ಆ್ಯಪ್ನಗರ

ಪುಲ್ವಾಮಾ ದಾಳಿಗೆ ಸಾಕ್ಷಿ ಕೊಡಿ, ಪೂರ್ಣ ಸಹಕಾರ ಕೊಡುತ್ತೇವೆ, ಪಾಕಿಸ್ತಾನ

ಪುಲ್ವಾಮಾ ಉಗ್ರರ ದಾಳಿಗೆ ವಿರುದ್ಧವಾಗಿ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಕ್ರಮ ಕೈಗೊಳ್ಳುವ ಬಗ್ಗೆ ಆತಂಕ ವ್ಯಕ್ತ ಪಡಿಸಿದ ಪಾಕಿಸ್ತಾನ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘಟನೆಯನ್ನು ರಾಜಕೀಯಗೊಳಿಸಿ ಲೋಕಸಭೆ ಚುನಾವಣೆಗೆ ಲಾಭ ತಂದುಕೊಳ್ಳುವುದು ಅಥವಾ ರಾಷ್ಟ್ರ ನಾಯಕನಾಗಿ ಘಟನೆಗೆ ಸ್ಪಂದಿಸುವುದು ಎಂಬ ಎರಡು ಆಯ್ಕೆಗಳಿವೆ ಎಂದಿರುವ ವಿದೇಶಾಂಗ ಮಂತ್ರಿ.

Agencies 17 Feb 2019, 12:06 pm
ಇಸ್ಲಾಮಾಬಾದ್‌: ಪುಲ್ವಾಮಾ ಉಗ್ರರ ದಾಳಿ ಬಳಿಕ ಭಾರತೀಯ ಸೇನೆ ಪ್ರತಿ ದಾಳಿಗೆ ಮುಂದಾಗಬಹುದು ಎಂಬ ಆತಂಕವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯದ ಬಳಿ ತೋಡಿಕೊಂಡಿದೆ. ಪುಲ್ವಾಮಾ ಉಗ್ರರ ದಾಳಿಯ ನಂತರ ತನ್ನ ಪಾತ್ರವಿಲ್ಲ ಎಂದು ವಾದಿಸುತ್ತ ಬಂದಿರುವ ಪಾಕಿಸ್ತಾನ ಸಾಕ್ಷಿಗಳನ್ನು ನೀಡಿ, ಸಂಪೂರ್ಣ ಸಹಕಾರ ನೀಡುತ್ತೇವೆ ಎಂದಿದೆ.
Vijaya Karnataka Web Pulwama


ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಶಿ ಮ್ಯೂನಿಚ್‌ನಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವನ್ನು ಡಾನ್‌ ವರದಿ ಮಾಡಿದೆ. ಮ್ಯೂನಿಚ್‌ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕುರೇಶಿ ರಷ್ಯಾದ ವಿದೇಶಾಂಗ ಸಚಿವರು ಸೇರಿದಂತೆ ಮತ್ತಿತರರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭ ಪುಲ್ವಾಮಾ ಉಗ್ರರ ದಾಳಿಯಿಂದ ಆಕ್ರೋಶಗೊಂಡಿರುವ ಭಾರತವು ಪಾಕಿಸ್ತಾನದ ವಿರುದ್ಧ ಸೇನಾ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಆತಂಕವನ್ನು ತೋಡಿಕೊಂಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಆಯ್ಕೆಗಳಿವೆ. ಒಬ್ಬ ರಾಜಕೀಯ ನಾಯಕನಾಗಿ ಉಗ್ರರ ದಾಳಿಯನ್ನು ತನ್ನ ಮೂಗಿನ ನೇರಕ್ಕೆ ನೋಡುವ ಮೂಲಕ ಮುಂಬರುವ ಲೋಕಸಭೆ ಚುನಾವಣೆಗೆ ಲಾಭ ಮಾಡಿಕೊಳ್ಳುವುದು ಅಥವಾ ರಾಷ್ಟ್ರ ನಾಯಕನಾಗಿ ಭಾರತದ ಹಿತಾಸಕ್ತಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಾಗಿದೆ ಎಂದು ಸಂದರ್ಶನದಲ್ಲಿ ಖುರೇಶಿ ಹೇಳಿರುವುದಾಗಿ ಡಾನ್‌ ವರದಿ ಮಾಡಿದೆ.

ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಪಾತ್ರವಿರುವ ಬಗ್ಗೆ ಸಾಕ್ಷಿಗಳನ್ನು ನೀಡಲಿ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಖುರೇಶಿ ಹೇಳಿಕೊಂಡಿದ್ದಾರೆ.

ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ತೆಹ್ಮೀನಾ ಜನ್‌ಜುವಾ ಪುಲ್ವಾಮಾ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ ಮೇಲೆ ಭಾರತೀಯ ಹ್ಯಾಕರ್‌ಗಳು ದಾಳಿ ನಡೆಸಿದ್ದಾರೆ. ಹಲವು ರಾಷ್ಟ್ರಗಳಲ್ಲಿನಮ್ಮ ವೆಬ್‌ಸೈಟ್‌ ಅರ್ಧಕ್ಕರ್ಧ ಡೌನ್‌ ಆಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ