ಆ್ಯಪ್ನಗರ

ಉದ್ಯಾನಕ್ಕೆ ಬಂದವರನ್ನು ಅಶ್ಲೀಲ ಮಾತುಗಳಿಂದ ನಿಂದಿಸುವ ಗಿಳಿಗಳು!

ಬ್ರಿಟನ್‌ನ ಲಿಂಕನ್‌ಶೈರ್‌ ವನ್ಯಜೀವಿ ಉದ್ಯಾನದಲ್ಲಿ ಒಟ್ಟಿಗೇ ಇದ್ದ ಐದು ಗಿಳಿಗಳು ಕೆಟ್ಟ ಮಾತುಗಳನ್ನು ಕಲಿತುಕೊಂಡಿವೆ. ಮಾತ್ರವಲ್ಲ, ಉದ್ಯಾನಕ್ಕೆ ಬಂದವರನ್ನೆಲ್ಲಾ ಅಶ್ಲೀಲ ಮಾತುಗಳಿಂದ ಬಯ್ಯುತ್ತಿವೆ. ಇದರಿಂದ ಈ ಐದು ಗಿಳಿಗಳನ್ನು ಬೇರೆ ಬೇರೆ ಇರಿಸಲಾಗಿದೆ.

Agencies 29 Sep 2020, 10:13 pm
ಲಂಡನ್‌: ಎರಡು ಗಿಳಿಗಳ ನೀತಿ ಕತೆಯನ್ನು ನೀವು ಕೇಳಿರಬಹುದು. ಎರಡು ಗಿಳಿ ಮರಿಗಳಲ್ಲಿಒಂದನ್ನು ಬೇಟೆಗಾರನೂ, ಇನ್ನೊಂದನ್ನು ಸಂತನೂ ಕೊಂಡೊಯ್ದು ಸಾಕುತ್ತಾರೆ. ಇದರಲ್ಲಿ ಬೇಟೆಗಾರನ ಬಳಿ ಇದ್ದ ಗಿಳಿ ಬೆಳೆದು ದೊಡ್ಡದಾದ ಮೇಲೆ ಯಾರಾದರೂ ಅತಿಥಿಗಳು ಮನೆಗೆ ಬಂದರೆ 'ಹೊಡಿಯಿರಿ, ಕಡಿಯಿರಿ' ಎಂದು ಕಿರುಚಾಡಿದರೆ, ಸಂತ ಸಾಕಿದ್ದ ಗಿಳಿ 'ಬನ್ನಿ ಕುಳಿತುಕೊಳ್ಳಿ, ಹಣ್ಣು ತಿನ್ನಿ, ನೀರು ಕುಡಿಯಿರಿ' ಎಂದು ಸತ್ಕಾರದ ಮಾತುಗಳನ್ನಾಡುತ್ತಿತ್ತು. ಅಂದರೆ, ಸಂಸ್ಕಾರದಿಂದ ಬದುಕು ಬದಲಾಗುತ್ತದೆ ಎಂಬುದು ಈ ಕತೆಯ ತಾತ್ಪರ್ಯ.
Vijaya Karnataka Web Parrot
| Screengrab from video | Lincolnshire Wildlife Park/Facebook


ಆದರೆ ಬ್ರಿಟನ್‌ನ ಲಿಂಕನ್‌ಶೈರ್‌ ವನ್ಯಜೀವಿ ಉದ್ಯಾನದಲ್ಲಿ ಒಟ್ಟಿಗೇ ಇದ್ದ ಐದು ಗಿಳಿಗಳು ಕೆಟ್ಟ ಮಾತುಗಳನ್ನು ಕಲಿತುಕೊಂಡಿವೆ. ಮಾತ್ರವಲ್ಲ, ಉದ್ಯಾನಕ್ಕೆ ಬಂದವರನ್ನೆಲ್ಲಾ ಅಶ್ಲೀಲ ಮಾತುಗಳಿಂದ ಬಯ್ಯುತ್ತಿವೆ.

''ಒಂದೇ ವಾರದಲ್ಲಿ ಬೇರೆಬೇರೆ ದಿನ ಈ ಗಿಳಿಗಳನ್ನು ತರಲಾಗಿದೆ. ಎಲ್ಲವನ್ನೂ ಒಂದೇ ಕೋಣೆಯಲ್ಲಿ ಇರಿಸಲಾಗಿತ್ತು. ಈಗಾಗಲೇ ಕೆಲವು ಕೆಟ್ಟ ಶಬ್ದಗಳನ್ನು ಕಲಿತಿದ್ದ ಗಿಳಿಗಳು ಇಲ್ಲಿಪರಸ್ಪರ ಸಂಭಾಷಣೆ ವೇಳೆ ಮತ್ತಷ್ಟು ಕೆಟ್ಟ ಶಬ್ದಗಳನ್ನು ಕಲಿತುಕೊಂಡಿವೆ,'' ಎಂದು ಉದ್ಯಾನದ ಸಿಇಒ ಸ್ಟೀವ್‌ ನಿಕೋಲ್ಸ್‌ ಹೇಳಿದ್ದಾರೆ.

ಈಗ ಈ ಗಿಳಿಗಳನ್ನು ಪ್ರತ್ಯೇಕವಾಗಿ ಬೇರೆಬೇರೆ ವಿಭಾಗಗಳಲ್ಲಿ ಇರಿಸಲಾಗಿದೆ. ಇದರಿಂದ ಮುಂದೆ ಗಿಳಿಗಳು ತಾವು ಕಲಿತ ಕೆಟ್ಟ ಪದಗಳನ್ನು ಮರೆಯಲು ಸಾಧ್ಯವಾಗಬಹುದು ಎನ್ನುವುದು ಅಧಿಕಾರಿಗಳ ನಿರೀಕ್ಷೆ. ಗಿಳಿಗಳು ಹೀಗೆ 'ಅಸಭ್ಯ' ವರ್ತನೆ ತೋರುವುದು ಇದೇ ಮೊದಲಲ್ಲ. 2018ರಲ್ಲಿ ಜೆಸ್ಸಿಯಾ ಎಂಬ ಸಾಕುಗಿಳಿ ತನ್ನ 'ಅಶ್ಲೀಲ' ಪದ ಬಳಕೆಯ ಕಾರಣದಿಂದಲೇ ಸುದ್ದಿಯಾಗಿತ್ತು.

ಲಂಡನ್‌ನ ತನ್ನ ಮನೆಯಿಂದ ಹಾರಿದ ಈ ಗಿಳಿ ಪಕ್ಕದ ಕಟ್ಟಡವೊಂದರ ಛಾವಣಿಯಲ್ಲಿ ಮೂರು ದಿನ ಕುಳಿತಿತ್ತು. ಮಾಲಿಕರಿಗೆ ಅದನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಅಗ್ನಿಶಾಮಕ ದಳದ ಸಹಾಯ ಪಡೆದಿದ್ದರು. ಗಿಳಿಯ ರಕ್ಷಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ತೆರಳಿದ್ದ ಸಂದರ್ಭದಲ್ಲಿ ಗಿಳಿ ಇವರನ್ನು ಅತ್ಯಂತ ಕೆಟ್ಟ ಶಬ್ದಗಳಿಂದ ದಬಾಯಿಸಿತ್ತು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ