ಆ್ಯಪ್ನಗರ

ಸ್ವ ಜಿಲ್ಲೆಯಲ್ಲಿ ಹದಗೆಟ್ಟ ‘ಆರೋಗ್ಯ’ ‘ಗೃಹ’

ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟೀಲರಿಗೆ ಹೊಟ್ಟೆ ಉರಿ ಜಾಸ್ತಿ, ಹೀಗಾಗಿ ಅವರು ಏನೇನೋ ಮಾತನಾಡಿದ್ದಾರೆ. ಅವರ ಮತಕ್ಷೇತ್ರದಲ್ಲಿ ಬಳೂತಿ ಜಾಕ್‌ವೆಲ್‌ ಸುಟ್ಟಾಗ ಅವರ ಬದ್ಧತೆ ಎಲ್ಲಿತ್ತು ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಪ್ರಶ್ನಿಸಿದ್ದಾರೆ.

Vijaya Karnataka 5 Jun 2019, 7:55 am
ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟೀಲರಿಗೆ ಹೊಟ್ಟೆ ಉರಿ ಜಾಸ್ತಿ, ಹೀಗಾಗಿ ಅವರು ಏನೇನೋ ಮಾತನಾಡಿದ್ದಾರೆ. ಅವರ ಮತಕ್ಷೇತ್ರದಲ್ಲಿ ಬಳೂತಿ ಜಾಕ್‌ವೆಲ್‌ ಸುಟ್ಟಾಗ ಅವರ ಬದ್ಧತೆ ಎಲ್ಲಿತ್ತು ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಪ್ರಶ್ನಿಸಿದ್ದಾರೆ.
Vijaya Karnataka Web M B Patil


ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಡ್ಯಾಂನಲ್ಲಿ ಹಿಂದಿನ ವರ್ಷಗಳಲ್ಲಿ ನೀರು ಖಾಲಿಯಾಗಲು ನಾನೇ ಕಾರಣ ಎಂಬಂತೆ ಮಾತನಾಡಿರುವುದು ಸರಿಯಲ್ಲ. ಬೆಳೆಗಳಿಗೆ ನೀರು ಬಿಡುವ ನಿರ್ಧಾರವನ್ನು ನೀರಾವರಿ ಸಲಹಾ ಸಮಿತಿ ನಿರ್ಧರಿಸುತ್ತದೆ. ಡ್ಯಾಂನಿಂದ ನೀರು ಬಿಟ್ಟಿದ್ದರಲ್ಲಿ ನನ್ನದೇನೂ ಪಾತ್ರವಿಲ್ಲ. ಇದು ಗೊತ್ತಿದ್ದೂ ಸ್ವಪಕ್ಷೀಯ ಸಚಿವರಾದ ಶಿವಾನಂದ ಪಾಟೀಲರು ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಜಾಕ್‌ವೆಲ್‌ ಸುಟ್ಟಾಗ ಭೇಟಿಯಾದ ರೈತರ ವಿರುದ್ಧವೇ ಸಿಟ್ಟಾಗಿದ್ದ ಶಿವಾನಂದ ಪಾಟೀಲರು ಈಗ ಯಾವ ಬದ್ಧತೆಯಿಂದ ನನ್ನ ಬಗ್ಗೆ ಮಾತನಾಡಿದ್ದಾರೆಂಬುದು ಗೊತ್ತಿಲ್ಲ, ಅವರ ಹೇಳಿಕೆ ಅಸೂಯೆಪಡುವಂಥದ್ದು ಎಂದು ಎಂ.ಬಿ.ಪಾಟೀಲ ಕಿಡಿಕಾರಿದರು.

ನಾನು ಕೈಗೊಂಡ ನೀರಾವರಿ ಯೋಜನೆ, ಕೆರೆ ನೀರು ತುಂಬುವ ಯೋಜನೆಯ ಫಲವಾಗಿ ಅವರ ಮತಕ್ಷೇತ್ರದಲ್ಲಿ ಕೆರೆಗಳು ತುಂಬಿವೆ. ನಾನು ಮಾಡಿದ ಕಾರ್ಯವನ್ನು ಪ್ರೋತ್ಸಾಹಿಸುವುದನ್ನು ಬಿಟ್ಟು ಅರ್ಥವಿಲ್ಲದ ಹೇಳಿಕೆ ನೀಡಿದ್ದಾರೆ. ಶಿವಾನಂದ ಪಾಟೀಲ ಒಳ್ಳೆಯ ಕಾರ್ಯ ಮಾಡಿದಾಗ ನಾನು ಮುಕ್ತಕಂಠದಿಂದ ಹೊಗಳಿದ್ದೇನೆ ಎಂದ ಎಂ.ಬಿ.ಪಾಟೀಲ, ಅವರ ವರ್ತನೆಯಿಂದ ಬೇಜಾರಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಅವರ ಗಮನಕ್ಕೂ ತಂದಿರುವುದಾಗಿ ತಿಳಿಸಿದರು.

ಎಂಬಿ ಬಗ್ಗೆ ಮಾತಾಡಿಲ್ಲ: ಶಿವಾನಂದ
ಎಂ.ಬಿ.ಪಾಟೀಲರ ವಿರುದ್ಧ ನಾನು ಮಾತನಾಡಿಯೇ ಇಲ್ಲ. ಒಂದು ವೇಳೆ ಅವರ ಬಗ್ಗೆ ಮಾತನಾಡಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಎಂ.ಬಿ.ಪಾಟೀಲರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಆಲಮಟ್ಟಿ ಡ್ಯಾಂ ಖಾಲಿ ಆಗಿತ್ತು. ಈ ಬಾರಿ ಆಗುವುದು ಬೇಡ ಎಂದಷ್ಟೇ ಉಲ್ಲೇಖಿಸಿದ್ದೇನೆ. ಎಂ.ಬಿ.ಪಾಟೀಲರೇ ಡ್ಯಾಂ ಖಾಲಿ ಮಾಡಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲಎಂದು ಸ್ಪಷ್ಪಪಡಿಸಿದರು.

ನಾನು ಎಂ.ಬಿ.ಪಾಟೀಲರ ವಿರುದ್ಧ ಹೇಳಿಕೆ ನೀಡಿಲ್ಲವೆಂದ ಮೇಲೆ ಕೆಪಿಸಿಸಿ ಅಧ್ಯಕ್ಷ ರ ಗಮನಕ್ಕೆ ತರಲು ಯಾವ ವಿಷಯವೂ ಇಲ್ಲ. ಈ ವರ್ಷ ಡ್ಯಾಂನಲ್ಲಿ ನೀರು ಉಳಿಸಲಾಗಿದೆ, ತೆಲಂಗಾಣಕ್ಕೆ ನೀರು ಹರಿಸಿದರೂ ಡ್ಯಾಂನಲ್ಲಿ ನೀರಿನ ಸಂಗ್ರಹವಿದೆ. ಬರ ಪರಿಸ್ಥಿತಿಯಲ್ಲಿ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂಬರ್ಥದಲ್ಲಿ ನಾನು ಮಾತನಾಡಿದ್ದೇನೆ ಹೊರತು ಎಂ.ಬಿ.ಪಾಟೀಲರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ ಎಂದರು.

ಕೆಲ ದಿನಗಳ ಹಿಂದೆ ಶಿವಾನಂದ ಪಾಟೀಲ ಆಲಮಟ್ಟಿ ಜಲಾಶಯದ ನೀರಿನ ಬಳಕೆ, ಸಂಗ್ರಹದ ಬಗ್ಗೆ ಮಾತನಾಡಿದಾಗ ಎಂ.ಬಿ.ಪಾಟೀಲರ ವಿರುದ್ಧ ಮಾತನಾಡಿದ್ದಾರೆಂದು ಸುದ್ದಿಯಾಗಿತ್ತು. ಈ ಬಗ್ಗೆ ಎಂ.ಬಿ.ಪಾಟೀಲ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಶಿವಾನಂದ ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ