ಆ್ಯಪ್ನಗರ

ನ್ಯೂಯಾರ್ಕ್‌ನಲ್ಲೀಗ ಹೆಣಗಳ ರಾಶಿ, ಕೊರೊನಾದಿಂದ ಸಾವಿಗೀಡಾದವರ ಸಾಮೂಹಿಕ ದಫನ

ನ್ಯೂಯಾರ್ಕ್‌ ನಗರದ ಹೊರವಲಯದಲ್ಲಿರುವ ಹರ್ಟ್‌ ದ್ವೀಪದಲ್ಲಿ ಮರದ ಪೆಟ್ಟಿಗೆಯಲ್ಲಿ ಶವಗಳನ್ನು ತುಂಬಿ ಸಾಲು ಸಾಲಾಗಿ ಅಂತ್ಯ ಸಂಸ್ಕಾರ ನಡೆಸುತ್ತಿರುವ ದೃಶ್ಯಗಳು ಡ್ರೋನ್‌ ಕ್ಯಾಮೆರಾಗೆ ಸೆರೆಯಾಗಿದ್ದು ಎದೆ ನಡುಗಿಸುತ್ತಿವೆ.

Agencies 10 Apr 2020, 6:05 pm

ನ್ಯೂಯಾರ್ಕ್‌: ಅಮೆರಿಕಾದ ನ್ಯೂಯಾರ್ಕ್‌ ನಗರ ಕೊರೊನಾ ವೈರಸ್‌ನ ರಾಜಧಾನಿಯಾಗಿ ಪರಿವರ್ತನೆಯಾಗಿದ್ದು, ದಿನದಿಂದ ದಿನಕ್ಕೆ ಸೋಂಕಿನಿಂದ ಸಾವಿಗೀಡಾಗುವವರ ಸಂಖ್ಯೆ ಏರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಇಲ್ಲೀಗ ಅಂತ್ಯ ಸಂಸ್ಕಾರಕ್ಕೂ ಸಂಕಷ್ಟ ಆರಂಭವಾಗಿದ್ದು ಶವಗಳ ಸಾಮೂಹಿಕ ಸಂಸ್ಕಾರ ಆರಂಭವಾಗಿದೆ.
Vijaya Karnataka Web Virus Outbreak New York


ನ್ಯೂಯಾರ್ಕ್‌ ನಗರದ ಹೊರವಲಯದಲ್ಲಿರುವ ಹರ್ಟ್‌ ದ್ವೀಪದಲ್ಲಿ ಮರದ ಪೆಟ್ಟಿಗೆಯಲ್ಲಿ ಶವಗಳನ್ನು ತುಂಬಿ ಸಾಲು ಸಾಲಾಗಿ ಅಂತ್ಯ ಸಂಸ್ಕಾರ ನಡೆಸುತ್ತಿರುವ ದೃಶ್ಯಗಳು ಡ್ರೋನ್‌ ಕ್ಯಾಮೆರಾಗೆ ಸೆರೆಯಾಗಿದ್ದು, ಮನಕಲಕುವಂತಿದೆ.

ಹರ್ಟ್‌ ದ್ವೀಪದಲ್ಲಿ ದೊಡ್ಡ ದೊಡ್ಡ ಗುಂಡಿ ತೋಡಿ, ಯಾರಿಗೆ ಶವ ಸಂಸ್ಕಾರ ನಡೆಸಲು ಸಾಧ್ಯವಿಲ್ಲವೋ ಅಂಥವರ ಶವಗಳನ್ನು ಇಲ್ಲಿ ಸಾಮೂಹಿಕವಾಗಿ ದಫನ ಮಾಡಲಾಗುತ್ತಿದೆ.

ತಪ್ಪು ಮಾಹಿತಿ ಕೊಡ್ತಂತೆ ವಿಶ್ವ ಆರೋಗ್ಯ ಸಂಸ್ಥೆ..! ತರಾಟೆಗೆ ತೆಗೆದುಕೊಂಡ ಟ್ರಂಪ್..!

ನಗರದ ಅಧಿಕಾರಿಗಳು ಈ ದ್ವೀಪವನ್ನು ಸಾಮೂಹಿಕ ಅಂತ್ಯ ಸಂಸ್ಕಾರಕ್ಕೆ ಕಳೆದ 150 ವರ್ಷಗಳಿಂದಲೂ ಬಳಸುತ್ತಿದ್ದಾರೆ. ಯಾರು ಅನಾಥರಾಗಿರುತ್ತಾರೋ ಅವರ ಶವವನ್ನು ಇಲ್ಲಿ ದಫನ ಮಾಡಲಾಗುತ್ತದೆ. ಸಾಮಾನ್ಯವಾಗಿ ಇಲ್ಲೇ ಸಮೀಪದ ರಿಕರ್ಸ್‌ ದ್ವೀಪದಲ್ಲಿರುವ ನ್ಯೂಯಾರ್ಕ್‌ನ ಪ್ರಮುಖ ಜೈಲು ಸಂಕೀರ್ಣದ ಖೈದಿಗಳು ಈ ದಫನ ಕ್ರಿಯೆ ನಡೆಸುತ್ತಾರೆ. ಆದರೆ ಇತ್ತೀಚೆಗೆ ಸಾವಿನ ಸಂಖ್ಯೆ ಅಧಿಕವಾಗಿರುವುದರಿಂದ ಈ ಕೆಲಸವನ್ನು ಅವರಿಂದ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.



ಹೀಗಾಗಿ ಒಂದಷ್ಟು ಕಾರ್ಮಿಕರನ್ನು ಗುತ್ತಿಗೆ ಮೇಲೆ ತೆಗೆದುಕೊಳ್ಳಲಾಗಿದೆ. ನಗರದಲ್ಲಿ ಪ್ರತಿದಿನ ನೂರಾರು ಜನರು ಸಾವಿಗೀಡಾಗುತ್ತಿದ್ದು ಅವರಲ್ಲಿ ಕೆಲವರನ್ನು ಇಲ್ಲಿ ದಫನ ಮಾಡಲಾಗುತ್ತಿದೆ. ಮೊದಲೆಲ್ಲಾ ವಾರಕ್ಕೆ ಒಂದು ದಿನ ಇಲ್ಲಿ ಶವಗಳನ್ನು ಹೂಳಲಾಗುತ್ತಿತ್ತು. ಆದರೀಗ ವಾರದ ಐದು ದಿನ ಈ ಕೆಲಸ ನಡೆಯುತ್ತಿದೆ. ಪ್ರತಿ ದಿನ ಕನಿಷ್ಠ ಎರಡು ಡಜನ್‌ ಹೆಣಗಳಿಗೆ ಇಲ್ಲಿ ಅಂತಿಮ ವಿದಾಯ ಹೇಳಲಾಗುತ್ತಿದೆ.

ಈ ಬಿಕ್ಕಟ್ಟು ಕೊನೆಗೊಳ್ಳುವವರೆಗೆ ಈ ಕ್ರಮ ಅನಿವಾರ್ಯ ಎಂಬುದಾಗಿ ನ್ಯೂಯಾರ್ಕ್‌ ಮೇಯರ್‌ ಬಿಲ್‌ ಡೆ ಬ್ಲಾಸಿಯೋ ತಿಳಿಸಿದ್ದಾರೆ. ಅಲ್ಲಿಯವರೆಗೂ ಕಾರ್ಮಿಕರ ತಾತ್ಕಾಲಿಕ ಗುತ್ತಿಗೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಹೆಣ ಹೂಳುವುದರ ಜೊತೆಗೆ ಅವುಗಳನ್ನು ನಿಭಾಯಿಸುವುದು ನಗರದ ಆಸ್ಪತ್ರೆಗಳಿಗೆ ತ್ರಾಸದಾಯಕವಾಗಿ ಪರಿಣಮಿಸಿದೆ. ಆಫೀಸ್‌ ಆಫ್‌ ಚೀಫ್‌ ಮೆಡಿಕಲ್‌ ಎಗ್ಸಾಮಿನರ್‌ (ಒಸಿಎಂಎಫ್‌) ಕಚೇರಿಗೆ 800 ಶವಗಳನ್ನು ಇಟ್ಟುಕೊಳ್ಳುವ ಸಾಮರ್ಥ್ಯ ಇದೆ. ಆದರೆ ಬುಧವಾರ ಒಂದೇ ದಿನ ನ್ಯೂಯಾರ್ಕ್‌ನಲ್ಲಿ 799 ಜನರು ಅಸುನೀಗಿದ್ದಾರೆ. ಪ್ರತಿದಿನ ಸರಿಸುಮಾರು ಇಷ್ಟೇ ಜನರು ಸಾವಿಗೀಡಾಗುತ್ತಿದ್ದು ಶವಗಳಿಗಾಗಿಯೇ ರೆಫ್ರಿಜರೇಟರ್‌ ವ್ಯವಸ್ಥೆ ಇರುವ 40 ಬೃಹತ್‌ ಟ್ರಕ್‌ಗಳನ್ನು ತರಿಸಿಕೊಳ್ಳಲಾಗಿದೆ. ಇವುಗಳು 4,000 ಹೆಣಗಳನ್ನು ಇಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಆಸ್ಪತ್ರೆಗಳ ಬಳಿಗೆ ಕಳುಹಿಸಲಾಗಿದೆ. ಒಂದಷ್ಟು ಟ್ರಕ್‌ಗಳು ಆಸ್ಪತ್ರೆ ಮತ್ತು ಸ್ಮಶಾನದ ನಡುವೆ ಓಡಾಡುತ್ತಿವೆ. ನ್ಯೂಯಾರ್ಕ್‌ ನಗರದಲ್ಲಿ ಹಿಂದೆಂದೂ ಇಂಥಹ ದೃಶ್ಯಗಳು ಕಂಡು ಬಂದಿರಲಿಲ್ಲ ಎನ್ನುತ್ತಾರೆ ನಗರದ ನಿವಾಸಿಗಳು.

ನ್ಯೂಯಾರ್ಕ್‌ ನಗರದಲ್ಲಿ ಸದ್ಯ ಯಾವುದೇ ದೇಶಗಳಿಗಿಂತ ಹೆಚ್ಚಿನ ಕೊರೊನಾ ವೈರಸ್‌ ಪ್ರಕರಣಗಳಿವೆ. ನಗರವೊಂದರಲ್ಲೇ 159,937 ಜನರು ಕೊರೊನಾ ವೈರಸ್‌ ಪೀಡಿತರಿದ್ದು, ಇವರಲ್ಲಿ 7,067ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ