ಆ್ಯಪ್ನಗರ

ಬದುಕನ್ನು ಅಂಗಳದಂತೆ ಸಾರಿಸಿ, ಚೆಂದದ ರಂಗೋಲಿಯಂತೆ ಅಲಂಕರಿಸುವ ಜಾಣ್ಮೆ ನನ್ನಮ್ಮನದು!

ಬೇಸಿಗೆ ಬಂತೆಂದರೆ ಮನೆಯ ಹಿತ್ತಲಿನ ಮಲ್ಲಿಗೆಗೂ ನನ್ನಷ್ಟೆ ಸಂಭ್ರಮ ಇರುತಿತ್ತೇನೋ. ನಿನ್ನಂಥವಳ ನೇಯ್ಗೆಗೆ ಸಿಕ್ಕಿ ಮೋಹಕ ಮಾಲೆಯಾಗಿ ಕಂಗೊಳಿಸುವ ಭಾಗ್ಯ ಅದಕ್ಕೆ. ಅದೆಷ್ಟು ಚೆಂದದ ನೇಯ್ಗೆ ನಿನ್ನದು. ಒಂದೊಂದೇ ನೋವುಗಳ ನೇಯ್ದು ಬದುಕು ಕಟ್ಟಿದಂತೆ. ಬೀದಿಯಲ್ಲೆಲ್ಲಾ ನಿನ್ನ ಮಲ್ಲಿಗೆಯದ್ದೆ ಘಮ ಘಮ...

Vijaya Karnataka Web 10 May 2020, 8:58 am
- ಇಷ್ಟಕಾಮ್ಯಾ ಸುಗುಣ, ಮಳವಳ್ಳಿ
Vijaya Karnataka Web Ishta Kamya

ಅಮ್ಮಾ..
ನನ್ನ ಜೊತೆ ಇಂದು ನೀನಿಲ್ಲ...
ಈ ಹೊತ್ತಿನಲ್ಲಿ ನಿನ್ನ ಜೊತೆ ನಿನ್ನ ಬಗ್ಗೆಯೇ ಎರಡು ಮಾತಾಡಬೇಕೆನಿಸಿದೆ. ಅದಕ್ಕಾಗಿ ಜಗವೆಲ್ಲ ನಿನ್ನನ್ನು ಹೊಗಳಿದ ಅದೇ ಸಾಲುಗಳನ್ನು ಇನ್ನಷ್ಟು ಸವೆಸುವುದಿಲ್ಲ. ಅದರಿಂದಾಚೆಗೂ ನಿನ್ನಲ್ಲಿ ನಾ ಕಂಡ, ನನ್ನ ಅಪ್ರಬುದ್ಧ ವಯಸ್ಸಿನಲ್ಲಿ ನಿನ್ನೊಂದಿಗೆ ನಾನಿದ್ದ ಒಂದಷ್ಟು ಬೆರಗಿನ ನೆನಪುಗಳನ್ನು ಈಗಿನ ಪ್ರಬುದ್ಧ ವಯಸ್ಸಿನೊಂದಿಗೆ ಹರವಿಕೊಂಡು ಕುಳಿತು ಬಿಟ್ಟಿದ್ದೇನೆ.

ಬಹುಶಃ ಆಗ ನಮ್ಮ ಬಡತನಕ್ಕೂ ನಿನ್ನ ಮೇಲೆ ಹೊಟ್ಟೆಕಿಚ್ಚಿತ್ತೇನೋ ಎಂದೆನ್ನಿಸುತ್ತಿದೆ. ಬಡತನ ಒಡ್ಡಿದ ಸವಾಲುಗಳನ್ನು ನಮ್ಮ ಅರಿವಿಗೆ ಬರದಂತೆಯೇ ಸ್ವೀಕರಿಸಿ, ಇದ್ದುದ್ದರಲ್ಲೇ ಸರಿತೂಗಿಸಿ, ಯಾರಿಗೇನೂ ಕಡಿಮೆಯಿಲ್ಲದಂತೆ ನಮ್ಮನ್ನು ಬೆಳೆಸಿ, ಬದುಕನ್ನು ಅಂಗಳದಂತೆ ಸಾರಿಸಿ, ಚೆಂದದ ರಂಗೋಲಿಯಂತೆ ಅಲಂಕರಿಸುತಿದ್ದ ನಿನ್ನ ಆ ಜಾಣ್ಮೆಯ ನೆನೆದರೆ ಈಗಲೂ ಒಂದರೆಕ್ಷಣ ನನ್ನನ್ನೇ ಮರೆತುಬಿಡುತ್ತೇನೆ.

ಆರೋಗ್ಯ ಏರುಪೇರಾದಾಗ ವೈದ್ಯೆಯಾಗಿ, ತಪ್ಪು ಮಾಡಿದಾಗ ನ್ಯಾಯಧೀಶೆಯಾಗಿ, ಅಜ್ಞಾನ ಕಂಡಾಗ ಶಿಕ್ಷಕಿಯಾಗಿ, ಭಯಗೊಂಡಾಗ ಆರಕ್ಷಕಳಾಗಿ ನಮ್ಮನ್ನು ತಿದ್ದಿ ತೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ತಲೆ ಎತ್ತಿ ನಿಲ್ಲುವಂತೆ ಕೆತ್ತಿದ ಜಗದ ಅತ್ಯದ್ಭುತ ಶಿಲ್ಪಿ ನೀನು!!

ಅಮ್ಮನಾದಗಲೇ ಬದುಕಿನಾಸೆ ಇನ್ನಷ್ಟು ದಟ್ಟವಾಗಿದ್ದು!

ನನ್ನನ್ನು ಬೆರುಗುಗೊಳಿಸುವ ಅತಿದೊಡ್ಡ ವಿಷಯವೆಂದರೆ, ರೇಡಿಯೋ ಮಾತ್ರವೇ ಇದ್ದ ಆ ಕಾಲದಲ್ಲಿ ಪ್ರತಿಯೊಂದು ಹಾಡು, ಆ ಚಿತ್ರದ ಹೆಸರು, ಗಾಯಕ ಗಾಯಕಿಯರ ಹೆಸರನ್ನು ಗುರುತುಹಿಡಿದು ನನಗೂ ಹೇಳಿಕೊಡುತಿದ್ದುದು. ಅದ್ಹೇಗೆ ಸಾಧ್ಯ? ಅಷ್ಟೊಂದು ಚುರುಕುಮತಿ ಎಲ್ಲಿಂದ ಬಂತು ಅಕ್ಷರವೇ ಕಲಿಯದ ನಿನ್ನಲ್ಲಿ!?

ನಿನ್ನೊಂದಿಗಿನ ಕೋಟಿ ನೆನಪುಗಳಿವೆ ಹೇಳಲು. ಎಣಿಸಲಾಗದಷ್ಟು ಪದಗಳ ಕೊರತೆಯಷ್ಟೇ ಕಾಡುತ್ತಿರುವುದು. ಇರಲಿ ಬಿಡು, ಇರಲೇಬೇಕು. ಹಸಿವಾದಾಗೆಲ್ಲ ಬುತ್ತಿ ತೆಗೆದು ಮೆಲ್ಲಲು. ನಿನ್ನ ಅಗಲಿಕೆಯ ಕಿಚ್ಚಿಗೆ ಮೆಲ್ಲಗೆ ಸವರಿ ತುಸು ಚೇತರಿಕೊಳ್ಳಲು.

ಹೆಣ್ಣು ಬಹುತೇಕ ಸೋತುಹೋಗದೆ ಸಾರ್ಥಕವೆನಿಸಿಕೊಳ್ಳೋ ಪಾತ್ರವೆಂದರೆ ಅದು ಅಮ್ಮನಾಗುವುದು. "ಕೇವಲ ಹೊತ್ತು ಹೆತ್ತರೆ ಮಾತ್ರವೇ ಅಮ್ಮನಾಗಲು ಸಾಧ್ಯವಿಲ್ಲ" ಎಂದು ನೀನು ನಿನ್ನ ಜೀವನ ಶೈಲಿಯಿಂದ ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದೀಯ.

ಅಮ್ಮಂದಿರ ದಿನ: ಇವಳು ನನ್ನಮ್ಮಾಂತ ತೋರಿಸ್ಕೊಳ್ಳಕ್ಕೆ ನಂಗೆ ಹೆಮ್ಮೆ! (ಪುಟ್ಟ ಬರಹಗಳು ಮತ್ತು ಫೋಟೊಗಳ ಗುಚ್ಛ)

ಈಡೇರಿಸಿಕೊಳ್ಳಲಾಗದ ನಿನ್ನ ಅದೆಷ್ಟೋ ಆಸೆಗಳ ರೆಕ್ಕೆಯನ್ನು ನನಗೆ ಕಟ್ಟಿದ್ದೀಯ. ಸಂಸ್ಕಾರವೆಂದರೆ ಕಂಡ ಕಂಡ ದೇವರಿಗೆ ಅಡ್ಡ ಬೀಳುವುದಲ್ಲ, ಮಂತ್ರ ಜಪಿಸುವುದಲ್ಲ ಎಂದು ಎಷ್ಟೋ ಬಾರಿ ತಿಳಿಸಿ ಕೊಟ್ಟಿದ್ದೀಯ. ನಮ್ಮ ಆಚಾರ ವಿಚಾರ ಸಂಸ್ಕೃತಿಯ ಸೊಗಡನ್ನು ಎಳೆಎಳೆಯಾಗಿ ಬಿಡಿಸಿ ಬಡಿಸಿದ್ದೀಯ. ಇವೆಲ್ಲವನ್ನೂ ಮೀರಿದ ಮಾನವೀಯತೆಯ ಶ್ಲೋಕವೊಂದನ್ನು ಎದೆಗಿಳಿಸಿ ಹೋಗಿದ್ದೀಯ.

ನೀನು ಮಾತ್ರವೇ ನನ್ನ ಬಿಟ್ಟು ಹೋಗಿದ್ದೀಯ ಹೊರತು ನಿನ್ನ ಬದುಕಿನ ಶಿಷ್ಟಾಚಾರಗಳಲ್ಲ. ಅದನ್ನೆಲ್ಲಾ ನನ್ನೊಳಗೆ ಸೇರಿಸಿ ನಾನು ನೀನಾಗಿ, ನನ್ನ ಸಂಸಾರವೆಂಬ ಸಾಮ್ರಾಜ್ಯದಲ್ಲಿ ಬದುಕುತ್ತಿದ್ದೇನೆ. ನೀನು ಹಾಕಿಕೊಟ್ಟ ಮಾದರಿ ಚೌಕಟ್ಟಿನೊಳಗೆ. ಆದರೆ ನಾನೂ ಆಮ್ಮಳಾಗಿ ನಿನ್ನ ಆ ಪಾತ್ರಕ್ಕೆ ನ್ಯಾಯ ಒದಗಿಸಿಕೊಡಬಳ್ಳಲೇ ಎಂದು ಯಾವಾಗಲೂ ಯೋಚಿಸುತ್ತಿರುತ್ತೇನೆ.

ಅಮ್ಮ, ಅಮ್ಮಾ ನಂಗೆ ನೀನು ಬೇಕಮ್ಮಾ, ನೀನೇ ನನಗೆಲ್ಲವೂ ಅಮ್ಮ! (ಫೋಟೊಗಳ ಗುಚ್ಛ)

ನಿನ್ನಿಂದ ಕಲಿಯಲು ಇನ್ನಷ್ಟು ಬಾಕಿಯಿತ್ತು. ನೀ ಬಹಳಷ್ಟು ಹೇಳಬೇಕಿತ್ತು. ಆದರೆ ಹೇಳದೆಯೇ ಬಿಟ್ಟು ಹೊರಟು ಹೋದ ನಿನ್ನ ಮೋಸವ ನಾ ಕ್ಷಮಿಸಲಾಗದೇ ಆಗಾಗ ಬಿಕ್ಕಿಕೊಳ್ಳುತ್ತೇನೆ. ಏಕೆಂದರೆ ನನಗೂ ಎಲ್ಲರಂತೆ ಅಮ್ಮನೆಂದರೆ ಜಗತ್ತಿನ ಶ್ರೇಷ್ಠ ಸತ್ಯವೇ!

ಒಂದಷ್ಟು ಕಾಡುವ, ಇನ್ನೊಂದಿಷ್ಟು ನೋಯಿಸುವ, ಮತ್ತೆ ಮತ್ತೆ ನೆನೆಸಿ ಕಚಗುಳಿ ಇಡುವಂತಹ ಪಸೆ ಆರದ ಒಂದಷ್ಟು ಅಮ್ಮನ ನೆಪಪುಗಳಿವೆ. ಅವಕಾಶ ಸಿಕ್ಕಾಗಲೆಲ್ಲಾ ಧಾವಿಸಿ ಅವುಗಳನ್ನೂ ಅಕ್ಷರಕ್ಕಿಳಿಸುವೆ. ಆ ರೂಪದಲ್ಲಾದರೂ ಅಮ್ಮನ ಮಡಿಲಲ್ಲಿ ಮತ್ತೆ ಮತ್ತೆ ಮಗುವಾಗಿ ಮೈಮರೆಯುವೆ!

ಏನೆಂದು ಬಣ್ಣಿಸಲಿ ನಿನ್ನ, ಬರಿ ಅಮ್ಮ ಎಂದರೆ ಅಷ್ಟೇ ಸಾಕೆ? (ಫೋಟೊಗಳ ಗುಚ್ಛ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ