ಆ್ಯಪ್ನಗರ

ಇಂಡೋ-ಚೀನಾ ಯುದ್ಧದ ಸಿನಿಮಾ ಕಾನ್‌ ಚಿತ್ರೋತ್ಸವಕ್ಕೆ

1962ರ ಭಾರತ-ಚೀನಾ ಯುದ್ಧದ ಕಥೆಯನ್ನಾಧರಿಸಿ, ಅಸ್ಸಾಂನ 28ರ ಹರೆಯದ ಯುವಕ ನಿರ್ದೇಶಿಸಿದ '1962: ಮೈ ಕಂಟ್ರಿ ಲ್ಯಾಂಡ್‌' ಸಿನಿಮಾ ಬುಧವಾರ ಕಾನ್‌ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಏಜೆನ್ಸೀಸ್ 18 May 2016, 4:00 am

ಹೊಸದಿಲ್ಲಿ: 1962ರ ಭಾರತ-ಚೀನಾ ಯುದ್ಧದ ಕಥೆಯನ್ನಾಧರಿಸಿ, ಅಸ್ಸಾಂನ 28ರ ಹರೆಯದ ಯುವಕ ನಿರ್ದೇಶಿಸಿದ '1962: ಮೈ ಕಂಟ್ರಿ ಲ್ಯಾಂಡ್‌' ಸಿನಿಮಾ ಬುಧವಾರ ಕಾನ್‌ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ದಿಬ್ರೂಗಢ ಮೂಲದ ಚೌ ಪಾರ್ಥ ಬೋರ್ಗೋಹೇನ್‌ 108 ನಿಮಿಷಗಳ ಈ ಇಂಗ್ಲಿಷ್‌ ಭಾಷಾ ಚಿತ್ರವನ್ನು ನಿರ್ದೇಶಿಸಿದ್ದು, ಲಿವಿಂಗ್‌ ಡ್ರೀಮ್ಸ್‌ ಬ್ಯಾನರ್‌ನಡಿ ಮಾರ್ಬಮ್‌ ಮಾಯಿ ನಿರ್ಮಿಸಿದ್ದಾರೆ.

2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾಕ್ಕೆ ಖುದ್ದು ಪಾರ್ಥ ಅವರೇ ಕಥೆ, ಚಿತ್ರಕಥೆ ಬರೆದು ಛಾಯಾಗ್ರಹಣವನ್ನೂ ಮಾಡಿದ್ದಾರೆ. ಸಂಗೀತ ನಿರ್ದೇಶನ ಮಣಿಪುರದ ಜಾನಪದ ಲೋಕದ ದಂತಕಥೆ ಗುರು ರಾವ್‌ಬೆನ್‌ ಮಶಂಗ್ವಾ ಮತ್ತು ಶಂಕರ್‌ ಶಂಕಿನಿ.

ಏನಿದು ಮೈ ಕಂಟ್ರಿ ಲ್ಯಾಂಡ್‌?

ಅರುಣಾಚಲ ಪ್ರದೇಶದಲ್ಲಿ ಹುಟ್ಟಿ ಈಗ ಅಸ್ಸಾಂನ ದಿಬ್ರೂಗಢದಲ್ಲಿ ವಾಸಿಸುತ್ತಿರುವ ಪಾರ್ಥಗೆ ಯುದ್ಧ ಮತ್ತು ನಂತರದ ಅರುಣಾಚಲ ಪ್ರದೇಶದ ಸ್ಥಿತಿ ಬಹುವಾಗಿ ಕಾಡಿ, ಅದೇ ಕತೆಯಾಗಿದೆ. ಯುದ್ಧದ ಸಂದರ್ಭದಲ್ಲಿ ನಡೆದ ವಂಚನೆಗಳು, ನೋವು ಚಿತ್ರಕಥೆಯ ರೂಪ ಪಡೆದಿದೆ.

1962: ಮೈ ಕಂಟ್ರಿ ಲ್ಯಾಂಡ್‌ ಕಥೆ, ಭಾರತ ಮತ್ತು ಟಿಬೆಟ್‌ ಪ್ರದೇಶವನ್ನು ಬೇರ್ಪಡಿಸುವ ಇಂಡೋ-ಚೀನಾ ನೈಜ ಗಡಿ ರೇಖೆ ಸಮೀಕ್ಷೆ ಹೊಣೆ ಹೊತ್ತ ಸೇನಾ ಲಾನ್ಸ್‌ ನಾಯ್ಕ್‌ ಲುಯಿತ್ಯಾ ಅವರ ಸುತ್ತ ತಿರುಗುತ್ತದೆ.

ಸರ್ವೇ ಸಂದರ್ಭದಲ್ಲಿ ವಿಶಾಲ ಹಿಮಾಲಯ ಪರ್ವತ ಶ್ರೇಣಿಯ ನಡುವೆ ಲುಯಿತ್ಯಾ ಮತ್ತು ಸಹವರ್ತಿ ಗ್ಯಾತ್ಸೋ ದಾರಿ ತಪ್ಪಿ ಭಾರತದ್ದೂ ಅಲ್ಲದ, ಚೀನಾಕ್ಕೂ ಸೇರದ ಒಂದು ಪ್ರದೇಶದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.

ಆ ಪ್ರದೇಶದಲ್ಲಿ ಅವರಿಗೆ ಎದುರಾಗುವುದು ಯಾವುದೋ ನಿಗೂಢ ಉದ್ದೇಶ ಮತ್ತು ರಹಸ್ಯಗಳನ್ನು ಹೊತ್ತ ವಾಂಗ್‌ ಎಂಬ ವ್ಯಾಪಾರಿ ಮತ್ತು ಗ್ರಾಮದ ಮುಖ್ಯಸ್ಥನ ಮಗಳು ಯಾಕಾ.

ಒಂದು ಹಂತದಲ್ಲಿ ಲುಯಿತ್ಯಾ ಮತ್ತು ವಾಂಗ್‌ ಯಾರಿಗೂ ಸೇರದ ಆ ಜಾಗಕ್ಕಾಗಿ ಹೋರಾಡುತ್ತಾರೆ. ಮುಂದೆ ಇದೇ ಪೈಪೋಟಿ ಯಾಕಾನನ್ನು ಪಡೆಯುವಲ್ಲೂ ಮುಂದುವರಿಯುತ್ತದೆ. ವಾಂಗ್‌ನ ಪ್ರೀತಿಯನ್ನು ತಡೆಯಲು ಹೋದ ಲುಯಿತ್ಯಾಗೆ ಅವಳ ಮೇಲೆ ಪ್ರೀತಿ ಹುಟ್ಟುತ್ತದೆ. ಈ ನಡುವೆ, ಭೂಗತ ಬಂಡುಕೋರನೊಬ್ಬ ಭೂಮಿಯನ್ನು ಪಡೆಯಲು ಯತ್ನಿಸಿದಾಗ ಅವನ ವಿರುದ್ಧ ಲುಯಿತ್ಯಾ, ವಾಂಗ್‌, ಯಾಕಾ ಒಂದಾಗುತ್ತಾರೆ. ಬಳಿಕ ಸ್ನೇಹಿತರಾಗುತ್ತಾರೆ.

ಅಷ್ಟು ಹೊತ್ತಿಗೆ, ಚೀನಾ-ಬಾಂಗ್ಲಾ ಯುದ್ಧ ಆರಂಭವಾಗುತ್ತದೆ, ವಾಂಗ್‌ ಮತ್ತು ಲುಯಿತ್ಯಾ ಇಬ್ಬರೂ ಅಲ್ಲಿಂದ ಹೊರಡಬೇಕಾಗುತ್ತದೆ. ಹೊರಡುವ ವೇಳೆ, ಯುದ್ಧ ಮುಗಿದ ಮೇಲೆ ಮತ್ತೆ ಬರುತ್ತೇನೆ ಅಂತ ಯಾಕಾಗೆ ಲುಯಿತ್ಯಾ ಹೇಳುತ್ತಾನೆ. ವಾಂಗ್‌ ಯಾಕಾಳಿಗಾಗಿ ತನ್ನ ನೆಲದ ಹೋರಾಟವನ್ನೇ ಬಿಟ್ಟುಬಿಡುತ್ತಾನೆ.

ಯುದ್ಧ ಮುಗಿದ ಬಳಿಕ ಲುಯಿತ್ಯಾ ಹೋಗಿ ನೋಡುತ್ತಾನೆ.. ಯಾಕಾಳೂ ಇಲ್ಲ, ಇಡೀ ಗ್ರಾಮವೇ ಅಲ್ಲಿ ಇರುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ