ಆ್ಯಪ್ನಗರ

ಚಡಚಣ ಮರ್ಡರ್‌ ಪ್ರಕರಣ: ಎಸ್‌ಐ ಅರೆಸ್ಟ್‌

ಇದುವರೆಗೂ ಅಂತೆಕಂತೆಗಳನ್ನು ಸುತ್ತುವರಿದಿದ್ದ ಭೀಮಾತೀರದ ಹಂತಕ ಧರ್ಮರಾಜ ಚಡಚಣ ಸಹೋದರ ಗಂಗಾಧರ ಚಡಚಣ ನಿಗೂಢ ನಾಪತ್ತೆ ಪ್ರಕರಣ ಕೊನೆಗೂ ಕೊಲೆ ಪ್ರಕರಣವೆಂಬುದು ಖಚಿತವಾಗಿದೆ. ಪ್ರಕರಣದಲ್ಲಿ ಚಡಚಣದ ಹಿಂದಿನ ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಮೂವರ ಪೇದೆಗಳು ಆರೋಪಿಗಳಾಗಿರುವ ಆತಂಕಕಾರಿ ಸಂಗತಿ ಹೊರಬಿದ್ದಿದೆ.

Vijaya Karnataka Web 17 Jun 2018, 5:00 am
ವಿಜಯಪುರ : ತೀವ್ರ ಕುತೂಹಲ ಕೆರಳಿಸಿದ್ದ ಭೀಮಾತೀರದ ಹಂತಕ ಧರ್ಮರಾಜ ಚಡಚಣ ಸಹೋದರ ಗಂಗಾಧರ ಚಡಚಣ ನಿಗೂಢ ನಾಪತ್ತೆ ಪ್ರಕರಣ ಕೊಲೆ ಎನ್ನುವುದು ಖಚಿತವಾಗಿದ್ದು, ಇದರಲ್ಲಿ ಭಾಗಿಯಾದ ಆರೋಪದ ಮೇಲೆ ಚಡಚಣ ಹಿಂದಿನ ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಮೂವರು ಪೇದೆಗಳನ್ನು ಬಂಧಿಸಲಾಗಿದೆ. ಇದರಿಂದ ಧರ್ಮರಾಜ ಚಡಚಣ ಎನ್‌ಕೌಂಟರ್‌ ಪ್ರಕರಣಕ್ಕೂ ಹೊಸ ಸ್ವರೂಪ ಬಂದಿದೆ.
Vijaya Karnataka Web fear murder case si arrest
ಚಡಚಣ ಮರ್ಡರ್‌ ಪ್ರಕರಣ: ಎಸ್‌ಐ ಅರೆಸ್ಟ್‌


'ಗಂಗಾಧರ ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಹನಮಂತ ಪೂಜಾರಿ ಹಾಗೂ ಸಿದ್ಧಗೊಂಡ ತಿಕ್ಕುಂಡಿ ಅವರ ಜತೆಗೆ ಪಿಎಸ್‌ಐ ಗೋಪಾಲ ಹಳ್ಳೂರ, ಚಡಚಣ ಠಾಣೆ ಪೇದೆಗಳಾದ ಸಿದ್ಧಾರೂಢ ರೂಗಿ, ಚಂದ್ರಶೇಖರ ಜಾಧವ ಹಾಗೂ ಗೆದ್ದಪ್ಪ ನಾಯ್ಕೋಡಿ ಅವರ ವಿರುದ್ಧವೂ ಸಾಕ್ಷಿಗಳು ಸಿಕ್ಕಿದ್ದು, ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಅಷ್ಟೇ ಅಲ್ಲದೇ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆÜ' ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಶನಿವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

'ಗಂಗಾಧರ ಚಡಚಣನದು ನಾಪತ್ತೆ ಪ್ರಕರಣವಲ್ಲ. ಅದು ಕೊಲೆ ಪ್ರಕರಣವಾಗಿದೆ. ತನ್ನ ಮಗನನ್ನು ಕೊಲೆ ಮಾಡಿಸಲಾಗಿದೆ ಎಂದು ಆತನ ತಾಯಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹನಮಂತ ಪೂಜಾರಿ ಹಾಗೂ ಸಿದ್ಧಗೊಂಡ ತಿಕ್ಕುಂಡಿ ಅವರನ್ನು ಬಂಧಿಸಲಾಗಿತ್ತು. ಗಂಗಾಧರನನ್ನು ಕೊಲೆಗೈದು ದೇಹವನ್ನು ಭೀಮಾನದಿಗೆ ಎಸೆಯಲಾಗಿದೆ ಎಂದು ಅವರು ಒಪ್ಪಿಕೊಂಡಿದ್ದರು. ತನಿಖೆ ಮುಂದುವರಿಸಿದಂತೆ ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಮೂವರು ಪೇದೆಗಳ ವಿರುದ್ಧ ಸಾಕ್ಷಿಗಳು ಸಿಕ್ಕಿದ್ದು, ಅವರನ್ನೂ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಕೊಲೆಗೆ ಪಿಎಸ್‌ಐ ಸೇರಿ ನಾಲ್ವರು ಕುಮ್ಮಕ್ಕು ನೀಡಿದ್ದರು ಎನ್ನುವ ಆರೋಪದ ಮೇಲೆ ಬಂಧಿಸಲಾಗಿದೆ. ನಾಲ್ವರ ವಿರುದ್ಧವೂ ಅಪರಾಧಿಕ ಸಂಚು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಧರ್ಮರಾಜ ಚಡಚಣ ಎನ್‌ಕೌಂಟರ್‌ ಮಾಡಿದ ದಿನವೇ ಅಂದರೆ 2017ರ ಅಕ್ಟೋಬರ್‌ 30ರಂದೇ ಆತನ ಸಹೋದರ ಗಂಗಾಧರನನ್ನೂ ಕೊಲೆ ಮಾಡಲಾಗಿದೆ. ಆದರೆ ಆತನ ಮೃತದೇಹ ಪತ್ತೆಯಾಗಿಲ್ಲ. ಬಂಧಿತ ಇಬ್ಬರು ಆರೋಪಿಗಳು ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾರೆ. ಗಂಗಾಧರ ಕೊಲೆ ಹೇಗೆ ಆಗಿದೆ. ದೇಹವನ್ನು ಎಲ್ಲಿ ಬಿಸಲಾಡಲಾಗಿದೆ ಎನ್ನುವ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದರೂ ಈವರೆಗೂ ಖಚಿತ ಮಾಹಿತಿ ದೊರೆತಿಲ್ಲ. ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಿರುವುದರಿಂದ ಅವರೇ ತನಿಖೆ ಮುಂದುವರೆಸಲಿದ್ದಾರೆ. ಡಿವೈಎಸ್ಪಿ ಜನಾರ್ಧನ ನೇತೃತ್ವದ ಸಿಐಡಿ ತಂಡ ಈಗಾಗಲೇ ಜಿಲ್ಲೆಗಾಗಮಿಸಿದ್ದು, ತನಿಖೆಯನ್ನು ಕೈಗೊಳ್ಳಲಿದೆ. ಬಂಧಿತ ಪಿಎಸ್‌ಐ ಹಾಗೂ ಮೂವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಜೂನ್‌ 28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದರು.

ಭೈರಗೊಂಡ ಪತ್ತೆಗೆ ಕ್ರಮ : ಗಂಗಾಧರ ಕೊಲೆ ಪ್ರಕರಣದಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಪ್ರಮುಖ ಆರೋಪಿಯಾಗಿದ್ದು , ಆತನ ಪತ್ತೆಗೆ 2 ತಂಡಗಳು ಕಾರ್ಯಾಚರಣೆ ನಡೆಸಿವೆ ಎಂದು ಎಸ್ಪಿ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ