ ನಿಯಮದಿಂದ ಹೆಚ್ಚು ನಷ್ಟ ಅನುಭವಿಸಿದವರಿಗೇ ಪರಿಹಾರ ಕಡಿಮೆ ಎಂಬಂತಾಗಿದೆ.

ಅಲ್ಲಲ್ಲಿ ಕಳೆಬರ : ಕಾರವಾರ, ಅಂಕೋಲಾ ತಾಲೂಕುಗಳ ನಡುಗಡ್ಡೆಗಳಲ್ಲಿ ಹಲವಾರು ಜಾನುವಾರು ಮೃತಪಟ್ಟಿವೆ. ಈಗಷ್ಟೇ ಕ್ಷೇಮ ಕೇಂದ್ರಗಳಿಂದ ಮರಳುತ್ತಿರುವ ಹಳ್ಳಿಗರಿಗೆ ಒಂದಾದ ಮೇಲೊಂದರಂತೆ ಜಾನುವಾರುಗಳ ಕಳೆಬರ ಸಿಗುತ್ತಿವೆ. ತಾಲೂಕಿನ ಬೋಳ್ವೆಜೂಗ್‌ ನಡುಗಡ್ಡೆಯಲ್ಲಿ ಕಣ್ಮರೆಯಾಗಿದ್ದ ಐದು ಜಾನುವಾರುಗಳ ಕಳೆಬರ ದೊರೆತಿವೆ. ಮೃತ ಜಾನುವಾರು ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ