Please enable javascript.ಮಾಲಿ ಮೇಲೆ ದಾಳಿ: ಟಾರ್ಗೆಟ್ ಫ್ರಾನ್ಸ್ - Isis suspected, terror attack, Mali, Three killed - Vijay Karnataka

ಮಾಲಿ ಮೇಲೆ ದಾಳಿ: ಟಾರ್ಗೆಟ್ ಫ್ರಾನ್ಸ್

ಏಜೆನ್ಸೀಸ್ 21 Nov 2015, 4:42 am
Subscribe

ಮಾಲಿಯ ಮೇಲೆ ದಾಳಿ ನಡೆಸಿದ್ದರೂ ಉಗ್ರರ ಪ್ರಮುಖ ಟಾರ್ಗೆಟ್ ಫ್ರಾನ್ಸ್. ಇದಕ್ಕೆ ಕಾರಣ ಫ್ರಾನ್ಸ್ ಮೇಲೆ ಉಗ್ರರಿಗಿರುವ ಅಸಾಧ್ಯ ಕೋಪ. ಇದರ ಹಿನ್ನೆಲೆ ಹುಡುಕಿ ಹೊರಟರೆ ಕುತೂಹಲ ಕತೆಯೇ ತೆರೆದುಕೊಳ್ಳುತ್ತದೆ.

isis suspected terror attack mali three killed
ಮಾಲಿ ಮೇಲೆ ದಾಳಿ: ಟಾರ್ಗೆಟ್ ಫ್ರಾನ್ಸ್
ಮಾಲಿ ಮೇಲೆ ಹಿಡಿತ ಸ್ಥಾಪಿಸಲು ಉಗ್ರರಿಗೆ ಅವಕಾಶ ನೀಡದ ಫ್ರಾನ್ಸ್

ಬೊಮಾಕೊ: ಮಾಲಿಯ ಮೇಲೆ ದಾಳಿ ನಡೆಸಿದ್ದರೂ ಉಗ್ರರ ಪ್ರಮುಖ ಟಾರ್ಗೆಟ್ ಫ್ರಾನ್ಸ್. ಇದಕ್ಕೆ ಕಾರಣ ಫ್ರಾನ್ಸ್ ಮೇಲೆ ಉಗ್ರರಿಗಿರುವ ಅಸಾಧ್ಯ ಕೋಪ. ಇದರ ಹಿನ್ನೆಲೆ ಹುಡುಕಿ ಹೊರಟರೆ ಕುತೂಹಲ ಕತೆಯೇ ತೆರೆದುಕೊಳ್ಳುತ್ತದೆ.

ಮಾಲಿಯ ಉತ್ತರ ಭಾಗ ಮೊದಲಿನಿಂದಲೂ ಉಗ್ರರ ತವರು. 2012ರಲ್ಲಿ ಈ ಭಾಗ ಪೂರ್ತಿಯಾಗಿ ಉಗ್ರರ ಹಿಡಿತಕ್ಕೆ ಒಳಪಟ್ಟಿತು. ಉಗ್ರರ ವಿರುದ್ಧ ಸೆಣಸಲಾಗದ ಮಾಲಿ ಸರಕಾರ, ಫ್ರಾನ್ಸ್ ನೆರವು ಯಾಚಿಸಿತು. ಆಗ ರಣಾಂಗಣಕ್ಕಿಳಿದ ಫ್ರಾನ್ಸ್ ಪಡೆ, ಉಗ್ರರ ಬೆನ್ನುಮೂಳೆ ಮುರಿದು 2013ರ ಹೊತ್ತಿಗೆ ಈ ಪ್ರದೇಶವನ್ನು ಸರಕಾರದ ಹಿಡಿತಕ್ಕೆ ಒಳಪಡಿಸಿತ್ತು. ಆಗಿನಿಂದಲೂ ಈ ಪ್ರದೇಶದಲ್ಲಿ ಉಗ್ರರು ಮತ್ತು ಸರಕಾರದ ನಡುವೆ ಸೆಣಸಾಟ ನಡೆಯುತ್ತಿದೆ. ಇದರಿಂದ ಇಲ್ಲಿ ಪ್ರಕ್ಷುಬ್ಧತೆ ನಡೆಸಿದೆ. ಈ ಪ್ರದೇಶ ಕಳೆದ ಐದು ವರ್ಷಗಳಲ್ಲಿ ಹಲವು ಉಗ್ರ ದಾಳಿಗಳಿಗೆ ತುತ್ತಾಗಿದೆ.

ಅಷ್ಟೇ ಅಲ್ಲ, ಉಗ್ರರು ತಮ್ಮ ಕುಕೃತ್ಯವನ್ನು ಮಾಲಿಯ ದಕ್ಷಿಣ ಭಾಗಕ್ಕೂ ವಿಸ್ತರಿಸಿದ್ದಾರೆ. ಹೀಗೆ ಉಗ್ರರನ್ನು ಎದುರಿಸಲಾಗದ ಮಾಲಿ ಸರಕಾರ, ಉಗ್ರರ ವಿರುದ್ಧ ಹೋರಾಡುವ ಸಂಪೂರ್ಣ ಹೊಣೆಯನ್ನು ಫ್ರಾನ್ಸ್ ನೇತೃತ್ವದ ಮೈತ್ರಿಪಡೆಗೆ ಒಪ್ಪಿಸಿದೆ. ಫ್ರಾನ್ಸ್ ಸೈನಿಕರಿಗೆ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗಳು ನೆರವು ನೀಡುತ್ತಿವೆ.

ಈಗಲೂ ಒಂದು ಸಾವಿರ ಯೋಧ ಬಲದ ಫ್ರಾನ್ಸ್ ಪಡೆ ಮಾಲಿಯಲ್ಲಿ ಬೀಡುಬಿಟ್ಟು ಉಗ್ರನಿಗ್ರಹ ಕಾರ‌್ಯಾಚರಣೆ ನಡೆಸುತ್ತಿದೆ. ಫ್ರಾನ್ಸ್ ಸೈನಿಕರಿಗೆ ನೆದರ್‌ಲೆಂಡ್(ಡಚ್) ಸೈನಿಕರು ನೆರವು ನೀಡುತ್ತಿದ್ದಾರೆ. ಡಚ್‌ನ 450 ಸೇನಾ ಸಿಬ್ಬಂದಿ ಚಿನೂಕ್ ಹೆಲಿಕಾಪ್ಟರ್ ದಳದೊಂದಿಗೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ. ಇದು ಉಗ್ರರ ಸಿಟ್ಟಿಗೆ ಕಾರಣ. ಮಾಲಿಯಲ್ಲಿ ಕಾಲೂರಲು ಅವಕಾಶ ನೀಡದ ಫ್ರಾನ್ಸ್ ವಿರುದ್ಧ ಸೇಡು ತೀರಿಸಲೆಂದೇ ಐಸಿಸ್ ಪಾತಕಿಗಳು ಪ್ಯಾರಿಸ್ ಹತ್ಯಾಕಾಂಡ ನಡೆಸಿದ್ದು.

ಅಲ್ಲಾಹು ಅಕ್ಬರ್....

ಕಾರಿನಲ್ಲಿ ರ‌್ಯಾಡಿಸನ್ ಬ್ಲೂ ಹೋಟೆಲ್‌ಗೆ ಲಗ್ಗೆ ಹಾಕಿದ ಮೂವರು ಉಗ್ರರ ದಂಡು, ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆ ಕೂಗುತ್ತಾ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದರು. ಪ್ರವೇಶ ದ್ವಾರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಮೂರು ಮಂದಿ ಉಗ್ರರ ಗುಂಡಿಗೆ ಬಲಿಯಾದರು.

198 ಕೊಠಡಿ, ಹಲವು ದೇಶಗಳ ಪ್ರಜೆಗಳು

ರ‌್ಯಾಡಿಸನ್ ಬ್ಲೂ ಬೊಮಾಕೊ ನಗರದ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದು. 198 ಕೊಠಡಿಗಳ ಹೋಟೆಲ್‌ನಲ್ಲಿ ಭಾರತ, ಚೀನಾ, ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ದೇಶಗಳ 170 ಮಂದಿ ಪ್ರಜೆಗಳು ವಸತಿ ಹೂಡಿದ್ದರು.

ಖುರಾನ್ ಓದಲು ಹೇಳಿದರು

ರ‌್ಯಾಡಿಸನ್ ಹೋಟೆಲ್‌ನಲ್ಲಿ ಬಂದಿಯಾಗಿದ್ದ ಒತ್ತೆಯಾಳುಗಳಿಗೆ ಅಲ್ಲಿಂದ ಬಿಡುಗಡೆಯಾಗುವುದ ಅಷ್ಟು ಕಠಿಣ ಕೆಲಸವೇನೂ ಆಗಿಲಿಲ್ಲ. ಉಗ್ರರು ಖುರಾನ್ ಪುಸ್ತಕ ನೀಡಿ ಅದರಲ್ಲಿರುವ ಕೆಲವು ಸಾಲುಗಳನ್ನು ಓದಲು ಹೇಳಿದರು. ಸ್ಪಷ್ಟವಾಗಿ ಓದಿದವರನ್ನೆಲ್ಲಾ ಸುರಕ್ಷಿತವಾಗಿ ಬಿಡುಗಡೆ ಮಾಡಿದರು.

ಹೊಣೆ ಹೊತ್ತುಕೊಂಡ ಅನ್ಸಾರ್ ದೀನ್

ಮಾಲಿ ದಾಳಿಯ ಹೊಣೆಯನ್ನು ಅಲ್ ಖಾಯಿದಾ ಭಯೋತ್ಪಾದಕ ಸಂಘಟನೆಯ ಅಂಗಸಂಸ್ಥೆಯಾದ ಅನ್ಸಾರ್ ದೀನ್ ಹೊತ್ತುಕೊಂಡಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ