ಆ್ಯಪ್ನಗರ

ಗ್ರಹಣ ಸಮಯದಲ್ಲೇ ಸಭೆ, ಅಂಧ ಶ್ರದ್ದೆಗೆ ಬ್ರೇಕ್ ನೀಡಿದ ಎಂ. ಬಿ. ಪಾಟೀಲ

ಭಾನುವಾರ ಕಂಕಣ ಸೂರ್ಯಗ್ರಹಣ. ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಬಹುತೇಕ ಜನರು ಮನೆಯಿಂದ ಹೊರಬಂದಿಲ್ಲ. ಇನ್ನು ಸಭೆ ಸಮಾರಂಭಗಳು ನಡೆಸುವಿದು ಅಶುಭ ಎಂಬ ನಂಬಿಕೆಯೂ ಇದೆ. ಆದರೆ ಮಾಜಿ ಸಚಿವ ಎಂಬಿ ಪಾಟೀಲ್ ಇದಕ್ಕೆ ವಿಭಿನ್ನವಾಗಿ ನಡೆದುಕೊಂಡಿದ್ದಾರೆ.

Vijaya Karnataka Web 21 Jun 2020, 3:19 pm
ವಿಜಯಪುರ: ಗ್ರಹಣ ಅಶುಭ ಎಂದು ಯಾವುದೇ ಕಾರ್ಯಕ್ರಮ ನಡೆಸದೆ ಇರುವ ಈ ಸಂದರ್ಭದಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್‌ ನಿರಾವರಿ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದ ಸಭೆಯನ್ನು ನಡೆಸುವ ಮೂಲಕ ಅಂಧ ಶ್ರದ್ದೆಗೆ ಬ್ರೇಕ್ ಹಾಕಿದ್ದಾರೆ.
Vijaya Karnataka Web mb patil


ಭಾನುವಾರ ಕಂಕಣ ಸೂರ್ಯಗ್ರಹಣವಿದ್ದು ಕಾರ್ಯಕ್ರಮಗಳನ್ನು ನಡೆಸುವುದು ಅಶುಭ ಎಂಬ ನಂಬಿಕೆ ಇದೆ. ಆದರೆ ಈ ರೂಡಿಗತ ಸಂಪ್ರದಾಯವನ್ನು ಬದಿಗೊತ್ತಿ ಇಡೀ ದಿನ ವಿವಿಧ ಇಲಾಖೆಗಳ ಹಾಗೂ ತಮ್ಮ ಬಿ.ಎಲ್.ಡಿ.ಇ ಸಂಸ್ಥೆಗೆ ಸಂಬಂಧಿಸಿದ ಸಭೆಗಳನ್ನು ನಡೆಸುವ ಮೂಲಕ ಕ್ರಿಯಾಶೀಲರಾಗಿ ನಡೆದು ಬಂದ ಸಂಪ್ರದಾಯವನ್ನು ಮುರಿದರು.

ಶನಿವಾರ ಬೆಳಿಗ್ಗೆಯೇ ರವಿವಾರದ ಸಭೆಗಳನ್ನು ನಿಗದಿ ಪಡಿಸಿಕೊಂಡಿದ್ದರು “ಇಲ್ಲಾ, ಸರ್ ನಾಳೆ ಅಮವಾಸ್ಯೆ ಗ್ರಹಣ ಬೇರೆ ಇದೆ. ಸಭೆ ನಡೆಸುವದು ಸೂಕ್ತವಲ್ಲ” ಎಂದು ಸಿಬ್ಬಂದಿ ಹೇಳಿದರೂ “ಕೆಲಸ ಮಾಡಲು ಅಮವಾಸ್ಯೆ, ಗ್ರಹಣ ಎಂದಿಗೂ ಅಡ್ಡಿ ಬರುವದಿಲ್ಲ. ಬಸವ ತತ್ವವನ್ನು ಕೇವಲ ಬಾಯಿಯಿಂದ ಹೇಳಿದರೆ ಸಾಲದು, ಆಚರಣೆಗೂ ತರಬೇಕು”. ಎಂದು ಇಂದು ಇಡೀ ದಿನ ಸಭೆಗಳನ್ನು ನಿಗದಿಪಡಿಸಿಕೊಂಡಿದ್ದರು.

ಕಂಕಣ ಸೂರ್ಯಗ್ರಹಣ: ಅಪರೂಪದ ಖಗೋಳ ವಿದ್ಯಮಾನ ಕಣ್ತುಂಬಿಕೊಂಡ ಜನ

ಅದರ ಅನುಸಾರ ಇಂದು ಬೆಳಿಗ್ಗೆ ಬೃಹತ್ ನೀರಾವರಿ ಇಲಾಖೆಯ ತಮ್ಮ ಬಬಲೇಶ್ವರ ಕ್ಷೇತಕ್ಕೆ ಸಂಬಂಧಿಸಿದ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆ, ಮುಳವಾಡ ಏತನೀರಾವರಿ ಯೋಜನೆಯ ಕುರಿತು ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದರು.

ಮಳೆಗಾಲದಲ್ಲಿ ಈ ಕಾಲುವೆಗಳಲ್ಲಿ ನೀರು ಹರಿಬಿಡಲಾಗುತ್ತಿದ್ದು, ಜಾಕವೆಲ್‍ಗಳಲ್ಲಿ ಮೋಟಾರ್ ದುರಸ್ಥಿ, ಶಾಖಾ ಕಾಲುವೆಗಳ ಕಾಮಗಾರಿಯ ಪ್ರಗತಿಯ ವಿವರಗಳು, ಭೂಸ್ವಾಧೀನ ಸಂಬಂಧಿಸಿದ ಅನುದಾನ ಬಿಡುಗಡೆ ಕುರಿತು ಸವಿವರವಾಗಿ ಮೂರು ಗಂಟೆಗಳ ಕಾಲ ಚರ್ಚಿಸಿದರು.

ಇಲಾಖೆ ಮಂತ್ರಿಗಳು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಈ ಎರಡು ಯೋಜನೆಗಳಿಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಮಾತನಾಡಿದರು. ಅಲ್ಲದೇ ಸಣ್ಣ ನೀರಾವರಿ ಇಲಾಖೆಯಿಂದ ಅಂತರ್ಜಲ ವೃದ್ಧಿಯಾಗಲು, ವಿವಿಧ ನಾಲಾಗಳಿಗೆ ಅಗತ್ಯವಿರುವೆಡೆ ಚೆಕ್‍ಡ್ಯಾಂ ಹಾಗೂ ಬಾಂದಾರಗಳನ್ನು ನಿರ್ಮಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಭೆ ನಡೆಸಿದರು.

ಗ್ರಹಣ ಮೋಕ್ಷವಾದ ನಂತರ ರಾಶಿಗನುಗುಣವಾಗಿ ಈ ವಸ್ತುಗಳನ್ನು ದಾನ ಮಾಡಿದರೆ ಉತ್ತಮ!

ಈ ಸಭೆಯಲ್ಲಿ ಕರ್ನಾಟಕ ನೀರಾವರಿ ನಿಗಮ ಅಧೀಕ್ಷಕ ಅಭಿಯಂತರ ಚಂದ್ರಶೇಖರ, ಕೃಷ್ಣಾ ಭಾಗ್ಯ ಜಲ ನಿಗಮ ಅಧೀಕ್ಷಕ ಅಭಿಯಂತರ ಜಗದೀಶ ರಾಠೋಡ, ಅಥಣಿ ವಲಯ ಕಾರ್ಯನಿರ್ವಾಹಕ ಅಭಿಯಂತರ ಶ್ರೀಕಾಂತ ಜಾಲಿಬೇರಿ, ಸಣ್ಣ ನೀರಾವರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ ನಾಯಕ ಸೇರಿದಂತೆ ರೈತರ ಪರವಾಗಿ ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಉಪಸ್ಥಿತರಿದ್ದರು.

ನಂತರ ಮಧ್ಯಾಹ್ನ ಬಿ.ಎಲ್.ಡಿ.ಇ ಸಂಸ್ಥೆ ಎ.ವಿ.ಎಸ್. ಆಯುರ್ವೇದ ಕಾಲೇಜಿಗೆ ಸಂಬಂಧಿಸಿದ ಸಭೆಯನ್ನು ನಡೆಸಿದರು. ಸರ್ಕಾರದಿಂದ ಸಂಸ್ಥೆಗೆ ನೀಡಿದ 17ಎಕರೆ ಲೀಸ್ ಆಸ್ತಿಯಲ್ಲಿ, ಅನೇಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು, ಮನೆಗಳನ್ನು ಕಟ್ಟಿಕೊಂಡಿದ್ದು, ಒತ್ತುವರಿದಾರರನ್ನು ತೆರವುಗೊಳಿಸಲು ಅಗತ್ಯ ಕಾನೂನು ಕ್ರಮ ಜರುಗಿಸುವ ಕುರಿತು ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ರಾಘವೇಂದ್ರ ಕುಲಕರ್ಣಿ, ಕಾನೂನು ಸಲಹೆಗಾರ ಸುರೇಶ ಹಕ್ಕಿ, ಕಂದಾಯ ಸಲಹೆಗಾರ ನಿವೃತ್ತ ತಹಶೀಲ್ದಾರ ಜಿ.ಆರ್.ಶೀಲವಂತ, ಡಾ.ಮಹಾಂತೇಶ ಬಿರಾದಾರ, ಪ್ರಾಚಾರ್ಯ ಸಂಜಯ ಕಡ್ಲಿಮಟ್ಟಿ, ಅಧೀಕ್ಷಕ ಎಸ್.ಎ.ಬಿರಾದಾರ ಉಪಸ್ಥಿತರಿದ್ದರು.

ನಂತರ ಬಿ.ಎಲ್.ಡಿ.ಇ ಸ್ವಾಯತ್ತ ವಿವಿ ಕಛೇರಿಗೆ ತೆರಳಿ ಉಪಕುಲಪತಿ ಹಾಗೂ ವಿವಿ ಪ್ರಮುಖರೊಂದಿಗೆ ಮಹತ್ವದ ಸಭೆ ನಡೆಸಿದರು. ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡ ಬಂದಿರುವ ರೂಢಿಗತ ಸಂಪ್ರದಾಯಗಳನ್ನು ಮುರಿದು, ಕ್ರಿಯಾಶೀಲ ಕಾರ್ಯದಿಂದ ಎಂ.ಬಿ.ಪಾಟೀಲ್ ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ