ಆ್ಯಪ್ನಗರ

Norovirus: ಅಮೆರಿಕ, ಬ್ರಿಟನ್‌ನಲ್ಲಿ ನೊರೊ ವೈರಸ್ ಆರ್ಭಟ! ಏನಿದು ರೋಗಾಣು? ಸೋಂಕಿನ ಲಕ್ಷಣಗಳೇನು?

Norovirus Cases Rise In US & UK: ಕೊರೊನಾ ವೈರಸ್ ಮಹಾಮಾರಿಯ ಕಾಟದಿಂದ ತತ್ತರಿಸಿ ಹೋಗಿದ್ದ ಇಡೀ ವಿಶ್ವ, ಇದೀಗ ಸಹಜ ಸ್ಥಿತಿಗೆ ಬರುವ ಹೊತ್ತಿನಲ್ಲೇ ಹೊಸದೊಂದು ವೈರಸ್‌ನ ಆರ್ಭಟ ಶುರುವಾಗಿದೆ. ಇದರ ಹೆಸರು ನೊರೊ ವೈರಸ್. ಈ ವೈರಸ್‌ಗೂ ಕೊರೊನಾ ವೈರಸ್‌ಗೂ ಯಾವುದೇ ಸಂಬಂಧವಿಲ್ಲ. ನೊರೊ ವೈರಸ್‌ನ ಸೋಂಕು ಕರುಳನ್ನೇ ಮೊದಲು ಟಾರ್ಗೆಟ್ ಮಾಡುತ್ತೆ.. ವಾಂತಿ, ಭೇದಿಯಿಂದ ಆರಂಭವಾಗುವ ರೋಗ ಲಕ್ಷಣಗಳು ಮಾರಣಾಂತಿಕ ಕೂಡಾ ಆಗಬಹುದು ಅಂತಾರೆ ತಜ್ಞರು!

Authored byದಿಲೀಪ್ ಡಿ. ಆರ್. | Vijaya Karnataka Web 20 Feb 2023, 3:12 pm

ನೊರೊ ವೈರಸ್.. ಸದ್ಯ ಈ ಹೆಸರು ಅಮೆರಿಕ ಹಾಗೂ ಬ್ರಿಟನ್‌ ಜನತೆಯನ್ನು ಬೆಚ್ಚಿ ಬೀಳಿಸುತ್ತಿದೆ. ಮೊದಲಿಗೆ ಹೊಟ್ಟೆ ಉರಿಯಿಂದ ಆರಂಭ ಆಗುವ ಈ ಸೋಂಕಿನ ಲಕ್ಷಣಗಳು ನಂತರ ಕೆಲವೇ ಗಂಟೆಗಳಲ್ಲಿ ವಾಂತಿ, ಭೇದಿಗೆ ಕಾರಣವಾಗುತ್ತದೆ. ಸೂಕ್ತ ಚಿಕಿತ್ಸೆ ಸಿಗದಿದ್ದರೆ ಮಾರಣಾಂತಿಕ ಕೂಡಾ ಆಗಬಹುದಾದ ಈ ಸೋಂಕನ್ನು ಹೊಟ್ಟೆಯ ರೋಗಾಣು ಎಂದೇ ಕರೆಯಲಾಗುತ್ತೆ. ಯಾವುದೇ ಒಬ್ಬ ವ್ಯಕ್ತಿ ಈ ಸೋಂಕಿಗೆ ತುತ್ತಾದ 12 ರಿಂದ 48 ಗಂಟೆಗಳಲ್ಲೇ ವೈರಾಣು ತನ್ನ ಪ್ರಭಾವ ತೋರಿಸೋಕೆ ಶುರು ಮಾಡುತ್ತೆ. ಈ ಸೋಂಕಿನಿಂದ ಗುಣಮುಖ ಆಗೋಕೆ ಕನಿಷ್ಟ 1 ರಿಂದ 3 ದಿನ ಬೇಕಾಗುತ್ತೆ ಅಂತಾರೆ ತಜ್ಞರು!

Vijaya Karnataka Web norovirus cases rising in uk and us what are the symptoms and treatment explained
Norovirus: ಅಮೆರಿಕ, ಬ್ರಿಟನ್‌ನಲ್ಲಿ ನೊರೊ ವೈರಸ್ ಆರ್ಭಟ! ಏನಿದು ರೋಗಾಣು? ಸೋಂಕಿನ ಲಕ್ಷಣಗಳೇನು?


ಅಮೆರಿಕ & ಬ್ರಿಟನ್‌ಗಳಲ್ಲಿ ಸೋಂಕು ಹೆಚ್ಚಳ

ಬ್ರಿಟನ್‌ನಲ್ಲಿ ನೊರೊ ವೈರಸ್ ರೋಗಾಣುವಿನ ಆರ್ಭಟ ದಿಢೀರ್ ಏರಿಕೆ ದಾಖಲಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆರಂಭದಲ್ಲೇ ಸೋಂಕಿತರ ಸಂಖ್ಯೆ ಶೇ. 66ರಷ್ಟು ಏರಿಕೆ ದಾಖಲಿಸಿದೆ. ಅದರಲ್ಲೂ 65 ವರ್ಷ ಮೇಲ್ಪಟ್ಟವರೇ ಈ ವೈರಸ್‌ನಿಂದ ಹೆಚ್ಚಾಗಿ ಬಾಧಿತರಾಗುತ್ತಿದ್ದಾರೆ. ಬ್ರಿಟನ್‌ನ ಆರೋಗ್ಯ ಭದ್ರತಾ ಸಂಸ್ಥೆಯು ತನ್ನ ವರದಿಯಲ್ಲಿ ಪ್ರಯೋಗಾಲಯದ ಅಂಕಿ ಅಂಶಗಳನ್ನು ಯಥಾವತ್ತಾಗಿ ಪ್ರಕಟ ಮಾಡಿದೆ. ಇನ್ನು ಅಮೆರಿಕ ಕೂಡಾ ನೊರೊ ವೈರಸ್‌ನ ಆರ್ಭಟಕ್ಕೆ ಕಂಗಾಲಾಗಿದೆ. ಅಮೆರಿಕದಲ್ಲಿ ಫೆಬ್ರವರಿ 4ರವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ ನೊರೊ ವೈರಸ್ ಸೋಂಕಿತರ ಪ್ರಮಾ ಶೇ. 17 ರಷ್ಟು ಏರಿಕೆ ಕಂಡು ಬಂದಿದೆ. ಕಳೆದ ವರ್ಷ ಇದೇ ಅವಧಿಗೆ ನೊರೊ ವೈರಸ್ ಸೋಂಕಿತರ ಸಂಖ್ಯೆ ತುಂಬಾನೇ ಕಡಿಮೆ ಇತ್ತು.

ನೊರೊ ವೈರಸ್ ಸೋಂಕಿಗೆ ಯಾರು ತುತ್ತಾಗುತ್ತಾರೆ?

ನೊರೊ ವೈರಸ್ ಸೋಂಕಿಗೆ ತುತ್ತಾಗುವವರಲ್ಲಿ ವಯಸ್ಸಿನ ಭೇದ ಇಲ್ಲ. ಯಾರು ಬೇಕಾದರೂ ಈ ಸೋಂಕಿಗೆ ತುತ್ತಾಗಬಹುದು. ಅದರಲ್ಲೂ ಸೋಂಕಿತ ವ್ಯಕ್ತಿಯ ಜೊತೆ ನೇರ ಸಂಪರ್ಕದಲ್ಲಿದ್ದರೆ ಆರೋಗ್ಯವಂತ ವ್ಯಕ್ತಿಗೂ ಸೋಂಕು ತಗುಲುತ್ತದೆ. ಜೊತೆಗೆ ರೋಗಾಣು ಹರಡಿದ್ದ ನೀರು, ಆಹಾರ ಸೇವನೆಯಿಂದಲೂ ನೊರೊ ವೈರಸ್ ದೇಹ ಪ್ರವೇಶ ಮಾಡಬಹುದು. ಹೀಗಾಗಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳೋದು ಅತಿ ಮುಖ್ಯ. ಊಟಕ್ಕೆ ಮುನ್ನ ಕೈ ತೊಳೆದುಕೊಳ್ಳಬೇಕು. ಕೈ ತೊಳೆಯದೆ ನಿಮ್ಮ ಮುಖ, ಮೂಗು, ಬಾಯಿ ಹಾಗೂ ಕಣ್ಣು ಮುಟ್ಟಿಕೊಳ್ಳಬಾರದು.

ನೊರೊ ವೈರಸ್ ಸೋಂಕಿನ ಲಕ್ಷಣಗಳೇನು?

ಮೊದಲಿಗೆ ಹೊಟ್ಟೆ ಉರಿ ಆಗುವ ಮೂಲಕ ರೋಗ ಲಕ್ಷಣ ಆರಂಭ ಆಗುತ್ತದೆ. ಈ ಸೋಂಕಿನ ಇತರ ಲಕ್ಷಣಗಳೆಂದರೆ:

ವಾಂತಿ

ಭೇದಿ

ಹೊಟ್ಟೆ ನೋವು

ಜ್ವರ

ತಲೆ ನೋವು

ಮೈ ಕೈ ನೋವು

ನೊರೊ ವೈರಸ್ ಸೋಂಕಿಗೆ ತುತ್ತಾಗದಂತೆ ತಡೆಯೋದು ಹೇಗೆ?

ಸ್ವಚ್ಛತೆ ಹಾಗೂ ನೈರ್ಮಲ್ಯದ ಕಡೆಗೆ ಗಮನ ಕೊಡಬೇಕಾದ್ದು ಮೊದಲ ಕರ್ತವ್ಯ. ನಿಮ್ಮ ಕೈಗಳನ್ನು ಸೋಪ್ ಬಳಸಿ ತೊಳೆದುಕೊಳ್ಳಬೇಕು. ಅದರಲ್ಲೂ ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಕೈ ತೊಳೆದುಕೊಳ್ಳಬೇಕಾದ್ದು ಕಡ್ಡಾಯ. ಇನ್ನು ಊಟ ಮಾಡುವ ಮುನ್ನ, ಅಡುಗೆ ತಯಾರಿಕೆ ವೇಳೆ ನಿಮ್ಮ ಕೈ ಸ್ವಚ್ಛವಾಗಿ ಇರಬೇಕು. ಇನ್ನು ಸ್ಯಾನಿಟೈಸರ್‌ಗಳು ನೊರೊ ವೈರಸ್ ವಿಚಾರದಲ್ಲಿ ಪ್ರಯೋಜನಕ್ಕೆ ಬರೋದಿಲ್ಲ. ಹೀಗಾಗಿ, ನೀವು ಸೋಪ್ ಬಳಸಿ ಕೈ ತೊಳೆದುಕೊಳ್ಳಬೇಕಾದ್ದು ಮುಖ್ಯ.

ಭಾರತದಲ್ಲೂ ನೊರೊ ವೈರಸ್ ಸೋಂಕು ಇದೆಯಾ?

ಭಾರತದಲ್ಲಿ ಜನವರಿ 24 ರಂದು ನೊರೊ ವೈರಸ್ ಸೊಂಕು ಪತ್ತೆಯಾಗಿತ್ತು. ಕೇರಳ ರಾಜ್ಯದ ಎರ್ನಾಕುಲಂ ನಿಲ್ಲೆಯಲ್ಲಿ 1ನೇ ತರಗತಿಯ ವಿದ್ಯಾರ್ಥಿಗಳು ನೊರೊ ವೈರಸ್ ಸೋಂಕಿಗೆ ತುತ್ತಾಗಿದ್ದರು. ಕೇರಳದ ಆರೋಗ್ಯ ಇಲಾಖೆ 2 ನೊರೊ ವೈರಸ್ ಸೋಂಕು ಪತ್ತೆಯಾಗಿದೆ ಎಂದು ಖಚಿತಪಡಿಸಿತ್ತು. ಶಾಲೆಯ ಒಟ್ಟು 62 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಲ್ಲಿ ವಾಂತಿ, ಭೇದಿ, ಹೊಟ್ಟೆ ನೋವು, ಜ್ವರ ಸೇರಿದಂತೆ ಹಲವು ರೋಗ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲರನ್ನೂ ಸಾಮೂಹಿಕ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಇಬ್ಬರು ನೊರೊ ವೈರಸ್ ಸೋಂಕಿಗೆ ತುತ್ತಾಗಿರೋದು ದೃಢಪಟ್ಟಿತ್ತು. ಆ ನಂತರ ಈವರೆಗೂ ನೊರೊ ವೈರಸ್‌ನ ಯಾವುದೇ ಪ್ರಕರಣ ಭಾರತದಲ್ಲಿ ದೃಢಪಟ್ಟಿಲ್ಲ.

ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ