ಆ್ಯಪ್ನಗರ

ಸೂರ್ಯನ ನೆರೆಮನೆಯಲ್ಲೇ 'ಸೂಪರ್ ಅರ್ಥ್' ಪತ್ತೆ ಹಚ್ಚಿದ ಖಗೋಳಶಾಸ್ತ್ರಜ್ಞರು

'ಸೂಪರ್ ಅರ್ಥ್‌'ನಲ್ಲಿ ಯಾವುದೇ ಜೀವಿಗಳು ವಾಸಿಸಲು ಸಾಧ್ಯವಿಲ್ಲ. ಹಾಗೂ ದ್ರವ ರೂಪದ ನೀರು ದೊರೆಯುವುದಿಲ್ಲ. ಒಂದು ವೇಳೆ ನೀರು ಇದ್ದರೆ ಅಥವಾ ಅನಿಲವಿದ್ದರೆ ಅದು ಘನ ರೂಪದಲ್ಲಿರುತ್ತದೆ. ಹೀಗಾಗಿ, ಇದನ್ನು ಫ್ರೋಜನ್ ( ಶೈತ್ಯೀಕರಿಸಿದ ಸ್ಥಿತಿ ) ಎಂದು ಕರೆಯುತ್ತೇವೆ ಎಂದು ವಿಜ್ಞಾನಿ ರಿಬಾಸ್ ಸ್ಪಷ್ಟಪಡಿಸಿದ್ದಾರೆ.

TIMESOFINDIA.COM 15 Nov 2018, 6:57 pm
ಪ್ಯಾರಿಸ್: ಸೂರ್ಯನ ಸಮೀಪದಲ್ಲೇ ಇರುವ ಮತ್ತೊಂದು ನಕ್ಷತ್ರವನ್ನು ಸುತ್ತುವ 'ಸೂಪರ್ ಅರ್ಥ್' ಅನ್ನು ಖಗೋಳಶಾಸ್ತ್ರಜ್ಞರ ತಂಡ ಪತ್ತೆಹಚ್ಚಿದೆ. ಇದು ಮಹತ್ವದ ಸಾಧನೆ ಎಂದ ವಿಜ್ಞಾನಿಗಳು, ಭೂಮಿಯ ಸಮೀಪದ ಗ್ರಹಗಳ ಬಗ್ಗೆ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ ಎಂದು ಬುಧವಾರ ಹೇಳಿದ್ದಾರೆ.
Vijaya Karnataka Web super earth


ಈ ಗ್ರಹಕ್ಕೆ ಬರ್ನಾಡ್ ಸ್ಟಾರ್ ಬಿ ಎಂದು ಸದ್ಯ ಹೆಸರಿಡಲಾಗಿದೆ. ಭೂಮಿಯಿಂದ ಕೇವಲ 6 ಜ್ಯೋತಿರ್‌ವರ್ಷಗಳಷ್ಟು ದೂರದಲ್ಲಿರುವ ಕೆಂಪು ಕುಬ್ಜ ನಕ್ಷತ್ರವಾಗಿರುವ ಬರ್ನಾಡ್‌ ನಕ್ಷತ್ರದಲ್ಲಿ ಈ 'ಸೂಪರ್ ಅರ್ಥ್' ಪತ್ತೆಯಾಗಿದ್ದು, ಇದು ಭೂಮಿಗಿಂತ ಕನಿಷ್ಠ 3.2 ಪಟ್ಟು ತೂಕ ಹೊಂದಿದೆ ಎಂದು ಖಗೋಳಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಇದು ಶೈತ್ಯೀಕರಿಸಿದ ಸ್ಥಿತಿಯಲ್ಲಿದ್ದು, ಮಂದವಾಗಿ ಹೊಳೆಯುತ್ತಿದೆ ಎಂಬುದನ್ನು ಗುರುತು ಹಿಡಿಯಲಾಗಿದೆ.

ಈ ಸಂಬಂಧ ಯುರೋಪಿಯನ್ ಸದರನ್ ವೀಕ್ಷಣಾಲಯ ( ಇಎಸ್‌ಒ ) ಕಲಾವಿದನ ಅನಿಸಿಕೆಯಂತೆ ಬರೆದ ಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಬಾಹ್ಯಾಕಾಶದಿಂದ 'ಸೂಪರ್ ಅರ್ಥ್' ಈ ರೀತಿ ಕಾಣಿಸುತ್ತದೆ ಎಂದೂ ಹೇಳಲಾಗಿದೆ.

ಸೂಪರ್‌ ಅರ್ಥ್‌ನಲ್ಲಿ ಸೂರ್ಯಾಸ್ತದ ಕಲ್ಪನೆಯ ಚಿತ್ರ


ಇನ್ನು, ಸೌರ ಮಂಡಲದ ಹೊರಗೆ ಪತ್ತೆಹಚ್ಚಲಾದ ಎರಡನೇ ಅತಿ ಸಮೀಪ ಗ್ರಹ ಎಂಬ ಕೀರ್ತಿಗೆ ಬರ್ನಾಡ್‌ ಸ್ಟಾರ್ ಬಿ ಪಾತ್ರವಾಗಿದೆ. ಬರ್ನಾಡ್‌ ನಕ್ಷತ್ರದಲ್ಲಿ ಈ 'ಸೂಪರ್ ಅರ್ಥ್' ಪತ್ತೆಯಾಗಿದ್ದು, ಅದು 233 ದಿನಗಳಿಗೊಮ್ಮೆ ತನ್ನ ನಕ್ಷತ್ರವನ್ನು ( ಭೂಮಿ ಸೂರ್ಯನನ್ನು ಸುತ್ತುವ ಹಾಗೆ ) ಸುತ್ತುತ್ತದೆ. ಮೂಲ ನಕ್ಷತ್ರ ( ಬರ್ನಾಡ್ ಸ್ಟಾರ್‌)ಕ್ಕೆ ಬಹಳ ಸಮೀಪದಲ್ಲಿದ್ದರೂ ಸಹ ಆ ಗ್ರಹಕ್ಕೆ ಸೂರ್ಯನಿಂದ ಭೂಮಿಗೆ ದೊರೆಯುವ ಶೇ. 2 ರಷ್ಟು ಶಕ್ತಿ ಮಾತ್ರ ಪಡೆದುಕೊಳ್ಳುತ್ತದೆ. ಅಲ್ಲದೆ, ಗ್ರಹದ ಮೇಲ್ಮೈ ತಾಪಮಾನ ಮೈನಸ್‌ 170 ಡಿಗ್ರಿ ಸೆಲ್ಶಿಯಸ್‌ನಷ್ಟಿದೆ ಎಂದು ಖಗೋಳಶಾಸ್ತ್ರಜ್ಞರ ತಂಡ ಅಂದಾಜಿಸಿದೆ.

ಹೀಗಾಗಿ, ಈ ಗ್ರಹದಲ್ಲಿ ಯಾವುದೇ ಜೀವಿಗಳು ವಾಸಿಸಲು ಸಾಧ್ಯವಿಲ್ಲ. ಹಾಗೂ ದ್ರವ ರೂಪದ ನೀರು ದೊರೆಯುವುದಿಲ್ಲ. ಒಂದು ವೇಳೆ ನೀರು ಇದ್ದರೆ ಅಥವಾ ಅನಿಲವಿದ್ದರೆ ಅದು ಘನ ರೂಪದಲ್ಲಿರುತ್ತದೆ. ಹೀಗಾಗಿ, ಇದನ್ನು ಫ್ರೋಜನ್ ( ಶೈತ್ಯೀಕರಿಸಿದ ಸ್ಥಿತಿ ) ಎಂದು ಕರೆಯುತ್ತೇವೆ ಎಂದು ವಿಜ್ಞಾನಿ ರಿಬಾಸ್ ಸ್ಪಷ್ಟಪಡಿಸಿದ್ದಾರೆ.

'ಸೂಪರ್ ಅರ್ಥ್'ನ ಮೂಲ ನಕ್ಷತ್ರ ಬರ್ನಾಡ್ ಸ್ಟಾರ್‌ ಕೆಂಪು ಕುಬ್ಜ ನಕ್ಷತ್ರವಾಗಿದ್ದು, ಇದಕ್ಕೆ ಸೂರ್ಯನಿಗಿಂತ ಎರಡು ಪಟ್ಟು ಹೆಚ್ಚು ವಯಸ್ಸಾಗಿರಬಹುದು ಎಂದು ಹೇಳಲಾಗಿದೆ. ಹೀಗಾಗಿ, ಹೆಚ್ಚು ಬೆಳಕನ್ನು ಹೊರಸೂಸುವುದಿಲ್ಲ. ಇದರಿಂದಾಗಿ ಅದರ ಕಕ್ಷೆಯಲ್ಲಿರುವ ಯಾವುದೇ ವಸ್ತುಗಳನ್ನು ಗ್ರಹಿಸಲು ಕಷ್ಟವಾಗುತ್ತದೆ ಎಂದು ಹೇಳಲಾಗಿದೆ. ಇನ್ನು, ಬರ್ನಾಡ್ ಸ್ಟಾರ್‌ ಬಿ 'ಸೂಪರ್ ಅರ್ಥ್' ಅನ್ನು ಪತ್ತೆಹಚ್ಚಲು ರಿಬಾಸ್ ಹಾಗೂ ತಂಡ 20 ವರ್ಷಗಳಿಗೂ ಅಧಿಕ ಕಾಲ ಅಧ್ಯಯನ ಮಾಡಿದ್ದು, 7 ಪ್ರತ್ಯೇಕ ಸಲಕರಣೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೆ, ಡೋಪ್ಲರ್ ಪರಿಣಾಮದ ಮೂಲಕ ಮೂಲ ನಕ್ಷತ್ರದಿಂದ ಗ್ರಹಕ್ಕುಂಟಾಗುವ ಗುರುತ್ವಾಕರ್ಷಣೆಯನ್ನೂ ಖಗೋಳಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ಇದರಿಂದಾಗಿ ಗ್ರಹ ಸುತ್ತುತ್ತಿರುವ ದಿಕ್ಕಿನ ವೇಗ ಹಾಗೂ ಆ ಮೂಲಕ ಸಮೂಹ ತೂಕವನ್ನು ಪತ್ತೆಹಚ್ಚಲು ಅವರು ಬಳಸಿಕೊಳ್ಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ