ಆ್ಯಪ್ನಗರ

ಇಂಡೋನೇಷ್ಯಾ: ಮಸೀದಿ ಧ್ವನಿವರ್ಧಕದಿಂದ ಕಿರಿಕಿರಿ ಎಂದ ಮಹಿಳೆ ಜೈಲಿಗೆ

ಮಸೀದಿಯ ಗದ್ದಲದಿಂದ ತನಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದ ಮಹಿಳೆಯೊಬ್ಬಳಿಗೆ ದೈವನಿಂದನೆ ಆರೋಪದಲ್ಲಿ ಇಂಡೋನೇಷ್ಯಾ ಕೋರ್ಟ್‌ 18 ತಿಂಗಳ ಜೈಲುವಾಸ ವಿಧಿಸಿದೆ.

Vijaya Karnataka Web 21 Aug 2018, 4:39 pm
[ಮೂಲ ಸುದ್ದಿ: ಟೈಮ್ಸ್ ಆಫ್ ಇಂಡಿಯಾ, 21 ಆಗಸ್ಟ್ 2018]
Vijaya Karnataka Web Loud Speaker


ಮೇಡನ್‌ (ಇಂಡೋನೇಷ್ಯಾ):
ಮಸೀದಿಯ ಗದ್ದಲದಿಂದ ತನಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದ ಮಹಿಳೆಯೊಬ್ಬಳಿಗೆ ದೈವನಿಂದನೆ ಆರೋಪದಲ್ಲಿ ಇಂಡೋನೇಷ್ಯಾ ಕೋರ್ಟ್‌ 18 ತಿಂಗಳ ಜೈಲುವಾಸ ವಿಧಿಸಿದೆ.

ಚೀನಾ ಮೂಲದ ಮಹಿಳೆ ಮೀಲಿಯಾನಾ ಎಂಬಾಕೆಯೇ ಈ ರೀತಿ ಶಿಕ್ಷೆಗೆ ಒಳಗಾದವಳು. ಕೋರ್ಟಿನಲ್ಲಿ ನ್ಯಾಯಾಧೀಶರಾದ ವಾಹ್ಯು ಪ್ರಸೆತ್ಯೊ ವಿಬೊವೊ ತೀರ್ಪು ಪ್ರಕಟಿಸುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಬಳಿಕ ಆಕೆಯ ಕೈಗಳಿಗೆ ಕೋಳ ತೊಡಿಸಿ ಕೋರ್ಟಿನಿಂದ ಹೊರಗೆ ಒಯ್ಯಲಾಯಿತು ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

44 ವರ್ಷ ವಯಸ್ಸಿನ ಈ ಮಹಿಳೆ ದೈವನಿಂದನೆ ಮಾಡುವ ಮೂಲಕ ಇಸ್ಲಾಂ ವಿರುದ್ಧ ಅಪರಾಧವೆಸಗಿದ್ದಾಳೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಮಸೀದಿಗಳ ಧ್ವನಿವರ್ಧಕಗಳಿಂದ ತನಗೆ ತೊಂದರೆಯಾಗುತ್ತಿದೆ ಎಂದು ಮೀಲಿಯಾನಾ ದೂರು ನೀಡಿದ ಹಿನ್ನೆಲೆಯಲ್ಲಿ 2016ರ ಜುಲೈನಲ್ಲಿ ಸುಮಾತ್ರಾದ ಬಂದರು ಪಟ್ಟಣ ತಂಜುಂಗ್‌ ಬಲಾಯ್‌ನಲ್ಲಿ 14 ಬೌದ್ಧ ಮಂದಿರಗಳನ್ನು ಉದ್ರಿಕ್ತ ಗುಂಪುಗಳು ಸುಟ್ಟುಹಾಕಿದ್ದವು.

ಈ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮಹಿಳೆಯ ಪರ ವಕೀಲ ರಂಟೋ ಸಿಬರಾನಿ ತಿಳಿಸಿದ್ದಾರೆ. ಆದರೆ ಈಕೆಗೆ ವಿಧಿಸಿದ ಶಿಕ್ಷೆ ತೀರಾ ಕಡಿಮೆಯಾಯ್ತು ಎಂದು ಮೂಲಭೂತವಾದಿ ಇಸ್ಲಾಮಿಕ್ ಗುಂಪುಗಳು ಬಣ್ಣಿಸಿವೆ.

ಇಂಡೋನೇಷ್ಯಾದಲ್ಲಿ ದೈವ ದ್ರೋಹ ಪ್ರಕರಣಕ್ಕೆ ಗರಿಷ್ಠ 2 ವರ್ಷ ಶಿಕ್ಷೆ ವಿಧಿಸಲು ಅವಕಾಶವಿದೆ.

ಕಳೆದ ವರ್ಷ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಜಕಾರ್ತಾದ ಚೀನೀ ಗವರ್ನರ್‌ ಒಬ್ಬರಿಗೆ ಇದೇ ರೀತಿ ದೈವನಿಂದನೆ ಆರೋಪದಲ್ಲಿ ಎರಡು ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ