ಆ್ಯಪ್ನಗರ

ರಾಶಿ ರಾಶಿ ನೋಟಿನ ಮೇಲೆ ವರಲಕ್ಷ್ಮೀಯನ್ನು ಪೂಜಿಸಿದ ಬೆಂಗಳೂರಿನ ಉದ್ಯಮಿ!

ನಗರದ ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಬಿಡಿಎ ಬ್ರೋಕರ್ ಒಬ್ಬರು ಗರಿಗರಿ ನೋಟುಗಳ ಕಂತೆ ಹಾಗೂ ಚಿನ್ನಾಭರಣ, ಬೆಳ್ಳಿ ಸಾಮಗ್ರಿಯೊಂದಿಗೆ ವರ ಮಹಾಲಕ್ಷ್ಮೀ ಪೂಜೆ ನೆರವೇರಿಸಿರುವ ಫೋಟೋಗಳು ಅಂತರ್ಜಾಲದಲ್ಲಿ ಭರ್ಜರಿ ಸದ್ದು ಮಾಡುತ್ತಿವೆ.

ವಿಕ ಸುದ್ದಿಲೋಕ 8 Aug 2017, 5:55 pm
ಬೆಂಗಳೂರು: ನಗರದ ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಬಿಡಿಎ ಬ್ರೋಕರ್ ಒಬ್ಬರು ಗರಿಗರಿ ನೋಟುಗಳ ಕಂತೆ ಹಾಗೂ ಚಿನ್ನಾಭರಣ, ಬೆಳ್ಳಿ ಸಾಮಗ್ರಿಯೊಂದಿಗೆ ವರ ಮಹಾಲಕ್ಷ್ಮೀ ಪೂಜೆ ನೆರವೇರಿಸಿರುವ ಫೋಟೋಗಳು ಅಂತರ್ಜಾಲದಲ್ಲಿ ಭರ್ಜರಿ ಸದ್ದು ಮಾಡುತ್ತಿವೆ.
Vijaya Karnataka Web man from bengaluru performs varamahalakshmi pooja over currency bundles and gold
ರಾಶಿ ರಾಶಿ ನೋಟಿನ ಮೇಲೆ ವರಲಕ್ಷ್ಮೀಯನ್ನು ಪೂಜಿಸಿದ ಬೆಂಗಳೂರಿನ ಉದ್ಯಮಿ!


100 ರೂ., 500 ರೂ. ಹಾಗೂ 2000 ರೂ. ನೋಟಿನ ಕಂತೆಗಳ ಮೇಲೆ ಮಹಾಲಕ್ಷ್ಮೀ ದೇವರನ್ನು ಇರಿಸಿ ಪೂಜೆ ಮಾಡುವ ಚಿತ್ರಗಳು ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಸಾಕಷ್ಟು ವೈರಲ್ ಆಗಿದ್ದು, ಮಂಗಳವಾರ ಕನ್ನಡದ ಬಹುತೇಕ ಎಲ್ಲ ಸುದ್ದಿ ಚಾನೆಲ್‌ಗಳು ಈ ಫೋಟೋಗಳನ್ನು ಮುಂದಿಟ್ಟುಕೊಂಡು, ಇದು ಯಾರಿಗೆ ಸೇರಿದ್ದೆಂಬುದನ್ನು ಪತ್ತೆ ಹಚ್ಚಿವೆ.

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರವಾನಗಿ ಪಡೆದಿರುವ ಬ್ರೋಕರ್ ಆಗಿಯೂ, ರಿಯಲ್ ಎಸ್ಟೇಟ್ ಉದ್ಯಮಿಯಾಗಿಯೂ ಕೆಲಸ ಮಾಡುತ್ತಿರುವ, ಹೆಚ್.ಎಸ್.ಆರ್. ಲೇಔಟ್‌ನ ಸೂರ್ಯನಾರಾಯಣ ಅಲಿಯಾಸ್ ಸೂರಿ ಎಂಬವರಿಗೆ ಈ ಸಂಪತ್ತು ಸೇರಿದ್ದೆಂದು ತಿಳಿದುಬಂದಿದೆ.

ಫೋಟೋದಲ್ಲಿ ಅವರ ಅಕ್ಕ, ಭಾವ ಹಾಗೂ ತಾಯಿಯ ಚಿತ್ರಗಳೂ ಇವೆ.

ಟಿವಿ ಚಾನೆಲ್‌ಗಳಿಗೆ ಸೂರಿ ಅವರು ಮಾಹಿತಿ ನೀಡಿದ ಪ್ರಕಾರ, ಈ ಹಣವೆಲ್ಲವೂ ಸಕ್ರಮ ಸಂಪತ್ತೇ ಆಗಿದ್ದು, ಇವೆಲ್ಲಕ್ಕೂ ದಾಖಲೆಗಳಿವೆ. ಕಳೆದ 10 ವರ್ಷದಿಂದಲೂ ತಾವು ಬ್ಯಾಂಕ್ ಖಾತೆಗಳಿಂದ ಹಣ ವಿದ್‌ಡ್ರಾ ಮಾಡಿ ವರಮಹಾಲಕ್ಷ್ಮಿ ವ್ರತ ಆಚರಿಸುತ್ತಿರುವುದಾಗಿಯೂ, ಪೂಜೆಯ ಬಳಿಕ ವಾಪಸ್ ಬ್ಯಾಂಕಿಗೇ ಮರಳಿಸುವುದಾಗಿಯೂ ಸೂರಿ ಅವರು ವಿದ್ಯುನ್ಮಾನ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ. ಪ್ರತಿ ವರ್ಷ 20ರಿಂದ 73 ಲಕ್ಷ ರೂ.ವರೆಗೂ ಹಣವನ್ನು ಇರಿಸಿ ಪೂಜೆ ಮಾಡಲಾಗುತ್ತಿದೆ. ಜತೆಗೆ ಚಿನ್ನಾಭರಣಗಳು, ಬೆಳ್ಳಿಯ ಸಾಮಗ್ರಿಗಳೂ ಇವೆ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

ಇದು ಕಾನೂನುಬಾಹಿರ ಹಣವಲ್ಲ. ದುಡಿದು ತಂದ ಹಣ. ಪ್ರತಿ ವರ್ಷ ಮನೆಯಲ್ಲಿ ಇದೇ ರೀತಿ ಪೂಜೆ ಮಾಡುತ್ತೇವೆ. 200-300 ಮಂದಿ ಬಂಧುಗಳು, ಸ್ನೇಹಿತರು ಪೂಜೆಗೆ ಬರುತ್ತಾರೆ. ಅವರಿಗೆ ಈ ವಿಷಯ ಗೊತ್ತಿದೆ ಎಂದು ಸೂರಿ ಪ್ರತಿಕ್ರಿಯಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯಾಗಲಿ ಅಥವಾ ಯಾವುದೇ ಕಾನೂನು ಪಾಲನಾ ಸಂಸ್ಥೆಗಳಾಗಲಿ, ವಿಚಾರಣೆಗೆ ಕರೆದರೆ ಹಣಕ್ಕೆ ದಾಖಲೆ ಒದಗಿಸಲು ಸಿದ್ಧ ಎಂದು ವಿಶ್ವಾಸದಿಂದಲೇ ನುಡಿದಿರುವ ಅವರು, ಆರ್ಕುಟ್ ಎಂಬ ಸಾಮಾಜಿಕ ಮಾಧ್ಯಮ ಚಾಲ್ತಿಯಲ್ಲಿದ್ದ ಕಾಲದಿಂದಲೂ ಅದರಲ್ಲಿ ಫೋಟೋ ಹಾಕುತ್ತಿದ್ದುದಾಗಿಯೂ ತಿಳಿಸಿದ್ದಾರೆ.

ಈ ಬಾರಿ, ಫೇಸ್‌ಬುಕ್‍ಗೆ ತಾನು ಹಾಕಿರಲಿಲ್ಲ, ಬೇರೆ ಯಾರೋ ಹಾಕಿದ್ದಾರೆ ಎಂದೂ ಸೂರಿ ಅವರು ಚಾನೆಲ್‌ಗಳಿಗೆ ಹೇಳಿದ್ದಾರೆ.


ಚಿತ್ರಗಳು: ವಾಟ್ಸಾಪ್ ಗ್ರೂಪುಗಳಿಂದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ