ಆ್ಯಪ್ನಗರ

ಪುಟಾಣಿ ಶೆರಿನ್‌ ಸಾವಿಗೆ ಕೊನೆಗೂ ನ್ಯಾಯ

ತಂದೆಗೆ ಜೀವಿತಾವಧಿ ಶಿಕ್ಷೆ ಡಲ್ಲಾಸ್‌: ಎರಡು ವರ್ಷದ ಹಿಂದೆ ಇಡೀ ಜಗತ್ತಿನ ಮನ ಕಲಕಿದ ಭಾರತೀಯ ಮೂಲದ ಮೂರು ವರ್ಷದ ಮಗು ಶೆರಿನ್‌ಳ ಕೊಲೆಗೆ ಕೊನೆಗೂ ನ್ಯಾಯ ಸಿಕ್ಕಿದೆ...

PTI 28 Jun 2019, 5:00 am
ಡಲ್ಲಾಸ್‌: ಎರಡು ವರ್ಷದ ಹಿಂದೆ ಇಡೀ ಜಗತ್ತಿನ ಮನ ಕಲಕಿದ ಭಾರತೀಯ ಮೂಲದ ಮೂರು ವರ್ಷದ ಮಗು ಶೆರಿನ್‌ಳ ಕೊಲೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಆಕೆಯ ಇಂಡೋ-ಅಮೆರಿಕನ್‌ ಮಲ ತಂದೆ ವೆಸ್ಲಿ ಮ್ಯಾಥ್ಯೂಸ್‌ಗೆ(39) ಡಲ್ಲಾಸ್‌ನ ನ್ಯಾಯಾಲಯ ಜೀವಿತಾವಧಿ ಶಿಕ್ಷೆ ವಿಧಿಸಿದೆ.
Vijaya Karnataka Web sherin

ಮಗುವನ್ನು ಕೊಂದು ಮನೆಯ ಸಮೀಪದ ಚರಂಡಿಗೆ ಎಸೆದಿದ್ದ ಈ ಕೇರಳ ಮೂಲದ ಮ್ಯಾಥ್ಯೂಸ್‌ಗೆ ಮರಣದಂಡನೆ ವಿಧಿಸಬೇಕೆಂದು ಅಧಿಕಾರಿಗಳು ವಾದಿಸಿದ್ದರೂ ಅಂತಿಮವಾಗಿ ಕೋರ್ಟ್‌ ಜೀವನಪೂರ್ತಿ ಜೈಲಿನಲ್ಲಿ ಕೊಳೆಯುವ ಶಿಕ್ಷೆ ನೀಡಿದೆ. ಆತನಿಗೆ ಇನ್ನು 30 ವರ್ಷಗಳ ಬಳಿಕವಷ್ಟೇ ಪೆರೋಲ್‌ ಸಿಗಲಿದೆ ಎಂದು ಅಮೆರಿಕದ ಮಾಧ್ಯಮಗಳು ತಿಳಿಸಿವೆ.
ಆ ಮಹಾ ಪಾತಕದ ಕತೆ
ವೆಸ್ಲಿ ಮ್ಯಾಥ್ಯೂಸ್‌ ಮತ್ತು ಸಿನಿ ಮ್ಯಾಥ್ಯೂಸ್‌ ದಂಪತಿ 2016ರಲ್ಲಿ ಬಿಹಾರದ ಅನಾಥಾಲಯದಿಂದ ಶೆರಿನ್‌ ಎಂಬ ಪುಟ್ಟ ಮಗುವನ್ನು ದತ್ತು ಪಡೆದಿದ್ದರು. ಈ ದಂಪತಿಗೆ ಇನ್ನೊಬ್ಬಳು ಮಗಳೂ ಇದ್ದಳು.
2017ರ ಅಕ್ಟೋಬರ್‌ 7ರಂದು ರಾತ್ರಿ ಶೆರಿನ್‌ ಕಾಣೆಯಾಗಿದ್ದಳು. ಈ ಬಗ್ಗೆ ದೂರು ನೀಡಿದ ಎರಡು ವಾರಗಳ ಬಳಿಕ ಆಕೆಯ ಶವ ಮನೆಯಿಂದ ಅರ್ಧ ಕಿ.ಮೀ. ದೂರದ ಚರಂಡಿಯಲ್ಲಿ ಪತ್ತೆಯಾಗಿತ್ತು.
ಆವತ್ತು ರಾತ್ರಿ ಆಕೆ ಹಾಲು ಕುಡಿಯಲಿಲ್ಲ ಎಂದು ಮನೆಯಿಂದ ಹೊರಗೆ ನಿಲ್ಲಿಸಿದ್ದೆವು. ಸ್ವಲ್ಪ ಹೊತ್ತು ಬಿಟ್ಟು ನೋಡಿದಾಗ ಆಕೆ ಅಲ್ಲಿರಲಿಲ್ಲ. ಆ ಭಾಗದಲ್ಲಿ ಕಾಡು ನಾಯಿಗಳು ಇರುವುದರಿಂದ ರಾತ್ರಿ ಹುಡುಕಲಿಲ್ಲ. ಬೆಳಗ್ಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದವು. ಆಕೆ ಬಾರದೆ ಇದ್ದಾಗ ದೂರು ನೀಡಿದ್ದೆವು ಎಂದು ವೆಸ್ಲಿ ಹೇಳಿದ್ದ. ಆದರೆ, ಪೊಲೀಸರಿಗೆ ಆತನ ಮಾತಿನ ಮೇಲೆ ನಂಬಿಕೆ ಬಂದಿರಲಿಲ್ಲ.
ತೀವ್ರ ತನಿಖೆ ನಡೆಸಿದ್ದ ಪೊಲೀಸರಿಗೆ ವೆಸ್ಲಿಯೇ ಆಕೆಯನ್ನು ಕೊಂದು ಕಸ ತುಂಬಿದ ಬ್ಯಾಗ್‌ನಲ್ಲಿ ಹಾಕಿ ಚರಂಡಿ ಬಳಿ ಎಸೆದಿದ್ದ ಎಂಬುದು ಸ್ಪಷ್ಟವಾಗಿತ್ತು. ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆಯೇ ವೆಸ್ಲಿ ವರಸೆ ಬದಲಿಸಿದ್ದ. ''ನಾನು ಒತ್ತಾಯದಿಂದ ಹಾಲು ಕುಡಿಸುವಾಗ ಆಕೆಯ ನೆತ್ತಿಗೆ ಹತ್ತಿ ಮೃತಪಟ್ಟಳು. ಭಯಗೊಂಡ ನಾನು ಹೆಂಡತಿಗೂ ಹೇಳದೆ ಶವವನ್ನು ಸಾಗಿಸಿ ಎಸೆದೆ,'' ಎಂದು ಹೇಳಿದ್ದ. ಆದರೆ, ಈ ಕಾರಣವನ್ನೂ ಪೊಲೀಸರು ಒಪ್ಪಿರಲಿಲ್ಲ.
ಕೊನೆಗೆ ಆತ ಸತ್ಯ ಒಪ್ಪಿಕೊಂಡ. ''ಮಗುವಿನ ಆರೋಗ್ಯಚೆನ್ನಾಗಿರಲಿಲ್ಲ. ಆಕೆಗೆ ಮಾತನಾಡಲು ಆಗುತ್ತಿರಲಿಲ್ಲ. ದೈಹಿಕ ಬೆಳವಣಿಗೆ ಆಗಿರಲಿಲ್ಲ. 5 ಮೂಳೆಗಳು ಮುರಿದಿದ್ದವು. ಹಲ್ಲುಗಳು ಉದುರಿದ್ದವು. ಹಾಗಾಗಿ, ಇದೇ ರೀತಿ ಜೀವನವಿಡೀ ಬದುಕುತ್ತಾ ಕಷ್ಟಪಡುವುದು ಬೇಡ ಎಂಬ ಕಾರಣಕ್ಕೆ ಕೊಂದೆ,'' ಎಂದು ವೆಸ್ಲಿ ಒಪ್ಪಿಕೊಂಡ.
ಭಾರಿ ಸುದ್ದಿಯಾದ ಪ್ರಕರಣ
ಈ ಸಾವು ಭಾರತೀಯ ಮಗುವೊಂದು ಅಮೆರಿಕದಲ್ಲಿ ಸತ್ತಿದೆ ಎಂಬ ಕಾರಣಕ್ಕೆ ಮಾತ್ರವಲ್ಲ, ಮಕ್ಕಳ ದತ್ತು ನೀಡುವಿಕೆ ವಿಚಾರದಲ್ಲು ಭಾರಿ ಚರ್ಚೆಗೆ ಕಾರಣವಾಯಿತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮಗುವಿಗೆ ನ್ಯಾಯ ಕೊಡಿಸಬೇಕೆಂದು ಹೋಸ್ಟನ್‌ನಲ್ಲಿರುವ ಭಾರತೀಯ ದೂತಾವಾಸಕ್ಕೆ ಸೂಚಿಸಿದ್ದರು. ಜತೆಗೆ ವೆಸ್ಲಿ ಮತ್ತು ಸಿನಿಯ ಸಾಗರೋತ್ತರ ಭಾರತೀಯ ಪೌರತ್ವವನ್ನು ರದ್ದುಪಡಿಸಿದ್ದರು. ಜತೆಗೆ ದೇಶದಲ್ಲಿ ದತ್ತು ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ