ಆ್ಯಪ್ನಗರ

ಪಂಪ ಪ್ರಶಸ್ತಿ ಘೋಷಣೆ ಈ ಬಾರಿಯೂ ವಿಳಂಬ

ಶಿರಸಿ (ಉತ್ತರ ಕನ್ನಡ) : ಕನ್ನಡ ಸಾರಸ್ವತ ಲೋಕದ ಉನ್ನತ ಪ್ರಶಸ್ತಿಯಾದ ಪಂಪ ಪ್ರಶಸ್ತಿಯ ಘೋಷಣೆ ಈ ಬಾರಿಯೂ ಮತ್ತೆ ವಿಳಂಬವಾಗಿದೆ. ಯಾರು ಈ ಗೌರವಕ್ಕೆ ಭಾಜನರಾಗುತ್ತಾರೆ, ಯಾವಾಗ ಪ್ರಕಟಿಸಲಾಗುತ್ತದೆ, ಎಲ್ಲಿ ಪ್ರದಾನ ಮಾಡಲಾಗುತ್ತದೆ ಎನ್ನುವ ನಿರೀಕ್ಷೆ ಹುಟ್ಟುಹಾಕಿದೆ.

Vijaya Karnataka 19 Feb 2019, 5:00 am
ಶಿರಸಿ (ಉತ್ತರ ಕನ್ನಡ) : ಕನ್ನಡ ಸಾರಸ್ವತ ಲೋಕದ ಉನ್ನತ ಪ್ರಶಸ್ತಿಯಾದ ಪಂಪ ಪ್ರಶಸ್ತಿಯ ಘೋಷಣೆ ಈ ಬಾರಿಯೂ ಮತ್ತೆ ವಿಳಂಬವಾಗಿದೆ. ಯಾರು ಈ ಗೌರವಕ್ಕೆ ಭಾಜನರಾಗುತ್ತಾರೆ, ಯಾವಾಗ ಪ್ರಕಟಿಸಲಾಗುತ್ತದೆ, ಎಲ್ಲಿ ಪ್ರದಾನ ಮಾಡಲಾಗುತ್ತದೆ ಎನ್ನುವ ನಿರೀಕ್ಷೆ ಹುಟ್ಟುಹಾಕಿದೆ.
Vijaya Karnataka Web pampa award announcement is delayed this time
ಪಂಪ ಪ್ರಶಸ್ತಿ ಘೋಷಣೆ ಈ ಬಾರಿಯೂ ವಿಳಂಬ


ನಾಡಿನ ಶ್ರೇಷ್ಠ ಸಾಹಿತಿಗೆ ಪ್ರತಿ ವರ್ಷ ಪ್ರಕಟಿಸಲಾಗುವ ಪಂಪ ಪ್ರಶಸ್ತಿಯನ್ನು ಕನ್ನಡದ ಪ್ರಥಮ ರಾಜಧಾನಿ ಖ್ಯಾತಿಯ ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ಸ್ಥಳ ಬನವಾಸಿಯಲ್ಲಿ ಜರುಗುವ ಕದಂಬೋತ್ಸವ ಸಮಾರಂಭದಲ್ಲಿ ಕಳೆದೆರಡು ದಶಕದಿಂದ ಪ್ರದಾನ ಮಾಡಲಾಗುತ್ತಿದೆ.

ರಾಜ್ಯದ ಮುಖ್ಯಮಂತ್ರಿಯೇ ಸ್ವತಃ ಕದಂಬೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮೇರು ಸಾಹಿತಿಯೊಬ್ಬರಿಗೆ ಆದಿಕವಿ ಪಂಪನ ಹೆಸರಿನಲ್ಲಿ ಪ್ರತಿಷ್ಠಿತವಾದ ಈ ಪ್ರಶಸ್ತಿಯ ಗೌರವ ಸಮರ್ಪಣೆ ಮಾಡುವುದು ಈಗ ಸಂಪ್ರದಾಯದಂತಾಗಿದ್ದು, ಉತ್ಸವ ಮತ್ತು ಪ್ರಶಸ್ತಿಯ ಮೆರಗು ಹೆಚ್ಚಿಸಿದೆ.

ವಿಳಂಬ ಯಾಕೆ?:

ಈ ಮಧ್ಯೆ ಗೆಜೆಟ್‌ ಅಧಿಸೂಚನೆ ಪ್ರಕಾರ ಪ್ರತಿ ವರ್ಷ ಡಿಸೆಂಬರ್‌ ಅಂತ್ಯದೊಳಗೆ ನಡೆಯಬೇಕಾದ ಕದಂಬೋತ್ಸವವನ್ನು ಪ್ರತಿ ಬಾರಿಯೂ ಒಂದೆರಡು ತಿಂಗಳು ವಿಳಂಬ ಮಾಡಿ ಅಂತೂ ನಡೆಸುವುದು ಸ್ಥಳೀಯ ಆಡಳಿತಕ್ಕೆ ರೂಢಿಯಾಗಿಬಿಟ್ಟಿದೆ. ಈ ಕುರಿತು ಜನರ ಅಸಮಾಧಾನ, ಆಕ್ಷೇಪಗಳಿಗೆ ಗಮನವಿಲ್ಲದಂತಾಗಿದೆ.

ಅದರೊಂದಿಗೆ ಪ್ರತಿ ಸಲವೂ ರಾಜ್ಯ ಮಟ್ಟದ ಆಯ್ಕೆ ಸಮಿತಿ ನಿರ್ಣಯಿಸಬೇಕಾದ ಮಹತ್ವದ ಪಂಪ ಪ್ರಶಸ್ತಿಯನ್ನು ಡಿಸೆಂಬರ್‌ ತಿಂಗಳ ಬದಲು ಸಾಕಷ್ಟು ವಿಳಂಬ ಮಾಡಿ ಘೋಷಣೆ ಮಾಡಲಾಗುತ್ತಿದೆ. ಇದನ್ನೂ ಕೊನೆ ಗಳಿಗೆಯಲ್ಲಿ ಪ್ರಕಟಿಸುತ್ತಾರೆ ಎನ್ನುವ ದೂರುಗಳಿವೆ.

ಮುಂದೂಡಿಕೆ ನಂತರ...

ಅದರಲ್ಲೂ ಈ ಬಾರಿ ಡಿಸೆಂಬರ್‌ ಬದಲು ಫೆಬ್ರವರಿ ಮೊದಲ ವಾರಕ್ಕೆ ನಿಗದಿಯಾಗಿದ್ದ ಬನವಾಸಿ ಕದಂಬೋತ್ಸವವನ್ನು ಮತ್ತೆ ಮುಂದೂಡಲಾಗಿದೆ. ಕೆಲವೆಡೆ ಮಂಗನ ಕಾಯಿಲೆ ಲಕ್ಷ ಣಗಳು ಕಾಣಿಸಿಕೊಂಡಿದ್ದನ್ನು ಮುಂದೂಡಿಕೆಗೆ ಕಾರಣ ನೀಡಲಾಗಿದೆ. ಅದರೊಂದಿಗೆ ಮತ್ತೆ ಈ ಬಾರಿ ಉತ್ಸವ ನಿಗದಿಯಾಗುತ್ತದೆಯೇ ಇಲ್ಲವೊ ಎನ್ನುವ ಅನುಮಾನವೂ ವ್ಯಕ್ತವಾಗುತ್ತಿದೆ.

ಆದರೆ, ಈ ಉತ್ಸವ ತಪ್ಪದೇ ಹಮ್ಮಿಕೊಳ್ಳಬೇಕು, ಪ್ರತಿ ವರ್ಷವೂ ಸಕಾಲಕ್ಕೆ ಪಂಪ ಪ್ರಶಸ್ತಿ ಘೋಷಣೆ ಮಾಡಬೇಕು, ಬನವಾಸಿ ಕದಂಬೋತ್ಸವದಲ್ಲಿಯೇ ಈ ಪ್ರಶಸ್ತಿ ಪ್ರದಾನ ಮಾಡಬೇಕು ಎಂಬುದಾಗಿ ಕದಂಬ ಸೈನ್ಯ ಸೇರಿದಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸುತ್ತ ಬಂದಿವೆ.
ಪ್ರಶಸ್ತಿಗೆ ಭಾಜನರಾದವರು

ನಾಡಿನ ಮೇರು ಸಾಹಿತಿಗಳಿಗೆ 1987ರಿಂದಲೂ ಪಂಪ ಪ್ರಶಸ್ತಿ ನೀಡುತ್ತ ಬರಲಾಗಿದೆ. ರಾಷ್ಟ್ರಕವಿ ಕುವೆಂಪು ಅವರು ಪ್ರಥಮ ವರ್ಷದ ಪ್ರಶಸ್ತಿ ಭಾಜನರಾಗಿದ್ದರು. ನಂತರ ತೀನಂಶ್ರೀ, ಡಾ.ಶಿವರಾಮ ಕಾರಂತ, ಎ.ಎನ್‌.ಮೂರ್ತಿರಾವ್‌, ಪುತಿನ, ಗೋಪಾಲಕೃಷ್ಣ ಅಡಿಗ, ಜಿ.ಎಸ್‌.ಶಿವರುದ್ರಪ್ಪ, ಪೂರ್ಣಚಂದ್ರ ತೇಜಸ್ವಿ, ಡಾ.ಚಂದ್ರಶೇಖರ ಕಂಬಾರ ಮುಂತಾದ ಮೇರು ಸಾಹಿತಿಗಳಿಗೆ ಪ್ರಶಸ್ತಿಯ ಗೌರವ ಸಂದಿದೆ.

ಕಳೆದ ದಶಕದ ಅವಧಿಯಲ್ಲಿ ಹಿರಿಯ ಸಾಹಿತಿಗಳಾದ ಯಶವಂತ ಚಿತ್ತಾಲ, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಚಂಪಾ, ಜಿ.ಎಚ್‌.ನಾಯಕ, ಬರಗೂರು ರಾಮಚಂದ್ರಪ್ಪ, ಡಿ.ಎನ್‌.ಶಂಕರ ಭಟ್ಟ, ಕಯ್ಯಾರ ಕಿಞ್ಞಣ್ಣ ರೈ, ಪ್ರೊ.ಜಿ.ವೆಂಕಟಸುಬ್ಬಯ್ಯ, ಬಿ.ಎ.ಸನದಿ, ಹಂ.ಪ.ನಾಗರಾಜಯ್ಯ ಮತ್ತು ಕೆ.ಎಸ್‌.ನಿಸಾರ ಅಹಮ್ಮದ ಅವರಿಗೆ ಪ್ರದಾನ ಮಾಡಲಾಗಿದೆ. ಮೊದಲು ಒಂದು ಲಕ್ಷ ರೂ. ಇದ್ದ ಪ್ರಶಸ್ತಿ ಮೊತ್ತವನ್ನು 2008ರಲ್ಲಿ ಮೂರು ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ