ಆ್ಯಪ್ನಗರ

ವೋಟು ಬೇಕಾದಾಗ ಕೈಯೊಡ್ಡಿ ಬರುತ್ತಿದ್ದವರು ಕೊರೊನಾ ಬಂದಾಗ ಎಲ್ಹೋದ್ರು?

ಹಿಂದೂಗಳ ಸಂಭ್ರಮದ ಹಬ್ಬ, ಹೊಸ ವರ್ಷ ಯುಗಾದಿಗೆ ಇನ್ನೆರಡು ದಿನ ಮಾತ್ರ ಬಾಕಿಯಿದೆ. ಮಾರುಕಟ್ಟೆಯಲ್ಲಿ ಬೇಕಾದ ಸಾಮಗ್ರಿ ಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಇಂಥ ಸಮಯದಲ್ಲಿ ಕೊರೊನಾ ವೈರಸ್ ನಿಯಂತ್ರಣ ಮೀರಿ ಪಸರಿಸಿಬಿಟ್ಟರೆ? ಭಗವಂತ!

ಪ್ರಸಾದ ನಾಯಿಕ | Vijaya Karnataka Web 28 Mar 2020, 6:39 pm
ಚುನಾವಣೆ ಬಂತೆಂದರೆ ಆಟೋದಲ್ಲಿ ಘೋಷಣೆಗಳನ್ನು ಕೂಗಿಸುತ್ತ, ಕಾರ್ಯಕರ್ತರನ್ನು ಮನೆಮನೆಗೆ ಅಟ್ಟುತ್ತ, ಬಡಾವಣೆಗಳಲ್ಲಿ ಸಭೆ ನಡೆಸುತ್ತ ಮತ ಹಾಕಿ, ಮತ ಹಾಕಿ ಎಂದು ಅಂಗಲಾಚುವ ಶಾಸಕರು, ಕಾರ್ಪೊರೇಟರುಗಳು, ಸೋತವರು, ಠೇವಣಿ ಕಳೆದುಕೊಂಡವರು, ಘೋಷಣೆಗಳನ್ನು ಒದರಿದವರು, ಧಿಕ್ಕಾರ ಕೂಗಿದವರು ಎಲ್ಲಿದ್ದಾರೆ?
Vijaya Karnataka Web Politician


ಇಡೀ ಜಗತ್ತನ್ನು ಆವರಿಸಿಕೊಂಡಿರುವ ಕೊರೊನಾ ವೈರಸ್ ಎಂಬ ಮಹಾಮಾರಿ ಇದೀಗ ನಮ್ಮನ್ನೂ ಆವರಿಸಿಕೊಂಡಿದೆ. ಕಂಡಕಂಡಲ್ಲಿ ಜನರನ್ನು ಬಲಿ ತೆಗೆದುಕೊಳ್ಳಲು ಹೊಂಚು ಹಾಕಿ ಕುಳಿತಿದೆ. ಆದರೆ, ಮುಂದಾಗಲಿರುವ ದುರಂತದ ಬಗ್ಗೆ ಕಿಂಚಿತ್ತೂ ಎಚ್ಚರವಿರದ, ಇತರರ ಬಗ್ಗೆ ಕಾಳಜಿಯೂ ಇರದ ಜನರಿಗೆ ತಲುಪಿಸುವ ಬಗೆಯಾದರೂ ಹೇಗೆ?

ಜನತಾ ಕರ್ಫ್ಯೂ ಮಾಡಿ ನಿಮ್ಮಷ್ಟಕ್ಕೆ ನೀವೇ ನಿರ್ಬಂಧ ಹೇರಿಕೊಂಡು ಮನೆಯಲ್ಲಿಯೇ ಇರಿ, ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಮತ್ತಿತರ ಸಿಬ್ಬಂದಿಗೆ ಸಂಜೆ 5ಕ್ಕೆ ಚಪ್ಪಾಳೆ ತಟ್ಟಿರೆಂದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ಕೇಳಿಕೊಂಡರೆ, ಗುಂಪುಗುಂಪಾಗಿ ಸಂಭ್ರಮಿಸಲು ಹೊರಟ ಮತಿಗೇಡಿಗಳಿಗೆ ಏನು ಹೇಳುವುದು?

ಹೋಮ್‌ ಕ್ವಾರಂಟೈನ್‌ನಲ್ಲಿ ಇರುವವರು ಹೊರ ಬಂದರೆ 6 ತಿಂಗಳು ಜೈಲು

ಅನಾಮಧೇಯ ವೈದ್ಯರೊಬ್ಬರು ಸಂಕಟದಿಂದ ಹೇಳಿರುವ ಕೆಲ ಮಾತುಗಳು ನಿಜಕ್ಕೂ ಮಾರ್ಮಿಕವಾಗಿವೆ. ಇದನ್ನು ಹೀಗೆ ಬಿಟ್ಟರೆ, ಅಂದರೆ ನಮಗೆ ನಾವೇ ನಿರ್ಬಂಧ ಹಾಕಿಕೊಳ್ಳದೆ ವೈರಸ್ ಹಬ್ಬಲು ಬಿಟ್ಟರೆ, ಮಳೆಗೆ ಸಿಕ್ಕ ಹುಳಗಳಂತೆ, ಲೈಟಿಗೆ ಸಿಲುಕುವ ಕೀಟಗಳಂತೆ ಮಂದಿಯೂ ಇನ್ನು ಕೆಲವೇ ದಿನಗಳಲ್ಲಿ ಸಾಯುತ್ತಾರೆ ಎಂದು ಎಚ್ಚರಿಸಿದ್ದಾರೆ.

ಕೇಂದ್ರ ಸರಕಾರ, ರಾಜ್ಯ ಸರಕಾರ, ವೈದ್ಯರು, ಪೊಲೀಸರು, ಹಲವಾರು ಖಾಸಗಿ ಸಂಸ್ಥೆಗಳು, ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸಲು ಸಾಕಷ್ಟು ಶ್ರಮಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಹೋಪಾದಿಯಲ್ಲಿ ಜಾಗೃತಿ ಸಂದೇಶಗಳನ್ನು ಬಿತ್ತರಿಸುತ್ತಿವೆ. ಆದರೆ, ಇದಾವುದರ ಕಿಂಚಿತ್ ಪರಿವೆಯಿಲ್ಲದ ಜನ ಬಸ್ಸಿನಲ್ಲಿ ಅಡ್ಡಾಡುತ್ತಿದ್ದಾರೆ, ಸಂತೆಗೆ ಬಂದು ವ್ಯಾಪಾರ ನಡೆಸುತ್ತಿದ್ದಾರೆ.

ಇದು ಹೀಗೆಯೇ ಮುಂದುವರಿದರೆ ಮುಂದೊದಗಬಹುದಾಗ ಅನೂಹ್ಯ ದುರಂತದ ಬಗ್ಗೆ ಆಯಾ ವಾರ್ಡಿನ ಕಾರ್ಪೊರೇಟರುಗಳು, ಭರ್ಜರಿ ಮತಗಿಟ್ಟಿಸಿ ಗೆದ್ದ ಶಾಸಕರು ಎಚ್ಚರಿಸಬಹುದಿತ್ತಲ್ಲ? ಒಬ್ಬರಾದರೂ ಹೊರಗೆ ಬಂದಿದ್ದಾರೆಯೆ? ಆಟೋ, ಬ್ಯಾನರ್, ಕರಪತ್ರಗಳ ಮೂಲಕ ಜನರಿಗೆ ಕೊರೊನಾ ವೈರಸ್ ನಿಂದ ದೂರವಿರಲು ಸೂಚನೆಗಳನ್ನು ನೀಡಬಹುದಿತ್ತಲ್ಲ?

ಕೊಡಗಿನಲ್ಲಿ ಕೊರೊನಾ ಭೀತಿ: ಮಾರ್ಚ್ 31ರವರೆಗೆ ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆ ನಿಷೇಧ

ಇವರದು ಒಂದು ರೀತಿಯದಾದರೆ, ಕನ್ನಡದ ಮಾತೆತ್ತಿದರೆ ಬಂದ್ ಬಂದ್ ಎಂದು ಅಬ್ಬರಿಸಿ ಬೊಬ್ಬಿಬಿಯುವ ಹುಟ್ಟು ಹೋರಾಟಗಾರರು ಎಲ್ಲಿ ಅಡಗಿ ಕುಳಿತಿದ್ದಾರೆ. ಈ ನಾಡಿನೆಡೆಗೆ, ನುಡಿಯನಾಡುವ ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲವೆ? ಬೈಕ್ ಹತ್ತಿ ಬೀದಿಬೀದಿ ಸುತ್ತುವ ಹೋರಾಟಗಾರರು ಕರ್ತವ್ಯವನ್ನು ನಿಭಾಯಿಸುತ್ತಿಲ್ಲ?

ಕಂಡೂಕೇಳರಿಯದ ವಿಷಮ ಸ್ಥಿತಿಯನ್ನು ನಾವೀಗ ಎದುರಿಸುತ್ತಿದ್ದೇವೆ. ಯುದ್ಧಕಾಲದಲ್ಲಿ ಕೂಡ ಇಂಥ ಪರಿಸ್ಥಿತಿ ಬಂದಿತ್ತೋ ಇಲ್ಲವೋ? ವಿದೇಶದಿಂದ ಬಂದವರು ವೈರಸ್ ಅನ್ನು ಹರಡುತ್ತಿರುವುದು ಒಂದೆಡೆಯಾದರೆ, ಕೋವಿಡ್ 19 ಪಾಸಿಟಿವ್ ಆದ ಕೆಲವರು ಬೇಜವಾಬ್ದಾರಿಯಿಂದ ಕಂಡಕಂಡಲ್ಲಿ ಅಡ್ಡಾಡಿ ವೈರಸ್ ಹರಡುವಂತೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧ.

ಕೊರೊನಾ ವೈರಸ್ ಭೀತಿ ಮಧ್ಯೆಯೂ ಸಾಮೂಹಿಕ ಪ್ರಾರ್ಥನೆ: ಕೇರಳದ ಪಾದ್ರಿ ಬಂಧನ..!

ವೈರಸ್ ಹಬ್ಬುವಿಕೆ ಕೈಮೀರಿ, ಮನೆಮನೆಗಳಲ್ಲಿ ದಾಂಗುಡಿಯಿಟ್ಟರೆ, ಕೋವಿಡ್ 19 ಪರೀಕ್ಷೆ ನಡೆಸಲು, ಚಿಕಿತ್ಸೆ ನೀಡಲು ಬೇಕಾದಂಥ ವೈದ್ಯಕೀಯ ವ್ಯವಸ್ಥೆ ನಮ್ಮಲ್ಲಿ ಇದೆಯಾ? ವಾಟ್ಸಾಪುಗಳಲ್ಲಿ ಬರುವ ಸುಳ್ಳುಸುದ್ದಿಗಳನ್ನು ಬೇಗನೆ ನಂಬುವ ಜನರು, ಕೊರೊನಾ ವೈರಸ್ ಕುರಿತಂತೆ ಬಿತ್ತರವಾಗುತ್ತಿರುವ ಭೀಕರ ಸುದ್ದಿಗಳನ್ನು ಏಕೆ ನಂಬುತ್ತಿಲ್ಲ?

ಎಲ್ಲರೂ ಮನೆಯಲ್ಲಿಯೇ ಇರಿ, ವೈರಸ್ ಹಬ್ಬದಂತೆ ಜವಾಬ್ದಾರಿಯಿಂದ ವರ್ತಿಸಿ ಎಂದು ಟಿವಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬೊಂಬಡಾ ಬಜಾಯಿಸುತ್ತಿದ್ದರೂ, ಜನರು ಸೋಮವಾರದ ಸಂತೆಗೆ ಹೋಗುತ್ತಿದ್ದಾರೆ, ಬುಧವಾರ ಬರಲಿರುವ ಹಿಂದೂಗಳ ದೊಡ್ಡ ಹಬ್ಬವಾದ ಯುಗಾದಿಗೆ ವಸ್ತುಗಳನ್ನು, ಹಣ್ಣುಹಂಪಲು, ಹೂವು ಕೊಳ್ಳುವ ಸಂಭ್ರಮದಲ್ಲಿದ್ದಾರೆ.

ಈ ಸಂಭ್ರಮವೇ ದುರಂತಕ್ಕೆ ದಾರಿ ಮಾಡಿಕೊಟ್ಟರೆ? ಇನ್ನೆಲ್ಲಿಯ ಯುಗಾದಿ, ಇನ್ನೆಲ್ಲಿಯ ಗಣೇಶ ಚತುರ್ಥಿ, ಇನ್ನೆಲ್ಲಿಯ ದೀಪಾವಳಿ? ಬೆಂಗಳೂರು ಲಾಕ್ ಡೌನ್ ಮಾಡಬೇಕೆಂದು ಕೇಂದ್ರ ಸರಕಾರವೇ ಆದೇಶ ಹೊರಡಿಸಿದ್ದರೂ, ಸೋಮವಾರ ಕೆಆರ್ ಮಾರುಕಟ್ಟೆಯಲ್ಲಿ ಎಂದಿನ ಜನಜಂಗುಳಿ. ಅವರಲ್ಲಿ ಒಂದಿಷ್ಟು ಜನರಿಗೆ ಕೋವಿಡ್ 19 ಸೋಂಕು ಇದ್ದರೂ ಅನಾಹುತ ತಪ್ಪಿದ್ದಲ್ಲ.

ಸುಮ್ಮನೆ ಯೋಚಿಸಿ. ಪಂಚಾಂಗದ ಪ್ರಕಾರ, ಕಾಲಮಾನದ ಪ್ರಕಾರ ಯುಗಾದಿ ಮಾರ್ಚ್ 25ರಂದು ಬರುವುದೇನೋ ನಿಜ. ಆದರೆ, ಈ ಸಂಭ್ರಮವನ್ನು ಕೊರೊನಾ ಆತಂಕ ಕಳೆಯುವವರೆಗೆ ಮುಂದೂಡಲು ಸಾಧ್ಯವಿಲ್ಲವೆ? ಯುಗಾದಿ ಹಬ್ಬದೂಟಕ್ಕೆಂದು ಬಂಧುಗಳ ಮನೆಗೆ ಹೋಗುವುದನ್ನು ನಿಲ್ಲಿಸಲು ಸಾಧ್ಯವಿಲ್ಲವೆ? ಹಬ್ಬ ಆಚರಿಸಲೇಬೇಕಿದ್ದರೆ ಮನೆಯ ಮಟ್ಟಿಗೆ ನಾವಿರುವಷ್ಟು ಜನ ಸೇರಿ ಆಚರಿಸಲು ಅಸಾಧ್ಯವೆ?

ನಮ್ಮ ಕುಟುಂಬದ, ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಜನರೆಲ್ಲ ಪ್ರಬುದ್ಧತೆಯಿಂದ ವರ್ತಿಸಬೇಕಿದೆ. ನಮ್ಮನಮ್ಮ ಮನೆಯಲ್ಲಿಯೇ ಇದ್ದು, ನಾವಷ್ಟೇ ದೇವರ ಪೂಜೆ ಮಾಡಿ, ಪಂಚಾಂಗ ಓದಿ, ಬೇವು ಬೆಲ್ಲವನ್ನು ಸಿಕ್ಕರೆ ಸವಿದು, ಹಬ್ಬದೂಟ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಇವತ್ತು ಮೈಮರೆತರೆ ಯುಗಾದಿ ಮಾತ್ರವಲ್ಲ, ನಾಳೆ ದೀಪಾವಳಿಯನ್ನೂ ಮಿಸ್ ಮಾಡಿಕೊಳ್ತೀರಾ ಹುಷಾರ್!

ಹಿಂದೂಗಳ ಹಬ್ಬಕ್ಕೆ ಅವಕಾಶ ಮಾಡಿಕೊಡುವುದಾದರೆ ನಮ್ಮ ಹಬ್ಬಕ್ಕೂ, ನಮ್ಮ ಪ್ರಾರ್ಥನೆಗಳಿಗೂ ಅವಕಾಶ ಮಾಡಿಕೊಡಿ ಎಂದು ಮತ್ತೊಂದು ಕೋಮಿನವರು ದುಂಬಾಲು ಬಿದ್ದರೆ? ಇದಕ್ಕೆ ಅವಕಾಶವೇ ನೀಡದಂತೆ ಸರಕಾರ ಕಠಿಣಾತಿ ಕಠಿಣ ಕ್ರಮ ಜರುಗಿಸಬೇಕು. ಯುಗಾದಿಯ ಸಂಭ್ರಮ ಕೊಂಚ ಕಡಿಮೆಯಾದರೂ ಪರವಾಗಿಲ್ಲ, ಮಾರುಕಟ್ಟೆಯಲ್ಲಿ ಜನ ಸೇರದಂತೆ ನಿರ್ಬಂಧ ಹೇರಲೇಬೇಕು.
ಲೇಖಕರ ಬಗ್ಗೆ
ಪ್ರಸಾದ ನಾಯಿಕ
ವಿಜಯ ಕರ್ನಾಟಕ ಆನ್ ಲೈನ್ ಸಂಪಾದಕನಾಗಿ 2019ರ ಆಗಸ್ಟ್ ನಲ್ಲಿ ಅಧಿಕಾರ ವಹಿಸಿಕೊಂಡಿರುವ ಪ್ರಸಾದ ನಾಯಿಕ ಅವರು ಡಿಜಿಟಲ್ ಮಾಧ್ಯಮದಲ್ಲಿ 23 ವರ್ಷಕ್ಕೂ ಹೆಚ್ಚಿನ ಅನುಭವ ಪಡೆದಿದ್ದಾರೆ. ಮಾನವೀಯ ಸಂವೇದಿ ಲೇಖನ, ಲಲಿತ ಪ್ರಬಂಧ, ವಿಡಂಬನೆ, ಹಾಸ್ಯ ಲೇಖನ ಬರೆಯುವುದು ಅವರ ಅಚ್ಚುಮೆಚ್ಚಿನ ಕೆಲಸ. ಫೋಟೋಗ್ರಫಿ, ಚಾರಣ, ಪ್ರವಾಸ ಕೈಗೊಳ್ಳುವುದು ಮೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ