ಆ್ಯಪ್ನಗರ

ಸಾಮೂಹಿಕ ಮದುವೆಯಲ್ಲಿ ಎಲ್ಲರ ಕಣ್ಣು ತಪ್ಪಿಸಿ ಸಲಿಂಗಿಗಳ ಮದುವೆ

ಸಲಿಂಗ ಸಂಬಂಧ ಹೊಂದಿದ್ದ ಇಬ್ಬರು ಮಹಿಳೆಯರು ಎಲ್ಲರ ಕಣ್ಣು ತಪ್ಪಿಸಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಅದೊಂದು ಸಾಮೂಹಿಕ ಮದುವೆ ಕಾರ್ಯಕ್ರಮ.

Vijaya Karnataka Web 23 Apr 2018, 9:03 pm
ಆಗ್ರಾ: ಸಲಿಂಗ ಸಂಬಂಧ ಹೊಂದಿದ್ದ ಇಬ್ಬರು ಮಹಿಳೆಯರು ಎಲ್ಲರ ಕಣ್ಣು ತಪ್ಪಿಸಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಅದೊಂದು ಸಾಮೂಹಿಕ ಮದುವೆ ಕಾರ್ಯಕ್ರಮ. ಇಬ್ಬರಲ್ಲಿ ಒಬ್ಬರು ಮದುಮಗ ಎಂದು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಮದುವೆ ಶಾಸ್ತ್ರಗಳೆಲ್ಲಾ ಮುಗಿದ ಬಳಿಕ ಇಬ್ಬರೂ ಅಲ್ಲಿಂದ ನಾಪತ್ತೆಯಾಗಿದ್ದಾರೆ.
Vijaya Karnataka Web lesbian-marriage


ಮದುಮಗನಂತೆ ಗೆಟಪ್ ಹಾಕಿಕೊಂಡಿದ್ದ ಯುವತಿಗಾಗಿ ಅವರ ಕುಟುಂಬಿಕರು ಹುಡುಕಾಟ ನಡೆಸಿದಾಗ ಸತ್ಯ ಬಯಲಾಗಿದೆ. ಬಳಿಕ ಎರಡೂ ಕಡೆಯ ಕುಟುಂಬಿಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಮದುವೆಯಾಗಿರುವ ಇಬ್ಬರೂ ಯುವತಿಯರು ನಾವು ಒಟ್ಟಿಗೆ ಸಂಸಾರ ನಡೆಸುತ್ತೇವೆ ಎಂದಿದ್ದು ಪೊಲೀಸರಿಗೆ ಒಳ್ಳೆಯ ಪೀಕಲಾಟ ಶುರುವಾಗಿದೆ.

ತೇದಿ ಬಾಗಿಯಾ ಪ್ರದೇಶದ ಇವರಿಬ್ಬರೂ ಸುದೀರ್ಘ ಸಮಯದಿಂದ ಸಲಿಂಗ ಸಂಬಂಧ ಹೊಂದಿದ್ದರಂತೆ. ದಲಿತ ಕುಟುಂಬಕ್ಕೆ ಸೇರಿದ ಇವರು ಮದುವೆ ಮೂಲಕ ಒಂದಾಗಲು ಬಯಸಿದ್ದರು. ಭಿಮ್‌ನಗರಿಯಲ್ಲಿ ಪ್ರತಿವರ್ಷ ಅಂಬೇಡ್ಕರ್ ಜಯಂತಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಕೊನೆಯ ದಿನ ಭಿಮ್‍ನಗರಿ ಸಮಿತಿಯು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನೂ ನಡೆಸುತ್ತದೆ.

ತಮ್ಮ ಯೋಜನೆಯಂತೆ ಒಬ್ಬರು ಗಂಡು ಎಂದು ನೋಂದಾಯಿಸಿಕೊಂಡರೆ ಇನ್ನೊಬ್ಬರು ಹೆಣ್ಣು ಎಂಬುದಾಗಿ ನೋಂದಾಯಿಸಿಕೊಂಡಿದ್ದರು. ಏಪ್ರಿಲ್ 16ರಂದು ಇವರ ಯೋಜನೆಯಂತೆ ಮದುವೆ ಸುಸೂತ್ರವಾಗಿ ನಡೆದಿದೆ. ಬಳಿಕ ಬಾಡಿಗೆ ಮನೆಗೆ ಇಬ್ಬರೂ ಹೊರಟು ಹೋಗಿದ್ದಾರೆ.

ಈ ಮದುವೆಗೆ ಮದುಮಗನಂತೆ ಬದಲಾಗಿದ್ದ ಯುವತಿ ಬಾಡಿಗೆ ಸಂಬಂಧಿಕರನ್ನು ಕರೆಸಿದ್ದರು. ಆದರೆ ಇನ್ನೊಬ್ಬ ಯುವತಿ ಕಡೆಯಿಂದ ಅವರದೇ ಸಂಬಂಧಿಕರು ಬಂದಿದ್ದರು. ಆದರೆ ಮದುಮಗನಂತೆ ಬದಲಾಗಿದ್ದ ಯುವತಿಗಾಗಿ ಕುಟುಂಬಿಕರು ಹುಡುಕಾಟ ನಡೆಸಿದಾಗ ಇವರ ನಾಟಕ ಬಯಲಾಗಿದೆ.

ಎರಡೂ ಕುಟುಂಬಿಕರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಮದುವೆಯಾಗಿರುವ ಯುವತಿಯರು ಮಾತ್ರ ಒಟ್ಟಿಗೆ ಬಾಳುತ್ತೇವೆ ಎನ್ನುತ್ತಿದ್ದಾರೆ. ಪೊಲೀಸರಿಗೆ ಏನು ಹೇಳಬೇಕು, ಯಾವ ಪ್ರಕರಣ ದಾಖಲಿಸಬೇಕು ಎಂದು ದಿಕ್ಕು ತೋಚದಂತಾಗಿದೆ. ಹಾಗಾಗಿ ಪ್ರಕರಣ ದಾಖಲಿಸಿಕೊಳ್ಳದೆ ಮ್ಯಾಜಿಸ್ಟ್ರೇಟ್ ಅವರ ನಿರ್ಧಾರಕ್ಕೆ ಬಿಟ್ಟಿದ್ದಾರೆ.

ಕಾಲೇಜು ದಿನಗಳಿಂದಲೇ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತಂತೆ. ಎರಡು ವರ್ಷಗಳ ಹಿಂದೆ ಡಿಗ್ರಿ ಕಾಲೇಜಿನಲ್ಲಿ ಒಟ್ಟಿಗೇ ಓದಿದ್ದಾರೆ. ಇವರಲ್ಲಿ ಒಬ್ಬರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು ಜೀನ್ಸ್ ಪ್ಯಾಂಟ್ ಮತ್ತು ಟಿ ಶರ್ಟ್ ಧರಿಸಿ ಹುಡುಗರಂತೆ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದು, ಇನ್ನೊಬ್ಬರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
Read this news in Hindi

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ