ಆ್ಯಪ್ನಗರ

ಮತ್ತೊಂದು ದಾಳಿಗೆ ಭಾರತದಿಂದ ಸಿದ್ಧತೆ: ಖುರೇಶಿ ಗಂಭೀರ ಆರೋಪ

ರಾಜತಾಂತ್ರಿಕ ಒತ್ತಡ ಹೆಚ್ಚಿಸಲು ಹಾಗೂ ಪಾಕ್‌ ಮೇಲೆ ತಾವು ಹೊಂದಿರುವ ದ್ವೇಷ ಎಂಥದ್ದು ಎಂಬುದನ್ನು ಸಾಬೀತುಪಡಿಸಲು ಇಂತಹ ದಾಳಿಗಳು ಭಾರತಕ್ಕೆ ಅವಶ್ಯಕವಾಗಿವೆ ಎಂದು ಖುರೇಶಿ ಆರೋಪಿಸಿದ್ದಾರೆ.

Vijaya Karnataka 8 Apr 2019, 5:00 am
ಇಸ್ಲಾಮಾಬಾದ್‌: ''ಖಚಿತ ಗುಪ್ತಚರ ಮಾಹಿತಿ ಪ್ರಕಾರ ಏಪ್ರಿಲ್‌ 16-20ರ ನಡುವೆ ಪಾಕಿಸ್ತಾನದ ಮೇಲೆ ಮತ್ತೊಂದು ದಾಳಿ ನಡೆಸಲು ಭಾರತ ಯೋಜನೆ ರೂಪಿಸಿದೆ,'' ಎಂದು ಪಾಕ್‌ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೆಹಮೂದ್‌ ಖುರೇಶಿ ಹೇಳಿದ್ದಾರೆ.
Vijaya Karnataka Web kureshi


ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಭಾರತವು ಪಾಕಿಸ್ತಾನದ ಮೇಲೆ ಹೊಸ ದಾಳಿಗೆ ಸಕಲ ಸಿದ್ಧತೆ ನಡೆಸಿದೆ. ರಾಜತಾಂತ್ರಿಕ ಒತ್ತಡ ಹೆಚ್ಚಿಸಲು ಹಾಗೂ ಪಾಕ್‌ ಮೇಲೆ ತಾವು ಹೊಂದಿರುವ ದ್ವೇಷ ಎಂಥದ್ದು ಎಂಬುದನ್ನು ಸಾಬೀತುಪಡಿಸಲು ಇಂತಹ ದಾಳಿಗಳು ಭಾರತಕ್ಕೆ ಅವಶ್ಯಕವಾಗಿವೆ,'' ಎಂದು ಆರೋಪಿಸಿದ್ದಾರೆ.

''ಒಂದು ವೇಳೆ ಮತ್ತೊಮ್ಮೆ ದಾಳಿ ನಡೆದರೆ, ಉಪಖಂಡದ ಶಾಂತಿ ಮತ್ತು ಸ್ಥಿರತೆ ಮೇಲೆ ಎಂತಹ ಪರಿಣಾಮ ಉಂಟಾಗಬಹುದು ಎಂಬುದನ್ನು ಕಲ್ಪಿಸಿಕೊಳ್ಳಿ. ದಾಳಿ ಸಾಧ್ಯತೆ ಕುರಿತು ಈಗಾಗಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯರ ಗಮನಕ್ಕೆ ತರಲಾಗಿದೆ. ಅಂತಾರಾಷ್ಟ್ರೀಯ ಸಮುದಾಯವು ಮಧ್ಯಪ್ರವೇಶಿ, ಭಾರತ ಈ ಮಾರ್ಗ ತುಳಿಯದಂತೆ ಅದನ್ನು ತಡೆಯಬೇಕು,'' ಎಂದು ಖುರೇಶಿ ಆಗ್ರಹಿಸಿದರು.

ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪಾಕ್‌ ಮೂಲದ ಜೈಷೆ ಮೊಹಮದ್‌ ಉಗ್ರ ಸಂಘಟನೆ ಆತ್ಮಾಹುತಿ ದಾಳಿ ನಡೆಸಿ 40 ಸಿಆರ್‌ಪಿಎಫ್‌ ಯೋಧರ ಸಾವಿಗೆ ಕಾರಣವಾಯಿತು. ಇದಕ್ಕೆ ಪ್ರತಿಯಾಗಿ ಫೆ.26ರಂದು ಪಾಕಿಸ್ತಾನದ ಬಾಲಾಕೋಟ್‌ಗೆ ಭಾರತೀಯ ವಾಯುಪಡೆ ನುಗ್ಗಿ ಅಲ್ಲಿನ ಜೈಷೆ ಉಗ್ರ ನೆಲೆಗಳನ್ನು ಧ್ವಂಸ ಮಾಡಿತು. ಅಂದಿನಿಂದ ಗಡಿಯಲ್ಲಿ ಭಾರತ ಮತ್ತು ಪಾಕ್‌ ನಡುವೆ ಉದ್ವಿಗ್ನ ವಾತಾವರಣ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ