ಆ್ಯಪ್ನಗರ

ಅಮೆರಿಕದಲ್ಲಿ ದಾಖಲೆಯ ಸರಕಾರ ಸ್ಥಗಿತ

ಈ ಹಿಂದೆ 1995-96ರ ಅವಧಿಯಲ್ಲಿ ಬಿಲ್‌ ಕ್ಲಿಂಟನ್‌ ಅಮೆರಿಕ ಅಧ್ಯಕ್ಷರಾಗಿದ್ದ ಸಮಯದಲ್ಲಿ 21 ದಿನಗಳ ಕಾಲ ಸರಕಾರ ಸ್ಥಗಿತಗೊಂಡಿತ್ತು. ಈಗ 22 ದಿನಗಳಿಗೆ ಮುಂದುವರಿದ ಕಾರಣ ಹೊಸ ದಾಖಲೆ ಸೃಷ್ಟಿಯಾಗಿದೆ.

Vijaya Karnataka Web 13 Jan 2019, 9:06 am
ವಾಷಿಂಗ್ಟನ್‌: ಅಕ್ರಮ ವಲಸೆ ತಡೆಗಾಗಿ ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಬಿಗಿಪಟ್ಟು ಹಿಡಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಇದಕ್ಕೆ ಒಪ್ಪದ ಪ್ರತಿಪಕ್ಷ ಡೆಮಾಕ್ರಟಿಕ್‌ ನಡುವಿನ ಸೆಣಸಾಟದ ಪರಿಣಾಮ ದೇಶದಲ್ಲಿ ಸರಕಾರಿ ಆಡಳಿತ ಯಂತ್ರ ಸ್ಥಗಿತಗೊಂಡು ಶನಿವಾರಕ್ಕೆ 22 ದಿನಗಳಾಗಿವೆ. ಇದು ಅಮೆರಿಕದ ಇತಿಹಾಸದಲ್ಲೇ ದಾಖಲೆಯ ಸರಕಾರ ಸ್ಥಗಿತವಾಗಿದೆ. ಇದರ ಪರಿಣಾಮ ಸುಮಾರು 8 ಲಕ್ಷ ಸರಕಾರಿ ನೌಕರರು ವೇತನವಿಲ್ಲದೆ ಪರದಾಡುವಂತಾಗಿದೆ.
Vijaya Karnataka Web trump 1


ಈ ಹಿಂದೆ 1995-96ರ ಅವಧಿಯಲ್ಲಿ ಬಿಲ್‌ ಕ್ಲಿಂಟನ್‌ ಅಮೆರಿಕ ಅಧ್ಯಕ್ಷರಾಗಿದ್ದ ಸಮಯದಲ್ಲಿ 21 ದಿನಗಳ ಕಾಲ ಸರಕಾರ ಸ್ಥಗಿತಗೊಂಡಿತ್ತು. ಈಗ 22 ದಿನಗಳಿಗೆ ಮುಂದುವರಿದ ಕಾರಣ ಹೊಸ ದಾಖಲೆ ಸೃಷ್ಟಿಯಾಗಿದೆ.

ಅಕ್ರಮ ವಲಸೆ ತಡೆಗಟ್ಟುವಿಕೆ, ಮಾದಕ ದ್ರವ್ಯ ಮತ್ತು ಮಾನವ ಕಳ್ಳಸಾಗಣೆ ತಡೆಯುವ ಕಾರಣಕ್ಕಾಗಿ ಮೆಕ್ಸಿಕೊ-ಅಮೆರಿಕ ಗಡಿಯುದ್ದಕ್ಕೂ 5.7 ಶತಕೋಟಿ ಡಾಲರ್‌ ವೆಚ್ಚದಲ್ಲಿ ಗೋಡೆ ನಿರ್ಮಾಣಕ್ಕೆ ಟ್ರಂಪ್‌ ಮುಂದಾಗಿದ್ದಾರೆ. ಇದಕ್ಕಾಗಿ ಮೂರು ವಾರಗಳ ಹಿಂದೆ ಅಮೆರಿಕ ಸಂಸತ್‌ನಲ್ಲಿ ಗೋಡೆ ನಿರ್ಮಾಣ ಮತ್ತು ಸರಕಾರಿ ನೌಕರರ ವೇತನ ಅನುದಾನ ಬಿಡುಗಡೆ ಮಾಡುವ ಜಂಟಿ ವೆಚ್ಚ ವಿಧೇಯಕವನ್ನು ಮಂಡಿಸಿದರು. ಆದರೆ ಇದಕ್ಕೆ ಸಂಸತ್ತು ಅನುಮತಿ ನಿರಾಕರಿಸಿರುವುದರಿಂದ ಅಮೆರಿಕ ಸರಕಾರ ಸ್ಥಗಿತಗೊಂಡಿದೆ. ವಿವಾದ ಇತ್ಯರ್ಥಕ್ಕೆ ಟ್ರಂಪ್‌ ಮತ್ತು ಡೆಮಾಕ್ರಟಿಕ್‌ ನಾಯಕರ ನಡುವೆ ಹಲವು ಸುತ್ತಿನ ಮಾತುಕತೆ ನಡೆದರೂ ಇದುವರೆಗೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.

ಇದರ ಪರಿಣಾಮ ಎಫ್‌ಬಿಐ ಎಜೆಂಟರು, ವಾಯು ಸಂಚಾರ ನಿಯಂತ್ರಕರು, ವಸ್ತು ಸಂಗ್ರಹಾಲಯ ಸಿಬ್ಬಂದಿ ಸೇರಿದಂತೆ ಅನೇಕ ಸರಕಾರಿ ನೌಕರರಿಗೆ ಶುಕ್ರವಾರ ವಿತರಣೆಯಾಗಬೇಕಿದ್ದ ವೇತನ ಬಿಡುಗಡೆಯಾಗಿಲ್ಲ.

ಗಡಿ ಗೋಡೆ ನಿರ್ಮಾಣಕ್ಕೆ ಸಂಸತ್ತು ಒಪ್ಪದಿದ್ದರೆ ಸರಕಾರ ಸ್ಥಗಿತ ಮುಂದುವರಿಯಲಿದೆ ಹಾಗೂ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ಗೋಡೆ ನಿರ್ಮಿಸಲಾಗುವುದು ಎಂದು ಟ್ರಂಪ್‌ ಪದೇ ಪದೆ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ