ಆ್ಯಪ್ನಗರ

ಒಐಸಿ ಸಮ್ಮೇಳನದಲ್ಲಿ ಪಾಕ್‌ ವಿರುದ್ಧ ಸುಷ್ಮಾ ಕಿಡಿ

ಜಗತ್ತಿನ ಎಲ್ಲಾ ದೇಶಗಳು ಒಟ್ಟಾಗಿ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ ಎಂದು ಸುಷ್ಮಾ ಪ್ರತಿಪಾದಿಸಿದರು.

Vijaya Karnataka 2 Mar 2019, 5:00 am
ಅಬುಧಾಬಿ: ಭಯೋತ್ಪಾದನೆ ಬೆಂಬಲಿಸುವ ದೇಶವನ್ನು ಏಕಾಂಗಿಯಾಗಿಸಬೇಕು. ಭಯೋತ್ಪಾದನೆಗೆ ಹಣ, ಆಶ್ರಯ ನೀಡುವ ದೇಶಗಳ ಬಣ್ಣ ಬಯಲು ಮಾಡಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಇಸ್ಲಾಮಿಕ್‌ ಸಹಕಾರ ಸಂಘಟನೆಯ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web 2-2-01032-PTI3_1_2019_000047B


ಶುಕ್ರವಾರ ನಡೆದ ಇಸ್ಲಾಮಿಕ್‌ ಸಹಕಾರ ಸಂಘಟನೆ (ಒಐಸಿ)ಯ ವಿದೇಶಾಂಗ ವ್ಯವಹಾರಗಳ ಸಚಿವರ 46ನೇ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ 'ಗೌರವ ಅತಿಥಿ'ಯಾಗಿ ಪಾಲ್ಗೊಂಡಿದ್ದ ಸುಷ್ಮಾ, ಜಗತ್ತಿನ ಎಲ್ಲಾ ದೇಶಗಳು ಒಟ್ಟಾಗಿ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ ಎಂದು ಪ್ರತಿಪಾದಿಸಿದರು.

''ಇಸ್ಲಾಂ ಎಂದರೆ ಶಾಂತಿ. ಅಲ್ಲಾನ 99 ಹೆಸರುಗಳಲ್ಲಿ ಒಂದೂ ಕೂಡ ಹಿಂಸೆಯನ್ನು ಸೂಚಿಸುವುದಿಲ್ಲ. ಇಸ್ಲಾಂ ಶಾಂತಿಯನ್ನು ಪ್ರತಿಪಾದಿಸುತ್ತದೆ. ಅಂತೆಯೇ, ವಿಶ್ವದ ಪ್ರತಿಯೊಂದು ಧರ್ಮವೂ ಶಾಂತಿ, ಸಹಾನುಭೂತಿ ಮತ್ತು ಸಹೋದರತ್ವದ ಪ್ರತೀಕವಾಗಿದೆ. ಆದರೆ ಕೆಲ ದೇಶಗಳು ಭಯೋತ್ಪಾದನೆಗೆ ಆಶ್ರಯ ನೀಡುತ್ತಿದೆ. ಭಯೋತ್ಪಾದನೆಯಿಂದ ವಿಶ್ವದಲ್ಲಿ ಹಿಂಸೆ ಹೆಚ್ಚಾಗುತ್ತಿದೆ. ಅಮಾಯಕ ಜನರ ಜೀವಗಳು ಬಲಿಯಾಗುತ್ತಿದೆ, '' ಎಂದು ಪಾಕಿಸ್ತಾನದ ಹೆಸರು ಪ್ರಸ್ತಾಪಿಸದೆಯೇ ಚುಚ್ಚಿದರು.

''ದೇವರು ಒಬ್ಬನೇ. ಆದರೆ ಕಲಿತ ಮಾನವ ಆತನನ್ನು ಅನೇಕ ವಿಧದಲ್ಲಿ ವರ್ಣಿಸುತ್ತಾನೆ ಎಂದು ಭಾರತದ ಋುಗ್ವೇದ ಹೇಳುತ್ತದೆ. ನಮ್ಮ ಸಮರ ಭಯೋತ್ಪಾದನೆ ವಿರುದ್ಧ ಮಾತ್ರ. ಯಾವುದೇ ಧರ್ಮ ಅಥವಾ ದೇಶದ ವಿರುದ್ಧವಲ್ಲ,'' ಎಂದು ಸುಷ್ಮಾ ಹೇಳಿದರು. ಋುಗ್ವೇದ ಮತ್ತು ಕುರಾನ್‌ನ ಕೆಲವು ಸಾಲುಗಳನ್ನೂ ಅವರು ಉಲ್ಲೇಖಿಸಿದರು.

''ನಾನು ಪ್ರಧಾನಿ ನರೇಂದ್ರ ಮೋದಿ, 18 ಕೋಟಿ ಮುಸ್ಲಿಂ ಸಹೋದರ-ಸಹೋದರಿಯರು ಸೇರಿದಂತೆ 130 ಕೋಟಿ ಭಾರತೀಯರ ಶುಭಾಶಯ ಹೊತ್ತು ತಂದಿದ್ದೇನೆ. ಭಾರತದ ವಿವಿಧೆತೆಗೆ ನಮ್ಮ ಮುಸ್ಲಿಂ ಸಹೋದರ-ಸಹೋದರಿಯರು ಪ್ರತಿರೂಪವಾಗಿದ್ದಾರೆ. ಭಾರತದಲ್ಲಿ ಎಲ್ಲಾ ಧರ್ಮ ಮತ್ತು ಸಂಸ್ಕೃತಿಯನ್ನು ಗೌರವಿಸಲಾಗುತ್ತದೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ಜಗತ್ತಿಗೆ ಶಾಂತಿಯನ್ನು ಬೋಧಿಸಿದ್ದಾರೆ,'' ಎಂದು ಸುಷ್ಮಾ ಹೇಳಿದರು.

ಪಾಕ್‌ ಬಹಿಷ್ಕಾರ: ಇದೇ ಮೊದಲ ಬಾರಿಗೆ ಒಐಸಿ ಸಮಾವೇಶಕ್ಕೆ 'ಗೌರವ ಅತಿಥಿ'ಯಾಗಿ ಭಾರತಕ್ಕೆ ಆಹ್ವಾನ ನೀಡಲಾಗಿದೆ. ಪುಲ್ವಾಮಾ ದಾಳಿ ಹಾಗೂ ನಂತರದ ಬೆಳವಣಿಗೆ ಬಳಿಕ, ಸುಷ್ಮಾ ಅವರಿಗೆ ನೀಡಿರುವ ಆಹ್ವಾನ ಹಿಂಪಡೆಯದಿದ್ದರೆ ತಾನು ಸಮಾವೇಶ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಹೇಳಿತ್ತು. ಅಂತೆಯೇ ಪಾಕ್‌ ವಿದೇಶಾಂಗ ಸಚಿವ ಮೆಹಮೂದ್‌ ಖುರೇಶಿ ಅವರು ಸಮಾವೇಶದಿಂದ ದೂರ ಉಳಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ