ಆ್ಯಪ್ನಗರ

ದಕ್ಷಿಣ ಚೀನಾ ಸಮುದ್ರದಲ್ಲಿ ಭಾರೀ ಅಲೆಗಳು: ಸದ್ದು ಮಾಡುತ್ತಿವೆ ಅಮೆರಿಕ-ಚೀನಾ ಸಮರ ನೌಕೆಗಳು!

ದಕ್ಷಿಣ ಚೀನಾ ಸಮುದ್ರದಲ್ಲಿನ ಅಮೆರಿಕ-ಚೀನಾ ನಡುವಿನ ಮಿಲಿಟರಿ ​​ಚಟುವಟಿಕೆಗಳು ಜಗತ್ತಿನ ಗಮನ ಸೆಳೆದಿದ್ದು, ಎರಡು ಬೃಹತ್ ಶಕ್ತಿಶಾಲಿ ರಾಷ್ಟ್ರಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಏನು ಕಾರ್ಯತಂತ್ರ ಹೂಡುತ್ತಿವೆ ಎಂಬುದರ ಕುರಿತು ತೀವ್ರ ಕುತೂಹಲ ಮನೆ ಮಾಡಿದೆ.

Vijaya Karnataka Web 6 Jul 2020, 11:43 pm
ಬೀಜಿಂಗ್: ಹೀಗಾಗುತ್ತದೆ ಎಂದು ಚೀನಾ ಊಹಿಸಿರಲಿಕ್ಕೆ ಸಾಧ್ಯವೇ ಇಲ್ಲ. ಲಡಾಖ್‌ನಲ್ಲಿ ಭಾರತವನ್ನು ಕೆಣಕಿ ತೆಪ್ಪಗಾದ ಚೀನಾ, ದಕ್ಷಿಣ ಚೀನಾ ಸಮುದ್ರದಲ್ಲಿ ಸೈನ್ಯ ಬಲವರ್ಧನೆಗೊಳಿಸಿ ಅಮೆರಿಕವನ್ನು ಕೆಣಕಿದೆ.
Vijaya Karnataka Web South-China-Sea-
ಸಂಗ್ರಹ ಚಿತ್ರ


ದಕ್ಷಿಣ ಚೀನಾ ಸಮುದ್ರದಲ್ಲಿ ಪಿಎಲ್‌ಎ ನಿಯೋಜನೆಗೊಳಿಸಿ ಜಪಾನ್ ಹಾಗೂ ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶ ಕಳುಹಿಸಬಹುದು ಎಂದು ಬಗೆದಿದ್ದ ಚೀನಾಗೆ ಅಮೆರಿಕ ಸೂಕ್ತ ತಿರುಗೇಟನ್ನೇ ನೀಡಿದೆ.

ಚೀನಾದ ವಿರುದ್ಧ ಜಾಗತಿಕವಾಗಿ ಸೈನ್ಯ ರವಾನೆ ಮಾಡಲು ಸಿದ್ಧ ಎಂದು ಈಗಾಗಲೇ ಘೋಷಿಸಿದ್ದ ಅಮೆರಿಕ, ಅದರಂತೆ ದಕ್ಷಿಣ ಚೀನಾ ಸಮುದ್ರದ ಅಂತಾರಾಷ್ಟ್ರೀಯ ಗಡಿಯಲ್ಲಿ ಎರಡು ಅತ್ಯಾಧುನಿಕ ನೌಕಾ ಯುದ್ಧ ಹಡಗುಗಳನ್ನು ರವಾನೆ ಮಾಡಿರುವುದಾಗಿ ಹೇಳಿದೆ.

'ನಿಮ್ಮ ಆಯುಧಗಳಿಗೆ ನಾವು ಹೆದರುವುದಿಲ್ಲ': ಚೀನಾಗೆ ಅಮೆರಿಕಾ ನೌಕಾಪಡೆ ತೀಕ್ಷ್ಣ ತಿರುಗೇಟು

ದಕ್ಷಿಣ ಚೀನಾ ಸಮುದ್ರದ ಮೇಲಿನ ಹಕ್ಕು ಸಂಪೂರ್ಣವಾಗಿ ನಮಗೆ ಸೇರಿದ್ದು, ಈ ಪ್ರದೇಶದಲ್ಲಿ ಅಮೆರಿಕ ಮೂಗು ತೂರಿಸಿದರೆ ನಮ್ಮ ಡಿಎಫ್‌-21ಡಿ ಮತ್ತು ಡಿಎಫ್‌-26ಗಳಂತಹ ಅತ್ಯಾಧುನಿಕ ಯುದ್ಧ ಹಡಗುಗಳು ತಕ್ಕ ಪ್ರತ್ಯುತ್ತರ ನೀಡಲಿವೆ ಎಂದು ಚೀನಾ ಎಚ್ಚರಿಸಿತ್ತು.

ಇದಕ್ಕೆ ಅಷ್ಟೇ ತಣ್ಣಗಿನ ಪ್ರತಿಕ್ರಿಯೆ ನೀಡಿರುವ ಅಮೆರಿಕದ ನೌಕಾಪಡೆ, ಚೀನಾದ ಯುದ್ಧ ಹಡಗುಗಳಿಗೆ ನಾವು ಎಂದಿಗೂ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಈಗಾಗಲೇ ದಕ್ಷಿಣ ಚೀನಾ ಸಮುದ್ರದ ಅಂತಾರಾಷ್ಟ್ರೀಯ ಗಡಿಯಲ್ಲಿ ನಮ್ಮ ಯುಎಸ್‌ಎಸ್‌ ನಿಮಿಟ್ಜ್‌ ಮತ್ತು ಯುಎಸ್‌ಎಸ್‌ ರೋನಾಲ್ಡ್‌ ರೇಗಾನ್ ಯುದ್ಧ ಹಡಗುಗಳು ಗಸ್ತು ತಿರುಗುತ್ತಿವೆ ಎಂದು ಅಮೆರಿಕ ನೌಕಾಪಡೆ ಹೇಳಿದೆ.

ಚೀನಾ ಅಪಾಯ ಎದುರಿಸಲು ಜಾಗತಿಕವಾಗಿ ಸೇನೆ ರವಾನೆಗೆ ಚಿಂತನೆ: ಅಮೆರಿಕ ಘೋಷಣೆ!

ದಕ್ಷಿಣ ಚೀನಾ ಸಮುದ್ರ ವಿವಾದ:
ದಕ್ಷಿಣ ಚೀನಾ ಸಮುದ್ರದ ಮೇಲೆ ಸಂಪೂರ್ಣವಾಗಿ ತನ್ನ ಹಕ್ಕಿದೆ ಎಂದು ಚೀನಾ ಹೇಳುತ್ತಲೇ ಬಂದಿದೆ. ಜಪಾನ್, ವಿಯೆಟ್ನಾಂ, ಫಿಲಿಪೈನ್ಸ್ ಸೇರಿದಂತೆ ಹಲವು ರಾಷ್ಟ್ರಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಉಪಟಳವನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಅದರಲ್ಲೂ ಈ ಭಾಗದಲ್ಲಿ ಚೀನಾದ ಆರ್ಥಿಕ ಚಟುವಟಿಕೆ ಹಾಗೂ ಸೈನ್ಯ ಬಲವರ್ಧನೆಯಿಂದಾಗಿ ಸಹಜವಾಗಿ ಅಮೆರಿಕ ಹಾಗೂ ಜಪಾನ್‌ ಹೆಚ್ಚಿನ ನಿಗಾ ಇರಿಸಿವೆ.

ಒಟ್ಟಿನಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿನ ಅಮೆರಿಕ-ಚೀನಾ ನಡುವಿನ ಮಿಲಿಟರಿ ಚಟುವಟಿಕೆಗಳು ಜಗತ್ತಿನ ಗಮನ ಸೆಳೆದಿರುವುದು ಸುಳ್ಳಲ್ಲ ಎಂದು ಹೇಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ