ಆ್ಯಪ್ನಗರ

ಕೃತಕ ಬುದ್ಧಿಮತ್ತೆ ಬಳಸಿ ಹೊಸ ಸೌರ ಮಂಡಲ ಪತ್ತೆ ಮಾಡಿದ ನಾಸಾ

ನಮ್ಮ ಸೌರ ಮಂಡಲದ ಗ್ರಹಗಳಂತೆಯೇ ಇರುವ ಇನ್ನೊಂದು ಸೌರ ಮಂಡಲವನ್ನು ಅಮೆರಿಕದ ನಾಸಾದ ಕೆಪ್ಲರ್‌ ಬಾಹ್ಯಾಕಾಶ ಟೆಲಿಸ್ಕೋಪ್‌ ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ನೆರವಿನೊಂದಿಗೆ ಪತ್ತೆ ಮಾಡಲಾಗಿದೆ ಎಂದು ನಾಸಾ ತಿಳಿಸಿದೆ.

Vijaya Karnataka Web 15 Dec 2017, 12:06 pm
ಮಿಯಾಮಿ: ನಮ್ಮ ಸೌರ ಮಂಡಲದ ಗ್ರಹಗಳಂತೆಯೇ ಇರುವ ಇನ್ನೊಂದು ಸೌರ ಮಂಡಲವನ್ನು ಅಮೆರಿಕದ ನಾಸಾದ ಕೆಪ್ಲರ್‌ ಬಾಹ್ಯಾಕಾಶ ಟೆಲಿಸ್ಕೋಪ್‌ ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ನೆರವಿನೊಂದಿಗೆ ಪತ್ತೆ ಮಾಡಲಾಗಿದೆ ಎಂದು ನಾಸಾ ತಿಳಿಸಿದೆ.
Vijaya Karnataka Web artificial intelligence finds solar system with 8 planets like ours
ಕೃತಕ ಬುದ್ಧಿಮತ್ತೆ ಬಳಸಿ ಹೊಸ ಸೌರ ಮಂಡಲ ಪತ್ತೆ ಮಾಡಿದ ನಾಸಾ


'ನಮ್ಮ ಸೌರವ್ಯೂಹದಂತೆಯೇ ಇರುವ ಇನ್ನೊಂದು ಗ್ರಹ ಮಂಡಲ ಪತ್ತೆಯಾಗಿದೆ. ಆದರೆ ಯಾವುದರಲ್ಲೂ ಜೀವಿಗಳ ಅಸ್ತಿತ್ವ ಇರುವ ಸಾಧ್ಯತೆ ಇಲ್ಲ' ಎಂದು ನಾಸಾ ಹೇಳಿಕೆ ತಿಳಿಸಿದೆ.

8 ಗ್ರಹಗಳಿರುವ ಹೊಸ ಸೌರ ಮಂಡಲ ಬಹುತೇಕ ನಮ್ಮ ಸೌರ ಮಂಡಲವನ್ನೇ ಹೋಲುತ್ತದೆ. ಕೆಪ್ಲರ್‌ 90 ಎಂದು ಕರೆಯಲಾಗುವ ಸೂರ್ಯನ ಸುತ್ತ ಈ ಗ್ರಹಗಳು ಸುತ್ತುತ್ತಿವೆ. ನಮ್ಮ ಸೌರಮಂಡಲದಿಂದ ಸುಮಾರು 2,545 ಜ್ಯೋತಿರ್ವರ್ಷದಷ್ಟು ದೂರದಲ್ಲಿ ಈ ಹೊಸ ಸೌರ ಮಂಡಲವಿದೆ.

'ಕೆಪ್ಲರ್‌-90 ಸೌರ ಮಂಡಲ ನಮ್ಮ ಸೌರ ಮಂಡಲದ್ದೇ ಪ್ರತಿರೂಪದಂತಿದೆ' ಎಂದು ಆಸ್ಟಿನ್‌ನಲ್ಲಿರುವ ಯುನಿವರ್ಸಿಟಿ ಆಫ್‌ ಟೆಕ್ಸಾಸ್‌ನ ಖಗೋಳಶಾಸ್ತ್ರಜ್ಞ ಆಂಡ್ರ್ಯೂ ವಂಡರ್‌ಬರ್ಗ್‌ ತಿಳಿಸಿದರು.

'ಸಣ್ಣ ಗ್ರಹಗಳು ಒಳಗಿನ ಕಕ್ಷೆಯಲ್ಲಿದ್ದು ದೊಡ್ಡ ದೊಡ್ಡ ಗ್ರಹಗಳು ಹೊರಗಿನ ಕಕ್ಷೆಗಳಲ್ಲಿ ಸುತ್ತುತ್ತಿವೆ. ಆದರೆ ಎಲ್ಲವೂ ಪರಸ್ಪರ ಬಹಳ ಹತ್ತಿರದಲ್ಲಿರುವಂತೆ ತೋರುತ್ತಿವೆ' ಎಂದು ಅವರು ವಿವರಿಸಿದರು.

ಹೊಸದಾಗಿ ಪತ್ತೆಯಾದ ಗ್ರಹ 'ಕೆಪ್ಲರ್‌-90ಐ' ನಮ್ಮ ಭೂಮಿಯಂತೆಯೇ ಬಂಡೆಗಲ್ಲುಗಳಿಂದ ಕೂಡಿದೆ. ಆದರೆ ತನ್ನ ಸೂರ್ಯನ ಸುತ್ತ 14.4 ದಿನಗಳಿಗೊಮ್ಮೆ ಒಂದು ಸುತ್ತು ಬರುತ್ತದೆ. ಆ ಗ್ರಹದ ಒಂದು ವರ್ಷ ನಮ್ಮ ಭೂಮಿಯ ಎರಡು ವಾರಗಳಿಗೆ ಸಮನಾಗಿದೆ.

'ಕೆಪ್ಲರ್‌-90ಐ' ಗ್ರಹದ ಮೇಲ್ಮೈ ತುಂಬಾ ಬಿಸಿಯಾಗಿದೆ. ಹೀಗಾಗಿ ಅಲ್ಲಿ ಯಾವುದೇ ಜೀವಿಗಳು ಇರುವ ಸಾಧ್ಯತೆಯಿಲ್ಲ. ಸೂರ್ಯನಿಗೆ ಅತಿ ಸಮೀಪವಿರುವುದರಿಂದ ಅದರ ಮೇಲ್ಮೈ ತಾಪಮಾನ 800 ಡಿಗ್ರಿ ಫ್ಯಾರೆನ್‌ ಹೀಟ್‌ (426 ಡಿಗ್ರಿ ಸೆಲ್ಶಿಯಸ್‌) ನಷ್ಟಿದೆ ಎಂದು ನಾಸಾ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ