ಆ್ಯಪ್ನಗರ

ಡೇರಾದ ಅಧಿಪತ್ಯ ಯಾರಿಗೆ

ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ಗೆ ಸಿಬಿಐ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿರುವುದರಿಂದ ಡೇರಾದ ಮುಂದಿನ ಮುಖ್ಯಸ್ಥರು ಯಾರು ಎಂಬ ಪ್ರಶ್ನೆ ಎದ್ದಿದೆ.

Vijaya Karnataka Web 29 Aug 2017, 10:32 am

ಚಂಡೀಗಢ /ಹೊಸದಿಲ್ಲಿ : ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ಗೆ ಸಿಬಿಐ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿರುವುದರಿಂದ ಡೇರಾದ ಮುಂದಿನ ಮುಖ್ಯಸ್ಥರು ಯಾರು ಎಂಬ ಪ್ರಶ್ನೆ ಎದ್ದಿದೆ.

Vijaya Karnataka Web dera sacha sauda chief issue
ಡೇರಾದ ಅಧಿಪತ್ಯ ಯಾರಿಗೆ


ರಾಜಸ್ಥಾನದ ಶ್ರೀ ಗಂಗಾನಗರ್‌ ಜಿಲ್ಲೆಯ ಮಘರ್‌ ಸಿಂಗ್‌- ನಸೀಬ್‌ ಕೌರ್‌ ದಂಪತಿಯ ಪುತ್ರ ಗುರ್ಮೀತ್‌, ಜಾಟ್‌ ಸಿಖ್‌ ಪಂಥದವರು. ಗುರ್ಮೀತ್‌ಗೆ ಮೂರು ಮಕ್ಕಳು. ಇಬ್ಬರು ಹೆಣ್ಣುಮಕ್ಕಳು ಚರಣ್‌ಪ್ರೀತ್‌ ಇನ್ಸಾನ್‌ ಮತ್ತು ಅಮರ್‌ಪ್ರೀತ್‌ ಇನ್ಸಾನ್‌ ಮದುವೆಯಾಗಿ ತಮ್ಮ ಗಂಡಂದಿರೊಂದಿಗೆ ನೆಲೆಸಿದ್ದಾರೆ. ಮಗ, 35 ವರ್ಷದ ಜಸ್ಮೀತ್‌ ಇನ್ಸಾನ್‌ ಕಾಂಗ್ರೆಸ್‌ನ ಮಾಜಿ ಶಾಸಕ ಹರ್ಮಿಂದರ್‌ ಸಿಂಗ್‌ ಜಸ್ಸಿಯವರ ಮಗಳು ಹುಸನ್ಮೀತ್‌ ಕೌರ್‌ಳನ್ನು ಮದುವೆಯಾಗಿದ್ದಾನೆ. ಈತನದೇ ಉದ್ಯಮವಿದೆ. ಡೇರಾದಲ್ಲಿ ಈತನ ಪಾತ್ರವೇನೂ ಇಲ್ಲ. ಹೀಗಾಗಿ ಇವರಲ್ಲಿ ಯಾರೂ ಡೇರಾವನ್ನು ನಿಯಂತ್ರಿಸಲು ಬರುವುದು ಅನುಮಾನ. ಆದರೆ ಗುರ್ಮೀತ್‌ರ ದತ್ತು ಪುತ್ರಿ ಎಂದು ಹೇಳಿಕೊಂಡಿರುವ, ಅವರ ಸಿನಿಮಾಗಳಲ್ಲಿ ಅವರಿಗೆ ಜೋಡಿಯಾಗಿ ನಟಿಸಿದ ಹನಿಪ್ರೀತ್‌ ಕೌರ್‌ಗೆ ಡೇರಾದ ಮೇಲೆ ಸಾಕಷ್ಟು ಹಿಡಿತವಿದೆ.

ರಾಮ್‌ ರಹೀಂ ಸಿಂಗ್‌ಗೆ ಕೋಟ್ಯಂತರ ಅಭಿಮಾನಿಗಳಿದ್ದು, ಡೇರಾ ಸಚ್ಚಾ ಸೌದಾ ಪಂಥದ ಉತ್ತರಾಧಿಕಾರಿಯಾಗಲು ಇಬ್ಬರು ಮಹಿಳೆಯರ ಮಧ್ಯೆ ಪೈಪೋಟಿ ಶುರುವಾಗಿದೆ. ಡೇರಾದ ಅಧ್ಯಕ್ಷೆ ಎಂದು ಹೇಳಿಕೊಂಡಿರುವ ವಿಪಾಸನಾ ಇನ್ಸಾನ್‌ ಮತ್ತು ರಾಮ್‌ ರಹೀಂ ಅವರ ಮುದ್ದಿನ ದತ್ತು ಪುತ್ರಿ ಹನಿಪ್ರೀತ್‌ ಇನ್ಸಾನ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇವರಿಬ್ಬರೂ ತಮ್ಮನ್ನು 'ಗುರು ಬ್ರಹ್ಮಚಾರಿ' ಎಂದು ಕರೆದುಕೊಂಡಿರುವುದು ವಿಶೇಷ. ಆದರೆ ಸರಕಾರವೇ ಡೇರಾಗೆ ಆಡಳಿತಾಧಿಕಾರಿಯೊಬ್ಬರನ್ನು ನೇಮಿಸುವ ನಿರೀಕ್ಷೆಯೂ ಇದೆ.

35 ವರ್ಷದ ವಿಪಾಸನಾ ಕಾಲೇಜು ದಿನಗಳಿಂದಲೇ ಡೇರಾದ ಸಮಾಜ ಸೇವಾ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದು, ಸದ್ಯ ಆಡಳಿತಾತ್ಮಕ ಜವಾಬ್ದಾರಿ ನಿರ್ವಹಿಸುತ್ತಿರುವ ಇವರೇ ಡೇರಾದ ಮುಖ್ಯಸ್ಥರಾಗುವ ಸಾಧ್ಯತೆ ಹೆಚ್ಚಾಗಿದೆ.

ರೇಸ್‌ನಲ್ಲಿ ಹನಿಪ್ರೀತ್‌

ರಾಮ್‌ ರಹೀಂ ದತ್ತುಪುತ್ರಿ 30 ವರ್ಷದ ಹನಿಪ್ರೀತ್‌ ಇನ್ಸಾನ್‌ ಪ್ರಭಾವ ಕೂಡ ಡೇರಾದಲ್ಲಿ ಢಾಳಾಗಿ ಕಾಣಿಸುತ್ತದೆ. ಸೋಷಿಯಲ್‌ ಮಿಡಿಯಾಗಳಲ್ಲಿ ಇವರು ತಮ್ಮನ್ನು 'ಅಪ್ಪನ ಅಭಿಮಾನ ದೇವತೆ', 'ಲೋಕೋಪಕಾರಿ', 'ನಿರ್ದೇಶಕಿ', 'ಸಂಪಾದಕಿ', 'ನಟಿ' ಎಂದೆಲ್ಲಾ ಬಿಂಬಿಸಿಕೊಂಡಿದ್ದಾರೆ. ಬಾಬಾನ ಖಾಸಗಿ ವಿಚಾರಗಳು, ಕಾರ್ಯಕ್ರಮಗಳು, ಸಿನಿಮಾ, ಆಲ್ಬಂ ಇನ್ನಿತರೆ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದುದು ಇದೇ ಹನಿಪ್ರೀತ್‌. ಉತ್ತರಾಧಿಕಾರಿ ರೇಸ್‌ನಲ್ಲಿ ಇವರೂ ಇದ್ದಾರೆ.

ವೆಬ್‌ಸೈಟ್‌

ಹನಿಪ್ರೀತ್‌ ಅವರು www.HoneypreetInsan.me ಎಂಬ ವೆಬ್‌ಸೈಟ್‌ ರಚಿಸಿಕೊಂಡಿದ್ದು ಅದರಲ್ಲಿ 'ಅದ್ಭುತ ತಂದೆಯ ಮಹಾನ್‌ ಮಗಳು' ಎಂದು ಹೇಳಿಕೊಂಡಿದ್ದಾರೆ. ಇವರ ಟ್ವಿಟರ್‌ ಖಾತೆಗೆ 10 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. 'ಎಂಎಸ್‌ಜಿ- ಮೆಸೆಂಜರ್‌ ಆಫ್‌ ಗಾಡ್‌', 'ಎಂಎಸ್‌ಜಿ 2-ದಿ ಮೆಸೆಂಜರ್‌' ಮತ್ತು 'ಎಂಎಸ್‌ಜಿ-ದಿ ವಾರಿಯರ್‌ ಲಯನ್‌ ಹಾರ್ಟ್‌' ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ