Please enable javascript.ಚಂದ್ರನ ಅಂಗಳದಲ್ಲಿ ಇಳಿದ 5ನೇ ದೇಶ: ಜಪಾನ್‌ನ 'ಮೂನ್‌ ಸ್ನೈಪರ್‌'ಗೆ ಕೈಕೊಟ್ಟ ಸೌರ ಫಲಕ - japan spacecraft moon sniper lands on lunar but solar panel suffers issue - Vijay Karnataka

ಚಂದ್ರನ ಅಂಗಳದಲ್ಲಿ ಇಳಿದ 5ನೇ ದೇಶ: ಜಪಾನ್‌ನ 'ಮೂನ್‌ ಸ್ನೈಪರ್‌'ಗೆ ಕೈಕೊಟ್ಟ ಸೌರ ಫಲಕ

Edited byಅಮಿತ್ ಎಂ.ಎಸ್ | Vijaya Karnataka 20 Jan 2024, 6:07 pm
Subscribe

Japan's Moon Sniper: ಜಪಾನ್‌ನ ಬಾಹ್ಯಾಕಾಶ ಸಂಸ್ಥೆ 'ಜಕ್ಸಾ'ದ ಮಹತ್ವಾಕಾಂಕ್ಷಿ ಮೂನ್ ಸ್ನೈಪರ್, ಶುಕ್ರವಾರ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ. ಇದರೊಂದಿಗೆ ಈ ಸಾಧನೆ ಮಾಡಿದ ಜಗತ್ತಿನ ಐದನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಅದರ ಸೌರ ಫಲಕಗಳು ಸೂರ್ಯ ಕಿರಣಗಳಿಗೆ ಅಭಿಮುಖವಾಗಿ ಇರದ ಕಾರಣ, ಅವು ನೌಕೆಗೆ ಅಗತ್ಯವಾದ ವಿದ್ಯುತ್ ಉತ್ಪಾದಿಸುವಲ್ಲಿ ವಿಫಲವಾಗಿದೆ.

Moon Landing
ಟೋಕಿಯೊ: ಚಂದ್ರನ ಅಂಗಳದಲ್ಲಿ ನೌಕೆ ಇಳಿಸುವ ಮೂಲಕ ಜಪಾನ್‌, ಇಂಥ ಸಾಹಸಗೊಂಡ ವಿಶ್ವದ ಐದನೇ ರಾಷ್ಟ್ರವಾಗಿ ಹೊರಹೊಮ್ಮಿದೆ.

'ಮೂನ್‌ ಸ್ನೈಪರ್‌' ಎಂದು ಕರೆಯಲಾಗುವ 'ಸ್ಮಾರ್ಟ್‌ ಲ್ಯಾಂಡರ್‌ ಫಾರ್‌ ಇನ್‌ವೆಸ್ಟಿಗೇಟಿಂಗ್‌ ಮೂನ್‌' (ಎಸ್‌ಎಲ್‌ಐಎಂ) ನೌಕೆಯನ್ನು ಜಪಾನ್‌ ಬಾಹ್ಯಾಕಾಶ ವಿಜ್ಞಾನಿಗಳ ತಂಡವು 'ಪಿನ್‌ಪಾಯಿಂಟ್‌ ತಂತ್ರಜ್ಞಾನ' ಬಳಸಿ ಶುಕ್ರವಾರ ಮಧ್ಯಾಹ್ನ 12.30ರ (ಸ್ಥಳೀಯ ಕಾಲಮಾನ) ಸುಮಾರಿಗೆ ಚಂದ್ರನ ಅಂಗಳದ ಮೇಲೆ ಇಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಜಪಾನ್‌ ಏರೋಸ್ಪೇಸ್‌ ಎಕ್ಸ್‌ಪ್ಲೋರೇಷನ್‌ ಏಜೆನ್ಸಿ ಹೇಳಿದೆ. ಲ್ಯಾಂಡಿಂಗ್‌ಗೆ ಗುರುತಿಸಲಾಗಿದ್ದ 100 ಮೀಟರ್‌ ಸುತ್ತಳತೆಯ ಜಾಗದಲ್ಲಿಯೇ ಇಳಿದಿದ್ದು, ಚಂದ್ರನ ಮೇಲ್ಮೈ ವಾತಾವರಣದ ಕುರಿತು ಇದು ಅಧ್ಯಯನ ನಡೆಸಲಿದೆ.
ಇಸ್ರೋ ಬಳಿಕ ಚಂದ್ರಲೋಕಕ್ಕೆ 'ಜಕ್ಸಾ' ನೌಕೆ ಉಡಾವಣೆ: ಜಪಾನ್‌ನ 'ಮೂನ್ ಸ್ನೈಪರ್' ವಿಶೇಷತೆಯೇನು?

ಆದರೆ ನೌಕೆಯ ಸೌರ ಶಕ್ತಿಯಲ್ಲಿ ಕಂಡು ಬಂದಿರುವ ಸಮಸ್ಯೆಗಳು, ಯೋಜನೆಗೆ ಹಿನ್ನಡೆ ಉಂಟುಮಾಡುವ ಆತಂಕ ಮೂಡಿಸಿದೆ. ನೌಕೆಯ ಸೌರ ಪ್ಯಾನೆಲ್‌ಗಳಿಗೆ ವಿದ್ಯುತ್ ಸೃಷ್ಟಿಸುವುದು ಸಾಧ್ಯವಾಗುತ್ತಿಲ್ಲ. ಬಹುಶಃ ಅವುಗಳು ತಪ್ಪಾದ ಕೋನದಲ್ಲಿ ಇರಬಹುದು ಎಂದ ಜಪಾನ್ ಬಾಹ್ಯಾಕಾಶ ಆವಿಷ್ಕಾರ ಸಂಸ್ಥೆ (ಜಕ್ಸಾ) ಹೇಳಿದೆ.

ಯೋಜನೆಯು ಅದರ ಬ್ಯಾಟರಿಗಳ ಮೇಲಷ್ಟೇ ಅವಲಂಬಿತವಾಗಿರುವುದರಿಂದ 'ಸ್ಲಿಮ್' ಡೇಟಾವು ಭೂಮಿಗೆ ವರ್ಗಾಯಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಅದರ ಹೀಟರ್‌ ಆಫ್ ಮಾಡುವಂತಹ 'ಜೀವ ಉಳಿಸುವ ಚಿಕಿತ್ಸೆ'ಗಳ ಹೊರತಾಗಿಯೂ ಅದು ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತದೆ ಎಂದು ಜಕ್ಸಾದ ಸಂಶೋಧನಾ ಕೇಂದ್ರದ ಮುಖ್ಯಸ್ಥ ಹಿತೋಶಿ ಕುನಿನಕಾ ತಿಳಿಸಿದ್ದಾರೆ.
ಜಪಾನ್ ಸಹಯೋಗದಲ್ಲಿ ಚಂದ್ರಯಾನ-4: ಯಶಸ್ಸಿನ ಬಳಿಕ ಮುಂದಿನ ಯೋಜನೆಗೆ ಇಸ್ರೋ ಸಜ್ಜು!

ಅಪಾಯಕಾರಿ ಪ್ರಯತ್ನಗಳಿಗೆ ಕೈ ಹಾಕುವ ಬದಲು, ಯಥಾಸ್ಥಿತಿ ಕಾಪಾಡಿಕೊಳ್ಳಲು ಜಕ್ಸಾ ನಿರ್ಧರಿಸಿದ್ದು, ನೌಕೆಯು ತನ್ನ ಕಾರ್ಯಾಚರಣೆಯನ್ನು ಮರು ಆರಂಭಿಸಲು ಅನುಕೂಲವಾಗುವ ದಿಕ್ಕಿನಿಂದ ಸೂರ್ಯ ಕಿರಣಗಳು ಸೌರ ಫಲಕದ ಮೇಲೆ ಬೀಳಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಈಗಾಗಲೇ ಭಾರತ, ಅಮೆರಿಕ, ಚೀನಾ ಮತ್ತು ರಷ್ಯಾ ತನ್ನ ಲ್ಯಾಂಡರ್‌ಗಳನ್ನು ಚಂದ್ರನ ಅಂಗಳದಲ್ಲಿ ಇಳಿಸಿ ಇತಿಹಾಸ ಬರೆದಿವೆ. ಜಪಾನ್‌ 2023ರ ಸೆಪ್ಟೆಂಬರ್‌ 6ರಂದು ಈ ಬಾಹ್ಯಾಕಾಶ ನೌಕೆಯನ್ನು ತಂಗಶಿಮಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ಕಳೆದ ವರ್ಷದ ಡಿಸೆಂಬರ್‌ 25ರಂದು ಇದು ಚಂದ್ರನ ಕಕ್ಷೆ ಪ್ರವೇಶಿಸಿತ್ತು.

ನಾಸಾದ ಸಂಪರ್ಕಕ್ಕೆ ಸಿಕ್ಕ ವಿಕ್ರಮ್‌ ಲ್ಯಾಂಡರ್‌ನ ಉಪಕರಣ!

ಚಂದ್ರನ ದಕ್ಷಿಣ ಧ್ರುವದಲ್ಲಿಇಳಿದು ಇತಿಹಾಸ ಸೃಷ್ಟಿಸಿದ್ದ ಚಂದ್ರಯಾನ-3 ಯೋಜನೆಯ ವಿಕ್ರಮ್‌ ಲ್ಯಾಂಡರ್‌ನ ಉಪಕರಣವೊಂದು ನಾಸಾದ ಸಂಪರ್ಕಕ್ಕೆ ಬಂದಿದೆ. ಲೊಕೇಶನ್‌ ಮಾರ್ಕರ್‌ ರೀತಿಯಲ್ಲಿ ನಾಸಾ ಇದನ್ನು ಗುರುತಿಸಿದ್ದು, ಇನ್ನಷ್ಟು ಅಧ್ಯಯನದ ಆಶಯಗಳನ್ನು ಹುಟ್ಟುಹಾಕಿದೆ. 'ಲೇಸರ್‌ ರೆಟ್ರೊರಿಫ್ಲೆಕ್ಟರ್‌ ಅರೆ ' (ಎಲ್‌ಆರ್‌ಎ) ಎಂಬ ಉಪಕರಣವನ್ನು ನಾಸಾದ 'ಲೂನಾರ್‌ ರಿಕನೈಸನ್ಸ್‌ ಆರ್ಬಿಟರ್‌' (ಎಲ್‌ಆರ್‌ಒ) ಚಂದ್ರನೌಕೆಯು ಲೇಸರ್‌ ರೇಂಜ್‌ ಮೆಜರ್‌ಮೆಂಟ್‌ ಬಳಸಿ ಪತ್ತೆ ಹಚ್ಚಿದೆ. ಎಲ್‌ಆರ್‌ಎ ಕಳುಹಿಸಿದ ಸಂಕೇತಗಳನ್ನು ಎಲ್‌ಆರ್‌ಒ ದಾಖಲಿಸಿದೆ ಎಂದು ನಾಸಾದ ಪ್ರಕಟಣೆ ತಿಳಿಸಿದೆ.
ಅನಿಯಂತ್ರಿತವಾಗಿ ಭೂಮಿಯೆಡೆಗೆ ಧುಮ್ಮಿಕ್ಕಿದ ಚಂದ್ರಯಾನ-3ರ ಕ್ರಯೋಜೆನಿಕ್ ಹಂತದ ಕಾರ್ಯಗಳೇನು?

ವಿಕ್ರಮ್‌ ಲ್ಯಾಂಡರ್‌ ಒಳಗಿನಿಂದ ಹೊರಬಂದಿದ್ದ ಪ್ರಜ್ಞಾನ್‌ ರೋವರ್‌ ಒಂದಷ್ಟು ದಿನ ಚಂದ್ರನ ಅಂಗಳದಲ್ಲಿ ಸುತ್ತಾಡಿ, ಫೋಟೋಗಳನ್ನು ಇಸ್ರೊದ ನಿಯಂತ್ರಣ ಕೊಠಡಿಗೆ ಕಳುಹಿಸಿತ್ತು. ಆದರೆ, ಶೀತ ವಾತಾವರಣದಿಂದ ಸೌರಫಲಕಗಳು ಕಾರ್ಯನಿರ್ವಹಿಸದ ಕಾರಣ ಅವುಗಳೀಗ ತಟಸ್ಥವಾಗಿದೆ. ಅದರಲ್ಲಿರುವ ಕೆಲವು ಉಪಕರಣಗಳು ಇನ್ನೂ ಸಕ್ರಿಯವಾಗಿವೆ.
ಅಮಿತ್ ಎಂ.ಎಸ್
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ