ಆ್ಯಪ್ನಗರ

ಸಚಿವರು ಬಂದರೂ ಬಗೆಹರಿಯದ ಗೊಂದಲ

ಕಾರವಾರ : ಕಾರವಾರ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಕಾಮಗಾರಿಯು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಸಭೆಯ ಬಳಿಕವೂ ಕಗ್ಗಂಟಾಗಿಯೇ ಉಳಿದಿದೆ. ಸಚಿವರ ಅಸ್ಪಷ್ಟ ಭರವಸೆಯಿಂದಾಗಿ, ಕಾಮಗಾರಿ ಸಧ್ಯ ನಡೆಯುವುದೋ ಇಲ್ಲವೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿಹಾಗೆಯೇ ಉಳಿದುಕೊಂಡಿದ್ದರೆ ಇನ್ನೊಂದೆಡೆ ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಸ ಆದೇಶ ಇತ್ತ ಅಧಿಕಾರಿಗಳಿಗೂ ಕಾಮಗಾರಿ ನಡೆಸಬೇಕೋ ಬೇಡವೋ ಎಂಬ ಗೊಂದಲಕ್ಕೆ ಕೆಡವಿದೆ.

Vijaya Karnataka 26 Dec 2019, 5:00 am
ಕಾರವಾರ : ಕಾರವಾರ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಕಾಮಗಾರಿಯು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಸಭೆಯ ಬಳಿಕವೂ ಕಗ್ಗಂಟಾಗಿಯೇ ಉಳಿದಿದೆ. ಸಚಿವರ ಅಸ್ಪಷ್ಟ ಭರವಸೆಯಿಂದಾಗಿ, ಕಾಮಗಾರಿ ಸಧ್ಯ ನಡೆಯುವುದೋ ಇಲ್ಲವೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿಹಾಗೆಯೇ ಉಳಿದುಕೊಂಡಿದ್ದರೆ ಇನ್ನೊಂದೆಡೆ ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಸ ಆದೇಶ ಇತ್ತ ಅಧಿಕಾರಿಗಳಿಗೂ ಕಾಮಗಾರಿ ನಡೆಸಬೇಕೋ ಬೇಡವೋ ಎಂಬ ಗೊಂದಲಕ್ಕೆ ಕೆಡವಿದೆ.
Vijaya Karnataka Web unresolved confusion despite the ministers arrival
ಸಚಿವರು ಬಂದರೂ ಬಗೆಹರಿಯದ ಗೊಂದಲ


ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆ ಕಾಮಗಾರಿ ಉದ್ಘಾಟಿಸಿದ್ದರು. ಆ ಬಳಿಕ ಕೋಟ್ಯಂತರ ರೂ. ಖರ್ಚು ಮಾಡಿ, ಡ್ರೆಜ್ಜಿಂಗ್‌ ನಡೆಸಲಾಯಿತು. ನಾಲ್ಕು ದಿನಗಳ ಹಿಂದೆ ತಡೆಗೋಡೆ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರು ಬಂದಿದ್ದರು. ಆದರೆ ಕಾಮಗಾರಿ ನಡೆಸುವ ಸ್ಥಳವಾದ ಅಲಿಗದ್ದಾ ಬೀಚ್‌ನಲ್ಲಿಸೇರಿದ ಸಾವಿರಾರು ಮೀನುಗಾರರು ಕಾಮಗಾರಿಗೆ ತಡೆಯೊಡ್ಡಿದರು.

ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳತೊಡಗಿದ ಹಿನ್ನೆಲೆಯಲ್ಲಿ ಮಂಗಳವಾರ ಕಾರವಾರಕ್ಕೆ ಆಗಮಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರರೊಂದಿಗೆ ಸಭೆ ನಡೆಸಿದರು. ಮೀನುಗಾರರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸುವ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಲಿಖಿತವಾಗಿ ಆದೇಶ ನೀಡುವುದಾಗಿ ಭರವಸೆ ನೀಡಿದರು.

ಆದರೆ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ಯಾವಾಗ ? ಅಲ್ಲಿಯವರೆಗೆ ಕಾಮಗಾರಿ ಸ್ಥಗಿತವಿರುತ್ತೋ ಅಥವಾ ಮುಂದುವರಿಯತ್ತೋ ? ಇಂಥ ಹತ್ತಾರು ಪ್ರಶ್ನೆಗಳಿಗೆ ಸಚಿವರಿಂದ ಸ್ಪಷ್ಟ ಪ್ರತಿಕ್ರಿಯೆ ಇರಲಿಲ್ಲ. ಈ ಕುರಿತು ಕೇಳಿದ ಪ್ರಶ್ನೆಗಳಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವರು ನೀಡಿದ ಉತ್ತರ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಿದೆ ಎಂಬುದು ಮೀನುಗಾರರ ಆರೋಪ.

ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ : ಸಾಗರಮಾಲಾ ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿದ್ದು ಇದರಡಿ ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ 125 ಕೋಟಿ ರೂ. ಗೂ ಹೆಚ್ಚು ಅನುದಾನ ಮಂಜೂರಾಗಿದೆ. ಅಲ್ಲದೇ ರಾಜ್ಯ ಸರಕಾರದ್ದೂ ಶೇ. 25ರಷ್ಟು ಪಾಲು ಇದರಲ್ಲಿದೆ. ಈಗಾಗಲೇ ಸ್ವಲ್ಪ ಅನುದಾನ ಕಾಮಗಾರಿ ಪ್ರಕ್ರಿಯೆಗೆ ಖರ್ಚೂ ಆಗಿದೆ. ಹಾಗಾಗಿ ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಯೋಜನೆಯನ್ನು ಶತಾಯುಗತಾಯ ಅನುಷ್ಠಾನಗೊಳಿಸಲೇಬೇಕಾದ ಹೊಣೆ ಜಿಲ್ಲಾಡಳಿತದ ಮೇಲಿತ್ತು. ಆದರೆ ಈಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರದ ಬಂದರು ಇಲಾಖೆಯ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಅವರಿಗೆ ಪತ್ರವೊಂದನ್ನು ಬರೆದು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದೆ. ಇದರಿಂದಾಗಿ ಜಿಲ್ಲಾಡಳಿತ ಮತ್ತು ಬಂದರು ಇಲಾಖೆಯೂ ಈಗ ಇಕ್ಕಟ್ಟಿಗೆ ಸಿಲುಕಿದೆ.

ಅಲ್ಲದೇ ಕೆಲ ಸಂಘಟನೆಗಳ ದೂರಿನ ಹಿನ್ನೆಲೆಯಲ್ಲಿಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಬಂದರು ಇಲಾಖೆಯ ಎಕ್ಸಿಕ್ಯುಟಿವ್‌ ಎಂಜಿನಿಯರ್‌ಗೆ ಶೋಕಾಸ್‌ ನೋಟಿಸ್‌ ನೀಡಿದ್ದಾರೆ. ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾಮಗಾರಿಗೆ ನೀಡಲಾಗಿರುವ ಅನುಮತಿಯನ್ನು ಯಾಕೆ ಹಿಂಪಡೆಯಬಾರದು ? ಎಂಬ ಪ್ರಶ್ನೆಯನ್ನು ನೋಟಿಸ್‌ನಲ್ಲಿಕೇಳಲಾಗಿದೆ.

ಅಧಿಕಾರಿ ಸ್ಪಷ್ಟನೆ : ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು, ಮಾಲಿನ್ಯ ನಿಯಂತ್ರಣ ಮಂಡಳಿ ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚಿಸಿಲ್ಲ. ಬಂದರು ಇಲಾಖೆಯ ಅಧಿಕಾರಿಗೆ ಶೋಕಾಸ್‌ ನೀಡಿದ್ದು, ಈಗಾಗಲೇ ಮಂಡಳಿಯಿಂದ ಕೊಟ್ಟ ಅನುಮತಿಯನ್ನು ಯಾಕೆ ಹಿಂಪಡೆಯಬಾರದು ಎಂಬ ಪ್ರಶ್ನೆ ಕೇಳಿದೆ ಎಂದು ಸ್ಪಷ್ಟನೆ ನೀಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ