Please enable javascript.ಮುಷರ‌್ರಫ್‌ಗೆ ಬೂಟು ತೂರಿದ ವಕೀಲ - ಮುಷರ‌್ರಫ್‌ಗೆ ಬೂಟು ತೂರಿದ ವಕೀಲ - Vijay Karnataka

ಮುಷರ‌್ರಫ್‌ಗೆ ಬೂಟು ತೂರಿದ ವಕೀಲ

ಏಜೆನ್ಸೀಸ್ 29 Mar 2013, 10:52 pm
Subscribe

ಪಾಕಿಸ್ತಾನದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಲು ತವರಿಗೆ ಮರಳಿರುವ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ‌್ರಫ್ ಮೇಲೆ ವಕೀಲರೊಬ್ಬರು ಬೂಟು ಎಸೆದ ಘಟನೆ ಶುಕ್ರವಾರ ನಡೆದಿದೆ.

ಮುಷರ‌್ರಫ್‌ಗೆ ಬೂಟು ತೂರಿದ ವಕೀಲ
ಕರಾಚಿ: ಪಾಕಿಸ್ತಾನದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಲು ತವರಿಗೆ ಮರಳಿರುವ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ‌್ರಫ್ ಮೇಲೆ ವಕೀಲರೊಬ್ಬರು ಬೂಟು ಎಸೆದ ಘಟನೆ ಶುಕ್ರವಾರ ನಡೆದಿದೆ.

ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧನ ಪೂರ್ವ ಜಾಮೀನು ಅವಧಿಯ ವಿಸ್ತರಣೆ ಕೋರಿ ಮಾಜಿ ಸೇನಾ ಆಡಳಿತಗಾರ ಮುಷರ‌್ರಫ್ ಅವರು ಸಿಂಧ್ ಹೈಕೋರ್ಟ್‌ಗೆ ಹಾಜರಾದರು. ಕೋರ್ಟ್‌ಗೆ ಮುಷರ‌್ರಫ್ ಬರುತ್ತಿದ್ದಂತೆಯೇ ವಕೀಲರ ಗುಂಪೊಂದು ಅವರ ವಿರುದ್ಧ ಘೋಷಣೆಗಳನ್ನು ಕೂಗತೊಡಗಿತು. 15 ದಿನಗಳ ಜಾಮೀನು ವಿಸ್ತರಣೆ ಪಡೆದು ನ್ಯಾಯಾಲಯದಿಂದ ಹೊರಬರುತ್ತಿದ್ದಂತೆಯೇ ಆಕ್ರೋಶಗೊಂಡ ವಕೀಲರೊಬ್ಬರು ಅವರತ್ತ ಬೂಟು ತೂರಿದರು. ಗುಂಪಿನೊಳಗಿಂದ ತೂರಿಬಂದ ಬೂಟು ಅವರಿಗೆ ತಗುಲಲಿಲ್ಲ. ಅಣತಿ ದೂರದಲ್ಲಿ ಬಿತ್ತು.

ಏಕಾಏಕಿ ಗಾಳಿಯಲ್ಲಿ ತೂರಿಬಂದ ಬೂಟು, ಮುಷರ‌್ರಫ್ ಸುತ್ತ ಜಮಾಯಿಸಿದ್ದ ಬೆಂಬಲಿಗರು ಹಾಗೂ ಟಿ.ವಿ ಕ್ಯಾಮೆರಾಮೆನ್‌ಗಳಿದ್ದ ಗುಂಪಿನ ಮೇಲೆ ಬಿದ್ದದ್ದು ಟಿ.ವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ಈ ಘಟನೆಯಿಂದ ಕೋರ್ಟ್ ಆವರಣದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ವಕೀಲರು ಹಾಗೂ ಮುಷರ‌್ರಫ್ ಬೆಂಬಲಿಗರ ಕಿರುಚಾಟ, ಎಳೆದಾಟದ ನಡುವೆಯೇ ಖಾಸಗಿ ಭದ್ರತಾ ಸಿಬ್ಬಂದಿ ಮುಷರ‌್ರಫ್ ಅವರನ್ನು ಹೊರಗೆ ಕರೆದುಕೊಂಡು ಬಂದರು.

ಮುಷರ‌್ರಫ್ ಅವರಿಗೆ ಬೂಟು ಎಸೆತದ ಮುಜುಗರದ ಸಂದರ್ಭ ಎದುರಾದದ್ದು ಇದೇ ಮೊದಲಲ್ಲ. 2011ರಲ್ಲಿ ಅವರು ಬ್ರಿಟನ್‌ನಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಸಭಿಕರೊಬ್ಬರಿಂದ ಹೀಗೆ ಬೂಟು ಎಸೆತಕ್ಕೆ ಗುರಿಯಾಗಿದ್ದರು.

ತನಿಖೆಗೆ ಆದೇಶ
ಕೋರ್ಟ್ ಆವರಣದಲ್ಲಿಯೇ ಇಂತಹದ್ದೊಂದು ಘಟನೆ ನಡೆದ ಹಿನ್ನೆಲೆಯಲ್ಲಿ ಸಿಂಧ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮುಷೀರ್ ಆಲಂ ಅವರು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

ಅಮ್ಮನಿಗೆ ನೆಮ್ಮದಿ ಸಿಕ್ಕಿದೆ...
ಬೂಟು ಎಸೆದ ವಕೀಲನನ್ನು ತಾಜ್‌ಮುಲ್ ಲೋಧಿ ಎಂದು ಗುರುತಿಸಲಾಗಿದ್ದು, ಆತನನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ಹೇಳಿವೆ. ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆತ, ‘‘ಲಾಲ್ ಮಸೀದಿ ಕಾರ್ಯಾಚರಣೆಯ ಬಳಿಕ ಮುಷರ‌್ರಫ್ ಆಡಳಿತವನ್ನು ನನ್ನ ಅಮ್ಮ ತುಂಬ ದ್ವೇಷಿಸುತ್ತಿದ್ದರು. ದೇಶದ ಪ್ರಜಾಪ್ರಭುತ್ವವನ್ನು ಹಾಳುಗೆಡವಿದ ಮುಷರ‌್ರಫ್ ವಿರುದ್ಧ ನನ್ನ ತಾಯಿಗೆ ಅತೀವ ಕೋಪವಿತ್ತು. ಅದು ನನ್ನನ್ನು ಬಹುವಾಗಿ ಕಾಡುತ್ತಿತ್ತು. ಅದಕ್ಕಾಗಿಯೇ ಈಗ ಬೂಟು ಎಸೆಯುವ ಮೂಲಕ ಸಿಟ್ಟು ತೀರಿಸಿಕೊಂಡಿದ್ದೇನೆ. ಇದರಿಂದ ನಮ್ಮ ಅಮ್ಮನಿಗೆ ಕೊಂಚ ನೆಮ್ಮದಿ ಸಿಕ್ಕಿದೆ,’’ ಎಂದು ಹೇಳಿದ್ದಾನೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ