ಆ್ಯಪ್ನಗರ

ಗುಜರಾತ್‌ ಚುನಾವಣೆ ಮತ್ತು ವಿವಾದಗಳು

2017ರ ಗುಜರಾತ್‌ ಚುನಾವಣೆ ಹಲವಾರು ವಿವಾದಗಳಿಂದ ತುಂಬಿತ್ತು ಅಂಥ ಕೆಲವು ವಿವಾದಗಳು ಇಲ್ಲಿವೆ: 1...

Vijaya Karnataka Web 15 Dec 2017, 11:16 am

2017ರ ಗುಜರಾತ್‌ ಚುನಾವಣೆ ಹಲವಾರು ವಿವಾದಗಳಿಂದ ತುಂಬಿತ್ತು. ಅಂಥ ಕೆಲವು ವಿವಾದಗಳು ಇಲ್ಲಿವೆ:

1. ಚುನಾವಣೆ ಘೋಷಣೆ ವಿಳಂಬ: ಹಿಮಾಚಲ ಪ್ರದೇಶದ ಚುನಾವಣೆಯನ್ನು ಘೋಷಿಸಿದ ಚುನಾವಣಾ ಆಯೋಗ ಗುಜರಾತ್‌ ಚುನಾವಣೆ ದಿನಾಂಕಗಳನ್ನು ಘೋಷಿಸುವಲ್ಲಿ ವಿಳಂಬಿಸಿತು. ಇದು ಪ್ರತಿಪಕ್ಷಗಳಿಂದ ಟೀಕೆಗೊಳಗಾಯಿತು. ಆಯೋಗ ಕೇಂದ್ರ ಸರಕಾರದ ಒತ್ತಡಕ್ಕೊಳಗಾಗಿದೆ ಎಂಬ ಆರೋಪ ಎದುರಿಸಬೇಕಾಯಿತು.

2. ಹಾರ್ದಿಕ್‌ ಪಟೇಲ್‌ ಸೆಕ್ಸ್‌ ಸಿಡಿ: ಪಾಟೀದಾರ್‌ ಸಮುದಾಯದ ಯುವ ಮುಖಂಡ ಹಾರ್ದಿಕ್‌ ಪಟೇಲ್‌ ಹೋಟೆಲ್‌ ರೂಮಿನಲ್ಲಿ ಮಹಿಳೆಯೊಂದಿಗೆ ಸರಸವಾಡುತ್ತಿರುವ ದೃಶ್ಯವಿದ್ದ ಸಿಡಿಗಳನ್ನು ಒಂದು ಟಿವಿ ಚಾನೆಲ್‌ ಪ್ರಸಾರ ಮಾಡಿತು. 'ಬಿಜೆಪಿ ತನ್ನ ಮೇಲೆ ಗೂಢಚಾರಿಕೆ ನಡೆಸುತ್ತಿದೆ. ನನ್ನ ಚಾರಿತ್ರ್ಯಹರಣಕ್ಕೆ ಯತ್ನಿಸುತ್ತಿದೆ' ಎಂದು ಹಾರ್ದಿಕ್‌ ಆರೋಪಿಸಿದರು.

3. ರಾಹುಲ್‌ ಗಾಂಧಿಯ ಧರ್ಮ: ಚುನಾವಣೆ ಪ್ರಚಾರದ ವೇಳೆ ಗುಜರಾತ್‌ನ ಹಲವು ದೇವಾಲಯಗಳಿಗೆ ರಾಹುಲ್‌ ಗಾಂಧಿ ಭೇಟಿ ನೀಡಿದರು. ಸೋಮನಾಥ ದೇವಾಲಯದಲ್ಲಿ ಅವರ ಭೇಟಿ ವೇಳೆ ರಾಹುಲ್‌ ಹೆಸರನ್ನು 'ಹಿಂದೂಯೇತರ' ವಿಭಾಗದಲ್ಲಿ ದಾಖಲಿಸಿದ್ದು ವಿವಾದ ಸೃಷ್ಟಿಸಿತು. ರಾಹುಲ್‌ ಹಿಂದೂ ಎಂದು ಸ್ಥಾಪಿಸಲು ಅವರು ಜನಿವಾರ ಧರಿಸಿದ ಫೋಟೊವನ್ನು ತೋರಿಸಿದ ಚೋದ್ಯವೂ ನಡೆಯಿತು.

4. ಮೊದಲ ಹಂತದ ಮತದಾನಕ್ಕೆ ಎರಡು ದಿನ ಉಳಿದಿದ್ದಾಗ ಕಾಂಗ್ರೆಸ್‌ ಮುಖಂಡ ಮಣಿಶಂಕರ ಅಯ್ಯರ್‌ ಅವರು ಪ್ರಧಾನಿ ಮೋದಿಯನ್ನು 'ನೀಚ ಮನುಷ್ಯ' ಎಂದು ಕರೆದರು. ಇದು ಮೋದಿ ಜಾತಿಯನ್ನು ಹೀಗಳೆದದ್ದು ಎಂದು ವಿವಾದವಾಯಿತು. ಅಯ್ಯರ್‌ರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಮೋದಿ ಇದನ್ನು ದಲಿತವರ್ಗದ ಸ್ವಾಭಿಮಾನದ ಜೊತೆ ತಳುಕು ಹಾಕಿದರು.

5. ಕಾಂಗ್ರೆಸ್‌ ಮುಖಂಡ ಅಹ್ಮದ್‌ ಪಟೇಲ್‌ರನ್ನು ಗುಜರಾತ್‌ ಮುಖ್ಯಮಂತ್ರಿಯಾಗಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಮೋದಿ ರಾರ‍ಯಲಿಯೊಂದರಲ್ಲಿ ಹೇಳಿದರು. ಚುನಾವಣೆಯಲ್ಲಿ ಪಾಕ್‌ ಮೂಗು ತೂರಿಸಿದ್ದು, ಸಂಚಿನಲ್ಲಿ ಅಯ್ಯರ್‌, ಅಹ್ಮದ್‌ ಪಟೇಲ್‌, ಮನಮೋಹನ್‌ ಸಿಂಗ್‌ ಭಾಗಿಯಾಗಿದ್ದಾರೆ ಎಂದರು. ಸಿಂಗ್‌ ಇದರಿಂದ ನೊಂದುಕೊಂಡರು.

6. ವಿಕಾಸ್‌ ಗಂಡೊ ತಾಯೊ ಚೆ: 'ವಿಕಾಸಕ್ಕೆ ಹುಚ್ಚು ಹಿಡಿದಿದೆ' ಎಂದು ವಿಡಂಬನೆ ಮಾಡುವ ವಿಡಿಯೊ ಹಾಗೂ ಆಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯಗೊಂಡವು. ಇದರಿಂದ ಬಿಜೆಪಿ ಇರುಸುಮುರುಸಾಯಿತು. ಸಿಎಂ ವಿಜಯ್‌ ರೂಪಾನಿ ಇದನ್ನು ಟೀಕಿಸಿದ್ದೂ ಆಯ್ತು.

7. ಜಿಎಸ್‌ಟಿಯ ದರಗಳನ್ನು ಮರುಪರಿಷ್ಕರಿಸಿದ ಕ್ರಮ ಹಾಗೂ ಜಿಎಸ್‌ಟಿ ಪದ್ಧತಿಯನ್ನು ಪರಿಷ್ಕರಿಸಬೇಕು ಎಂದು ರೆವಿನ್ಯೂ ಸೆಕ್ರೆಟರಿ ಹೇಳಿಕೆಯನ್ನು ರಾಹುಲ್‌ ಗಾಂಧಿ 'ಇದು ಗಬ್ಬರ್‌ ಸಿಂಗ್‌ ಟ್ಯಾಕ್ಸಿ' ಎಂದು ಲೇವಡಿ ಮಾಡಿದರು. ಮೋದಿ ಇದಕ್ಕೆ 'ದೇಶವನ್ನು ಲೂಟಿ ಮಾಡಿದವರು ಡಕಾಯಿತರ ಬಗ್ಗೆ ಯೋಚಿಸುತ್ತಾರೆ' ಎಂದು ಪ್ರತಿಕ್ರಿಯಿಸಿದರು.

8. ಕಾಂಗ್ರೆಸ್‌ನ ಸಾಫ್ಟ್‌ ಹಿಂದುತ್ವ: ಗುಜರಾತ್‌ನ ಎಲ್ಲೆಡೆ ರಾಹುಲ್‌ ಗಾಂಧಿ ದೇವಾಲಯಗಳಿಗೆ ಭೇಟಿ ನೀಡಿ, ಕಾಂಗ್ರೆಸ್‌ ಹಿಂದುತ್ವ ವಿರೋಧಿಯಲ್ಲ ಎಂಬ ಸಂದೇಶ ರವಾನಿಸಲು ಯತ್ನಿಸಿದರು. ಒಂದು ದೇವಾಲಯದಲ್ಲಿ ರಾಹುಲ್‌ ನಮಾಜ್‌ ಮಾಡುವ ಭಂಗಿಯಲ್ಲಿ ಕುಳಿತಿದ್ದನ್ನು ಯೋಗಿ ಆದಿತ್ಯನಾಥ್‌ ಲೇವಡಿ ಮಾಡಿದರು.

9. ಚಾಯ್‌ವಾಲಾ ಮೆಮೆ: ಯುವ ಕಾಂಗ್ರೆಸ್‌ ಹರಿಬಿಟ್ಟ ಒಂದು ಮೆಮೆಯಲ್ಲಿ, ಮೋದಿಯವರನ್ನು ತೆರೆಸಾ ಮೇ 'ನೀವು ಚಾಯ್‌ ತನ್ನಿ' ಎಂದು ಹೇಳುತ್ತಿದ್ದಂತೆ ಚಿತ್ರಿಸಲಾಗಿತ್ತು. ಇದಕ್ಕೆ ಉತ್ತರವಾಗಿ ಮೋದಿ 'ನಾನು ಚಾಯ್‌ವಾಲಾ, ನಾನು ಟೀ ಮಾತ್ರ ಮಾರುತ್ತೇನೆ; ಆದರೆ ದೇಶವನ್ನಲ್ಲ' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ